ವಾರ್ತಾ ಭಾರತಿ, ರವಿವಾರ – ಫೆಬ್ರವರಿ -02-2014

ಹನ್ನೆರಡನೆ ಶತಮಾನದಲ್ಲಿ ಇಡೀ ಕನ್ನಡ ನಾಡನ್ನೆ ಅಲ್ಲೋಲ ಕಲ್ಲೋಲಗೊಳಿಸಿದ ಸಾಮಾಜಿಕ ಕ್ರಾಂತಿ ಯಾರಿಗೆ ತಾನೆ ಗೊತ್ತಿಲ್ಲ? ಪ್ರತಿಗಾಮಿ ಸಾಮಾಜಿಕ ಸಂರಚನೆಗಳಿಗೆ ಕೊಡಲಿಯೇಟನ್ನು ಕೊಟ್ಟು ಜಾತಿ, ವರ್ಗಗಳಾಚೆಗೆ ಸಮಾನತೆ, ಭ್ರಾತೃತ್ವ, ಸಹೋದರ ತೆಗಳ ಆಧಾರದಲ್ಲಿ ಸಮಸಮಾಜವನ್ನು ನಿರ್ಮಿಸುವ ಆಶಯದೊಂದಿಗೆ ಭುಗಿಲೆದ್ದ ಆ ಕ್ರಾಂತಿ ಇಡೀ ನಾಡಿನ ಜನಸಮುದಾಯವನ್ನೇ ಬಡಿದೆಬ್ಬಿ ಸಿತ್ತು. ಕಾರ್ಲ್ ಮಾರ್ಕ್ಸ್ ಶ್ರಮದ ಹಿರಿಮೆಯನ್ನು ಎತ್ತಿಹಿಡಿಯುವ ಆರು ನೂರು ವರ್ಷಗಳ ಹಿಂದೆಯೇ ಕಾಯಕ ತತ್ವದ ಹೆಸರಿನಲ್ಲಿ ವಚನಕಾರರು ಆ ಕೆಲಸ ಮಾಡಿದ್ದರು.

ಆ ಕ್ರಾಂತಿ ಸಮಾಜದಲ್ಲಿ ಪರಿವರ್ತನೆಯ ಬಿರುಗಾಳಿಯನ್ನು ಎಷ್ಟು ಪ್ರಭಾವಶಾಲಿಯಾಗಿ ಎಬ್ಬಿಸಿತೋ ಅಷ್ಟೇ ಪ್ರಭಾವಶಾಲಿ ಪುರೋಗಾಮಿ ಅಲೆಗಳನ್ನು ಸಾಹಿತ್ಯ ಲೋಕದಲ್ಲೂ ಸೃಷ್ಟಿಸಿತ್ತು. ಅಲ್ಲಿಯ ತನಕ ಆಸ್ಥಾನದ ಒಡ್ಡೋಲಗಗಳಲ್ಲೋ ಅಥವಾ ಅಗ್ರಹಾರಗಳಲ್ಲೋ ಬಂಧಿಯಾಗಿದ್ದ ಕನ್ನಡ ಸಾಹಿತ್ಯವನ್ನು ಹೊಲೆಮಾದಿಗರ ಮನೆಬಾಗಿಲಿಗೆ ತಂದು ನಿಲ್ಲಿಸಿದ ಶ್ರೇಯಸ್ಸು ವಚನಕಾರರಿಗೆ ಸಲ್ಲಬೇಕು.

