‍ಓ. ಎಲ್‌. ನಾಗಭೂಷಣ ಸ್ವಾಮಿ | ಜೂನ್ 29, 2014, ಉದಯವಾಣಿ

ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು ಮುದ್ರಿಸುತ್ತೇವೆ. ಆದರೆ, ಅಬ್ಬರದ ಕೆಲಸಗಳಿಗಿಂತ ಆಳವಾದ ಮತ್ತು ಸೂಕ್ಷ್ಮವಾದ ಪ್ರಕ್ರಿಯೆ ಇಂದಿನ ಅಗತ್ಯವೆಂಬ ವಿಚಾರವನ್ನು ನಾವು ಮನಗಂಡಿಲ್ಲ. ತಂತ್ರಜ್ಞಾನ ಬೆಳೆದಿರುವ ಈ ಕಾಲದಲ್ಲಿ ಕನ್ನಡದ ಭಾಷೆಯನ್ನು ಮತ್ತು ಜ್ಞಾನವನ್ನು ಭೌಗೋಳಿಕ ಗಡಿಯನ್ನು ದಾಟಿ ಹಬ್ಬಿಸುವ ಕುರಿತು ಕ್ರಿಯಾಶೀಲರಾಗಬೇಕಾಗಿದೆ.

ಈ ನಿಟ್ಟಿನಲ್ಲಿ ವಚನಗಳನ್ನು ಗಣಕೀಕೃತಗೊಳಿಸಿದ ವಚನ ಸಂಚಯ ಡಾಟ್‌ ನೆಟ್‌ನ್ನು ಗಮನಿಸಬೇಕಾದದ್ದು ಮತ್ತು ಬೆಂಬಲಿಸಬೇಕಾದದ್ದು ಕನ್ನಡಿಗರೆಲ್ಲರ ಕರ್ತವ್ಯ. 259 ವಚನಕಾರರ 20,930 ವಚನಗಳು ವಚನ ಸಂಚಯದಲ್ಲಿವೆ. ಪದ, ಅರ್ಥ, ವಿವರಣೆಗಳನ್ನು ಸುಲಭದಲ್ಲಿ ಹುಡುಕಾಡುವ ಸೌಲಭ್ಯವಿದೆ. ಈ ಚಾರಿತ್ರಿಕ ಪ್ರಯತ್ನದ ಹಿಂದೆ ದುಡಿದಿರುವ ಹಿರಿಯ ವಿಮರ್ಶಕರು ಮತ್ತು ಯುವ ತಂತ್ರಜ್ಞಾನಿಗಳು ಕನ್ನಡದ ಇತರ ಸಾಹಿತ್ಯಗಳಿಗೂ ಇದನ್ನು ವಿಸ್ತರಿಸುವ ಕನಸನ್ನು ಹೊಂದಿದ್ದಾರೆ. ಈ ಬಗೆಗೊಂದು ಮಾತುಕತೆ…

ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವುದರ ಮೂಲಕ ಒಂದು ಭಾಷೆಯನ್ನು ಮತ್ತು ಅದರ ಸಾಹಿತ್ಯವನ್ನು ಉಳಿಸಿ, ಬೆಳೆಸಬಹುದು ಎಂಬ ನವೀನ ಪ್ರಯತ್ನ “ವಚನ ಸಂಚಯ ಡಾಟ್‌ ನೆಟ್‌’. ಏನನ್ನುತ್ತೀರಿ?

