ಉದಯವಾಣಿಯಲ್ಲಿ ಜೂನ್ ೪, ೨೦೧೪ ರಂದು ಪ್ರಕಟಗೊಂಡ ಲೇಖನ| ಲೇಖಕರು: ಓಂಶಿವಪ್ರಕಾಶ್‌ ಎಚ್‌. ಎಲ್‌

ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು ಮುದ್ರಿಸುತ್ತೇವೆ. ಆದರೆ, ಅಬ್ಬರದ ಕೆಲಸಗಳಿಗಿಂತ ಆಳವಾದ ಮತ್ತು ಸೂಕ್ಷ್ಮವಾದ ಪ್ರಕ್ರಿಯೆ ಇಂದಿನ ಅಗತ್ಯವೆಂಬ ವಿಚಾರವನ್ನು ನಾವು ಮನಗಂಡಿಲ್ಲ. ತಂತ್ರಜ್ಞಾನ ಬೆಳೆದಿರುವ ಈ ಕಾಲದಲ್ಲಿ ಕನ್ನಡದ ಭಾಷೆಯನ್ನು ಮತ್ತು ಜ್ಞಾನವನ್ನು ಭೌಗೋಳಿಕ ಗಡಿಯನ್ನು ದಾಟಿ ಹಬ್ಬಿಸುವ ಕುರಿತು ಕ್ರಿಯಾಶೀಲರಾಗಬೇಕಾಗಿದೆ.

ಈ ನಿಟ್ಟಿನಲ್ಲಿ ವಚನಗಳನ್ನು ಗಣಕೀಕೃತಗೊಳಿಸಿದ ವಚನ ಸಂಚಯ ಡಾಟ್‌ ನೆಟ್‌ನ್ನು ಗಮನಿಸಬೇಕಾದದ್ದು ಮತ್ತು ಬೆಂಬಲಿಸಬೇಕಾದದ್ದು ಕನ್ನಡಿಗರೆಲ್ಲರ ಕರ್ತವ್ಯ. 259 ವಚನಕಾರರ 20,930 ವಚನಗಳು ವಚನ ಸಂಚಯದಲ್ಲಿವೆ. ಪದ, ಅರ್ಥ, ವಿವರಣೆಗಳನ್ನು ಸುಲಭದಲ್ಲಿ ಹುಡುಕಾಡುವ ಸೌಲಭ್ಯವಿದೆ. ಈ ಚಾರಿತ್ರಿಕ ಪ್ರಯತ್ನದ ಹಿಂದಿರುವ ತಾಂತ್ರಿಕ ಸವಾಲುಗಳನ್ನು ನಿಭಾಯಿಸಿದ ಬಗ್ಗೆ ಈ ಬರಹ…

