ಅಡಕ ಮುದ್ರಿಕೆಗಳು (CDs – Compact Disks) ಈಗಂತೂ ಹಳ್ಳಿ ಹಾಗೂ ನಗರ ಎಲ್ಲೆಡೆ ಚಿರಪರಿಚಿತ. ಛಾಯಾಚಿತ್ರಗಳ ದೊಡ್ಡ ಸಂಗ್ರಹವನ್ನಾಗಲಿ, ಸಿನೆಮಾವನ್ನಾಗಲಿ, ಹಾಡುಗಳ ಸಂಗ್ರಹವನ್ನಾಗಲಿ ಈ ಅಡಕ ಮುದ್ರಿಕೆಗಳಲ್ಲಿ ಮುದ್ರಿಸಿ ಇಟ್ಟುಕೊಳ್ಳಬಹುದು. ಮುದ್ರಿಸಿದ ಈ ಮುದ್ರಿಕೆಗಳಲ್ಲಿ ಅಡಗಿರುವ ವಿಷಯ ವಸ್ತುಗಳನ್ನು ನೋಡಲು, ಕಂಪ್ಯೂಟರ್‌ಗಳಿವೆ, ಲ್ಯಾಪ್ಟಾಪ್‌ಗಳಿವೆ, ಹಾಗೂ ಸಿಡಿ-ಪ್ಲೇಯರ್‌ಗಳಿವೆ. ನಾವು ಬಳಸುವ ವಿಂಡೋಸ್, ಗ್ನೂ-ಲಿನಕ್ಸ್ ಮೊದಲಾದ ಕಾರ್ಯನಿರ್ವಹಣ ವ್ಯವಸ್ಥೆಗಳು (Operating Systems) ಈ ಅಡಕ ಮುದ್ರಿಕೆಗಳಲ್ಲಿಯೇ ಲಭ್ಯವಿರುತ್ತವೆ. ಹೀಗಿರುವಾಗ, ಈ ಅಡಕ ಮುದ್ರಿಕೆಗಳು ಹೇಗೆ ತಯಾರಾಗಿರುತ್ತವೆ ಹಾಗೂ ಅವನ್ನು ಮುದ್ರಿಸುವ ಬಗ್ಗೆ ವಿವರವನ್ನು ತಿಳಿಯುವುದು ಸೂಕ್ತವೆನಿಸುತ್ತದೆಯಲ್ಲವೇ? ಸರಿ, ಹಾಗಿದ್ದಲ್ಲಿ ಈ ವಿಚಾರಗಳ ಬಗ್ಗೆ ಕಣ್ಣಾಡಿಸೋಣ.

ಅಡಕ ಮುದ್ರಿಕೆಯ ವಿನ್ಯಾಸ
ಅಡಕ ಮುದ್ರಿಕೆಗಳ ಮೂಲ ಉದ್ದೇಶ ಹಾಡುಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುವುದಕ್ಕಾಗಿ ಆಗಿತ್ತು. ಒಂದು ಸಾಮಾನ್ಯವಾದ ಅಡಕ ಮುದ್ರಿಕೆಯಲ್ಲಿ ಸುಮಾರು ೭೪ ನಿಮಿಷಗಳ ಹಾಡನ್ನು ಸಂಗ್ರಹಿಸಬಹುದು ಅಂದರೆ, ೭೮೩ ಮೆಗಾಬೈಟ್‌ಗಳ ಸಾಮರ್ಥ್ಯ. ಇಷ್ಟು ಸಾಮರ್ಥ್ಯದ ಮುದ್ರಿಕೆಯ ವ್ಯಾಸ (Diameter) ೪.೮ ಅಂಗುಲಗಳಷ್ಟು (೧೨ ಸೆಂಟಿಮೀಟರ್‌ಗಳು) ಇರುತ್ತದೆ. ಹಾಗಿದ್ದಲ್ಲಿ, ಒಂದು ಬೈಟ್‌ನಷ್ಟು ಮಾಹಿತಿಯ ಜಾಗ, ಈ ಅಡಕ ಮುದ್ರಿಕೆಯಲ್ಲಿ ಹೇಗೆ ನಿರ್ಮಾಣವಾಗುತ್ತದೆ ಎಂಬುದನ್ನು ತಿಳಿಯೋಣ.

