ಇದೇನಪ್ಪಾ‌ ನಾನೇನಾದರೂ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ ಸೇರಿಕೊಂಡ್ ಬಿಟ್ಟೆ ಅನ್ನುವ ಅನುಮಾನವೇ‌? ಅಥವಾ‌ ಈ‌ ಬರವಣಿಗೆ ಕರ್ನಾಟಕ ಜನತಾ ಪಕ್ಷದ ಪ್ರಣಾಳಿಕೆ ಅನ್ನಿಸಿದ್ದರೆ ಕ್ಷಮಿಸಿ. ರಾಜಕೀಯ ಅಂದರೆ ಅಷ್ಟೇ ಜನರಿಗೆ ಸಿಂಬಲ್ಸ್ ತೋರಿಸಿ ಮೋಸ ಮಾಡೋದು. ಸೈಕಲ್ ಸಿಂಬಲ್ ತೋರಿಸಿದರೆ ಎಲ್ರೂ ಆ ಸಿಂಬಲ್ ಜೊತೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಮತ್ತು ವೋಟ್ ಹಾಕ್ತಾರೆ ಅನ್ನುವುದು ರಾಜಕಾರಣಿಗಳ ಚಿಂತನೆ. ನನ್ನಗೆ ಸೈಕಲ್ ಸಿಂಬಲ್ ಅಲ್ಲಾ ಅದು ಒಂದು ತತ್ತ್ವ. ಈ ತತ್ತ್ವವನ್ನು ಯಾವ ರೀತಿ ಜನರಿಗೆ ತಲುಪಿಸಬೇಕು ಅನ್ನುವ ಬಗ್ಗೆ ಆಗಾಗ ಯೋಚನೆ ಮಾಡ್ತಾ ಕೈಗೆ ಬಂದದ್ದು ಗೀಚಿ ನನ್ನ ಚಪಲವನ್ನು ತೀರಿಸಿಕೊಳ್ಳುತ್ತೇನೆ.

ಈ ನನ್ನ ಲೇಖನ ಈ ಕರ್ನಾಟಕ ರಾಜ್ಯಕ್ಕೆ ಸಂಭಂದಿಸಿದ್ದು ಮತ್ತು ರಾಜ್ಯದ ಜನರು ತಾವು ಮುಂದೆ ಹೇಗೆ ಬದುಕ ಬೇಕು ಅನ್ನುವ ಬಗ್ಗೆ ಬೆಳಕು ಚೆಲ್ಲುವ ಯತ್ನವಷ್ಟೆ. ಸದ್ಯಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಮುದಾಯ ಸೈಕಲ್ ನಮ್ಮ ನಗರಗಳಲ್ಲಿ ಕಲ್ಪಿಸುವ ಬಗ್ಗೆ ಸಂಶೋಧನೆಯನ್ನು ನಾನು ಮಾಡ್ತಾಯಿದ್ದೇನೆ.ಈ ಸಂಶೋಧನೆ ಯಶಸ್ಸು ಕಾಣಬೇಕು ಅನ್ನುವ ಹಂಬಲ ನನ್ನದು.

ಈ‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ವಿಜ್ಞಾನಿಗಳಿಂದ ಒಂದು ಕೆಟ್ಟ ಛಾಳಿ ನನ್ನ ತಲೆಗೆ ಅಂಟಿದೆ. ಏನಪ್ಪಾ‌ ಅದು ಛಾಳಿ? ಯಾವುದೇ ವಿಷಯವನ್ನು ಮಂಡಿಸಿದರೂ ಸಾಕ್ಷಿ ಆಧಾರ ಮತ್ತು ಅಂಕಿ ಅಂಶಗಳನ್ನು ಕೇಳುತ್ತಾರೆ ಮತ್ತು ಅದರ ಮೇಲೆ ವಾದ ವಿವಾದ ಮಾಡ್ತಾರೆ. ಈ‌ ಅಂಕಿ ಅಂಶದ ಜೊತೆಯಲ್ಲಿ ಬಣ್ಣ ಬಣ್ಣದ ಗ್ರಾಫ್ ಗಳನ್ನು ಒದಗಿಸಿದರೆ ತಲೆದೂಗಿ ಭೇಷ್ ಅನ್ನುತ್ತಾರೆ.