“ವಚನ ಸಂಚಯ” ವಚನ ಸಾಹಿತ್ಯದ ಭಾಷಾ ಸಂಶೋಧನೆಯನ್ನು ಸುಲಭಗೊಳಿಸಲು ಅಭಿವೃದ್ದಿಪಡಿಸಲಾಗಿರುವ ಒಂದು ತಾಂತ್ರಿಕ ವೇದಿಕೆ. ವಚನಗಳ ಡಿಜಿಟೈಸೇಶನ್ ಒಳಗೊಂಡಂತೆ, ವಚನ ಮತ್ತು ವಚನಕಾರರನ್ನು ಸುಲಭವಾಗಿ ಹುಡುಕಿ ತೆಗೆಯುವ ಅವಕಾಶ ಒಂದೆಡೆಯಾದರೆ, ವಚನದಲ್ಲಿ ಬಳಸಲಾಗಿರುವ ಪದಗಳ ಕನ್ಕಾರ್ಡೆನ್ಸ್ (concordance), ವಚನ ಸಂಶೋಧಕರಿಗೆ ಪದಗಳನ್ನು ಯಾವ ವಚನಗಳಲ್ಲಿ, ಯಾವ ವಚನಕಾರರು ಎಲ್ಲೆಲ್ಲಿ ಬಳಸಿದ್ದಾರೆ ಎಂಬ ಅಂಕಿಅಂಶಗಳ ಜೊತೆಗೆ ನೋಡುವ ಅವಕಾಶ ಇಲ್ಲಿದೆ. ಸಂಶೋಧಕರ ಸಮಯವನ್ನುಮತ್ತಷ್ಟು ಉನ್ನತ ಸಂಶೋಧನೆಗೆಂದು  ಉಳಿಸುವ ಕೆಲಸವನ್ನು ವಚನ ಸಂಚಯ ತನ್ನ ತಾಂತ್ರಿಕ ರೂಪುರೇಷೆಗಳ ಮೂಲಕ ಸಾಧ್ಯವಾಗಿಸುತ್ತದೆ. ಉದಾ: ಒಮ್ಮೆ ಸರ್ಚ್ ಮಾಡಿದ ಪದವನ್ನು ಬಂದ ಫಲಿತಾಂಶಗಳನ್ನು ಓದುತ್ತಾ ಮತ್ತೆ ಹುಡುಕುವ ಅವಕಾಶ ಕೊಡದೆ, ಆ ಅಕ್ಷರಗಳನ್ನು ಮೊದಲೇ ಹೈಲೈಟ್ ಮಾಡಿರುವುದನ್ನು ಇಲ್ಲಿ ಕಾಣಬಹುದು. ಜೊತೆಗೆ ಅಂಕಿ ಅಂಶಗಳ ಹುಡುಕಾಟ ಕಡಿಮೆ ಮಾಡಲು ವಚನ ಸಂಚಯ ಪ್ರತಿ ಪದ ಹುಡುಕು (ವರ್ಡ್ ಸರ್ಚ್) ಜೊತೆಗೆ ಎಲ್ಲ ವಚನಕಾರರು ಆ ಪದವನ್ನು ಎಷ್ಟು ವಚನಗಳಲ್ಲಿ ಬಳಸಿದ್ದಾರೆ ಎಂಬುದನ್ನು ಗ್ರಾಫ್ ಮೂಲಕ ಪರದೆಯ ಎಡಭಾಗದಲ್ಲಿ ತೋರಿಸುತ್ತದೆ.

ವಚನ ಸಂಚಯದಲ್ಲಿ ಯಾವುದೇ ರೀತಿಯ ಸಂಶೋಧನೆಗೆ ಟೈಪಿಸುವ ಅವಶ್ಯಕತೆ ಕಡಿಮೆ. ಟೈಪಿಸಬೇಕಾದ ಸಮಯದಲ್ಲಿ ನಿಮ್ಮ ಕಂಪ್ಯೂಟರ್, ಟ್ಯಾಬ್‌ಲೆಟ್, ಮೊಬೈಲ್ ಇತ್ಯಾದಿಗಳಲ್ಲಿ ಕನ್ನಡದ ಕೀಬೋರ್ಡ್ ಇರಬೇಕೆಂದಿಲ್ಲ. ವಚನ ಸಂಚಯದಲ್ಲೇ ಇರುವ ಸಾಫ್ಟ್ ಕೀಬೋರ್ಡ್ ಬಳಸಿ ಫೊನೆಟಿಕ್, ಇನ್ಸ್‌ಕ್ರಿಪ್ಟ್, ನುಡಿ ಇತ್ಯಾದಿ ಲೇಔಟ್ ಬಳಸಿ ನೇರವಾಗಿ ಟೈಪ್ ಮಾಡಬಹುದು.

 ಸಂಶೋಧಕರು ವಚನ ಸಂಚಯ ಯೋಜನೆಯಲ್ಲಿ ನಮ್ಮೊಡನೆ ಕೈಜೋಡಿಸಲು ಇಚ್ಛಿಸಿದಲ್ಲಿ, ವಚನಗಳ ಪರಿಶೀಲನೆ(Review), Referencing, ಚರ್ಚೆ ಇತ್ಯಾದಿಗಳಿಗೆ ತನ್ನದೇ ಆದ ವೇದಿಕೆಗಳನ್ನು ಸೃಷ್ಟಿಸಿಕೊಂಡಿದೆ. ಅವಶ್ಯಕತೆಗೆ ತಕ್ಕಂತೆ ವಚನ ಸಂಚಯ ತಂಡ ಈ ತಾಂತ್ರಿಕ ವಿಚಾರಗಳನ್ನು ಅಭಿವೃದ್ದಿ ಪಡಿಸುತ್ತಾ ಬರುತ್ತಿದೆ.

ಸಾಮಾನ್ಯ ಬಳಕೆದಾರರಿಗೂ ಕೂಡ ವಚನ ಸಂಚಯ ಲಭ್ಯವಾಗುವಂತೆ ಮಾಡುತ್ತಾ, ಫೇಸ್‌ಬುಕ್ (https://www.facebook.com/vachanasanchaya) ಮತ್ತು ಟ್ವಿಟರ್‌ನಲ್ಲಿ (https://twitter.com/vachanasanchaya) ವಚನಗಳನ್ನು ಪ್ರತಿನಿತ್ಯ ತೇಲಿಬಿಡಲಾಗುತ್ತಿದ್ದು – ಫೇಸ್‌ಬುಕ್ ಒಂದರಲ್ಲೇ ಪ್ರತಿದಿನ ೫೦೦ಕ್ಕೂ ಹೆಚ್ಚು ಮಂದಿಗೆ ಇವು ತಲುಪುತ್ತಿವೆ.

ವರ್ಡ್‌ಪ್ರೆಸ್ ಬ್ಲಾಗ್‌ಗಳನ್ನು ಬಳಸುತ್ತಿರುವವರಿಗೆ ವಚನ ಸಂಚಯದ ಪ್ಲಗಿನ್ (http://wordpress.org/plugins/vachana-sanchaya-daily-vachana/) ಲಭ್ಯವಿದ್ದು – ತಮ್ಮ ಓದುಗರಿಗೆ ವಚನ ಸಂಚಯದ ‘ದಿನದ ವಚನ’ ವನ್ನು ಸುಲಭವಾಗಿ ತಲುಪಿಸಲು ಇದರಿಂದ ಸಾಧ್ಯವಾಗುತ್ತಿದೆ.

ವಚನದಲ್ಲಿ ಬಳಸಿರುವ ಪದ ಹುಡುಕಿನ ಜೊತೆಗೆ, ಅಂಕಿತನಾಮ ಮತ್ತು ವಚನಕಾರರ ಹುಡುಕು ಕೂಡ ಲಭ್ಯವಿದೆ.

ವಚನ ಸಂಚಯ ಹಾಗೂ ಕನ್ನಡ ಸಂಚಯದ ಎಲ್ಲ ಕಾರ್ಯಗಳು ೧೦೦% ಯುನಿಕೋಡ್‌ನಲ್ಲಿ  ಮಾತ್ರ ಲಭ್ಯವಿರಲಿದೆ. ಇ-ಸ್ಪೀಕ್ ಕನ್ನಡ ಬಳಸಿ ಈಗಾಗಲೇ ವಚನ ಸಂಚಯವನ್ನು ಸುಲಭವಾಗಿ ಓದುಲೂಬಹುದು.

 

ಮುಂದಿನ ದಿನಗಳಲ್ಲಿ: 

ವಚನದಲ್ಲಿ ಬಳಸಿರುವ ಪದಗಳನ್ನು  ಅಥವಾ ಪದದಂತೆಯೇ ಇರುವ ಇತರೆ ಪದಗಳನ್ನೂ ಹುಡುಕುವ ಅವಕಾಶ ಸಂಚಯದಲ್ಲಿ ಹುಡುಕುವ ಅವಕಾಶ ಸಧ್ಯ ಲಭ್ಯವಿದ್ದು, ಮುಂದಿನ ಆವೃತ್ತಿಗಳಲ್ಲಿ ವಚನದಲ್ಲಿ ಬಳಸಿರುವ ಸಾಲುಗಳನ್ನು ನೇರವಾಗಿ ಹುಡುಕುವ ಅವಕಾಶ, ಹುಡುಕು ಪದಕ್ಕೆ ಬಹಳ ಹತ್ತಿರವಿರುವ ಪದಗಳು, ಅರ್ಥ ಹೊಂದಾಣಿಕೆಯಾದರೂ ಫಲಿತಾಂಶಗಳನ್ನು ಪಡೆಯುವ ಸೌಲಭ್ಯಗಳೂ ಇಲ್ಲಿ ಲಭ್ಯವಾಗಲಿದೆ

ವಚನದ ಶ್ರಾವ್ಯ (ವಿಶಿಷ್ಟ ಚೇತನರಿಗೆ ಅನುಕೂಲ ಆಗುವಂತೆ) ಆವೃತ್ತಿ, ವಚನ ಮುದ್ರ‍ಣ ಸಾಹಿತ್ಯದ ಸ್ಕ್ಯಾನ್ ಪ್ರತಿಗಳು (‌Manuscripts), ಹೆಚ್ಚಿನ ಓದಿಗೆ ಅನುಕೂಲವಾಗುವ ರೆಫರೆನ್ಸ್‌ಗಳು ಇತ್ಯಾದಿಗಳನ್ನು ಕಾಣುವ ಅವಕಾಶ ಹೊಂದಿರಲಿದೆ. ಸಾಧ್ಯವಾದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ದೃಶ್ಯ ಮಾಧ್ಯಮಗಳನ್ನೂ ಕ್ರೂಡೀಕರಿಸುವ ಯೋಜನೆ ಇದೆ.

ಇಡೀ ಫ್ರೇಮ್‌ವರ್ಕ್ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ (Free & Open Source Software) ಆಧಾರದ ಮೇಲೆ ಅಭಿವೃದ್ದಿ ಪಡಿಸಲಾಗಿದ್ದು, ಕನ್ನಡದ ಇನ್ಯಾವುದೇ ಕೃತಿಯನ್ನು ಇದೇ ರೀತಿ ಅಳವಡಿಸಲು ಸಾಧ್ಯವಿದೆ.

ವಚನ ಸಾಹಿತ್ಯದಂತಹ ಕಾವ್ಯಮಯ ಸಾಹಿತ್ಯವಲ್ಲದೇ ಪಠ್ಯ, ಅದರಲ್ಲೂ ಹಳೆಗನ್ನಡವನ್ನೂ ಇದೇ ರೀತಿಯಲ್ಲಿ ಕನ್ನಡಿಗರಿಗೆ ಪ್ರಸ್ತುತ ಪಡಿಸುವ ಸಂಶೋಧನೆಯಲ್ಲಿ ನಮ್ಮ ತಂಡ ತೊಡಗಿದೆ.

ಕಂಪ್ಯೂಟರೀಕರಿಸಬಹುದಾದ ಎಲ್ಲ ವಚನ ಸಾಹಿತ್ಯದ ಮಾಹಿತಿಗಳನ್ನು ಲಭ್ಯತೆಯ ಆಧಾರದ ಮೇಲೆ, ಒಂದೇ ಸೂರಿನಡಿ ತರುವಂತೆ ನಮ್ಮ ತಂತ್ರಾಂಶವನ್ನು ಬದಲಿಸಲು ಸಾಧ್ಯ.

ವಚನ ಸಾಹಿತ್ಯದ ಇನ್ನಷ್ಟು ಪದಗಳ ಅರ್ಥವನ್ನು ಕೂಡ ಲಭ್ಯವಾಗಿಸಲಿದ್ದು, ಇದು ಮತ್ತಷ್ಟು ಸುಲಭವಾಗಿ ಬಳಸಲು ಸಾಧ್ಯವಾಗಿಸಲು ವಚನಗಳಲ್ಲೇ ಮೌಸ್‌ಕ್ಲಿಕ್ ಮೂಲಕ ಪದಗಳ ಅರ್ಥ ದೊರೆಯುವಂತೆ ಮಾಡಲಾಗುತ್ತಿದೆ.

ಮೊಬೈಲ್ ಮೂಲಕವೂ ವಚನಗಳ/ಭಾಷಾ ಸಂಶೋಧನೆಯನ್ನುಸಾಧ್ಯವಾಗಿಸುವ, ಮೊಬೈಲ್ ದತ್ತಾಂಶ ಲಭ್ಯವಿಲ್ಲದೆಯೂ ಕೆಲಸ ಮಾಡುವ ತಂತ್ರಾಂಶದ ಅಭಿವೃದ್ದಿಯೂ ನೆಡೆದಿದೆ.

 ವಚನಕಾರರ ಹೆಸರು, ಅಂಕಿತನಾಮ, ಒಟ್ಟು ವಚನಗಳು (ಸಂಪುಟದಲ್ಲಿ ಮತ್ತು ವಚನ ಸಂಚಯದಲ್ಲಿ), ಸ್ತ್ರೀ/ಪುರುಷ ವಚನಕಾರರ ವರ್ಗೀಕರಣ ಇತ್ಯಾದಿ ಮಾಹಿತಿ ಇರುವ ಪುಟವನ್ನೂ ಈ ವಾರ ವಚನಸಂಚಯಕ್ಕೆ ಸೇರಿಸಲಿದ್ದೇವೆ.

ಕನ್ನಡ ಮತ್ತು ತಂತ್ರಜ್ಞಾನಕ್ಕೆ ಸಂಭಂದಿಸಿದ ಕೆಲಸಗಳು

 ಕನ್ನಡಕ್ಕೆ ಅತಿ ಮುಖ್ಯವಾಗಿ ಬೇಕಿರುವ ಸ್ಪೆಲ್ ಚೆಕರ್, ಗ್ರಾಮರ್ ಚೆಕರ್, ಡಿಕ್ಷನರಿ‌ಗಳನ್ನು ಯಾವುದೇ ಸಾಫ್ಟ್‌ವೇರ್‌ಗೆ ಅಳವಡಿಸಲು ಬೇಕಿರುವುದು ಮುಕ್ತ ಮತ್ತು ಸ್ವತಂತ್ರವಾಗಿರುವ, ಪರಿಶೀಲಿಸಿರುವ ಪದ ಸಂಗ್ರಹ. ಇಂತಹ ಅನೇಕ ಕೆಲಸಗಳು ಕನ್ನಡದಲ್ಲಿ ಲಭ್ಯವಿದ್ದರೂ,  ಅವುಗಳನ್ನು ಮುಕ್ತವಾಗಿ ಯಾರಿಗೆ ಬೇಕಾದರೂ, ಯಾವ ಕೆಲಸಕ್ಕೆ ಬೇಕಾದರೂ ಬಳಸಲು ಸಾಧ್ಯವಾಗುವಂತೆ ಉದಾರ ಮನಸ್ಸಿನಿಂದ ಯಾವುದೇ ಯುನಿವರ್ಸಿಟಿ ಅಥವಾ ಸರ್ಕಾರ ಸಮುದಾಯದ ಮುಂದೆ ಇಟ್ಟಿಲ್ಲ. ಮಲಯಾಲಂ, ತಮಿಳು ಹಾಗೂ ತೆಲುಗು ಇದಕ್ಕಿಂತ ವಿಭಿನ್ನ. ಅಲ್ಲಿನ ಸರ್ಕಾರಗಳು ಮುಕ್ತ ಮಾಹಿತಿಗೆ ಬಹಳಷ್ಟು ಬೆಂಬಲ ಕೊಟ್ಟು, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯಗಳ ಸಹಾಯಕ್ಕೆ ನಿಂತು ಇಂತಹ ಅನೇಕ ಕೆಲಸಗಳನ್ನು ಸಾಧ್ಯವಾಗಿಸಿವೆ. ಈಗಲಾದರೂ ಇದನ್ನು ಕನ್ನಡಕ್ಕೆ ಸಾಧ್ಯವಾಗಿಸಲು ಸಧ್ಯ ನಮಗಿರುವ ಮತ್ತೊಂದು ಸಾಧ್ಯತೆ ಎಂದರೆ ‘ಕ್ರೌಡ್ ಸೋರ್ಸಿಂಗ್’ (Crowdsourcing). ಮುಂದಿನ ದಿನಗಳಲ್ಲಿ ವಚನ ಸಂಚಯ ಮತ್ತು ನಮ್ಮ ಇತರೆ ಯೋಜನೆಗಳಲ್ಲಿ ಹೊರಬರಲಿರುವ ಪದಗಳ ಪಟ್ಟಿಯನ್ನು ಕ್ರೌಡ್‌ಸೋರ್ಸಿಂಗ್ ಮೂಲಕ ಜನರ ಮೂಲಕವೇ ಪದಗಳ ಅರ್ಥ, ವ್ಯಾಕರಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಶೇಖರಿಸಿ, ಭಾಷಾ ಸಂಶೋಧಕರು ಮತ್ತು ಪರಿಣಿತರ ಮೂಲಕ ಅವನ್ನು ಪರೀಕ್ಷಿಸಿ ಮುಕ್ತವಾದ ಪದ ಸಂಗ್ರಹ, ನಿಘಂಟುಗಳನ್ನು ವಿಕಿಪೀಡಿಯಾದ ವಿಕಿ ಸೋರ್ಸ್, ವಿಕ್ಷನರಿ ಇತ್ಯಾದಿ ಯೋಜನೆಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು. ಈ ಕೆಲಸ ತಂತ್ರಜ್ಞಾನದ ಮೂಲಕ ಕನ್ನಡದಲ್ಲಿ ಆಗಬೇಕಿರುವ ಮಹತ್ತರ ಕೆಲಸಗಳಿಗೆ ಬೇಕಿರುವ ಮೂಲ ಸಂಪತ್ತನ್ನು ತುಂಬಿಕೊಡುತ್ತದೆ. ಜೊತೆಗೆ ಈ ಕೆಲಸ ಮುಖ್ಯವಾಗಿ ಎನ್.ಎಲ್.ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸಿಂಗ್)ಗೆ ಬೇಕಾದ ಎಲ್ಲ ಸವಲತ್ತುಗಳನ್ನು, ಸಲಕರಣೆಗಳನ್ನು, ಯಾರಿಗೆ ಬೇಕಾದರೂ, ಯಾವಹೊತ್ತಿನಲ್ಲಾದರೂ ಲಭ್ಯವನ್ನಾಗಿಸಲು ಶಕ್ತವಾಗುತ್ತದೆ.

ಹಳೆಗನ್ನಡದ ಪದಗಳನ್ನು ಒಡೆದು, ಪ್ರತಿ ಪದದ ಅರ್ಥ ಇತ್ಯಾದಿಗಳನ್ನು ಕೂಡ ಇದೇ ಮಾದರಿಯಲ್ಲಿ ಸಂಗ್ರಹಿಸಿ, ಪರಿಶೀಲಿಸಿ ಸರಿಯಾದುದನ್ನು ಜನರ ಮುಂದಿಡುವ ಯೋಜನೆ ನಮ್ಮದಾಗಿದೆ.

ಅತ್ರಿ ಬುಕ್ಸ್‌ನ ಅಶೋಕವರ್ಧನ ಅವರು ಎಲ್ಲರಿಗೆಂದು ಮುಕ್ತವಾಗಿ, ಕ್ರಿಯೇಟೀವ್ ಕಾಮನ್ಸ್‌ನಡಿ ಲಭ್ಯವಾಗಿಸಿರುವ ಜಿ.ಟಿ ನಾರಾಯಣರಾವ್ ಅವರ ವೈಜ್ಞಾನಿಕ ಬರಹಗಳನ್ನು ಪ್ರಾಯೋಗಿಕವಾಗಿ ಪಠ್ಯದ ಕನ್ಕಾರ್ಡೆನ್ಸ್ ಕೆಲಸಕ್ಕೆ ತೊಡಗಿಸಿಕೊಳ್ಳುವ ಹಂತದಲ್ಲಿದ್ದೇವೆ.

ನಮ್ಮ ಭಾಷಾ ಸಂಶೋಧನೆ, ತಂತ್ರಾಂಶ ಅಭಿವೃದ್ದಿಯ ಬಗ್ಗೆ ಸಂಶೋಧನಾ ಪಠ್ಯಗಳನ್ನು ಬರೆದು, ಅದನ್ನೂ ಮುಕ್ತವಾಗಿ ಲಭ್ಯವಾಗಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಯುವಕರನ್ನು ಇಂತಹ ಭಾಷೆ ಕಟ್ಟುವ ಕೆಲಸಗಳಿಗೆ ಸಿದ್ಧಪಡಿಸುವುದು, ಭಾಷಾ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆ/ಒಗಟುಗಳನ್ನು ಇವರ ಮುಂದಿಟ್ಟು ಹೊಸ ತಂತ್ರಾಂಶಗಳ, ತಂತ್ರಜ್ಞಾನಗಳ ಹುಟ್ಟುಹಾಕುವಿಕೆಗೆ ವೇದಿಕೆ ಸಿದ್ದಪಡಿಸುವುದು ಹೀಗೆ ಅನೇಕ ಯೋಜನೆಗಳು ನಮ್ಮ ತಂಡದ ಮುಂದಿದೆ. [:]