RFId ಎಂದರೆ ನೇರ ಸಂಪರ್ಕವಿಲ್ಲದೆ ರೇಡಿಯೋ ತರಂಗಗಳ ಮೂಲಕ ವಸ್ತುಗಳನ್ನು ಪ್ರತ್ಯೇಕವಾಗಿ ಗುರುತಿಸುವ ಅಥವಾ ನಿಗಾ ಇಡುವ ತಂತ್ರಜ್ಞಾನ. ಇದಕ್ಕಾಗಿ ಮಾಹಿತಿಯನ್ನು ರವಾನಿಸಬಲ್ಲ RFId ತಳುಕು(Tag)ಗಳನ್ನು ಬಳಸಲಾಗುವುದು.

ಈ RFId ತಂತ್ರಜ್ಞಾನದಲ್ಲಿ ಮೂರು ಪಾತ್ರದಾರಿಗಳಿದ್ದಾರೆ.

೧. RFId ತಳುಕು – ನಿಗಾವಹಿಸಬೇಕಾದ ಪ್ರತಿವಸ್ತುವಿಗೂ ಈ ತಳುಕುಗಳನ್ನು ಅಂಟಿಸಿರಲಾಗುತ್ತದೆ. ಇದು ಆ ವಸ್ತುವಿನ ಬಗ್ಗೆ ಅಗತ್ಯ ಮಾಹಿತಿಯನ್ನು ಹೊಂದಿರುತ್ತದೆ. ಈ ತಳುಕುಗಳು ಎಷ್ಟು ಸಣ್ಣ ಹಾಗು ತೆಳುವಾಗಿರುತ್ತದೆಯೆಂದರೆ label ಹಿಂಭಾಗದಲ್ಲಿ ಅಂಟಿಸಿದ್ದರೂ ಅನುಭವಕ್ಕೆ ಬಾರದು.

೨. RFId ಓದುಗ (Reader)-ಈ RF ತಳುಕುಗಳಲ್ಲಿ ಇರುವ ಮಾಹಿತಿಯನ್ನು ಪಡೆದುಕೊಳ್ಳುವ ಸಾಧನವೇ RF ಓದುಗ.

RFId ನಿರ್ವಾಹಕ ಸಾಫ್ಟ್‌ವೇರ್ – ಓದುಗನಿಂದ ಮಾಹಿತಿಯನ್ನು ಪಡೆದ ಬಳಿಕ ಈ ನಿರ್ವಾಹಕ ತಂತ್ರಾಂಶದಿಂದ ಆ ಮಾಹಿತಿಯನ್ನು ಡೇಟಾಬೇಸ್‌ಗೆ ಹಾಕಬೇಕೆ ಅಥವಾ ಅಂತರ್ಜಾಲದಲ್ಲಿ ಪ್ರಕಟಿಸಬೇಕೆ ಇತ್ಯಾದಿ ಕಾರ್ಯಗಳನ್ನು ಮಾಡಬಹುದು.

RFId ಮುಖ್ಯ ಅನ್ವಯಿಕೆ ಕಂಡು ಬರುವುದು ಸೂಪರ ಮಾರುಕಟ್ಟೆಗಳಲ್ಲಿ. ವಸ್ತುವೊಂದರ ಬೆಲೆ,ತಯಾರಕರು ಇತ್ಯಾದಿ ಮಾಹಿತಿಗಳನ್ನು ಹೊಂದಿರುವ RFId ತಳುಕನ್ನು ಆ ವಸ್ತುವಿಗೆ ಅಂಟಿಸಿರಲಾಗುತ್ತದೆ . ನಾವು ಪದಾರ್ಥಗಳನ್ನು cartಗೆ ತುಂಬುತ್ತಿದ್ದಂತೆಯೇ cartನಲ್ಲಿರುವ ಓದುಗ ಬೆಲೆಯ ಮಾಹಿತಿಯನ್ನು ಪಡೆದು ಮೌಲ್ಯವನ್ನು ಕೂಡಿಸುತ್ತ ಹೋಗುತ್ತದೆ. counterನಲ್ಲಿ ಹೋಗುವಷ್ಟು ಹೊತ್ತಿಗಾಗಲೇ ನಮ್ಮ ಬಿಲ್ ಸಿದ್ದವಾಗಿರುತ್ತದೆ. ನಿರ್ವಾಹಕ softwareನ ಮೂಲಕ ಬಿಲ್ ಪ್ರಿಂಟ್ out ತೆಗೆಯುವುದೊಂದೇ ಬಾಕಿ.ನಂತರ ಮಾರಾಟವಾದ ವಸ್ತು, ಆದರ ತಯಾರಕರು ಮಾರಾಟವಾದ ಸಮಯ ದಿನಾಂಕ ಇತ್ಯಾದಿ ಮಾಹಿತಿಯನ್ನು ಮಳಿಗೆಯವರು ತಮ್ಮ databaseನಲ್ಲಿ ಹೊಂದಬಹುದು. ಅಂತೆಯೇ ಆದನ್ನು ತಯಾರಕ ವಿತರಕರಿಗೆ ರವಾನಿಸಬಹುದು.

