‍‍ಫೇಸ್‌ಬುಕ್‌ನಲ್ಲಿ ನಮ್ಮ ತಂಡ ಪ್ರಕಟಿಸುವ ದಿನಕ್ಕೊಂದು ವಚನಗಳ ಆಗಸ್ಟ್ ೨೨ರ ಫೋಸ್ಟ್‌ಗೆ ಬಸವರಾಜ್ ಅವರು ಕೇಳಿದ ಪ್ರಶ್ನೆಗೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು‍ ಕೆಳಗಿನಂತೆ ಉತ್ತರಿಸಿರುತ್ತಾರೆ.

‍‍‍ಸೂಚನೆ:-‍‍ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ವಚನ ಸಂಚಯದ ‍‍ಗೂಗಲ್ ಗ್ರೂಪ್‌ನಲ್ಲೂ ನೆಡೆಸಬಹುದು.

ವಚನದ ಪ್ರಶ್ನೆ

ಮನದ ಸೂತಕವಳಿಯದೆ ಘನದಲ್ಲಿ ಕೂಡಿಹೆನೆಂದರೆ ದೊರೆಕೊಳ್ಳದು,
ಭಕ್ತಿಪಥ ದೊರೆಕೊಳ್ಳದು, ಶರಣಪಥ ದೊರೆಕೊಳ್ಳದು,
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನಾದಂಗಲ್ಲದೆ.

ಚನ್ನಬಸವಣ್ಣನೇ ಸುಮಾರು 60 ವಚನಗಳಲ್ಲಿ ಸೂತಕದ ಪ್ರಸ್ತಾಪ ಮಾಡಿದ್ದಾನೆ. ಮಿಕ್ಕ ವಚನಕಾರರು ಕೂಡ ಸುಮಾರು 300 ವಚನಗಳಲ್ಲಿ ಸೂತಕದ ಪ್ರಸ್ತಾಪ ಮಾಡಿದ್ದಾರೆ. ಸೂತಕ ಹಾಗೆ ಮುಖ್ಯವಾದೊಂದು ವಾಗ್ವಾದದ ಸಂಗತಿಯಾಗಿತ್ತು ಎಂದು ತೋರುತ್ತದೆ.


ಸಾಂಪ್ರದಾಯಿಕವಾಗಿ ಐದು ಬಗೆಯ ಸೂತಕಗಳನ್ನು ಹೇಳುತ್ತಾರೆ: ಜನನ, ಜಾತಿ, ಹೆಣ್ಣಿನ ರಜಸ್ಸ್ ಸ್ರಾವ, ಎಂಜಲು, ಸಾವು. ಗಮನಿಸಿ ನೋಡಿದರೆ ಇವೆಲ್ಲವೂ ದೇಹಕ್ಕೆ ಸಂಬಂಧಪಟ್ಟ ಸಂಗತಿಗಳಾಗಿ ಕಾಣುತ್ತವೆ. ಸಾಂಪ್ರದಾಯಿಕ ನಿಷೇಧ ಕೇವಲ ದೈಹಿಕ ಮಾತ್ರವಾದದ್ದು ಆದ್ದರಿಂದ ಸರಿಯಲ್ಲ ಅನ್ನುವುದು ವಚನಕಾರರ ನಿಲುವು.