ಈ ನನ್ನ ಲೇಖನವನ್ನು ಚಿತ್ರ ಕತೆ ಅನ್ನುವ ಬದಲಿಗೆ ಚಾರ್ಟ್ ಚರಿತ್ರೆ ಅಂದರೆ ಸೂಕ್ತ. ಮೊದಲನೇ ಗ್ರಾಫ್ ನಮ್ಮ ರಾಜ್ಯದ ಜನ ಎಷ್ಟು ಪೆಟ್ರೋಲ್ ಮತ್ತು ಎಷ್ಟು ಡೀಸಲ್ ಕುಡಿಯುತ್ತಿದ್ದಾರೆ ಅನ್ನುವುದು ತೋರಿಸುತ್ತದೆ. ಅಂದರೆ ಸರಾ ಸರಿ ಒಬ್ಬೊಬ್ಬರು ……..ರಷ್ಟು ಲೀಟರ್ ಪೆಟ್ರೋಲ್ ಮತ್ತು ಡೀಸಲ್ ಕುಡಿದಿದ್ದಾರೆ ಎನ್ನಬಹುದು.

ಈ ಪೆಟ್ರೋಲ್ ಮತ್ತು ಡೀಸಲ್ ಅಮಲು ಜನರ ನೆತ್ತಿಗೇರಿ ಆಗಿರುವ ಅಪಘಾತಗಳ ಚಾರ್ಟ್ ನೋಡೋಣ.

ಮುಂದಿನ ಚಾರ್ಟ್ ಇಷ್ಟೊಂದು ಪೆಟ್ರೋಲ್ ಆಕಾಶದಿಂದ ಬರೋದಿಲ್ಲಾ. ನಾವು ಸಾಪ್ಟ್ ವೇರ್ ಕಂಪನಿಯವರು ಬೆವರು ಸುರಿಸಿ ಅಮೇರಿಕಾದಿಂದ ತಂದ ಡಾಲರ್ ಗಳನ್ನು ಅರಾಬ್ ದೇಶದವರಿಗೆ ಕೊಟ್ಟು ತರುತ್ತೇವೆ.ಹಾಗಿದ್ದರೆ ಈ‌ ಕಂಪನಿಗಳು ಎಷ್ಟು ಗಳಿಸುತ್ತಿವೆ ನೋಡೋಣವೆ.

ಈ ಕಂಪನಿಗಳು ಬಾರಿ ಮೊತ್ತದ ಹಣವನ್ನು ಗಳಿಸಿದ್ದಾರೆ. ಆದರೆ ಗಳಿಸಿದ 10% ನಾವು ತೈಲಕ್ಕಾಗಿ ತೇಲಿ ಬಿಡುತ್ತಿದ್ದೇವೆ. ಐ.ಟಿ ಕಂಪನಿಗಳು ಚಾಕರಿ ಮಾಡಿಸ್ಕೊಂಡೂ ಮನೆಗೆ ಕಳಿಸುವಷ್ಟರಲ್ಲಿ ಜೀವ ಕೈಗೆ ಬಂದಿರುತ್ತೆ. ಅದಲ್ಲದೇ ಮೈ ಕೈ ಗೆ ಅಷ್ಟು ತ್ರಾಸಾಗದೆ ಮೆದಳಿಗೆ ಮಾತ್ರ ಕೆಲಸ ಕೊಡುವ ಈ‌ ವೃತ್ತಿಯಿಂದ ದೇಹಕ್ಕೆ ವ್ಯಾಯಾಮ ಆಗುವುದಿಲ್ಲಾ. ಯಾವಾಗ ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗುತ್ತದೆಯೋ ದೇಹ ವಿಶೇಷವಾಗಿ ಡಯಾಬಿಟಿಸ್, ಹೃದಯಘಾತಕ್ಕೆ ಬಲಿಯಾಗುವ ಸಂಭವ ಹೆಚ್ಚು. ಹಾಗಿದ್ದರೆ ಈ ರೋಗ ಮತ್ತು ಅದಕ್ಕೆ ತಗಲುವ ಖರ್ಚಿನ ಚಾರ್ಟ್ ನೋಡೋಣವೆ.

ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಸುಲಭವಾಗಿ ಕಾರ್ ಕೊಳ್ಳುವ ಸೊಉಲಭ್ಯವಿರುತ್ತದೆ. ಬೆಂಗಳೂರಿನಲ್ಲಿ ಕಾರ್ ಮತ್ತು ಆಟೋಮೋಬೈಲ್ ಗಳ ಬೆಳವಣಿಗೆಯ ಚಾರ್ಟ್ ನೋಡುವ. ಈ ಕಾರ್ ಗಳು ಆಕ್ರಮಿಸಿಕೊಳ್ಳುವ ಜಾಗದ ಬಗ್ಗೆ ಒಂದು ಚಾರ್ಟ್ ಕೆಳಗಿದೆ. ಅಂದರೆ ಸರಾ ಸರಿ ………….ರಷ್ಟು ಭೂಮಿ ನಮ್ಮ ಕಾರ್ ಗಳನ್ನು ನಿಲ್ಲಿಸುವುದಕ್ಕೆ ಸದುಪಯೋಗಗಳಿಸುತ್ತೇವೆ.

 

ಮೊನ್ನೆ ಮೊನ್ನೆ ಈಜೀಪುರದಿಂದ ಬಡಬಂಧುಗಳನ್ನು ಎತ್ತಂಗಡಿ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಭೂಮಿಯನ್ನು ರಿಯಲ್ ಎಸ್ಟೇಟ್ ಆಗಿ ಪರಿವರ್ತಿಸಿ ನೆಲಕ್ಕೆ ವಿಪರೀತ ಬೆಲೆ ಕಟ್ಟಿ ಇಷ್ಟೋಂದು ಜಾಗವನ್ನು ಅನ್ಯಾಯವಾಗಿ ದುರುಪಯೋಗಗೊಳಿಸುತ್ತಿದ್ದಾನೆ ಮಾನವ. ಈ‌ ಪಾಟಿ ‘ಕಾರ್, ಕಾರ್, ‘ ಎಲ್ಲಿ ನೋಡಿದರು ಕಾರ್ ಅನ್ನುವ ಯುಗದಲ್ಲಿ ದೇವರು ನನಗೆ ಮಾತ್ರ ಸೈಕಲ್ ತುಳಿಯುವ ದುರ್ಬುಧ್ಧಿಯನ್ನು ಯಾಕೆ ಕೊಟ್ಟನೋ ?

ಈವತ್ತು ಭೂಮಿ ಜೊತೆ ಮಾನವನ ಸಂಪರ್ಕ ಕಡೆದು ಹೋಗಿದೆ. ಆಕಾಶದಲ್ಲಿ ಸ್ಯಾಟಿಲೈಟ್ ಗಳ ಜೊತೆ ಸಂಪರ್ಕ ಸಾಧಿಸುವ ಯತ್ನದಲ್ಲಿ ನೆಲೆ ಕಳ್ಕೊಂಡಿರುವ ಅತಿ ಬುದ್ಧಿವಂತ ಮಾನವನಿಗೆ ಮತ್ತೆ ಭೂಮಿಯ ಜೊತೆ ಸಂಪರ್ಕ ಸಾಧ್ಯವಾಗಬೇಕಾದರೆ ಊರು ಕೇರಿ ಚಿಕ್ಕದಾಗಿ ಚೊಕ್ಕವಾಗಿರ ಬೇಕು . ಯೂರೋಪ್ ಖಾಂಡದ ನಗರಗಳಿಗೆ ಅಲ್ಲಿಯ ಸರ್ಕಾರಗಳು ಕಾರ್ಬನ್ ಮುಕ್ತ ಅಂದರೆ ಆದಷ್ಟು ಸೈಕಲ್ ಅಥವಾ ಸಮುದಾಯ ಬಸ್ಸ್/ರೈಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದು. ಕಾರ್ ಪಾರ್ಕಿಂಗ್ ಜೊತೆ ಜೊತೆಗೆ ಅವುಗಳ ವೇಗಕ್ಕೂ ಕಡಿವಾಣ ಮತ್ತು ಅವು ಎಲ್ಲೆಂದರಲ್ಲಿ ಅಲ್ಲಿಗೆ ನುಗ್ಗುವ ಅವಕಾಶವಿರುವುದಿಲ್ಲಾ. ಒಟ್ಟಿನಲ್ಲಿ ನಗರಗಳು ಕಾರ್ಬನ್ ಮುಕ್ತ ನಗರಗಳಾಗಿರಬೇಕು. ಕಾರ್ ಕೇಂದ್ರಿಕೃತ ಊರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುವ ಒತ್ತಡ ಮತ್ತು ಆವಶ್ಯಕತೆಯಲ್ಲಿ ಮಾನವ ಸಂಬಂಧದ ಕೊಂದಿ ಕಳಚಿ ಬಿದ್ದಿರುತ್ತದೆ. ನಗರಗಳ ಸಂಚಾರ ವ್ಯವಸ್ಥೆಯಲ್ಲಿ ‘ಸೈಕಲ್’ ಪ್ರಧಾನವಾಗಿಟ್ಟುಕೊಂಡು ಕಟ್ಟಿದಾಗ ಅಲ್ಲಿ ವಾಸ ಯೋಗ್ಯವಾಗಿರುವ ಪರಿಸರ ತಾನೇ ತಾನಾಗಿ ಸೃಷ್ಠಿಯಾಗುತ್ತದೆ. ಅದಲ್ಲದೇ ನಗರಗಳಲ್ಲಿ ಸಮಾನತೆ ಮತ್ತು ಸೊಉಹಾರ್ದತೆ ತಾನೇ ತಾನಾಗಿ ಮೂಡುತ್ತದೆ.

ಕರ್ನಾಟಕ ಸೈಕಲ್ ರಿಪಬ್ಲಿಕ್ ಹೇಗೆ ಆಗಬಹುದು ? ಇದಕ್ಕಾಗಿ ನಾನು ಆರು ಸೂತ್ರವನ್ನು ಮಂಡಿಸುತ್ತೇನೆ.
೧) ಒಂದು ಅತ್ಯಂತ ಚೇತನ ಶೀಲ ಸೈಕಲ್ ಉತ್ಪಾದಿಸುವ ಕಂಪನಿಗಳು.
೨) ಎರಡನೆಯದು ಸೈಕಲ್ ಸವಾರಿಗೆ ಬೇಕಿರುವ ಸುರಕ್ಷಿತ ಹಾದಿ ಎಲ್ಲಾ‌ ನಗರಗಳಲ್ಲಿ ಕಲ್ಪಿಸ ಬೇಕು.
೩) ‘ಸಮುದಾಯ ಸೈಕಲ್ ‘ ವ್ಯವಸ್ಥೆಯನ್ನು ನಮ್ಮ ಕರ್ನಾಟಕದ ಎಲ್ಲಾ‌ ನಗರಗಳಲ್ಲಿಯೂ ಸೃಷ್ಠಿಸುವುದು.
೪) ಸೈಕಲ್ ಪ್ರವಾಸೋದ್ಯಮವನ್ನು ಪೋಷಿಸುವುದು.
೫) ಸೈಕಲ್ ಕ್ರೀಡೆಗೆ ಪ್ರೋತ್ಸಾಹಿಸಲು ಸೂಕ್ತ ತರಬೇತಿಯೊಂದಿಗೆ ವ್ಯ್ವಸ್ಥೆಯನ್ನು ಮಾಡುವುದು.
೬) ಸೈಕಲ್ ಮತ್ತು ಮಾಲಿನ್ಯ ರಹಿತ , ಸುರಕ್ಷಿತ ಚಲನೆಯ ಬಗ್ಗೆ ಅರಿವನ್ನು ಮೂಡಿಸುವುದು.

ಈ‌ ಆರು ಸೂತ್ರಗಳನ್ನು ವಿವರವಾಗಿ ಕೆಳಗೆ ಓದಬಹುದು.

ಒಂದು ಅತ್ಯಂತ ಚೇತನಶೀಲ ಸೈಕಲ್ ಉತ್ಪಾದಿಸುವ ಕಂಪನಿ:

ನಮ್ಮ ನಾಡಿನಲ್ಲಿ ಕಬ್ಬಿಣದ ಅದಿರು ಸಾವಕಾಶವಾಗಿ ಸಿಗುತ್ತದೆ. ಈ ಅದಿರನ್ನು ನಾವು ಚೀನಾ ದೇಶಕ್ಕೆ ರಪ್ತು ಮಾಡುತ್ತೇವೆ. ಈ ರಪ್ತು ಮಾಡಿದವರನ್ನು ನಮ್ಮ ನಾಯಕರನ್ನಾಗಿ ನೇಮಕ ಮಾಡಿಕೊಳ್ಳುತ್ತೇವೆ. ಚೀನಾ ಮತ್ತು ಜಪಾನ್ ನಮ್ಮ ಅದಿರನ್ನು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಿ ‘ ಸ್ಟೀಲ್ ‘ ಮತ್ತು ‘ಸ್ಟೀಲ್ ಸಂಭಂದಿತ ವಸ್ತುಗಳನ್ನು ತಯಾರಿಸಿ ವಿಶ್ವ ಮಾರುಕಟ್ಟೆಗೆ ಕಳುಹಿಸುತ್ತಾರೆ. ಸಂತೋಷ್ ಹೆಗ್ಡೆಯವರ ವರದಿಯಂತೆ ನಮ್ಮ ಅದಿರಿನ ಉತ್ಪನ್ನ ಮತ್ತು ರಪ್ತು ಮಾಡೀರುವ ಅಂಶವನ್ನು ಇಲ್ಲಿ ಬರೆದಿದ್ದೇನೆ.

 

 

ಗಣಿ ಅವ್ಯಾವಹಾರದ ವರದಿಯನ್ನು ನೀವು ಓದಿದರೆ ತಿಳಿಯುತ್ತದೆ ನಾವು ನಮ್ಮ ಮೂಲ ಸಂಪನ್ಮೂಲಗಲನ್ನು ಎಷ್ಟು ಬೇಜವಾಬ್ದಾರಿಯಿಂದ ರಾಜಕಾರಣಿಗಳ ಲಾಭಕೋರತನಕ್ಕಾಗಿ ಧಾರೆಯೆರೆದಿದ್ದೇವೆ. ಮೂಲ ಸಂಪನ್ಮೂಲಗಳನ್ನು ಲಪಟಾಯಿಸುವವರನ್ನೇ ನಮ್ಮ ನಾಡಿನ ವಕ್ತಾರರನ್ನಾಗಿಯೂ ಮತ್ತು ನಾಯಕರನ್ನಾಗಿ ಮಾಡಿ, ಈ ನಾಲಾಯಕ್ ನಾಯಕರು ಮತ್ತೆ ಜನರನ್ನು ಶೋಷಿಸುವಂತಹ ಪರಮ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ನಾವು ಪೋಷಿಸಿರುವುದು ಕನ್ನಡ ನಾಡಿನ ದುರಂತ. ಇರಲಿ ರಾಜಕೀಯದಿಂದ ಅರ್ಥಿಕ ವ್ಯವಹಾರದತ್ತ ಬರೋಣವೆ?

ಬಳ್ಳಾರಿ ಜಿಲ್ಲೆಯ ಜಿಂದಾಲ್ ಸ್ಟೀಲ್ ಕಂಪನಿಯ ನಿರ್ದೇಶಕರಿಗೆ ಒಂದು ಮನವಿ ಸಲ್ಲಿಸಿದೆ. ಹುಬ್ಬಳ್ಳಿಯಲ್ಲಿಯೋ ಅಥವಾ ಉತ್ತರ ಕರ್ನಾಟಕದಲ್ಲಿ ಸೈಕಲ್ ಉತ್ಪಾದನೆ ಮಾಡುವ ವಿಶೇಷವಲಯಗಳನ್ನು ನಿರ್ಮಾಣ ಮಾಡುವುದು. ಸೈಕಲ್ ಉತ್ಪಾದನೆಗೆ ಬೇಕಾಗಿರುವ ಜಾಗ ಕೂಡ ಅತೀ ಕಡಿಮೆ. ಇಲ್ಲಿ ನಾವು ಎಲ್ಲಾ‌ ರೀತಿಯ ಸೈಕಲ್ ಗಳನ್ನು ಉತ್ಪಾದನೆ ಮಾಡಿ ಹೊರಗಿನ ದೇಶಕ್ಕೆ ರಪ್ತು ಮಾಡುವಂತಾಗಬೇಕು. ಕೆಳಗೆ ಕೆಲವು ಸೈಕಲ್ ಮತ್ತು ಅವುಗಳ ಉಪಯುಕ್ತತೆಯನ್ನು ವಿವರಿಸಿದ್ದೇನೆ. ಈ ವಿಶೇಷ ವಲಯದಲ್ಲಿ ಸೈಕಲ್ ಉತ್ಪಾದನೆ ಮಾಡಲು ವಿಶ್ವದ ಎಲ್ಲಾ‌ ಸೈಕಲ್ ತಯಾರಕರನ್ನು ಮುಕ್ತವಾಗಿ ಆಹ್ವಾನಿಸಿ ಸಕಲ ಸೊಉಕರ್ಯಗಳನ್ನು ಕಲ್ಪಿಸಬೇಕು. ಇದರಿಂದ ಜಡಗಟ್ಟಿ ನಿಂತಿರುವ ಭಾರತದ ಸೈಕಲ್ ಕಂಪನಿಗಳಿಗೆ ಬಿಸಿ ಮುಟ್ಟಿ ಚುರುಕಾಗುತ್ತವೆ.

ಟೈವಾನ್ ದೇಶ ಹೈ ಎಂಡ್ ಅಥವಾ‌ ಉತ್ತಮ ಗುಣಮಟ್ಟದ ಸೈಕಲ್ ಉತ್ಪಾದನೆಯಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಸೈಕಲ್ ಕಂಪನಿಗಳಿಗೆ ವಿಶ್ವದಲ್ಲಿಯೆ ನಂಬರ್ ಒನ್ ಆಗುವ ಸಾವಕಾಶ ಮತ್ತು ಹಣ ಎರಡು ಇತ್ತು. ಆದರೆ ಶ್ರಧ್ಧೆ ಇರದ ಕಾರಣ ಈವತ್ತಿಗೂ‌ ಉತ್ತಮ ಗುಣ ಮಟ್ಟದ ಸೈಕಲ್ ನಮ್ಮ ದೇಶದಲ್ಲಿ ಮಾಡುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ.

ಕನ್ನಡ ನಾಡಿನ ಜನರು ಜಾಗತಿಕ ಮಟ್ಟದಲ್ಲಿ ಕಟ್ಟಿರುವ ಕಂಪನಿಯೆಂದರೆ ವಿಪ್ರೋ ಮತ್ತು ಇನ್ಫೋಸಿಸ್. ಆದರೆ ಐ.ಟಿ. ವ್ಯವಹಾರವನ್ನು ಬಿಟ್ಟು ಮಿಕ್ಕ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಯಾವುದಿವೆ, ಅವು ಕರ್ನಾಟಕದಲ್ಲಿ ಬುಧ್ಧಿವಂತರನ್ನು ತನ್ನ ಕಡೆಗೆ ಸೆಳೆಯುತ್ತಿಲ್ಲಾ. ನಾನು ತಿಳಿದ ಮಟ್ಟಿಗೆ ಪಿ.ಯು.ಸಿ ನಂತರ ‘ಮೈನಿಂಗ್ ಇಂಜಿನಿಯರಿಂಗ್’ ಶಾಖೆಗೆ ಯಾರು ಹೋಗುವುದಿಲ್ಲಾ. ಎಲ್ಲರೂ ಬಯಸುವುದು ಐ.ಟಿ ಬ್ರಾಂಚನ್ನು. ಈ ರೀತಿ ಒಂದೆ ಹಾದಿಯಲ್ಲಿ ಹೋಗುವುದರಿಂದ ವೈವಿಧ್ಯವುಳ್ಳ ಜ್ಞಾನ ಮತ್ತು ವೃತ್ತಿಗಳೆರಡು ನಶಿಸಿಹೋಗುತ್ತದೆ. ಅಥವಾ‌ ಕಳಪೆ ಮಟ್ಟದಾಗಿರುತ್ತದೆ. ಈಗ ನಮ್ಮ ದೇಶದಲ್ಲಿ ಸೈಕಲ್ ಉತ್ಪಾದನೆ ಮಾಡುವ ಕಂಪನಿಗಳೆಲ್ಲ ಲೂದಿಯಾನದಲ್ಲಿ ಬೇರೂರಿದೆ. ಲೂದಿಯಾನದಲ್ಲಿ ತಂತ್ರಜ್ಞಾನದ ಅಭಾವವಿರುವುದರಿಂದ ಅಲ್ಲಿಗೆ ಯಾವ ಡಿಸೈನರುಗಳು ಹೋಗುವುದಿಲ್ಲಾ. ಸೈಕಲ್ ಡಿಸೈನ್ ಮಾಡುವುದಕ್ಕೆ ತಾಂತ್ರಿಕ ಕುಶಲತೆ ಮತ್ತು ವಿಶಾಲ ಅನುಭವ ಅತ್ಯಂತ ಆವಶ್ಯಕ. ಸೈಕಲ್ ಡಿಸೈನ್ ಬಗ್ಗೆ ಹೇಳಬೇಕಾದರೆ

ವಿದೇಶದಲ್ಲಿ ಎಂತೆಂತಹ ಸೈಕಲ್ ಉತ್ಪಾದನೆ ಮಾಡಿದ್ದಾರೆ ಮತ್ತು ಅವುಗಳನ್ನು ಹೇಗೆ ಬಳಸುತಿದ್ದಾರೆ ಎನ್ನುವುದು ಕೆಳಗೆ ಚಿತ್ರಿಸಿದ್ದೇನೆ.

 

 

 

ಈ ಮಾದರಿಯಲ್ಲಿ ಸೈಕಲ್ ಉತ್ಪಾದನೆ ಜರುಗಿದರೆ ನಮ್ಮ ಜನರು ಸೈಕಲ್ ಪ್ರೀತಿಸಲು ಪ್ರಾರಂಭಿಸುತ್ತಾರೆ. ಇಂತಹ ಸೈಕಲ್ ಗಳು ಉತ್ಪಾದನೆಯಿಂದ ಬಡವರ ಸಂಚಾರ ದಿನೇ ದಿನೇ ಜರುಗುವ ತೈಲ ಬೆಲೆ ಏರಿಕೆಯ ಒತ್ತಡದಿಂದ ಬಿಡುಗಡೆಯನ್ನು ಪಡೆಯುತ್ತದೆ. ಸಣ್ಣ ಸಣ್ಣ ನಗರಗಳಲ್ಲಿ ಆಟೋ‌ ಬದಲಿಗೆ ಪೆಡಿ ಕ್ಯಾಬ್ ಗಳು ಬಂದರಂತೂ, ಆಟೋ ದವರ ಪ್ರಲಾಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ಲೇಖಕ: ಮುರಳಿ ಎಚ್. ಆರ್.

ಪರಿಸರ ಪ್ರೇಮಿ, ಸೈಕಲ್ ಚಾಲಕ ಹಾಗೂ ಸೈಕಲ್ ಚಾಲನೆಯ ಮಹತ್ವಗಳ ಪ್ರಚಾರಕ. ಸೈಕಲ್ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬುದು ಮುರಳಿ ಅವರ ಹೊಸ ಕನಸು. ಬಿಎಂಟಿಸಿ ಜತೆ ಕೈ ಜೋಡಿಸಿ ಎಲ್ಲಾ ಟಿಟಿಎಂಸಿಗಳಲ್ಲಿ ಸೈಕಲ್ ಬಸ್‌ಗಳನ್ನು ರೂಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದಲ್ಲದೆ ಸೈಕಲ್ ಆರ್ಥಿಕತೆ ಕುರಿತು ಗುಬ್ಬಿ ಲ್ಯಾಬ್ಸ್ ಜತೆಗೂಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹಣಕಾಸು ವ್ಯವಸ್ಥೆಗೆ ಸೈಕಲ್‌ಗಳು ಹೇಗೆ ನೆರವಾಗಿವೆ ಎಂಬುದನ್ನು ತಿಳಿಸುವುದು ಸಂಶೋಧನೆಯ ಉದ್ದೇಶ. ದಿನಪತ್ರಿಕೆ ಮಾರುವವರು, ಕೊರಿಯರ್ ಸಂಸ್ಥೆಗಳು, ಹಾಲು ಮಾರಾಟಗಾರರು ಇತ್ಯಾದಿ ಸಮುದಾಯಗಳ ಸೈಕಲ್ ಬಳಕೆ ಹಾಗೂ ಅದರ ಆರ್ಥಿಕ ಲಾಭಗಳನ್ನು ಸಂಶೋಧನೆಯಲ್ಲಿ ಅವಲೋಕಿಸಲಾಗುತ್ತಿದೆ.