ಖಂಡಿತ. ತಂತ್ರಜ್ಞಾನ ಮನುಷ್ಯನ ಸೃಷ್ಟಿ. ಹೌದು, ಒಮ್ಮೆ ಸೃಷ್ಟಿಗೊಂಡ ನಂತರ ಅದು ಇಡೀ ಬದುಕನ್ನು ನಿಯಂತ್ರಿಸುವ ಚಾರಿತ್ರಿಕ ಶಕ್ತಿಯಾಗುತ್ತದೆ. ತಂತ್ರಜ್ಞಾನ ಇಲ್ಲದಿದ್ದ ಕಾಲ ಯಾವುದೂ ಇರಲಿಲ್ಲ. ತನ್ನ ಕಾಲದ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದ ಸಮುದಾಯಗಳನ್ನು ಚರಿತ್ರೆ ನಿಷ್ಕರುಣೆಯಿಂದ ಒರೆಸಿಹಾಕಿದೆ.
ಬರವಣಿಗೆ, ತಾಳೆಗರಿ, ಮುದ್ರಣ, ಇದೀಗ ಡಿಜಿಟಲ್‌ ತಂತ್ರಜ್ಞಾನ. ವ್ಯಕ್ತಿ ಮತ್ತು ಸಮುದಾಯದ ಬದುಕಿನಲ್ಲಿ ಯಾವ ನೆನಪನ್ನು ಉಳಿಸಿ, ಮುಂದಿನ ತಲೆಮಾರಿಗೆ ಸಾಗಿಸಬೇಕು ಅನ್ನುವುದಕ್ಕೆ ಒಂದೊಂದು ತಲೆಮಾರೂ ಜ್ಞಾನ ಪ್ರಸರಣದ ತಂತ್ರಜ್ಞಾನವನ್ನು ಬಳಸಿಕೊಂಡದ್ದಿದೆ. ವಚನಗಳನ್ನೇ ನೋಡಿ. ಸುಮಾರು ಒಂದು ಸಾವಿರ ವರ್ಷ ಕಾಲ ಒಂದೊಂದು ತಲೆಮಾರೂ ಅದನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಸಂಕಲಿಸುತ್ತ, ವ್ಯಾಖ್ಯಾನಿಸುತ್ತ ನಮ್ಮ ಕಾಲದ ತನಕ ತಂದಿತ್ತಿದೆ. ಅದನ್ನು ಮುಂದಿನ ತಲೆಮಾರಿಗೆ ಸಾಗಿಸುವುದು ನಮ್ಮ ಜವಾಬ್ದಾರಿ. ಹೊಸ ತಲೆಮಾರಿನ ಅನೇಕರು “ಇಷ್ಟೊಂದು ಜನ ವಚನಕಾರರು ಇರುವುದು ಗೊತ್ತೇ ಇರಲಿಲ್ಲ’ ಎಂದು ಪ್ರತಿಕ್ರಿಯೆ ತೋರಿಸಿದ್ದಾರೆ . ಅಂದರೆ ಅರ್ಥ, ಮುದ್ರಿತ ಪುಸ್ತಕ ಸಂಪುಟಗಳೊಡನೆ ಹೊಸ ತಲೆಮಾರಿನ ಓದುಗರು ಸಂಪರ್ಕ ಕಡಿದುಕೊಂಡಿದ್ದಾರೆ ಅನ್ನೋಣವೆ? ಅಥವಾ ನಮಗೆ ಬೇಕಾದಾಗ, ಬೇಕಾದಲ್ಲಿ ನಮಗೆ ಇಷ್ಟದ ಓದು ದೊರಕಲಿ ಎಂಬ ಅಪೇಕ್ಷೆಯವರು ಎನ್ನೋಣವೆ? ಕೊನೆಯ ಮಾತೇ ನಿಜ ಅನ್ನಿಸುತ್ತದೆ. ಬೇಕೆನಿಸಿದ ಓದಿನ ಸಾಮಗ್ರಿ ಅದೇ ಕ್ಷಣದಲ್ಲಿ ನನ್ನ ಕಣ್ಣೆದುರಿಗೆ ದೊರಕಬೇಕು ಅನ್ನುವ ಹಂಬಲವನ್ನು ತಂತ್ರಜ್ಞಾನ ಮೂಡಿಸಿದೆ. ಆದ್ದರಿಂದಲೇ ನಮ್ಮ ವಚನ ಸಂಚಯವನ್ನು ಡೆಸ್ಕ್ಟಾಪ್‌, ಲ್ಯಾಪ್‌ಟಾಪ್‌, ಮೊಬೈಲ್‌, ಟ್ಯಾಬ್‌ ಇಂಥ ಯಾವ ಉಪಕರಣದ ಮೂಲಕವೂ ಓದುಗರಿಗೆ ಲಭ್ಯವಾಗುವಂತೆ ಮಾಡಿದ್ದೇವೆ. ಭಾಷೆಯೊಂದರ ಪ್ರಾಚೀನ ಪಠ್ಯಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಓದುಗರಿಗೆ ತಲುಪುವಂತಾಗುವುದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ತೀರ ಅಗತ್ಯ.