ಅಡಕ ಮುದ್ರಿಕೆಯೆಂಬುದು ಸರಳವಾದ, ೪/೧೦೦ ಅಂಗುಲದಷ್ಟು (೧.೨ ಮಿಲಿಮೀಟರ್‌ಗಳು) ದಪ್ಪಗಿರುವ ಒಂದು ಪ್ಲಾಸ್ಟಿಕ್ ಸಾಧನವೆಂದು ಹೇಳಬಹುದು. ಅಡಕ ಮುದ್ರಿಕೆಯ ಬಹುತೇಕ ಭಾಗ ಇಂಜೆಕ್ಷನ್-ಮೋಲ್ಡ್ ಮಾಡಿದ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್‌ನದಾಗಿರುತ್ತದೆ. ಇದನ್ನು ತಯಾರಿಸುವ ಹಂತದಲ್ಲಿ, ಬಹು ಉದ್ದವಾದ, ನಾಗಮುರಿಗೆ ಮಾಧರಿಯ ಒಂದೇ ಎಳೆಯಲ್ಲಿ, ಈ ಪ್ಲಾಸ್ಟಿಕ್‌ನಲ್ಲಿ ಅತಿ ಸೂಕ್ಷ್ಮವಾಗಿ ಮೂಢಿಸಿದ ಉಬ್ಬು-ತಗ್ಗುಗಳಲ್ಲಿ ಮಾಹಿತಿಯನ್ನು ಮುದ್ರಿಸಲಾಗಿರುತ್ತದೆ. ಈ ಮುದ್ರಿತ ಉಬ್ಬು-ತಗ್ಗುಗಳ ಮೇಲೆ ತೆಳ್ಳಗಿನ, ಪ್ರತಿಫಲಿಸುವ ಅಲ್ಯೂಮೀನಿಯಂ ಹೊದಿಕೆಯಿರುತ್ತದೆ. ಈ ಅಲ್ಯೂಮೀನಿಯಂ ಹೊದಿಕೆಯನ್ನು ರಕ್ಷಿಸಲು, ತೆಳ್ಳಗಿನ ಆಕ್ರೈಲಿಕ್ ಹೊದಿಕೆಯನ್ನು ಸಿಂಪಡಿಸಲಾಗಿರುತ್ತದೆ. ಈ ಆಕ್ರೈಲಿಕ್ ಹೊದಿಕೆಯ ಮೇಲೆ ಹೆಸರಿನ ಚೀಟಿಯ ಪದರವನ್ನು ಮುದ್ರಿಸಲಾಗಿರುತ್ತದೆ. ಒಟ್ಟಿನಲ್ಲಿ, ಅಡಕ ಮುದ್ರಿಕೆಯ ಪದರಗಳ ವಿನ್ಯಾಸ ಕೆಳಕಂಡಂತಿವೆ.

ಮೇಲಿನ ಚಿತ್ರದಲ್ಲಿ, ಹಳದಿ ಬಣ್ಣದ ಕೆಳಗಿನ ಪದರ, ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್, ಕಪ್ಪು ಪದರ ಅಲ್ಯೂಮೀನಿಯಂ, ಕಿತ್ತಳೆ ಬಣ್ಣದ ಪದರ ಆಕ್ರೈಲಿಕ್ ಹಾಗೂ ಮೇಲಿನ ಹಸಿರು ಪದರ ಹೆಸರುಪಟ್ಟಿಯದು.