ಮನಸ್ಸಿನ ಸೂತಕ ಇನ್ನೂ ಅಪಾಯಕಾರಿ, ಅದನ್ನು ನೀಗಿಕೊಳ್ಳುವುದಕ್ಕೆ ಗಮನಕೊಡಬೇಕು ಅನ್ನುವ ವಾದ ಅವರದ್ದು. ಸ್ಥೂಲವಾಗಿ ಹೇಳುವುದಾದರೆ ಸಲ್ಲದ ಭಾವನೆ, ವಿಚಾರ, ಅಹಂಕಾರ, ಎಲ್ಲ ನೆಗೆಟಿವ್ ಭಾವನೆಗಳು ಇದರಲ್ಲಿ ಸೇರುತ್ತವೆ. ಅಲ್ಲಮನಂಥವರು ಕಂಗಳ ಸೂತಕ, ಶಬ್ದ ಸೂತಕ, ಭಾವ ಸೂತಕ ಎಂಬ ಮಾತುಗಳನ್ನು ಕೂಡ ಬಳಸುತ್ತಾರೆ. ಹೆಚ್ಚು ವಿವರಕ್ಕೆ ಹೋಗದೆ ಹೇಳಬಹುದಾದರೆ ಅರಿವು ಪಡೆಯಲು ತಡೆ ಒಡ್ಡುವ ಯಾವುದೇ ಆಟಿಟ್ಯೂಡ್ (ನೋಟ, ಮಾತು, ವಿಚಾರ, ನೆನಪು, ಸಂದೇಹ) ಇತ್ಯಾದಿ ಸೂತಕವೆಂದೇ ಭಾವನೆ ಇದೆ. ಈ ಸೂತಕ ದೇಹದ ಸೂತಕಕ್ಕಿಂತ ಸೂಕ್ಷ್ಮ ಮತ್ತು ಪ್ರಬಲ.


ಘನ ಎಂದರೆ ಸೃಷ್ಟಿ, ಅಥವ ದೈವ. ಅದರೊಡನೆ ಐಕ್ಯವಾಗಬೇಕಾದರೆ ದೇಹದ ಶುದ್ಧಿ, ಜೊತೆಗೆ ಅಥವಾ ಅದನ್ನೂ ಮೀರಿ ಮನಸ್ಸು ಶುದ್ಧವಾಗಬೇಕು-ಭಾವ, ವಿಚಾರ, ಕಲ್ಪನೆ, ಮಾತು, ನೋಟ ಇಂಥ ಸೂತಕಗಳಿಂದ ಮುಕ್ತವಾಗಿರಬೇಕು. ಆಗಷ್ಟೇ ಭಕ್ತಿಯ ದಾರಿ, ಶರಣರಾಗುವ ದಾರಿ ದೊರೆಯುತ್ತದೆ, ಲಿಂಗದೊಡನೆ ಒಂದಾಗಲು ಸಾಧ್ಯವಾಗುತ್ತದೆ ಎನ್ನುತ್ತಾನೆ ಚನ್ನಬಸವಣ್ಣ.


ಚನ್ನಬಸವಣ್ಣ ಇನ್ನೊಂದು ವಚನದಲ್ಲಿ ಅಂತರಂಗದ ಅರಿವು ಬಹಿರಂಗದ ಕ್ರಿಯೆ ಒಂದೇ ಆದಾಗ ಮನದ ಸೂತಕ ಇಲ್ಲವಾಗುತ್ತದೆ ಎನ್ನುತ್ತಾನೆ.

ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು.
ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !
ಅಂತರಂಗದ ಅರಿವು, ಬಹಿರಂಗದ ಕ್ರಿಯೆ-
ಈ ಉಭಯಸಂಪುಟ ಒಂದಾದ ಶರಣಂಗೆ
ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ.
ಕೂಡಲಚೆನ್ನಸಂಗಯ್ಯಲ್ಲಿ

ಎಲ್ಲಕ್ಕಿಂತ ಕುತೂಹಲದ ವಚನ ಇದು:

ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು.
ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು.
ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ
ಒಡಲಸೂತಕ ಹರಿಯಬೇಕು.
ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ

ಶರಣರು ನಂಬಿದ್ದ ಗುರು, ಲಿಂಗ ಎಂಬವು ಕೂಡ ಸೂತಕಗಳಾಗುತ್ತವೆ, ಅವನ್ನು ಅರಿವಿನಿಂದ ಹರಿದುಕೊಳ್ಳಬೇಕು ಎನ್ನುತ್ತಾನೆ ಮಾದಾರ ಧೂಳಯ್ಯ

ಆಸಕ್ತರು ವಚನಸಂಚಯದಲ್ಲಿ ಸೂತಕ ಎಂಬ ಪದ ಹುಡುಕಿದರೆ ಸುಮಾರು ಮುನ್ನೂರು ಉಲ್ಲೇಖಗಳು ದೊರೆಯುತ್ತವೆ ಆಸಕ್ತರು ಒಂದು ಸಂಶೋಧನ ಲೇಖನವನ್ನೇ ಬರೆಯಬಹುದು.[:]