ಅಲ್ಲಿಯ ತನಕ ಜನಸಾಮಾನ್ಯರಿಗೆ ಅರ್ಥವಾಗದ ಹಾಗೆ, ಕೇವಲ ಪಂಡಿತಪಾಮರರಿಗೆ ಅರಿವಿಗೆ ನಿಲುಕುವ ಹಾಗೆ ಸೃಷ್ಟಿಯಾಗುತ್ತಿದ್ದ ಸಾಹಿತ್ಯ ಪರಂಪರೆಯನ್ನು ಮುರಿದು ಜನಸಾಮಾನ್ಯರ ಭಾಷೆಯಲ್ಲೇ ವಚನಸಾಹಿತ್ಯವನ್ನು ಸೃಷ್ಟಿಸಿದ್ದು ಸಾಹಿತ್ಯ ಲೋಕದಲ್ಲಿ ನಡೆದ ಕ್ರಾಂತಿಯಾಗಿತ್ತು. ಒಂದು ರೀತಿಯಲ್ಲಿ, ಇದೂ ಕೂಡ ಆ ಸಾಮಾಜಿಕ ಕ್ರಾಂತಿಯಲ್ಲಿ ಜನಸಾಮಾನ್ಯರು ಭಾಗವಹಿಸುವುದಕ್ಕೆ ಪ್ರೇರೇಪಿಸಿತ್ತು. ಹಾಗಾಗಿ, ಅದೊಂದು ಸಾಹಿತ್ಯಿಕ-ಸಾಮಾಜಿಕ ಕ್ರಾಂತಿ ಎಂದರೆ ತಪ್ಪಾಗಲಾರದು.

ಈಗ ಅದೆಲ್ಲಾ ಆಗಿ ಬರೊಬ್ಬರಿ ಎಂಟು ನೂರು ವರ್ಷಗಳು ಉರುಳಿವೆ. ಇಂದಿಗೂ ಆ ಸಾಮಾಜಿಕ ಕ್ರಾಂತಿಯ ತತ್ವಾದರ್ಶಗಳು, ಆ ಸಾಹಿತ್ಯಿಕ ಕ್ರಾಂತಿಯು ಪ್ರತಿಪಾದಿಸಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಆ ಕಾರಣದಿಂದಲೇ ಹನ್ನೆರಡನೆ ಶತಮಾನದ ವಚನಗಳು ಇಂದಿಗೂ ಜನರ ನಾಲಿಗೆಯಲ್ಲಿ ಹರಿದಾಡುತ್ತಿವೆ. ಬಸವಾದಿ ಶರಣರ ಸಾವಿರಾರು ವಚನಗಳನ್ನು ಅನೇಕ ಸಂಶೋಧಕರು ಪುಸ್ತಕ ರೂಪದಲ್ಲಿ ಒಂದೆಡೆ ಜೋಡಿಸಿ ಕೊಟ್ಟಿದ್ದಾರೆ. ಅಂತರ್ಜಾಲದಲ್ಲಿ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಲಭ್ಯವಿರುವ ಶ್ರೇಷ್ಠ ಇಂಗ್ಲಿಷ್ ಕೃತಿಗಳನ್ನು ನೋಡಿದಾಗಲೆಲ್ಲಾ ಕನ್ನಡದಲ್ಲಿ ಈ ಸೌಲಭ್ಯ ಇಲ್ಲವಲ್ಲ ಎಂದು ಸಹಜವಾಗಿ ಅನ್ನಿಸುತ್ತದೆ.