ಅಡಕ ಮುದ್ರಿಕೆಯಲ್ಲಿ ಮುದ್ರಿತವಾಗುವ, ನಾಗಮುರಿಗೆ ಮಾಧರಿಯ, ಉಬ್ಬು-ತಗ್ಗುಗಳ ದತ್ತಾಂಶದ ಎಳೆ, ಮುದ್ರಿಕೆಯ ಒಳಭಾಗದಿಂದ ಹೊರಭಾಗಕ್ಕೆ ಹೋಗಿರುತ್ತದೆ. ಪ್ಲೇಯರ್‌ಗಳು ಅಡಕ ಮುದ್ರಿಕೆಯನ್ನು ಇದೇ ರೀತಿ, ಒಳಭಾಗದಿಂದ ಹೊರಭಾಗದ ಮಾರ್ಗವಾಗಿ, ಎಳೆಯ ದತ್ತಾಂಶವನ್ನು ಓದುತ್ತವೆ. ಈ ಎಳೆಯ ಅಗಲ ಸುಮಾರು ೦.೫ ಮೈಕ್ರಾನ್‌ಗಳು (ಒಂದು ಮೈಕ್ರಾನ್ – ಒಂದನೇ ಹತ್ತು ಲಕ್ಷ ಮೀಟರ್‌ಗೆ ಸಮ) ಹಾಗೂ ಇದರಲ್ಲಿರುವ ಉಬ್ಬುಗಳ ಅಳತೆ ಇನ್ನೂ ಸೂಕ್ಷ್ಮ. ಒಂದಕ್ಕಿಂದ ಹೆಚ್ಚಿರಬಹುದಾದ ಈ ಎಳೆಗಳ ನಡುವಿನ ಅಂತರ ೧.೬ ಮೈಕ್ರಾನ್‌ಗಳು. ದತ್ತಾಂಶದ ಎಳೆಯ ಮೇಲೆ ಮೂಢುವ ಉಬ್ಬುಗಳು ೦.೫ ಮೈಕ್ರಾನ್‌ಗಳಷ್ಟು ಅಗಲ, ಕನಿಷ್ಟ ೦.೮೩ ಮೈಕ್ರಾನ್‌ಗಳಷ್ಟು ಉದ್ದ ಹಾಗೂ ೧೨೫ ನ್ಯಾನೊಮೀಟರ್‌ಗಳಷ್ಟು ಎತ್ತರವಿರುತ್ತವೆ (ಒಂದು ನ್ಯಾನೊಮೀಟರ್ – ಒಂದನೇ ನೂರು ಕೋಟಿ ಮೀಟರ್‌ಗೆ ಸಮ). ಈ ಉಬ್ಬುಗಳು ಅಲ್ಯೂಮೀನಿಯಂ ಪದರದ ಕಡೆಯಿಂದ ತಗ್ಗುಗಳಾಗಿ ಹಾಗೂ ಮುದ್ರಿಕೆಯ ಇನ್ನೊಂದು ಮುಖದಿಂದ ಉಬ್ಬುಗಳಾಗಿ (ಪ್ಯೇಯರ್ಗಳು ಲೇಜರ್ ಬಿಂಬದಿಂದ ದತ್ತಾಂಶವನ್ನು ಓದುವ ಮುಖ) ಕಾಣುವುದು ಸಾಮಾನ್ಯ.

ಈ ರೀತಿಯ ಸೂಕ್ಷ್ಮ ಉಬ್ಬುಗಳು ಮುದ್ರಿಕೆಯ ದತ್ತಾಂಶದ ಎಳೆಯನ್ನು ಬಲು ಉದ್ದವಾಗಿರಿಸುತ್ತದೆ. ಹಾಗೊಮ್ಮೆ ನಾವು ಈ ಎಳೆಯನ್ನು ಅಡಕ ಮುದ್ರಿಕೆಯಿಂದ ಹೊರತೆಗೆದು, ನೇರವಾಗಿ ಅಳತೆ ಮಾಡಿದಲ್ಲಿ, ಅದು ಸುಮಾರು ೫ ಕಿಲೋಮೀಟರ್‌ಗಳಷ್ಟು ಉದ್ದವಿರುತ್ತದೆ! ಇಂತಹ ಸೂಕ್ಷ್ಮ ಎಳೆಯನ್ನು ಕರಾರುವಕ್ಕಾಗಿ ಓದಲು, ಅಷ್ಟೇ ಕರಾರುವಕ್ಕಾದ ವಿಧಾನವೂ ಬೇಕು. ಈ ಓದುವ ವಿಧಾನದ ಬಗ್ಗೆ ಒಂದಿಷ್ಟು ತಿಳಿಯೋಣ.