ತಂತ್ರಜ್ಞಾನವನ್ನು ಬಳಸಿ ಇನ್ನಷ್ಟು ಕೃತಿಗಳನ್ನು ಜಾಲಾಂತರಕ್ಕೆ ಸೇರಿಸಿ ಈ ಪ್ರಯತ್ನವನ್ನು ಹೇಗೆ ಮುಂದುವರಿಸಬಹುದು? ಈ ಮೂಲಕ ಹಳೆಗನ್ನಡ, ನಡುಗನ್ನಡದ ಕೃತಿಗಳು ಜನರಿಂದ ದೂರವಾಗುವ ಅಪಾಯವನ್ನು ತಪ್ಪಿಸಬಹುದಲ್ಲವೆ? ಕ್ಲಿಷ್ಟಪದಗಳ ಅರ್ಥಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಬಹುದಲ್ಲವೆ?

ವಚನಗಳನ್ನು ಮಾತ್ರವಲ್ಲ, ಪಂಪನ ಎರಡು ಕೃತಿಗಳು, ಸಮಗ್ರ ಹರಿದಾಸ ಸಾಹಿತ್ಯ, ಕವಿರಾಜಮಾರ್ಗ, ವಡ್ಡಾರಾಧನೆ ಇಂಥ ಪಠ್ಯಗಳನ್ನೂ ವಚನ ಸಂಚಯದ ಮಾದರಿಯ ಸಂಚಯ. ನೆಟ್‌ ತಾಣದಲ್ಲಿ ಒದಗಿಸುವ ಆಲೋಚನೆ ಇದೆ, ಆ ಕುರಿತ ಕಾರ್ಯಗಳೂ ನಡೆದಿವೆ. ವಚನ ಸಾಹಿತ್ಯ ಸಂಚಯವನ್ನು ರೂಪಿಸುವಾಗ ಮುಖ್ಯ ಗಮನವಿದ್ದದ್ದು ಸಮಗ್ರ ವಚನ ಸಾಹಿತ್ಯದಲ್ಲಿ ನಿರ್ದಿಷ್ಟವಾದ ಪದವೊಂದು ಹೇಗೆ ಬಳಕೆಯಾಗಿದೆ ಅನ್ನುವುದನ್ನು ಸುಲಭವಾಗಿ ಹುಡುಕಿ ತೆಗೆಯುವಂಥ ಕನ್‌ಕಾರ್ಡೆನ್ಸ್‌ ರೂಪಿಸಬೇಕೆಂಬ ಬಯಕೆ. ಮುದ್ರಿತ ಪುಸ್ತಕಗಳಲ್ಲಿ ಬೇಕಾದ್ದನ್ನು ಹುಡುಕುವ ಶ್ರಮ ಎಲ್ಲರಿಗೂ ಗೊತ್ತು. ಹದಿನೈದು ವಚನ ಸಂಪುಟ ಇರಬೇಕು; ನಮಗೆ ಬೇಕಾದ ವಚನಕಾರ ಯಾರೆಂದು ಗೊತ್ತಿರಬೇಕು ; ಆತನ ವಚನ ಯಾವ ಸಂಪುಟದಲ್ಲಿದೆ ಎಂದು ಹುಡುಕಬೇಕು ; ಅನಂತರ ನಮಗೆ ಬೇಕಾದ ವಚನದ ಮೊದಲ ಸಾಲು ನೆನಪಿಸಿಕೊಂಡು ಅಕಾರಾದಿ ಪಟ್ಟಿಯಲ್ಲಿ ಹುಡುಕಬೇಕು. ಆದರೆ ನೋಡಿ, ಎಷ್ಟೋ ಬಾರಿ ವಚನದ ಯಾವುದೋ ತುಣುಕು ನೆನಪಿರುತ್ತದೆ, ಮೊದಲ ಸಾಲು ಗೊತ್ತಿರುವುದಿಲ್ಲ. ಆಗ? ಹುಡುಕುವ ಶ್ರಮ ಬಲ್ಲವರೇ ಬಲ್ಲರು. ವಚನ ಸಂಚಯದ ಮುಖ್ಯ ಕೆಲಸ ಇಂಥ ಹುಡುಕುವ ಶ್ರಮವನ್ನು