ಟಾಲ್ ಸ್ಟಾಯ್‌ನ ವಾರ್ ಆ್ಯಂಡ್ ಪೀಸ್ ಅಥವಾ ಅನ್ನಾ ಕರೆನೀನ ಅಂತರ್ಜಾಲದಲ್ಲಿ ಸಿಗಲು ಸಾಧ್ಯವಾಗುತ್ತದೆ ಎಂದಾದರೆ ಕುವೆಂಪು ಅವರ ರಾಮಾಯಣ ದರ್ಶನಂ ಯಾಕೆ ಸಿಗುವುದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಶೇಕ್ಸ್‌ಪೀಯರ್‌ನ ಸಾನೆಟ್‌ಗಳು ಬೆರಳ ತುದಿಯಲ್ಲೇ ಸಿಗುವ ಹಾಗೆ ನಮ್ಮ ವಚನಗಳೂ ಸಿಕ್ಕಿದ್ದರೆ ಎಷ್ಟೊಂದು ಚೆಂದ ಇರುತ್ತಿತ್ತು ಎಂದು ಹಲವರಿಗಾದರೂ ಅನ್ನಿಸಿರಬೇಕು. ನಾವಿನ್ನೂ ಮುದ್ರಿತ ಪುಸ್ತಕಗಳನ್ನು ಬ್ಯಾಗಿನಲ್ಲಿ ಹೊತ್ತುಕೊಂಡು ತಿರುಗುತ್ತಿದ್ದರೆ ಮುಂದುವರಿದ ದೇಶಗಳಲ್ಲಿ ಶೇಕಡ ಮೂವತ್ತರಷ್ಟು ಓದುಗರು ಒಂದು ಮೊಬೈಲ್ ಫೋನ್ ರೀತಿಯ ಸಲಕರಣೆಯಲ್ಲಿ ಒಂದಿಡೀ ಲೈಬ್ರರಿಯನ್ನು ತಮ್ಮಿಂದಿಗೆ ಒಯ್ಯುತ್ತಿರುತ್ತಾರೆ.

ಕನ್ನಡದಲ್ಲಿ ಆ ಕೆಲಸ ಪ್ರಾರಂಭವಾಗಿದೆಯಾದರೂ ನಾವಿನ್ನೂ ಬಹಳ ದೂರ ಸಾಗಬೇಕಾಗಿದೆ. ಈಗ ದಿಕ್ಕಿನಡೆ ಇನ್ನೊಂದು ಹೆಜ್ಜೆ ಇಟ್ಟಿರುವುದು ನಿಜಕ್ಕೂ ಸಂತಸ. ಹನ್ನೆರಡನೆ ಶತಮಾನದ ಬಸವಾದಿ ಶರಣರ 20,930 ವಚನಗಳನ್ನು ಡಿಜಿಟಲೀಕರಣಗೊಳಿಸಿ ಒಂದೇ ಜಾಲತಾಣದಲ್ಲಿ ದೊರೆಯುವಂತೆ ಮಾಡಿದ್ದಾರೆ. ಆ ಜಾಲತಾಣದ ಹೆಸರು ವಚನ ಸಂಚಯ ಅಂತ. ಇದನ್ನು ಎಷ್ಟೊಂದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆಂದರೆ ನೀವು ವಚನಕಾರರ ಆಧಾರದಲ್ಲಿಯಾದರೂ ವಚನಗಳನ್ನು ಹುಡುಕಬಹುದು ಅಥವಾ ಆಕಾರಾದಿಯಾಗಿ ನೀಡಲಾಗಿರುವ ವಚನಗಳ ಆಧಾರದಲ್ಲಿಯಾದರೂ ಹುಡುಕಿಕೊಳ್ಳಬಹುದು. ಅಷ್ಟೇ ಏಕೆ ನಿರ್ದಿಷ್ಟ ಪದಗಳನ್ನು ಹಾಕಿ ಕೂಡ ಹುಡುಕುವ ಸರ್ಚ್ ಎಂಜಿನ್ ವ್ಯವಸ್ಥೆ ಕೂಡ ಮಾಡಲಾಗಿದೆ