ಅಡಕ ಮುದ್ರಿಕ/ಸಿಡಿ ಪ್ಯೇಯರ್ – ವಿನ್ಯಾಸ ಹಾಗೂ ಕಾರ್ಯನಿರ್ವಹಣೆ
ಸಿಡಿ ಪ್ಯೇಯರ್‌ನ ಪ್ರಮುಖ ಕಾರ್ಯ, ಅಡಕ ಮುದ್ರಿಕೆಯಲ್ಲಿ ಮುದ್ರಿತವಾಗಿರುವ ಉಬ್ಬುಗಳನ್ನು ಓದಿ ದತ್ತಾಂಶದ ಮಾಹಿತಿಯನ್ನು ಪಡೆಯುವುದು. ಇದಕ್ಕಾಗಿ ಇದರಲ್ಲಿ ಮೂರು ಮುಖ್ಯ ವ್ಯವಸ್ಥೆಗಳಿರುತ್ತವೆ. ಅವು, ಡ್ರೈವ್ ಮೋಟರ್ (Drive motor), ಲೇಜರ್ ಮತ್ತು ಮಸೂರ ವ್ಯವಸ್ಥೆ (Laser and lens system) ಹಾಗೂ ಜಾಡುಪಟ್ಟಿ ವ್ಯವಸ್ಥೆ (Tracking system). ಅಡಕ ಮುದ್ರಿಕೆಯನ್ನು ನಿಖರವಾಗಿ ತಿರುಗಿಸುವ ಕಾರ್ಯವನ್ನು ಡ್ರೈವ್ ಮೋಟರ್ ಮಾಡುತ್ತದೆ. ಯಾವ ದತ್ತಾಂಶದ ಜಾಡು/ಎಳೆಯನ್ನು ಪ್ಯೇಯರ್ ಓದುತ್ತಿದೆ ಎನ್ನುವುದರ ಅನುಸಾರವಾಗಿ, ಡ್ರೈವ್ ಮೋಟರ್ ೨೦೦ ರಿಂದ ೫೦೦ ಆರ್.ಪಿ.ಎಮ್ (Rotations per minute) ವೇಗದಲ್ಲಿ ತಿರುಗುತ್ತದೆ. ಲೇಜರ್ ಮತ್ತು ಮಸೂರ ವ್ಯವಸ್ಥೆ ದತ್ತಾಂಶದ ಉಬ್ಬುಗಳಿಗೆ ಬೆಳಕು ಬಿಟ್ಟು ಅವನ್ನು ಓದುವ ಕೆಲಸವನ್ನು ಮಾಡುತ್ತವೆ. ಲೇಜರ್ ಮತ್ತು ಮಸೂರ ವ್ಯವಸ್ಥೆಯನ್ನು ನಿಖರವಾಗಿ (ಮೈಕ್ರಾನ್‌ನಂತಹ ಸೂಕ್ಷ್ಮ ಅಳತೆಯಷ್ಟು ನಿಖರವಾಗಿ), ದತ್ತಾಂಶದ ಉಬ್ಬುಗಳಿಗೆ ಅನುಸಾರವಾಗಿ, ಚಲಿಸುವ ಕಾರ್ಯವನ್ನು ಜಾಡುಪಟ್ಟಿ ವ್ಯವಸ್ಥೆ ಮಾಡುತ್ತದೆ. ಇದರಿಂದ ದತ್ತಾಂಶದ ಮಾಹಿತಿಯುಳ್ಳ ಒಂದೇ ಜಾಡು/ಎಳೆಯನ್ನು, ನಾಗಮುರಿಗೆ ರೀತಿಯಲ್ಲಿ ಚಲಿಸಿ, ಅದರಲ್ಲಿರುವ ಉಬ್ಬುಗಳಿಗೆ ಲೇಜರ್ ಕಿರಣ-ಪುಂಜದ ಬೆಳಕು ಚೆಲ್ಲಿ, ದತ್ತಾಂಶ ಮಾಹಿತಿಯನ್ನು ಅನುಕರಿಸುವುದು ಲೇಜರ್ ಮತ್ತು ಮಸೂರ ವ್ಯವಸ್ಥೆಗೆ ಸಾಧ್ಯವಾಗುತ್ತದೆ. ಈ ಮೂಲ ವ್ಯವಸ್ಥೆಗಳು ಒಟ್ಟಾಗಿ, ಕರಾರುವಕ್ಕಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಈಗ ಊಹಿಸಿಕೊಳ್ಳಿ!