“Barcode’ ಗಿಂತ ಹೇಗೆ ಭಿನ್ನ?
ಈಗಾಗಲೇ ನಿಮ್ಮ ಮನಸಿನಲ್ಲಿ barcodeಗಳ ಸುಳಿವು ಹಾದಿರಬಹುದು. Barcodeಗಳಿಂದಾಗಿ billing ಎಷ್ಟೇ ಸುಲಭವಾಗಿದ್ದರೂ, ಸಿಬ್ಬಂದಿಯು cartನಿಂದ ಒಂದೊಂದೇ ವಸ್ತುವನ್ನು ತೆಗೆದು ಸ್ಕ್ಯಾನ್ ಮಾಡಬೇಕು. ಅಲ್ಲಿಯವರೆಗೂ ಇತರ ಗ್ರಾಹಕರು ಸಾಲುಗಟ್ಟಿ ಕಾಯಬೇಕು.

ಅದೇ RFId ತಂತ್ರಜ್ಞಾನದಲ್ಲಿ ಮಾಹಿತಿಯು ರೇಡಿಯೋ ತರಂಗಗಳ ಮೂಲಕ ವಿನಿಮಯವಾಗುತ್ತದೆ . ಹಾಗಾಗಿ barcode ವಿಧಾನದಂತೆ scanner ನಿಂದ ಪ್ರತ್ಯೇಕವಾಗಿ ಒಂದೊಂದೇ ಪದಾರ್ಥವನ್ನು ವಿಶ್ಲೇಷಿಸುವ ಹೊರೆಯಿಲ್ಲ. ಇಲ್ಲಿಗೇ ನಿಲ್ಲದೆ, ಕೌಂಟರ್ ವ್ಯವಸ್ಥೆಯನ್ನು ದಿಕ್ಕರಿಸಿ , ಗ್ರಾಹಕ ಮಳಿಗೆಯಿಂದ ಹೊರನಡೆಯುತ್ತಿದಂತೆ ಆತನ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಪಡೆದು, ಖರೀದಿಸಿದ ಮೌಲ್ಯವನ್ನು ಬ್ಯಾಂಕ್‌ಗೆ ತಿಳಿಸಿ, ಆತನ ಖಾತೆಯಿಂದಲೇ ಹಣವನ್ನು ಮಳಿಗೆಯವರ ಖಾತೆಗೆ ವರ್ಗಾಯಿಸುವಂತೆ ಮಾಡಬಹುದು. ಅಲ್ಲಿಗೆ ಗ್ರಾಹಕ ಮಳಿಗೆಗೆ ಹೋಗಿ ತನಗೆ ಬೇಕಾದ ಪದಾರ್ಥಗಳನ್ನು ಒಂದು ಬ್ಯಾಸ್ಕೆಟ್ ನಲ್ಲಿ ಸಂಗ್ರಿಹಿಸಿ ಹೊರನಡೆದರೆ ಸಾಕು ಎಲ್ಲವೂ ತನ್ನಷ್ಟಕ್ಕೆ ತಾನೇ ಆಗುತ್ತದೆ.ಈ ಕಾರಣದಿಂದ RFId ಬಳಕೆಯಿಂದ ದಾರಿ ಹೆಚ್ಚು ಸುಗಮವಾಗುತ್ತದೆ.

ಒಂದೆರಡು ಮುಖ್ಯ ಅನ್ವಯಿಕೆಗಳು:
ಒಂದು ಪ್ರಯೋಗದಂತೆ , ದೃಷ್ಟಿಹೀನರ ಕಡ್ಡಿ(stick)ನ ಒಂದು ತುದಿಗೆ RFId ತಳುಕನ್ನೂ ಹಾಗು ಮಳಿಗೆಯ ಮೂಲೆ ಮೂಲೆಗಳಿಗೆ ಓದುಗವನ್ನು ಅಳವಡಿಸಲಾಯಿತು. ಕುರಡನೋಬ್ಬನು ಬರುತ್ತಿದ್ದಂತೆಯೇ ಕಡ್ಡಿಯಲ್ಲಿದ್ದ ತಳುಕನ್ನು ಪತ್ತೆಮಾಡಿದ ಓದುಗ, ಮುಂದೆ ಮೆಟ್ಟಿಲುಗಳಿವೆಯೆ, ಎಡಕ್ಕೆ ಹೊರಳಿದರೆ ಏನು ಸಿಕ್ಕೀತು, ಬಲಕ್ಕೆ ಹೊರಳಿದರೆ ಏನು, ಮೂಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿದೆಯೇ ಇತ್ಯಾದಿ ರೆಕಾರ್ಡೆಡ್ ಸಂದೇಶವನ್ನು ಕೂಗಿ ಹೇಳುತ್ತದೆ. ಇದರಿಂದ ದೃಷ್ಟಿಹೀನನೊಬ್ಬ ಸ್ವತಂತ್ರವಾಗಿ ಸಂಚರಿಸುವ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತಿದೆ.

ಅಲಜ್ಯಿಮಾರ್(alzheimer disease) ರೋಗಿಗಳಿಗೆ ಬೌದ್ದಿಕ ಸ್ವಾಸ್ಥ್ಯ ರಿ ಇರುವುದಿಲ್ಲ . ಅರಳು ಮರಳಿನಂತೆ ಇರುತ್ತದೆ. ತಮ್ಮ ಬಗ್ಗೆಯೇ ದೀರ್ಘ ಕಾಲದ ಮರೆವು , ಆಡುವ ಭಾಷೆಯ ತೊಂದರೆ ಇತ್ಯಾದಿಗಳನ್ನು ಅನುಭವಿಸುತ್ತಿರುತ್ತಾರೆ. ಅಂತಹವರಿಗಾಗಿ Alzheimer ಕಮ್ಯೂನಿಟಿ ಕೇರ್ , ಫ್ಲೋರಿಡಾ ಸಂಸ್ಥೆಯು RFId ತಳುಕೊಂದನ್ನು ಚರ್ಮದ ಕೆಳಗೆ ಇಟ್ಟು , ಆ ತಳುಕಿನಲ್ಲಿ ರೋಗಿಯ ಹೆಸರು ಮತ್ತು ಇತರ ದಾಖಲೆಗಳನ್ನು ಉಳಿಸಿಕೊಳ್ಳುವಂತೆ ಮಾಡಿದ್ದರೆ. ವೈದ್ಯರು RF ಓದುಗದ ಮೂಲಕ ಈ ದಾಖಲೆಗಳನ್ನು ಪಡೆದುಕೊಳ್ಳಬಹುದು ಹಾಗು ತಿದ್ದಬಹುದು. ಇದನ್ನು ಮೊದಲು ಮರೆವನ್ನು ಹೊಂದಿದ್ದ ಪರಾವಲಂಬಿಗಳಿಗೆ ಸಿದ್ಧಪಡಿಸಿದ್ದರೂ ಆಧುನಿಕತೆಯನ್ನು ಅಪ್ಪುತ್ತಿರುವ ಇಂದಿನ ಪ್ರಪಂಚದಲ್ಲಿ ಎಲ್ಲ ರೋಗಿಗಳಿಗೂ ವಿಸ್ತರಿಸಬಹುದಾಗಿದೆ.

ಕನ್ನಡಿಗರ ಮುನ್ನುಡಿ:
ಹೀಗೆ ವಿಶ್ವದ ವಿವಿಧ ಕಡೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ RFId ತಂತ್ರಜ್ಞಾನದ ಉಪಯೋಗ ಮಾಡುತ್ತಿರಲು, ಕನ್ನಡಿಗರಿಗೆ ಖುಷಿಯನ್ನು ತಂದುಕೊಡುವ ಸಂಗತಿಯೆಂದರೆ ಈ ತಂತ್ರಜ್ಞಾನವನ್ನು ಕನ್ನಡದ ಒಂದು ಗ್ರಂಥಾಲಯ ಇದನ್ನು ಅಳವಡಿಸಿರುವುದು. ಬಸವನಗುಡಿಯಲ್ಲಿರುವ ‘ಮುನ್ನುಡಿ’ ಎಂಬ ಕನ್ನಡ ಪುಸ್ತಕಾಲಯ RFID ಸೌಲಭ್ಯ ಹೊಂದಿದ್ದೂ, ಪ್ರತಿ ಚಂದಾದಾರರಿಗೂ ಒಂದು ಕಾರ್ಡ್ ನೀಡಲಾಗುತ್ತದೆ. ಇದರಲ್ಲಿ ಚಂದಾದಾರರ ಹೆಸರು ಹಾಗು ಅವರು ಪಡೆದಿರುವ ಪುಸ್ತಕ ಅದರ ಕರ್ತೃ, ಹಿಂದಿರುಗಿಸಬೇಕಾದ ದಿನಾಂಕ ಇತ್ಯಾದಿಗಳನ್ನು ಸಂರಕ್ಷಿಸಲಾಗುತ್ತದೆ . ಪ್ರತಿ ಪುಸ್ತಕದ ಹಿಂದೆಯೂ ಒಂದು RFId ತಳುಕಿನಲ್ಲಿ ಪುಸ್ತಕದ ಮಾಹಿತಿಯನ್ನು ಉಳಿಸಲಾಗುತ್ತದೆ. ಚಂದಾದಾರನು ಪುಸ್ತಕ ,ತನ್ನ ಸದಸ್ಯತ್ವದ ಕಾರ್ಡ್ ಎರಡನ್ನೂ ಓದುಗದ ಮಣೆಯ ಮೇಲೆ ಇಟ್ಟರೆ, ನಿರ್ವಾಹಕ ತಂತ್ರಾಂಶ ಅಳವಡಿಸಿರುವ ಗಣಕದ ಮೂಲಕ ಪುಸ್ತಕವನ್ನು ಬಾಡಿಗೆಗೆ ಪಡೆಯುವ ಅಥವಾ ಹಿಂದಿರುಗಿಸುವ ಇಲ್ಲವೇ ಪುಸ್ತಕಾಲಯದಲ್ಲಿ ಒಂದು ಪುಸ್ತಕವನ್ನು ಹುಡುಕುವ ಕಾರ್ಯವನ್ನು ಮಾಡಬಹುದಾಗಿದೆ.

ಇನ್ನಷ್ಟು ಸ್ಮಾರ್ಟ್ ಆದರೆ?
RFId ತಳುಕನ್ನು ಹೊಂದಿರುವ ಪುಸ್ತಕವೊಂದನ್ನು ಅಂಗಡಿಯಲ್ಲಿ ಖರೀದಿಸಿ ಇಲ್ಲವೇ ಬಾಡಿಗೆಗೆ ತಂದು ನಮ್ಮ ಮನೆಯ ಅಲಮಾರಿಯಲ್ಲಿ ಇಟ್ಟರೆ, ಅಲ್ಲಿರುವ ಓದುಗವು ತಳುಕಿನಿಂದ ಮಾಹಿತಿಯನ್ನು ಪಡೆದು ಪುಸ್ತಕಗಳನ್ನು ಕಾದಂಬರಿ, ಇತಿಹಾಸ, ಹಾಸ್ಯ ಹೀಗೆ ಶೈಲಿಗಳಂತೆ ಅಥವಾ ಕರ್ತೃವಿನ ಪ್ರಕಾರ ವಿಂಗಡಿಸಿ ಹೇಳುತ್ತದೆ. ಪುಸ್ತಕವನ್ನು ಬಾಡಿಗೆಗೆ ತಂದಿದ್ದರೆ, ಹಿಂದಿರುಗಿಸುವ ದಿನಾಂಕ ಬರುತ್ತಿರಲು ಎಚ್ಚರ ನೀಡುತ್ತದೆ. ಯಾವುದಾದರೂ ಪುಸ್ತಕವನ್ನು ಓದಿಯೇ ಇರದಿದ್ದರೆ ಅಂತಹ ಪುಸ್ತಕಗಳ ಪಟ್ಟಿ ಮಾಡಿ ಕೇಳಿದಾಗ ಪ್ರಕಟಿಸುತ್ತದೆ. ಅಷ್ಟೇ ಅಲ್ಲದೆ ಆ ಪುಸ್ತಕದ ಬಗೆಗಿನ ನಿಮ್ಮ ಅಭಿಪ್ರಾಯವನ್ನು ಆ ತಳುಕಿನಲ್ಲಿ ನಮೂದಿಸಿದರೆ , ಮುಂದೆ ಓದುವವರು ತಮ್ಮ RF ಓದುಗದ ಮೂಲಕ ಆ ಅಭಿಪ್ರಾಯವನ್ನು ತಿಳಿಯಬಹುದು.

ಹೀಗೆ ವಿಶ್ವದ ವಿವಿಧ ಭಾಗಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ RFID ತಂತ್ರಜ್ಞಾನ ಬಳಕೆಯಲ್ಲಿದೆ. ಅಸೆಟ್ ಟ್ರಾಕಿಂಗ್ , ಸಪ್ಲೈ ಚೈನ್ ಮ್ಯಾನೇಜ್ಮೆಂಟ್ , ಮ್ಯಾನುಫ್ಯಾಕ್ಚರಿಂಗ್, ಮುದ್ರಣ , ಶಾಪಿಂಗ್ ಮಳಿಗೆ , ಪಾರ್ಕಿಂಗ್ ಲಾಟುಗಳು , ಪಾವತೀಕರಣ , ಸಂಸ್ಕರಣ , ವಿತರಣ , ಭದ್ರತೆ ಹೀಗೆ ಹಲವಾರು ಅನ್ವಯಿಕೆಗಳನ್ನು ಕಂಡಿದೆ . RFId ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಪ್ರಯೋಗಗಳು ಇತ್ಯಾದಿಗಳಿಗಾಗಿ www.rfidjournal.com ಗೆ ಭೇಟಿ ನೀಡಬಹುದು.

ಒಂದಿಷ್ಟು ತಾಂತ್ರಿಕ ಮಾಹಿತಿ:
ಮೇಲೆ ಕಂಡ ಅನ್ವಯಿಕೆಗಳನ್ನು ವಿಶ್ಲೇಷಿಸಿ ನೋಡಿದರೆ ತಳುಕುಗಳು ಮಾಹಿತಿಯನ್ನು ಹಿಡಿತ್ತುಕೊಂಡಿರುತ್ತವೆ ಎಂಬುದು ಸಿದ್ಧವಾಗುತ್ತದೆ . ಸ್ವಲ್ಪ ಗಮನಿಸಿ ನೋಡಿದರೆ ಕೆಲವು ಕಡೆ ತಳುಕಿನ ಮಾಹಿತಿಯನ್ನು ಕೇವಲ ಓದಲು ಸಾಧ್ಯ , ಕೆಲವೆಡೆ ತಳುಕುಗಳಿಗೆ ಬರೆಯುವುದೂ ಉಂಟು. ವಿವಿಧ ಕ್ಷೇತ್ರಗಳಲ್ಲಿ ವಿವಿಧವಾಗಿ ಮಾಹಿತಿ ವಿನಿಮಯವಾಗುವುದರಿಂದ ಮೂರು ರೀತಿಯ RFId ತಳುಕುಗಳು ದೊರೆಯುತ್ತವೆ.

Read -Only: ಈ ತಳುಕುಗಳು ತಯಾರಿಸುವ ಸಮಯದಲ್ಲಿ ಒಮ್ಮೆ ಮಾಹಿತಿ ಬರೆದರೆ ಅದನ್ನು ಮುಂದೆ ತಿದ್ದಲಾಗಲಿ ಅಳಿಸಲಾಗಲಿ ಆಗುವುದಿಲ್ಲ. ವಸ್ತುವೊಂದರಲ್ಲಿ ಅದರ ತಯಾರಕರು ,ತಯಾರಿ ದಿನಾಂಕ , ಅವಸಾನ ಹೊಂದುವ ದಿನಾಂಕ, ಇತ್ಯಾದಿ ಮಾಹಿತಿಯನ್ನು ಇಡಬೇಕಾದರೆ Read -Only ತಳುಕುಗಳನ್ನು ಉಪಯೋಗಿಸಬಹುದು .

Read -Write: ಈ RFId ತಳುಕುಗಳಿಂದ ಮಾಹಿತಿಯನ್ನು ಪಡೆಯಲೂ ಬಹುದು ತಿದ್ದಲೂ ಬಹುದು . Alzheimer ರೋಗಿಗಳು ಯಾವ ಘಟ್ಟದಲ್ಲಿದ್ದಾರೆ, ಅವರಲ್ಲಿ ಏನಾದರು ಹೊಸ ಲಕ್ಷಣಗಳು ಕಂಡುಬಂದಲ್ಲಿ ಅವುಗಳನ್ನು ತಳುಕುಗಳಲ್ಲಿ ದಾಖಲಿಸಬಹುದು.

Write Once Read Many: ಈ ತಳುಕುಗಳು ಉತ್ಪಾದನಗೊಂಡ ನಂತರ ಒಮ್ಮೆ ಮಾತ್ರ ತಿದ್ದಬಹುದು . ಪದಾರ್ಥವೊಂದರ ತಳುಕಿಗೆ ಅದರದೇ ಪ್ರತ್ಯೇಕ ಸಂಖ್ಯೆ (serial number ) ಒಂದನ್ನು ದಾಖಲಿಸಬೇಕಾದರೆ , ಈ ರೀತಿಯ ತಳುಕುಗಳ ಉಪಯೋಗ ಮಾಡಬಹುದು .

ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳಂತೆ ಇಲ್ಲಿಯೂ ವಿದ್ಯುಚ್ಛಕ್ತಿಯ ಅಗತ್ಯವಿದೆ. ಬೇಕಾದ ವಿದ್ಯುತ್ತನ್ನೂ ಯಾವುದು ಪೂರೈಸುತ್ತದೆ ಎಂಬುದರ ಮೇಲೆ ತಳುಕುಗಳನ್ನು ಈ 3 ರೀತಿಯಲ್ಲಿ ತಯಾರಿಸಲಾಗುತ್ತದೆ.

Active ಅಥವಾ ಸಕ್ರಿಯ ತಳುಕುಗಳು: ಈ ತಳುಕುಗಳು ಬ್ಯಾಟರಿ ಮೂಲಕ ವಿದ್ಯುತ್ತನ್ನು ಪಡೆಯುವುದಾಗಿರುತ್ತವೆ . ಈ ತಳುಕುಗಳು ಬ್ಯಾಟರಿಯನ್ನು ತನ್ನ ಯಂತ್ರಾಂಶದಲ್ಲಿಯೇ ಹೊಂದಿರುತ್ತವೆ ಹಾಗು ನಿಯಮಿತ ಸಮಯಕ್ಕೊಮ್ಮೆ ಮಾಹಿತಿಯನ್ನು ರೇಡಿಯೋ ತರಂಗಗಳ ಮೂಲಕ ತಾವೇ ಓದುಗನತ್ತ ಪ್ರಸಾರ ಮಾಡುತ್ತವೆ . 100 ಅಡಿಗಳಷ್ಟು ದೂರದ ವರೆಗೆ ಈ ಪ್ರಾಸರಣವನ್ನು ಸೆರೆ ಹಿಡಿಯಬಹುದು. ಹೆಚ್ಚಿನ ಬ್ಯಾಟರಿಗಳ ಅಳವಡಿಕೆಯಿಂದ 300 ಅಡಿಗಳವರೆಗೆ ವಿಸ್ತೀರ್ಣವನ್ನು ಹೆಚ್ಚಿಸಬಹುದು. ಹೆಚ್ಚಿನ ಯಂತ್ರಾಂಶವನ್ನು ಹೊಂದಿದ ಕಾರಣದಿಂದ ಈ ಸಕ್ರಿಯ ತಳುಕುಗಳು ದುಬಾರಿ.

Passive ಅಥವಾ ನಿಷ್ಕ್ರಿಯ ತಳುಕುಗಳು: ಈ ತಳುಕುಗಳು ಯಾವುದೇ ವಿದ್ಯುತ್ ಮೂಲಗಳನ್ನು ಹೊಂದಿರದೆ, ಓದುಗನ ಮೇಲೆ ಅವಲಂಬಿತವಾಗಿರುತ್ತವೆ. ಓದುಗ ಕಳೆಸುವ ರೇಡಿಯೋ ತರಂಗಗಳಿಂದಲೇ ವಿದ್ಯುತ್ತನ್ನು ಪಡೆದು ಮಾಹಿತಿ ರವಾನಿಸುತ್ತವೆ . ಓದುಗನ ಮೇಲೆ ಅವಲಂಬಿಯಾದ ಕಾರಣ ಕೇವಲ 20 ಅಡಿಗಳ ವಿಸ್ತೀರ್ಣವನ್ನು ಸಾಧಿಸಬಹುದು. ಆದರೆ ಅಧಿಕ ಯಂತ್ರಾಂಶಗಳ ಅಗತ್ಯವಿರದ ಕಾರಣ ಇವು ಅಗ್ಗವಾಗಿ ದೊರೆಯುತ್ತವೆ. ಆದ ಕಾರಣ ಇವು ಮಳಿಗೆಗಳಿಗೆ ಬಹು ಸೂಕ್ತ.

Semi-Passive ಅಥವಾ ಅರೆಕ್ರಿಯ ತಳುಕುಗಳು: ಈ ತಳುಕುಗಳೂ ಸಕ್ರಿಯ ಸೋದರರರಂತೆ ತಮ್ಮಲಿಯೇ ವಿದ್ಯುತ್ಪೂರಕವನ್ನು ಹೊಂದಿರುತ್ತವೆ . ಆದರೆ ಅಷ್ಟು ಪ್ರಬಲವಾದುವನ್ನು ಹೊಂದಿರುವುದಿಲ್ಲ. ಇವು ಓದುಗನ ಉಪಸ್ಥಿತಿಯಲ್ಲಿ ಮಾತ್ರ ಸಕ್ರಿಯಗೊಳ್ಳುತ್ತವೆ. ಓದುಗ ತಳುಕನ್ನು ಮಾಹಿತಿಗಾಗಿ ಪ್ರಚೋದಿಸಿದಾಗಲಷ್ಟೇ ಮಾಹಿತಿ ರವಾನಿಸಲು ಬೇಕಾದಷ್ಟು ಸಾಮರ್ಥ್ಯವುಳ್ಳ ಯಂತ್ರಾಂಶ ಹೊಂದಿರುತ್ತವೆ.

ಈ ರೀತಿಯ ತಳುಕುಗಳು ಹಾಗೂ ಅವುಗಳ ಓದುಗಗಳ ಸಂಯೋಗದಿಂದ 3 ರೀತಿಯ ಸಂಯೋಜನೆಗಳನ್ನು ಮಾಡಬಹುದು: ಸಕ್ರಿಯ ತಳುಕು-ಸಕ್ರಿಯ ಓದುಗ ,ನಿಷ್ಕ್ರಿಯ ತಳುಕು-ಸಕ್ರಿಯ ಓದುಗ ,ಸಕ್ರಿಯ ತಳುಕು ಸಕ್ರಿಯ ಓದುಗ (ಇದರ ಒಂದು ಅನುಷ್ಥಾನವೇ ಅರೆಕ್ರಿಯ ತಳುಕುಗಳು).

ಲೇಖಕ: ಶ್ರವಣ್ ಕುಲಕರ್ಣಿ

೨೦೧೧ರಲ್ಲಿ B.E ಪದವಿ ಹೊಂದಿ , embedded ಹಾಗು android developmentನಲ್ಲಿ ಅನುಭವ. ಸಾಹಿತ್ಯ ಹಾಗು ನಾಟಕಗಳಲ್ಲಿ ಆಸಕ್ತಿ. ಮುಕ್ತ ತಂತ್ರಜ್ಞಾನದಲ್ಲಿ ಹೆಚ್ಚುತ್ತಿರುವ ಒಲವು .ಸಂಧೀಲ್ ಸಮಾರಾಧನೆ ಎಂಬ ತಂಡದ ಮೂಲಕ ಕಿರುಚಿತ್ರಗಳ ನಿರ್ಮಾಣ ವಾರಾಂತ್ಯದ ಹವ್ಯಾಸಿ ಚಟುವಟಿಕೆ.