ಮಾತ್ರವಲ್ಲದೇ ವಿಶೇಷವಾಗಿ ಹನ್ನೆರಡನೆ ಶತಮಾನದ ಕಾಲಘಟ್ಟವನ್ನು ಸಂಶೋಧನೆಗೊಳಪಡಿಸುವ ಸಂಶೋಧನಾಕಾರರಿಗೆ ಅನುಕೂಲವಾಗಲೆಂದು ಒಟ್ಟಾರೆ 20 ಸಾವಿರಕ್ಕೂ ಹೆಚ್ಚು ವಚನಗಳಲ್ಲಿ ಬಳಕೆಯಾಗಿರುವ ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚಿನ ಪದಗಳನ್ನೂ ಪಟ್ಟಿ ಮಾಡಿದ್ದಾರೆ! ಅವುಗಳನ್ನು ಆಕಾರಾದಿಯಲ್ಲಿ ಕೊಟ್ಟಿದ್ದಾರೆ. ಯಾವುದಾದರೂ ಒಂದು ಪದದ ಮೇಲೆ ಕ್ಲಿಕ್ಕಿಸಿದರೆ ಸಾಕು, ಆ ಪದ ಬಳಕೆಯಾಗಿರುವ ಎಲ್ಲಾ ವಚನಗಳೂ, ಅವುಗಳನ್ನು ರಚಿಸಿದ ವಚನಕಾರರು, ಯಾವ ವಚನಕಾರರು ಎಷ್ಟು ವಚನಗಳಲ್ಲಿ ಈ ಪದವನ್ನು ಬಳಸಿದ್ದಾರೆ ಎಂಬ ವಿವರ ಎಲ್ಲವೂ ಸಿಕ್ಕುಬಿಡುತ್ತವೆ.

ಉದಾಹರಣೆಗಾಗಿ, ಅರಿವು ಎಂಬ ಪದವನ್ನು ಹುಡುಕಿ ನೋಡಿದರೆ 76 ವಚನಕಾರರು, 394 ವಚನಗಳಲ್ಲಿ ಒಟ್ಟು 446 ಕಡೆ ಬಳಸಿರುವ ವಿವರ ಸಿಗುತ್ತದೆ. ಈ 76 ವಚನಕಾರರಲ್ಲೂ ಈ ಪದವನ್ನು ಹೆಚ್ಚು ಬಳಸಿದವರು ಅಲ್ಲಮಪ್ರಭು (50 ಬಾರಿ) ಎಂಬ ವಿವರವೂ ಸಿಗುತ್ತದೆ. ವಸುಧೇಂದ್ರ, ಓ.ಎಲ್.ಎನ್. ಸ್ವಾಮಿ ಮಾರ್ಗದರ್ಶನದಲ್ಲಿ ದೇವರಾಜ್ ಕೆ, ಪವಿತ್ರ ಎಚ್ ಮತ್ತು ಓಂಶಿವಪ್ರಕಾಶ್ ಎಚ್.ಎಲ್ ಅವರನ್ನೊಳಗೊಂಡ ತಂಡ ಇಂತಹದ್ದೊಂದು ಸಾಧನೆ ಮಾಡಿದೆ. ಈ ತಂಡದ ಹಿಂದೆ ಇನ್ನೂ ಅನೇಕ ಜನರ ಪರಿಶ್ರಮ ಇರಬಹುದು.

ಎಷ್ಟೇ ಆಗಲಿ ಇಂತಹ ಇನ್ನಷ್ಟು ಪ್ರಯತ್ನಗಳು ನಡೆಯಲಿ ಎಂದು ಆಶಿಸೋಣ. ಪಂಪಾದಿಯಾಗಿ ಈಗಿನ ತಲೆಮಾರಿನ ಯುವ ಬರಹಗಾರರ ತನಕ ಎಲ್ಲ ಅಮೂಲ್ಯ ಕೃತಿಗಳೂ ಅಂತರ್ಜಾಲದಲ್ಲಿ ಸಿಗುವಂತಾದರೆ ನಾವು ಮೊಬೈಲ್ ಆಕಾರದ ಒಂದು ಈ-ಬುಕ್ ರೀಡರ್‌ನಲ್ಲಿ ಇಡೀ ಕನ್ನಡ ಸಾಹಿತ್ಯದ ಗ್ರಂಥಾಲಯವನ್ನೇ ನಮ್ಮ ಕಿಸೆಯೊಳಗೆ ಇಟ್ಟುಕೊಂಡು ತಿರುಗಬಹುದು. ಅಂದಹಾಗೆ, ಈ ವಚನ ಸಂಚಯ ಜಾಲತಾಣದ ವಿಳಾಸ: http://vachana.sanchaya.net[:]