ಸಿಡಿ ಪ್ಲೇಯರ್‌ನಲ್ಲಿರುವ ಅತಿ ಕ್ಲಿಷ್ಟಕರವಾದ ಕಾರ್ಯವ್ಯವಸ್ಥೆಯೆಂದರೆ, ಲೇಜರ್ ಕಿರಣ-ಪುಂಜವನ್ನು ದತ್ತಾಂಶದ ಜಾಡು/ಎಳೆಯ ಮೇಲೆ ಕೇಂದ್ರೀಕರಿಸುವುದು. ಇದು ಜಾಡುಪಟ್ಟಿ ವ್ಯವಸ್ಥೆಗೆ ಸೇರಿದ ಕೆಲಸ. ಉಬ್ಬುಗಳು ಚಲಿಸುವ ವೇಗ, ಅಡಕ ಮುದ್ರಿಕೆಯು ಸುತ್ತುವ ವೇಗ (ಆರ್.ಪಿ.ಎಮ್) ಹಾಗೂ ತ್ರಿಜ್ಯದ ಗುಣಲಬ್ಧದಷ್ಟಿರುತ್ತದೆ. ಹೀಗಾಗಿ, ಒಳಗಿನಿಂದ ಹೊರಮುಖವಾಗಿ ಒಂದೇ ಎಳೆಯ ಮಾರ್ಗದಲ್ಲಿ, ನಾಗಮುರಿಗೆ ಮಾಧರಿಯಲ್ಲಿ ಈ ಕೇಂದ್ರೀಕೃತ ಲೇಜರ್ ಕಿರಣ-ಪುಂಜವು ಚಲಿಸುವಾಗ, ಉಬ್ಬುಗಳು ಹೆಚ್ಚು ಹೆಚ್ಚು ವೇಗವಾಗಿ ಹಾಯ್ದುಹೋಗುತ್ತವೆ. ಆದುದರಿಂದ, ಲೇಜರ್ ಕಿರಣ-ಪುಂಜವು ಹೊರಮುಖವಾಗಿ ಚಲಿಸಿದಂತೆಲ್ಲ, ಡ್ರೈವ್ ಮೋಟರ್ ಅಡಕ ಮುದ್ರಿಕೆಯ ವೇಗವನ್ನು ಕಡಿಮೆ ಮಾಡುತ್ತ ಹೋಗುತ್ತದೆ. ಹೀಗೆ ಮಾಡುವುದರಿಂದ, ಉಬ್ಬುಗಳು ಒಂದೇ ವೇಗದಲ್ಲಿ ಲೇಜರ್ ಕಿರಣ-ಪುಂಜದ ಮುಂದೆ ಹಾದುಹೋಗಲು ಸಾಧ್ಯವಾಗಿ, ದತ್ತಾಂಶವನ್ನು ಒಂದೇ ವೇಗದಲ್ಲಿ ಓದಲು ಸಹಾಯವಾಗುತ್ತದೆ.

ಒಂದು ಸಿಡಿ ಪ್ಯೇಯರ್‌ನಲ್ಲಿ ಉತ್ಕೃಷ್ಟವಾದ ಗಣಕ ತಂತ್ರಜ್ಞಾನವು ಅಡಗಿರುತ್ತದೆ. ಈ ತಂತ್ರಜ್ಞಾನದ ಸಹಾಯದಿಂದಲೇ, ಉಬ್ಬು-ತಗ್ಗುಗಳಲ್ಲಿ ಮುದ್ರಿಸಲಾದ ದತ್ತಾಂಶದ ಮಾಹಿತಿಯನ್ನು ಓದಿ, ಅವನ್ನು ದತ್ತಾಂಶದ ವಿಭಾಗಗಳಾಗಿ ಪರಿವರ್ತಿಸಿ, ಡಿಎಸಿಗೆ (Digital-Analog-Converter – ಆಡಿಯೋ ಸಿಡಿಗಳನ್ನು ಓದುವಾಗ) ಅಥವಾ ಕಂಪ್ಯೂಟರ್‌ಗೆ(CD-ROM ಡ್ರೈವ್‌ಗಳಿಂದ ಓದುವಾಗ) ಕಳುಹಿಸುವ ಕಾರ್ಯ ಸಾಧ್ಯವಾಗುತ್ತದೆ.

ಸಿಡಿ ಪ್ಯೇಯರ್‌ನ ಮೂಲ ಕರ್ತವ್ಯ, ಲೇಜರ್ ಕಿರಣ ಪುಂಜವನ್ನು (Lazer beam) ಅಡಕ ಮುದ್ರಿಕೆಯ ಉಬ್ಬು-ಸರಣಿಯ ಮೇಲೆ ಕೇಂದ್ರೀಕರಿಸುವುದು. ಲೇಜರ್ ಕಿರಣ-ಪುಂಜವು ಪಾಲಿಕಾರ್ಬೊನೇಟ್ ಪದರದ ಮೂಲಕ ಹಾದು ಅಲ್ಯೂಮೀನಿಯಂ ಪದರದಲ್ಲಿ ಪ್ರತಿಸ್ಫಲಿಸುತ್ತದೆ. ಹೀಗೆ ಪ್ರತಿಸ್ಫಲಿಸುವಾಗ, ಉಬ್ಬುಗಳಿಗೆ ಬಿದ್ದ ಕಿರಣ-ಪುಂಜವು ಒಂದು ಚಕ್ಷೂಷ-ವಿದ್ಯುನ್ಮಾನ (Opto-electronic) ಪರದೆಯ ಮೇಲೆ ಬೀಳುತ್ತದೆ. ತಗ್ಗುಗಳಿಗೆ (Lands) ಬಿದ್ದ ಕಿರಣ-ಪುಂಜವು ಈ ಪರದೆಯಿಂದಾಚೆ ಬೀಳುತ್ತದೆ. ಹೀಗೆ ಪರದೆಯ ಮೇಲೆ ಬೀಳುವ, ಹಾಗೂ ಬೀಳದ ಪ್ರತಿಸ್ಫಲಿತ ಕಿರಣ-ಪುಂಜಕ್ಕೆ ಅನುಗುಣವಾಗಿ ೧ ಅಥವಾ ೦ ಎಂಬ ಅಂಕಿತ ಗುರುತುಗಳನ್ನಾಗಿ (Digital signals) ಈ ಪರದೆಯಲ್ಲಿನ ವ್ಯವಸ್ಥೆ ಪರಿವರ್ತಿಸುತ್ತದೆ. ಹೀಗೆ ಪರಿವರ್ತಿತವಾದ ಅಂಕಿತ ಗುರುತುಗಳು ಬಿಟ್‌ಗಳೆಂದು, ೮ ಬಿಟ್‌ಗಳ ಗುಂಪುಗಳು ಸಾಮಾನ್ಯವಾಗಿ ಬೈಟ್‌ಗಳೆಂದು ಕರೆಯಲ್ಪಡುತ್ತವೆ. ಈ ಬಿಟ್ / ಬೈಟ್ ಸಮೂಹವನ್ನು ಕಂಪ್ಯೂಟರ್ನಲ್ಲಿನ ತಕ್ಕ ತಂತ್ರಾಂಶ ವ್ಯವಸ್ಥೆಗಳು ತಮ್ಮದೇ ರೀತಿಯಲ್ಲಿ ಬಳಸಿಕೊಂಡು, ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ಒದಗಿಸುತ್ತವೆ.