ತಪ್ಪಿಸುವುದು, ಆ ಶ್ರಮದ ಬದಲಿಗೆ ಹೊಸ ಆಲೋಚನೆಗಳಿಗೆ ಅವಕಾಶ ದೊರಕಿಸಿಕೊಡುವುದು. ಉದಾಹರಣೆಗೆ, ಕಾಯಕ ಎಂಬ ಪದ ಎಲ್ಲಿ ಬಳಕೆಯಾಗಿದೆ, ಮರ್ಕಟ, ಕೋಡಗ ಅನ್ನುವ ಪದಗಳು ಎಲ್ಲಿ ಬಂದಿವೆ ಅನ್ನುವುದನ್ನು ಈಗ ಹುಡುಕು ವುದು ತೀರ ಸುಲಭ. ಇಂಥ ಪದ ಎಂದು ನಮೂದಿಸಿದರೆ ಅದನ್ನು ಬಳಸಿರುವ ವಚನ ಕಾರರು, ಅವರ ವಚನಗಳು ಎಲ್ಲ ಕಣ್ಣೆದುರಿಗೆ ಕಾಣಿಸಿಕೊಳ್ಳುತ್ತವೆ. ವಚನಗಳಲ್ಲಿ ಜಾತಿಯ ಬಗ್ಗೆ ದೊಡ್ಡ ವಾಗ್ವಾದ ನಡೆಯಿತಲ್ಲ, ಈಗ “ಜಾತಿ’ ಎಂಬ ಪದವನ್ನು ಬರೆದು ಕ್ಲಿಕ್ಕಿಸಿದರೆ ಅಷ್ಟೂ 20 ಸಾವಿರ ಚಿಲ್ಲರೆ ವಚನಗಳಲ್ಲಿ ಅದು ಬಳಕೆಯಾಗಿರುವುದೆಲ್ಲ ನಿಮ್ಮ ಕಣ್ಣಮುಂದೆ ಬರುತ್ತದೆ, ನಿಮ್ಮ ತೀರ್ಮಾನ ನೀವೇ ತೆಗೆದುಕೊಳ್ಳಬಹುದು. ಅಂದರೆ ಹೊಸ ತಂತ್ರಜ್ಞಾನ ವಿದ್ವತ್ತಿನ ಕಲ್ಪನೆಯನ್ನು ಬದಲಾಯಿಸುತ್ತದೆ. ಓದಿದ ಎಲ್ಲವನ್ನು ನೆನಪಿಟ್ಟುಕೊಳ್ಳುವುದೇ ವಿದ್ವತ್ತು ಅಲ್ಲ, ನಮಗೆ ಬೇಕಾದ ಸಾಮಗ್ರಿ ಕ್ಷಣಾರ್ಧದಲ್ಲಿ ನಮಗೆ ದೊರೆತರೆ ಅದನ್ನು ಸಂಯೋಜಿಸಿಕೊಂಡು, ವಿಶ್ಲೇಷಿಸಿಕೊಂಡು ಹೊಸ ಆಲೋಚನೆಗಳನ್ನು ಮೂಡಿಸಿಕೊಳ್ಳುವುದು ವಿದ್ವತ್ತು ಎಂದಾಗುತ್ತದೆ. ಹಳೆಯ ಮುದ್ರಣ ತಂತ್ರಜ್ಞಾನ ಬಳಸುತ್ತಿದ್ದ ವಿದ್ವಾಂಸರು ವಚನಗಳ ಯಾವುದೋ ಒಂದು ಅಂಶವನ್ನು ಹುಡುಕಲು ತಿಂಗಳ್ಳೋ, ವಾರವೋ ವ್ಯಯಿಸಬೇಕಾಗುತ್ತಿತ್ತು. ಈಗ ಅಂಥ ಕೆಲಸಕ್ಕೆ ನಿಮಿಷವೂ ಬೇಡ. ಹೊಸ ತಂತ್ರಜ್ಞಾನ ಹೊಸ ವಿದ್ವತ್ತಿನ ಸವಾಲು. ಇಗೋ ನಿನಗೆ ಬೇಕಾದ ಮಾಹಿತಿ ಇಲ್ಲಿದೆ, ಏನು ಮಾಡುತ್ತೀಯಾ ಅನ್ನುತ್ತದೆ. ವಚನ ಸಂಚಯ ಹಾಗೆ ಸಂಶೋಧನೆಗೂ ಒದಗಿಬರುತ್ತಿದೆ.

ಕ್ಲಿಷ್ಟಪದಗಳ ಅರ್ಥವನ್ನು ವಚನ ಸಂಚಯದಲ್ಲಿ ಕೊಡಲು ಶುರು ಮಾಡಿದ್ದೇವೆ. ಖಂಡಿತ ಇಂಥ ನೆರವು ಅಗತ್ಯ. ಇದಕ್ಕೂ ನಾವು ಮಾಹಿತಿ ತಂತ್ರಜ್ಞಾನ ಬಳಸಿಕೊಳ್ಳಬೇಕು. ಮೊದಲಿಗೆ ಕನ್ನಡ ಪದಗಳು ಬಳಕೆಯಾಗಿರುವ ನಿದರ್ಶನಗಳು ದೊರೆಯಬೇಕು. ಈಗ ವಚನ ಸಂಚಯದ ಮೂಲಕ ಸುಮಾರು ಎರಡು ಲಕ್ಷ ಪದಗಳಷ್ಟು ವಿಸ್ತಾರವಾದ ಕೋಶ ನಿರ್ಮಾಣವಾಗಿದೆ.

ಮಿಕ್ಕ ಹಳೆಯ ಕೃತಿಗಳೂ ಸೇರ್ಪಡೆಯಾಗುತ್ತ ಹೋದಂತೆ ಇಂಥ ಪದಗಳ ಆಕರ ಕೋಶ (ಕಾರ್ಪಸ್‌) ಸೃಷ್ಟಿಯಾಗುತ್ತದೆ. ಅದನ್ನು ಬಳಸಿಕೊಂಡು ಹೆಚ್ಚು ಖಚಿತವಾದ ನಿಘಂಟನ್ನು ರೂಪಿಸುವುದಕ್ಕೆ ಸಾಧ್ಯವಾಗುತ್ತದೆ. ಕೇವಲ ಪದಗಳು ಮಾತ್ರವಲ್ಲ, ಹಳಗನ್ನಡದ ಕೃತಿಗಳ ಪದ ಭಾಗ, ಹೊಸಗನ್ನಡ ವಾಕ್ಯದಲ್ಲಿ ಅವುಗಳ ಮರು ನಿರೂಪಣೆಗಳೂ ಅಗತ್ಯ. ಅಂಥ ಕೆಲಸವೂ ನಡೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೃಷ್ಟಿ ದೌರ್ಬಲ್ಯವಿರುವ ಕನ್ನಡ ಓದುಗರನ್ನು ಗಮನದಲ್ಲಿರಿಸಿಕೊಂಡು ವಚನ ಪಠ್ಯಗಳನ್ನೂ, ಮುಂದೆ ಸೇರ್ಪಡೆಗೊಳಿಸುವ ಇತರ ಪಠ್ಯಗಳನ್ನೂ ಕೇಳಲು ಅನುಕೂಲವಾಗುವಂತೆ ಓದಿಸಿ ದಾಖಲಿಸುವ ಆಸೆಯೂ ಇದೆ. ಇದರಲ್ಲಿ ಕನ್ನಡದ ಆಸಕ್ತ ಮನಸ್ಸುಗಳೆಲ್ಲ ಸೇರಬೇಕು, ಪಠ್ಯಗಳನ್ನು ಓದಿ ಹೇಳಬೇಕು ಅನ್ನುವ ದೊಡ್ಡ ಕನಸೂ ಇದೆ.

ಕಂಪ್ಯೂಟರ್‌ ಮತ್ತು ಕನ್ನಡದ ಸಂಬಂಧವನ್ನು ನಿಕಟಗೊಳಿಸುವಲ್ಲಿ ಸರಕಾರಿ ಮಟ್ಟದ ಜಡಪ್ರಯತ್ನಕ್ಕೆ ಖಾಸಗಿ ಮಟ್ಟದ ಕ್ರಿಯಾಶೀಲ ಪ್ರತಿಕ್ರಿಯೆ ಈ “ವಚನ ಸಂಚಯ ಡಾಟ್‌ ನೆಟ್‌’ ಎನ್ನಬಹುದೆ?

“ಸರ್ಕಾರ’ ಎನ್ನುವುದು ಯಾವಾಗಲೂ ಜಡವೇ. ಸರ್ಕಾರದ ನೆರವು ಬೇಡವೆಂದಲ್ಲ, ಆದರೆ ಅದನ್ನು ಪಡೆಯುವುದಕ್ಕೆ ಅಭಿಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟು ಅಂಗಲಾಚುವ ಮನಸ್ಸಿಲ್ಲ. ದಯವಿಟ್ಟು ಗಮನಿಸಿ, ಸಂಸ್ಕೃತಿಗೆ ಉಪಯುಕ್ತವಾದ ಕೆಲಸಗಳು ಗೀಳಿನಂತೆ ಅದನ್ನು ಹಚ್ಚಿಕೊಂಡು ತೊಡಗುವ ವ್ಯಕ್ತಿಗಳಿಂದ ಆದಷ್ಟು ಪ್ರಮಾಣದಲ್ಲಿ ಸಂಸ್ಥೆಗಳಿಂದ ಆಗಿಲ್ಲ. ಸಮಾನ ಮನಸ್ಕರು, ವ್ಯಸನಿಗಳು ಎಂದೇ ಎನ್ನಿ, ತಮ್ಮ ಬುದ್ಧಿ, ಶ್ರಮ, ಸಮಯ, ದುಡ್ಡು ಎಲ್ಲವನ್ನೂ ವ್ಯಯಿಸಿ ಮಾಡಿದ ಕೆಲಸಗಳೇ ಮಹತ್ವದ್ದಾಗಿ ಉಳಿದಿವೆ. ಸರ್ಕಾರ ಗುರುತಿಸಿ, ಸಹಾಯ ನೀಡಿದರೆ ಒಳ್ಳೆಯದು, ಇಲ್ಲದಿದ್ದರೆ ಅಡ್ಡಿಯಿಲ್ಲ, ಬಿಡಿ ವ್ಯಕ್ತಿಗಳು ತಮ್ಮ ಕೈಲಾದಷ್ಟು ಕೆಲಸ ಮಾಡಿಕೊಂಡೇ ಬಂದಿದ್ದಾರೆ, ಮುಂದೆಯೂ ಹೀಗೇ ಇರುತ್ತದೆ. ಇಂಥ ಕೆಲಸ ಸಾಂಸ್ಕೃತಿಕವಾಗಿ ಮುಖ್ಯ ಎಂದು ದಶಕಗಳಿಂದ ಹೇಳುತ್ತಿದ್ದರೂ “ಸಂಸ್ಥೆ’ಗಳು ಆಸಕ್ತಿ ತೋರಿದ್ದು ಕಡಮೆಯೇ.

ಹೊಸ ಪೀಳಿಗೆಯ ತಂತ್ರಜ್ಞರು ಮುಖ್ಯವಾಗಿ ಕಥೆಗಾರ ವಸುಧೇಂದ್ರರ ಪರಿಚಯದ ಮೂಲಕ ಈ ಕೆಲಸಕ್ಕೆ ತೊಡಗಿದರು. ಇದು ಅವರ ಬುದ್ಧಿಮತ್ತೆಗೆ ಸವಾಲು ಅನ್ನಿಸಿರಬೇಕು. ಸುಮಾರು 25 ಸಾವಿರ ವಚನಗಳು, 2 ಲಕ್ಷ ಪದಗಳು, ಅವುಗಳ ಡಾಟಾ ಬೇಸ್‌ ಸೃಷ್ಟಿಸುವುದು, ಹುಡುಕುವ ಬಗೆಗಳನ್ನು ಕಂಡುಕೊಳ್ಳುವುದು, ಇವಕ್ಕೆಲ್ಲ ಸೂಕ್ತವಾದ ವಾಸ್ತು (ಆರ್ಕಿಟೆಕ್ಚರ್‌) ರೂಪಿಸುವುದು ಒಂದೊಂದು ಹಂತದ ಕೆಲಸವನ್ನೂ ಪರೀಕ್ಷಿಸುವುದು- ನಿಜವಾಗಲೂ ಸವಾಲು, ಹೊಸ ತಂತ್ರಜ್ಞಾನಿಗಳು ತುಂಬ ಉತ್ಸಾಹದಿಂದ ಈ ಕಾರ್ಯದಲ್ಲಿ ತೊಡಗಿದರು. ಕನ್ನಡದ ಕೆಲಸವನ್ನು ಮಾಡಲು ಬಯಸುವ ಅನೇಕ ಉತ್ಸಾಹಿ ತಂತ್ರಜ್ಞರಿದ್ದಾರೆ, ಅವರನ್ನೆಲ್ಲ ಒಗ್ಗೂಡಿಸಿ ಕೆಲಸಗಳನ್ನು ನೆರವೇರಿಸುವುದು ಸರ್ಕಾರದ, ವಿಶ್ವವಿದ್ಯಾಲಯದಂಥ ಸಂಸ್ಥೆಗಳ ಕೆಲಸವಾಗಬೇಕು.

ಸದ್ಯ ಬರಹಗಾರರು “ಬಸವಣ್ಣ’ನ ಹೆಸರಿನಲ್ಲಿ ಪ್ರಶಸ್ತಿ, ಹೆಸರು, ವಿವಾದ ಎಂದೆಲ್ಲ ನಿರರ್ಥಕ ಸಂಗತಿಗಳಲ್ಲಿ  ಲೋಲುಪರಾಗಿರುವಾಗ  “ವಚನ ಸಂಚಯ’ ದ ಮೂಲಕ ಅರ್ಥಪೂರ್ಣ ಪ್ರತಿಕ್ರಿಯೆ ನೀಡಿದಂತಾಗಿದೆ ?

ಪ್ರಶಸ್ತಿ ಇತ್ಯಾದಿಗಳೆಲ್ಲ ಇರುತ್ತವೆ, ಇರಬೇಕು, ಸಾಧಕರಿಗೆ ಮನ್ನಣೆ ತೋರುವುದೂ ಅಗತ್ಯ. ಅದೇ ಹೊತ್ತಿನಲ್ಲಿ ನಮಗೆ ಅಗತ್ಯವಾದ ಪ್ರಾಚೀನವನ್ನು, ಗತಕಾಲವನ್ನು, ಇವತ್ತಿಗೆ ಪ್ರಸ್ತುತವಾಗುವಂತೆ ಮಾಡುವ ಮನ್ನಣೆ ದೊರೆಯದ ಶ್ರಮದ ಕೆಲಸವೂ ನಡೆಯುತ್ತಿರಬೇಕು. ಪ್ರಶಸ್ತಿ ಅನ್ನುವದು ಕಣ್ಣು ಕೋರೈಸುವಂಥ ಕೆಲಸಕ್ಕೆ ದೊರೆಯುತ್ತದೆ; ಆದರೆ ಶ್ರಮವಹಿಸಿ ಮಾಡಿದ ಕೆಲಸಗಳು ಹೆಚ್ಚು ಕಾಲ ಬದುಕುತ್ತವೆ. ಇಂಥ ಆಸಕ್ತ ಯುವಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಹೊಸದಾಗಿ ಆರಂಭಗೊಂಡ ವಿಶ್ವವಿದ್ಯಾನಿಲಯಗಳು, ಪ್ರಸಾರಾಂಗಗಳು ಮುದ್ರಿತ ಪುಸ್ತಕಗಳನ್ನು ಹೊರತರುವಲ್ಲಿ ಆಸಕ್ತವಾಗಿವೆ. ಆದರೆ, ಇಂಥ ಪುಸ್ತಕಗಳು ಹೊಸಕಾಲದವರಿಗೂ ಲಭ್ಯವಾಗುವಂತೆ  “ಡಿಜಿಟಲೈಸ್‌’ ಮಾಡುವ ಬಗ್ಗೆ ಗಮನ ಹರಿಸುತ್ತಿಲ್ಲ. ದಪ್ಪದ ಪುಸ್ತಕಗಳ ಮುದ್ರಣ ಇನ್ನೂ ಅಗತ್ಯವೆ?

ಮುದ್ರಿತ ಪುಸ್ತಕಗಳು ಬೇಡವೇ ಬೇಡ ಎಂಬ ಸ್ಥಿತಿ ಬಂದಿಲ್ಲ, ಬರುವುದೂ ಇಲ್ಲ. ಆದರೆ ಎಂಥ ಪುಸ್ತಕವನ್ನು ಮುದ್ರಿಸಬೇಕು ಅನ್ನುವ ವಿವೇಚನೆ ಬೇಕಾಗುತ್ತದೆ. ವಿದ್ವತ್‌ ಕೃತಿಗಳು, ಪರಾಮರ್ಶನ ಕೃತಿಗಳು ಇಂಥವೆಲ್ಲ ಡಿಜಿಟಲ್‌ ರೂಪದಲ್ಲಿ ಹೆಚ್ಚು ