ಸಮುದಾಯ ಸೈಕಲ್ ವ್ಯವಸ್ಥೆ

ಈಗ ಯೂರೋಪಿಯನ್ ದೇಶಗಳಲ್ಲಿ ಸೈಕಲ್ ಸುಲಭವಾಗಿ ಕೈ ಎಟಕುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಸೈಕಲ್ ಗಳನ್ನು ನಿಲ್ಲಿಸಿರುತ್ತಾರೆ. ಸೈಕಲ್ ಬಳಸಲು ಅಪೇಕ್ಷಿಸುವರು ಮುಂಚೆಯೆ ನೊಂದಾಯಿಸಿಕೊಂಡಿರುತ್ತಾರೆ. ನೊಂದಾಣಿಕೆಯ ಜೊತೆಗೆ ಅವರಿಗೆ ಒಂದು ಕಾರ್ಡ್ ಸಿಗುತ್ತದೆ.ಆ ಕಾರ್ಡ್ ಮೂಲಕ ಅವರು ಸೈಕಲ್ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ , ಹಾಗೆಯೇ ಮತ್ತೆ ಸೈಕಲ್ ಹಿಂದಿರುಗಿಸುತ್ತಾರೆ. ಅಲ್ಲಿಯ ತಂತ್ರಾಂಶ ಅವರು ಬಳಸಿದ ಕಾಲಕ್ಕೆ ತಕ್ಕಂತೆ ಅವರ ಕಾರ್ಡ್ ನಿಂದ ಹಣವನ್ನು ಪಾವತಿ ಮಾಡಿಕೊಳ್ಳುತ್ತದೆ.

ಇಂತಹ ಯೋಜನೆ ಫಲಕಾರಿಯಾಗಿ ಈ ಊರುಗಳಲ್ಲಿ ಚಾಲನೆಯಲ್ಲಿದೆ:

೧) ವೆಲಿಬ್, ಪ್ಯಾರಿಸ್, ಫ್ರಾನ್ಸ್.

೨) ಬೈಸಿಂಗ್, ಬಾರ್ಸಿಲೋನಾ ಸ್ಪೇನ್.

ಈ ಯೋಜನೆಯಿಂದ ಸಮುದಾಯಕ್ಕಾಗುವ ಲಾಭ:

೧) ಹಿಂಸೆ ಮತ್ತು ಒತ್ತಡ ಕಡಿಮೆಯಾಗುವುದು: ಪಾಶ್ಚಾತ್ಯ ಜಗತ್ತಿನಿಂದ ಬಂದಿರುವ ಆಧುನಿಕ ಸಾರಿಗೆ ವ್ಯವಸ್ಥೆ ರಸ್ತೆಯನ್ನು ಬಿಸಿ ರಕ್ತದಲ್ಲಿ ತೋಯ್ದು ಹಿಂಸೆಯ ಪಥವನ್ನಾಗಿ ಪರಿವರ್ತಿಸಿದೆ.ನಿತ್ಯ ಲೆಕ್ಕ ವಿಲ್ಲದಷ್ಟು ಮಂದಿ ಸಾವನ್ನು ಹಿಂಸೆಯ ನೋವನ್ನು ಅನುಭವಿಸುತ್ತಾರೆ. ನಮ್ಮ ನಾಡಿನ ಚರಿತ್ರೆಯಲ್ಲಿ ಹಾಗೂ ನಮ್ಮ ನಾಡಿನ ಜನರ ಹೃದಯಾಂತರಂಗದಲ್ಲಿ ಅಹಿಂಸೆಯ ಸಂಸ್ಕೃತಿ ಬೆರೆತು ಹೋಗಿದೆ. ಇಂದು ಜಗತ್ತು ಹಿಂಸೆಯ ಬಲೆಯಲ್ಲಿ ಸಿಳುಕಿ ಛಿದ್ರ ಛಿದ್ರ ವಾಗಿರುವಾಗ ನಾವು ಕರುನಾಡಿನ ಮಕ್ಕಳು ಕೂಡಿ ಅಹಿಂಸೆಯ ಹೊಸ ಪಥದ ಸಂಶೋಧನೆ ಮಾಡ ಬೇಕಾಗಿದೆ.ಸೈಕಲ್ ಅಹಿಂಸೆಗೆ ಒಳ್ಳೆಯ ವಾಹನ.

೨) ಸರ್ಕಾರಕ್ಕೆ ಹಣದ ಉಳಿತಾಯ: ಹೆಚ್ಚು ಮಂದಿ ಸೈಕಲ್ ಬಳಸಿದಷ್ಟು ಹೆಚ್ಚು ಹೆಚ್ಚು ಹಣ ಅನಗತ್ಯ ಯೋಜನೆಗಳಿಗೆ ವ್ಯಯವಾಗುವುದು ನಿಲ್ಲುತ್ತದೆ.ಇದೇ ಹಣವನ್ನು ಸರ್ಕಾರ ಸದುಪಯೋಗ ಮಾಡಿ ಕೊಳ್ಳಬಹುದು.

೩) ಪರಿಸರ ಮಾಲಿನ್ಯವಂತೂ ತಾನೇ ತಾನಾಗಿ ನಿಂತು ಹೋಗುತ್ತದೆ.

೪) ನಗರದ ಜನ ಜೀವನದಲ್ಲಿ ಆರೋಗ್ಯ ನವೋಲ್ಲಾಸ ಮತ್ತು ಲವಲವಿಕೆ ಕುಣಿದಾಡುತ್ತಿರುತ್ತದೆ.

೫) ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಯೋಜನೆಯ ತಂತ್ರಾಂಶವನ್ನು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗುವಂತೆ ನಾವು ಆಶ್ವಾಸನೆಯನ್ನು ನೀಡುತ್ತೇವೆ. ಇದರಿಂದ ಈ ಯೋಜನೆಯ ಲಾಭ ಕೇವಲ ಕನ್ನಡಿಗರಷ್ಟೇ ಅಲ್ಲದೇ ಇಡಿ ವಿಶ್ವದ ಸಮುದಾಯ ಪಡೆಯುತ್ತದೆ.

೬) ನಾಳೆ ಮೆಟ್ರೋ ಬೆಂಗಳೂರಿನಲ್ಲಿ ಬಂದ ನಂತರ ಮೆಟ್ರೋ ಸ್ಟೇಷನ್ ಗಳಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳದ ಒತ್ತಡವಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರಿಂದ ಮೆಟ್ರೋ ಸ್ಟೇಷನ್ ತಲುಪಲು ಸೈಕಲ್ ಬಳಸಿದರೆ ಮೆಟ್ರೋ ಯೋಜನೆಗೆ ಈ ನಮ್ಮ ಯೋಜನೆ ಪೂರಕವಾಗುತ್ತದೆ.

ಈ ವ್ಯವಸ್ಥೆಯನ್ನು ನಾವು ಬೆಂಗಳೂರಿನ ಭಾರತೀಯ ವಿದ್ಯಾ‌ಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕ್ಯಾಂಪಸ್ ಸೈಕಲ್ ಬಾಡಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತೇನೆ. ಇಲ್ಲಿಯವರೆಗೂ ಸುಮಾರು 2000 ಯಾತ್ರೆಗಳು ಮುಗಿದ ಈ‌ ಕಾರ್ಯಕ್ರಮ ಮುಕ್ತ ತಂತ್ರಾಂಶದ ಮೇಲೆ ಚಲಿಸುತ್ತದೆ. ಗುಬ್ಬಿ ಲ್ಯಾಬ್ಸ್ ಕೊಟ್ಟಿರುವ ‘ECBike ‘ತಂತ್ರಾಂಶದಿಂದ ಸೈಕಲ್ ಬಾಡಿಗೆಗೆ ತೆಗೆದುಕೊಳ್ಳುವುದರ ಜೊತೆಗೆ ಪರಿಪೂರ್ಣ ಸೈಕಲ್ ಬಾಡಿಗೆಗೆ ಕೊಡುವ ಕ್ರಿಯೆಯನ್ನು ವೆಬ್ ಮೂಲಕ ನೋಡುವ ವ್ಯವಸ್ಥೆ ಕೂಡ ಇದೆ. ಈ ಯೋಜನೆಯನ್ನು ಕರ್ನಾಟಕದ ಇತರೆ ನಗರಗಳಲ್ಲಿ ಹಾಕುವ ಪ್ರಯತ್ನ ಈ ವರ್ಷ ಮಾಡುತ್ತಿದ್ದೇವೆ. ನಿಮಗೆ ನಿಮ್ಮ ಊರಲ್ಲಿ ಈ ವ್ಯವಸ್ಥೆಯನ್ನು ಹಾಕಿಸಬೇಕು ಅಂತಾ‌ ಇದ್ದರೆ ನನ್ನನ್ನು ಸಂಪರ್ಕಿಸಿ.

ಇದರ ಸಂಕ್ಷಿಪ್ತ ಚಿತ್ರಣವನ್ನು ಕೆಳಗೆ ಕೊಟ್ಟಿರುವೆ.

 

ಸೈಕಲ್ ಪ್ರವಾಸೋದ್ಯಮ

ಸೈಕಲ್ ಪ್ರವಾಸೋದ್ಯಮ ಪಾಶ್ಚಾತ್ಯ ದೇಶಗಳಲ್ಲಿ ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ನಾನು ಪ್ಯಾರಿಸ್ ಗೆ ಭೇಟಿಯಿತ್ತಾಗ ಸುಲಭವಾಗಿ ಸೈಕಲ್ ಬಾಡಿಗೆಗೆ ತೆಗೆದು ಊರೆಲ್ಲಾ‌ ಅಡ್ಡಾಡುವ ಸುವರ್ಣಾವಕಾಶ ನನಗೆ ಲಭಿಸಿತು. ಯುರೋಪಿನ ನದಿಗಳ ಪಕ್ಕದಲ್ಲಿ ತುಳಿಯುವುದಕ್ಕೆ ಸೈಕಲ್ ಟ್ರಾಕ್ ವಿಶೇಷವಾಗಿ ಕಲ್ಪಿಸಿರುತ್ತಾರೆ. ವನ್ಯಜೀವಿಗಳಿರುವ ಕಾಡಿನಲ್ಲಿ ಕೂಡ ಸೈಕಲ್ ಟ್ರಾಕ್ ನಿರ್ಮಾಣ ಮಾಡಿರುತ್ತಾರೆ. ಪರಿಣಾಮದಲ್ಲಿ ಕೆಲವು ಚಿತ್ರಗಳು ಪದಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಅಂತಹ ಚಿತ್ರಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇನೆ.

 

 

ನಮ್ಮ ರಾಜ್ಯದಲ್ಲಿ ಸೈಕಲ್ ಪ್ರವಾಸೋದ್ಯಮದ ಮೈಸೂರಿನ ‘ ಮೈ ಸೈಕಲ್ ‘ ಅಮೇರಿಕದವರೊಬ್ಬರು ಪ್ರಾರಂಭಿಸಿರುತ್ತಾರೆ. ಸೈಕಲ್ ಪ್ರವಾಸೋದ್ಯಮವನ್ನು ಹಳೇಬೀಡು-ಬೇಲೂರು, ಐಹೊಳೆ-ಬಾದಾಮಿ, ಹಂಪಿ-ಚಿತ್ರದುರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಂಡರೆ ಸಾವಿರರು ಕೆಲಸಗಳು ಉತ್ಪತ್ತಿಯಾಗುತ್ತವೆ. ಅಲ್ಲದೆ ನಮ್ಮ ನಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪರಿಚಯ ವಿಭಿನ್ನ ರೀತಿಯಲ್ಲಿ ಪರಿಚಯಿಸುತ್ತಾ‌ ನಮ್ಮ ಹೆಮ್ಮೆಯ ಚಾರಿತ್ರೆಯನ್ನು ಜಗತ್ತಿಗೆ ಎತ್ತಿ ತೋರಿದಂತಾಗುತ್ತದೆ. ಅದಲ್ಲದೆ ಸೈಕಲ್ ಪ್ರವಾಸೋದ್ಯಮ ಶಬ್ದ ಮಾಲಿನ್ಯವನ್ನಾಗಲಿ ಅಥವಾ ವಾಯು ಮಾಲಿನ್ಯವನ್ನಾಗಲಿ ಸೃಷ್ಠಿ ಮಾಡುವುದಿಲ್ಲಾ. ಇದರಿಂದ ನಮ್ಮ ಸ್ಮಾರಕಗಳು ಸುರಕ್ಷಿತವಾಗಿರುತ್ತವೆ.

ಸೈಕಲ್ ಪ್ರವಾಸೋದ್ಯಮದ ಮತ್ತೊಂದು ಆಯಾಮವೆಂದರೆ ವಿಶ್ವ ಸೈಕಲ್ ಪರ್ಯಾಟನೆ. ಸೈಕಲ್ ಕೆಲಸವನ್ನು ಕೈಗೆತ್ತಿಕೊಂಡಾಗಿನಿಂದ ಹಲವಾರು ಮಂದಿ ವಿಶ್ವವನ್ನೇ ಸೈಕಲ್ ಮೇಲೇ ಪರ್ಯಟನೆಯನ್ನು ಮಾಡಿರುವವದರ ಅರಿವು ಮತ್ತು ಅವರ ನೇರ ಸಂಪರ್ಕವು ಆಗಿದೆ. ಕೆಲವರಂತು ಒಬ್ಬೊಬ್ಬರೆ ವಿಶ್ವವನ್ನೇ ಸೈಕಲ್ ಮೇಲೆ ಸುತ್ತಿದ್ದಾರೆ. ಇವರೆಲ್ಲಾ ನಮ್ಮ ದೇಶ ಮತ್ತು ಜನರ ಬದುಕಿನ ರೀತಿ ಮತ್ತು ನಮ್ಮ ನಂಬಿಕೆಯ ಬಗ್ಗೆ ತಮ್ಮ ಊರಿನಲ್ಲಿ ತಮ್ಮವರ‌ ಮುಂದೆ ವರದಿಯನ್ನು ಒಪ್ಪಿಸುತ್ತಾರೆ. ನಮ್ಮ ದೇಶಕ್ಕೆ ಇದರಿಂದ ಹೊರಗಿನ ಜನರ ಜೊತೆ ಮೈತ್ರಿಯನ್ನು ಸಾಧಿಸುವುದಕ್ಕೆ ಅನುಕೂಲವಾಗುತ್ತದೆ. ಈ ಎರಡು ವರ್ಗದವರಿಗೆ ಸೈಕಲ್ ಪ್ರವಾಸೋದ್ಯಮಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡ ಬೇಕಾಗಿದೆ.

ಕೆಲವು ಗುಂಪುಗಳು ಯುವಕರನ್ನು ಸೈಕಲ್ ಯಾತ್ರೆಗೆ ಕೊಡಗು ಮತ್ತಿತ್ತರೆ ವನ್ಯ ಪ್ರದೇಶಕ್ಕೆ ಕೊಂಡಯ್ಯುತ್ತಾರೆ. ನಾವೆ ಆಯೋಜಿಸುವ ಟೂರ್ ಆಫ್ ನಿಲ್ಗಿರಿಸ್ ಭಾರತದ ಪ್ರಮುಖ ಸೈಕಲ್ ಟೂರ್. ಈ ಯಾತ್ರೆಯಲ್ಲಿ ಭಾಗವಹಿಸಲು ಅಮೇರಿಕಾ, ಯುರೋಪ್ ದೇಶದಿಂದ ಹಲವಾರು ಜನ ಬರುತ್ತಾರೆ. ಅವರಿಗೆ ಕೇವಲ ಇಪ್ಪತ್ತೈದು ಸಾವಿರಕ್ಕೆ ಮೂರು ರಾಜ್ಯಗಳಾದ ತಮಿಳುನಾಡೂ, ಕರ್ನಾಟಕ, ಕೇರಳದ ಕಾಡು ಪ್ರದೇಶವನ್ನು ತೋರಿಸುತ್ತೇವೆ. ನಮ್ಮ ನಾಡಿನ ಎಷ್ಟೋ ರೋಚಕ ಜಾಗಗಳನ್ನು ಹಾದಿಯಲ್ಲಿ ನೋಡುತ್ತಾ ಸಾಗುವುದು ಅವರಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.

ಸೈಕಲ್ ರೇಸಿಂಗ್

ಒಲಂಪಿಕ್ಸ್ ಮತ್ತು ಪ್ರಾನ್ಸ್ ದೇಶದಲ್ಲಿ ನಡೆಯುವ ‘ಟೂರ್ ಡೇ ಫ್ರಾನ್ಸ್’ ನಂತಹ ಸೈಕಲ್ ರೇಸಿಂಗ್ ಪಂದ್ಯಾವಳಿಗಳು ಸೈಕಲ್ ಗೆ ಒಂದು ಘನತೆಯನ್ನು ಮತ್ತು ಗಾಂಭೀರ್ಯವನ್ನು ತಂದು ಕೊಟ್ಟಿದೆ. ಈ ರೇಸ್ ಗಳು ನಡೆಯದಿದ್ದರೆ, ನಮ್ಮ ದೇಶದಲ್ಲಿ ಇರುವ ಅಟ್ಲಾಸ್ ಸೈಕಲ್ ನಂತೆ ಸೈಕಲ್ ತಾಂತ್ರಿಕವಾಗಿ ಅಭಿವೃಧ್ಧಿಯಾಗದೆ ಕೊಳೆತು ಮೂಲೆಗುಂಪಾಗುವ ಸಂಭವವಿತ್ತು. ಸೈಕಲ್ ರೇಸಿಂಗ್ ಆರಂಭಿಸಿದ ಮೇಲೆ ಸೈಕಲ್ ಕಂಪನಿಗಳು ಸೈಕಲ್ ರೇಸ್ ಮಾಡುವ ತಂಡಗಳಿಗೆ ಪ್ರಾಯೋಜಕರಾಗಿ ಸೈಕಲ್ ಮಾರಾಟವನ್ನು ಹೆಚ್ಚಿಸಿಕೊಂಡರು.

ವಿಶ್ವದ ಅತೀ ದೊಡ್ಡ ಕ್ರೀಡೆಗಳಲ್ಲಿ ‘ಟೂರ್ ಡೇ ಫ್ರಾನ್ಸ್’ ಮೂರನೇ ಸ್ಥಾನವನ್ನು ಪಡೆದಿರುತ್ತದೆ. (ಮೊದಲನೇ ಸ್ಥಾನ ಒಲಂಪಿಕ್ಸ್, ಎರಡನೆ ಸ್ಥಾನ ಫುಟ್ ಬಾಲ್). ಈ‌ ರೇಸಿನ ಅಂಕಿ ಅಂಶಗಳನ್ನು ಪರಿಶಿಲಿಸೋಣವೆ.

೧) 21 ದಿನಗಳಲ್ಲಿ 3500 ಕಿಮಿ ದೂರ ಸಾಗಿ ಫ್ರಾನ್ಸ್ ದೇಶವನ್ನು ಜಗತ್ತಿಗೆ ತೋರಿಸುತ್ತದೆ.

೨) 20 ತಂಡಗಳು ಭಾಗವಹಿಸುತ್ತವೆ. ಒಂದೊಂದು ತಂಡದಲ್ಲಿ 9 ಸವಾರರಿರುತ್ತಾರೆ.

೩) 180 ದೇಶಗಳಲ್ಲಿ ಟಿವಿಯಲ್ಲಿ ನೇರ ಪ್ರಸಾರವಾಗುತ್ತದೆ.

೪) 76 ರೇಡಿಯೋ ಕೇಂದ್ರಗಳು ಕಮೆಂಟರಿಯನ್ನು ನೇರ ಪ್ರಸಾರ ಮಾಡುತ್ತಾರೆ.

೫) 1000 ಲಕ್ಷ ಯುರೋಗಳ ಬಡ್ಜೆಟ್.

ಹೀಗೆ ಒಂದು ಬೃಹತ್ ಮಟ್ಟದಲ್ಲಿ ಸೈಕಲ್ ರೇಸ್ ಆಯೋಜಿಸುವ ಫ್ರಾನ್ಸ್, ಸೈಕಲನ್ನು ಆ ದೇಶದ ಸಂಸ್ಕೃತಿಯ ಪ್ರತಿಬಿಂಬವನ್ನಾಗಿ ಬಹಳ ಸಫಲವನ್ನಾಗಿ ಮಾಡಿದೆ.

 

ನಮ್ಮ ರಾಜ್ಯದಲ್ಲಿ ಸೈಕಲ್ ರೇಸ್ ನಾವು ಕರ್ನಾಟಕ ಸರ್ಕಾರದೊಂದಿಗೆ ಕೈ ಜೋಡಿಸಿ ಮೈಸೂರು ದಸರೆಯಲ್ಲಿ ಆಯೋಜಿಸುತ್ತೇವೆ. ರಾಜ್ಯದ ಎಲ್ಲಾ‌ ಜಿಲ್ಲೆಗಳಿಂದ ನೂರಾರು ಜನ ಬಂದರು, ಬಿಜಾಪುರ ಮತ್ತು ಬಾಗಲಕೋಟೆಯಿಂದ ಹೆಚ್ಚು ಮಂದಿ ಸ್ಪರ್ಧಿಗಳಾಗಿ ಬರುತ್ತಾರೆ. ಸೈಕಲ್ ರೇಸಿಂಗ್ ಅವರಿಗೆ ಮುಂದೆ ರೈಲು ಇಲ್ಲಾಖೆಯಲ್ಲೋ ಅಥವಾ‌ ಮಿಲಿಟರಿಯಲ್ಲೋ ಕೆಲಸಗಿಟ್ಟಿಸಿಕೊಳ್ಳುವುದಕ್ಕೆ ಸುಲಭವದ ದಾರಿ. ರಾಷ್ಟ್ರ ಮಟ್ಟದಲ್ಲಿ ಒಂದೆರಡೂ ರೇಸ್ ಗೆದ್ದರೆ ಕೆಲಸ ಸುಲಭವಾಗಿ ಸಿಗುತ್ತದೆ. ಬಡತನದ ಬೆಗೆಯಿಂದ ತಪ್ಪಿಸಿಕೊಳ್ಳಲು ಸೈಕಲ್ ಕ್ರೀಡೆ ಸಲೀಸಾದ ಮಾರ್ಗ.

ಈ ಕ್ರೀಡೆಯನ್ನು ಮತ್ತಷ್ಟು ಪ್ರಚುರ ಪಡಿಸಲು ಕರ್ನಾಟಕ ರಾಜ್ಯದ ಪರಿಪೂರ್ಣ ಸಾಗುವ ಒಂದು ರೇಸ್ ಮಾಡಬೇಕೆಂಬುದು ನನ್ನ ಅಭಿಲಾಷೆ. ಇದರಿಂದ ಕರ್ನಾಟಕವನ್ನು ಜಗತ್ತಿಗೆ ಬಿಂಬಿಸಿದಂತಾಗುತ್ತದೆ. ಅದಲ್ಲದೆ ಸೈಕಲ್ ಮತ್ತಷ್ಟು ಜನಪ್ರಿಯವಾಗುತ್ತದೆ.

ಸೈಕಲ್ ಮತ್ತು ಮಾಲಿನ್ಯರಹಿತ, ಸುರಕ್ಷಿತ ಚಲನೆಯ ಬಗ್ಗೆ ಅರಿವನ್ನು ಮೂಡಿಸುವುದು.

ಸೈಕಲ್ ಬಗ್ಗೆ ಅರಿವು ಮೂಡಿಸುವ ಯೋಜನೆಗಳು ಸದ್ಯದಲ್ಲಿ ಸಣ್ಣ ಸಣ್ಣ ಮಟ್ಟದಲ್ಲಿ ಆಗಿದ್ದರು ಸಿನಿಮಾ ಮತ್ತು ದೂರದರ್ಶನದಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು. ಶಾಲ ಮತ್ತು ಕಾಲೇಜುಗಳಲ್ಲಿ ಸೈಕಲ್ ತಂಡಗಳನ್ನು ಮಾಡಿಕೊಂಡು ತಿಂಗಳಿಗೊಮ್ಮೆ ಎಲ್ಲರೂ ಸೈಕಲ್ ಮೇಲೆ ಒಟ್ಟಿಗೆ ಬರುವುದರಿಂದ ಒಗ್ಗಟ್ಟು ಮತ್ತು ಮಜ ಎರಡು ಒಟ್ಟಿಗೆ ಬರುತ್ತದೆ. ಸೈಕಲ್ ಬಗ್ಗೆ ಅರಿವು ಮೂಡಿಸುವಾಗ -ನಿತ್ಯ ಸೈಕಲ್ ತುಳಿಯುವುದರಿಂದ ಬೊಜ್ಜು ದೇಹವಾಗಲಿ , ಹೃದಯದ ವೀಕ್ ನೆಸ ಆಗಲಿ ಇರುವುದಿಲ್ಲಾ. ನಿತ್ಯ ಸೈಕಲ್ ತುಳಿದು ಕಚೇರಿಗಾಗಲಿ / ಆಫೀಸಿಗೆ ಹೋಗುವುದರಿಂದ ವ್ಯಾಯಾಮ ತಾನೇ ತಾನಾಗಿ ಆಗುತ್ತದೆ. ಸೈಕಲ್ ಸತತವಾಗಿ ತುಳಿಯುವುದರಿಂದ ಶ್ವಾಸ ಕೋಶದ capacity ಕೂಡ ಹೆಚ್ಚುತ್ತದೆ. ನಮ್ಮ ಇಂದ್ರಿಯಗಳು ಸೂಕ್ಷ್ಮ ವಾಗಿ ರುತ್ತವೆ. ಇಂತಹ ಒಳ್ಳೆಯ ಅಂಶಗಳನ್ನು ತಿಳಿಸುತ್ತಾ, ಸೈಕಲ್ ತುಳಿಯುವವರ ಬಗ್ಗೆ ಮತ್ತು ಅವರು ಮಾಡಿರುವ ಸಾಧನೆಗಳನ್ನು ಚಿತ್ರದ ಮೂಲಕ ತಿಳಿಸ ಬೇಕು.

ಈ ಸೂತ್ರಗಳನ್ನು ಒಳಗೊಂಡು ಸೈಕಲ್ ರಿಪಬ್ಲಿಕ್ ಮುಂದಿನ ಚುನಾವಣೆಯ ಸರ್ವಪಕ್ಷಗಳ ಪ್ರಣಾಳಿಕೆಯಲ್ಲಿ ಇರಲಿ. ಮತ್ತು ಕನ್ನಡ ಜನರ ಪ್ರಾಣವಾಗಿ ಸಂಚರಿಸುವ ನನ್ನ ಪ್ರಾಣ ದೇವ ಆಂಜನೇಯ ಸರ್ವಜನರಿಗೂ‌ ವಾಯುವಿನಲ್ಲಿ ಭಕ್ತಿಯುಂಟಾಗುವ ಹಾಗೆ ಮಾಡಲಿ. ವಾಯುವಿಗೆ ಮಾಲಿನ್ಯವಿಲ್ಲದಿದ್ದರೂ ಮನುಷ್ಯ ವಾಯುವಿನ ಮೇಲೆ ತನ್ನ ಕರ್ಮದ ಫಲವಾದ ಹೊಗೆಯನ್ನು ಆರೋಪಿಸಿ ವಾಯು ಮಾಲಿನ್ಯಯೆನ್ನುವ ಬದಲಿ , ವಾಯು ಜೀವೋತ್ತಮ – ಸೈಕಲ್ ಸರ್ವೋತ್ತಮ ಯಾಕೆ ಅನ್ನಬಾರದು?

ಲೇಖಕ: ಮುರಳಿ ಎಚ್. ಆರ್.

ಪರಿಸರ ಪ್ರೇಮಿ, ಸೈಕಲ್ ಚಾಲಕ ಹಾಗೂ ಸೈಕಲ್ ಚಾಲನೆಯ ಮಹತ್ವಗಳ ಪ್ರಚಾರಕ. ಸೈಕಲ್ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬುದು ಮುರಳಿ ಅವರ ಹೊಸ ಕನಸು. ಬಿಎಂಟಿಸಿ ಜತೆ ಕೈ ಜೋಡಿಸಿ ಎಲ್ಲಾ ಟಿಟಿಎಂಸಿಗಳಲ್ಲಿ ಸೈಕಲ್ ಬಸ್‌ಗಳನ್ನು ರೂಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದಲ್ಲದೆ ಸೈಕಲ್ ಆರ್ಥಿಕತೆ ಕುರಿತು ಗುಬ್ಬಿ ಲ್ಯಾಬ್ಸ್ ಜತೆಗೂಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹಣಕಾಸು ವ್ಯವಸ್ಥೆಗೆ ಸೈಕಲ್‌ಗಳು ಹೇಗೆ ನೆರವಾಗಿವೆ ಎಂಬುದನ್ನು ತಿಳಿಸುವುದು ಸಂಶೋಧನೆಯ ಉದ್ದೇಶ. ದಿನಪತ್ರಿಕೆ ಮಾರುವವರು, ಕೊರಿಯರ್ ಸಂಸ್ಥೆಗಳು, ಹಾಲು ಮಾರಾಟಗಾರರು ಇತ್ಯಾದಿ ಸಮುದಾಯಗಳ ಸೈಕಲ್ ಬಳಕೆ ಹಾಗೂ ಅದರ ಆರ್ಥಿಕ ಲಾಭಗಳನ್ನು ಸಂಶೋಧನೆಯಲ್ಲಿ ಅವಲೋಕಿಸಲಾಗುತ್ತಿದೆ.