ನಾವು ಸಾಮಾನ್ಯವಾಗಿ, ಕಂಪ್ಯೂಟರ್‌ಗಳಲ್ಲಿನ ತಂತ್ರಾಂಶಗಳ ಮೂಲಕ ಅಡಕ ಮುದ್ರಿಕೆಗಳನ್ನು (ಹಾಡುಗಳ ಅಥವ ಇನ್ನಿತರ ದತ್ತಾಂಶ ಮಾಹಿತಿಗಳ) ತಯಾರಿಸುವಾಗ, ಬಹುತೇಕ ಕಾರ್ಯಗಳನ್ನು ಈ ತಂತ್ರಾಂಶಗಳೇ ಮಾಡುತ್ತವೆ. ಮುದ್ರಿಸಲು ಅನುಕೂಲವಾದ ಅಡಕ ಮುದ್ರಿಕೆಯನ್ನು ಅದರ ಡ್ರೈವ್ನಲ್ಲಿ ಇರಿಸಿ, ನಾವು ಸಂಗ್ರಹಿಸಿಟ್ಟ ಇಂತಿಷ್ಟು ಹಾಡುಗಳನ್ನೋ, ಇನ್ನಿತರ ಮಾಹಿತಿಗಳನ್ನೋ ಈ ತಂತ್ರಾಂಶಗಳಿಗೆ ಮುದ್ರಿಸಲು ಸೂಚಿಸಿದರಾಯಿತು, ಮಿಕ್ಕ ಕಾರ್ಯಗಳನ್ನು ಈ ತಂತ್ರಾಂಶಗಳೇ ಮಾಡುವುದರಿಂದ, ಅವು ಮುದ್ರಿಕೆಗಳಲ್ಲಿ ಬರೆಯುವ ದತ್ತಾಂಶ ಶೈಲಿಗಳ ಕ್ಲಿಷ್ಟತೆ ಹಾಗೂ ಕುತೂಹಲತೆ ನಮಗೆ ತಿಳಿಯುವುದಿಲ್ಲ. ಅವುಗಳ ಬಗ್ಗೆ ಇಂತಿಷ್ಟು ಕಣ್ಣಾಡಿಸೋಣ.

ಅಡಕ ಮುದ್ರಿಕೆಯ ದತ್ತಾಂಶ ಶೈಲಿಗಳು (CD data formats), ಅವುಗಳ ವಿನ್ಯಾಸಕಾರರು ಯಾವ ಯಾವ ಪರಿಸ್ಠಿತಿಗಳಿಗೆ, ಯಾವ ಯಾವ ಕಾರಣಗಳಿಗೆ ಅವನ್ನು ರೂಪಿಸಿದರು ಎಂಬುದನ್ನು ಅವಲಂಭಿಸಿರುತ್ತವೆ. ಈ ಕಾರಣ, ಪರಿಸ್ಥಿತಿಗಳು ಏನೇನು ಎಂಬುದು ಹೀಗಿವೆ.

೧. ಲೇಜರ್ ಕಿರಣ-ಪುಂಜವು ಮೂಲತಃ ನಾಗಮುರಿಗೆ ಮಾಧರಿಯ ದತ್ತಾಂಶದ ಎಳೆಯನ್ನು ಅನುಸರಿಸುವಾಗ, ಮಾಹಿತಿಗಾಗಿ ಉಬ್ಬುಗಳನ್ನು ಅನುಕರಿಸುವುದರಿಂದ, ಇಲ್ಲಿ ಎರಡು ಉಬ್ಬುಗಳ ಮಧ್ಯೆ ಹೆಚ್ಚು ಅಂತರಕ್ಕೆ ಆಸ್ಪದವಿರುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, ದತ್ತಾಂಶವು EFM (Eight-fourteen modulation) ಶೈಲಿಯಲ್ಲಿ ಮುದ್ರಿತಗೊಳ್ಳುತ್ತದೆ. ಈ ವಿಧದಲ್ಲಿ, ೮ ಬಿಟ್‌ಗಳುಳ್ಳ ಬೈಟ್‌ಗಳು ೧೪ ಬಿಟ್‌ಗಳವಾಗಿ ಪರಿವರ್ತಿತವಾಗುತ್ತವೆ. EFM ಶೈಲಿಯು, ಈ ಬಿಟ್ ಗಳಲ್ಲಿ ಕೆಲವಾದರೂ ದತ್ತಾಂಶ ಅಂಕಿತ ೧ ಆಗಿರುವಂತೆ ನೋಡಿಕೊಳ್ಳುತ್ತದೆ.

೨. ಒಂದೇ ಅಡಕ ಮುದ್ರಿಕೆಯಲ್ಲಿ, ಹಲವು ಹಾಡುಗಳಿರಬಹುದಾಗಿರುವುದರಿಂದ ಲೇಜರ್ ಕಿರಣ-ಪುಂಜವು ಒಂದು ಹಾಡಿನಿಂದ ಮತ್ತೊಂದು ಹಾಡಿಗೆ ಜಿಗಿಯಬೇಕಾಗುತ್ತದೆ. ಇದರಿಂದಾಗಿ, ಅಡಕ ಮುದ್ರಿಕೆಯಲ್ಲಿ ಹಾಡು ಎಲ್ಲಿದೆ ಎಂಬ ದತ್ತಾಂಶ ವಿವರಣೆಯೂ ಸಹ ಹಾಡಿನಲ್ಲೇ ನಮೂಧಾಗಿರಬೇಕಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು subcode data ಎನ್ನುವ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇದು ಲೇಜರ್ ಪುಂಜದ ನಿರ್ಧಿಷ್ಟ ಹಾಗೂ ಸಂಬಂಧೀಯ ಸ್ಥಾನಗಳನ್ನು ಹಾಗೂ ಹಾಡಿನ ಹೆಸರನ್ನು ದತ್ತಾಂಶದ ಎಳೆಯಲ್ಲಿ ನಮೂಧಿಸಲು ಅನುಕೂಲಕರವಾಗಿದೆ.

೩. ಕೆಲವೊಮ್ಮೆ ಲೇಜರ್ ಕಿರಣ-ಪುಂಜವು ಉಬ್ಬೊಂದನ್ನು ಸರಿಯಾಗಿ ಓದದೇ ಹೋಗಬಹುದು. ಇದರಿಂದಾಗುವ ಸಮಸ್ಯೆಯನ್ನು ಬಗೆಹರಿಸಲು, ಹೆಚ್ಚಿನ ದತ್ತಾಂಶದ ಬಿಟ್‌ಗಳನ್ನು ಸೇರಿಸಿರುತ್ತಾರೆ. ಈ ಬಿಟ್‌ಗಳು ಇಂತಹ ಒಂದು ಬಿಟ್ ತೊಂದರೆಗಳನ್ನು ಕಂಡುಹಿಡಿದು, ಅವನ್ನು ಸರಿಪಡಿಸಲು ಸಹಾಯವಾಗುತ್ತವೆ. ಇವಕ್ಕೆ, error correcting codes ಎನ್ನುತ್ತಾರೆ.

೪. ಅಡಕ ಮುದ್ರಿಕೆಯ ಮೇಲೆ ಬೀಳಬಹುದಾದ ಒಂದು ಸೂಕ್ಷ್ಮ ಗೆರೆಯಿಂದಾಗಿ, ಅದರ ದತ್ತಾಂಶದ ಅಂಶಕ್ಕೆ ಹಾನಿಯಾಗಬಹುದು. ಈ ಸಮಸ್ಯೆಯನ್ನು ಬಗೆಹರಿಸಲು ದತ್ತಾಂಶವನ್ನು ಸರಣಿಯಲ್ಲದ ರೀತಿಯಲ್ಲಿ ಮುದ್ರಿಕೆ ಸುತ್ತಿನಲ್ಲಿ ಸೇರಿಸಲಾಗಿರುತ್ತದೆ. ಒಂದು ಪ್ರದಕ್ಷಿಣೆಗೆ ಒಮ್ಮೆ ದತ್ತಾಂಶವನ್ನು ಓದುವ ಡ್ರೈವ್, ಓದಿದ ಅಂಶವನ್ನು ಪುನಃ ರೂಪಿಸುತ್ತದೆ.

ಅಡಕ ಮುದ್ರಿಕೆಯ ದತ್ತಾಂಶ ಶೈಲಿಗಳಲ್ಲಿ ಬಹಳ ವಿಧಗಳಿವೆ. ಅವುಗಳಲ್ಲಿ ಪ್ರಮುಖವಾದವು CD-DA (ಧ್ವನಿ) ಮತ್ತು CD-ROM (ಕಂಪ್ಯೂಟರ್‌ಗಳ ದತ್ತಾಂಶಕ್ಕಾಗಿ). ಒಟ್ಟಿನಲ್ಲಿ ಸಿಡಿ / ಅಡಕ ಮುದ್ರಿಕೆಯ ವಿನ್ಯಾಸ, ದತ್ತಾಂಶ ಶೈಲಿ ಹಾಗೂ ಕಾರ್ಯಾಚರಣೆ ಎಲ್ಲವೂ ಕುತೂಹಲಕಾರಿಯಾದವು ಎನ್ನುವುದರಲ್ಲಿ ಸಂಶಯವಿಲ್ಲ.

ಆಧಾರ ಲೇಖನ: http://electronics.howstuffworks.com/cd.htm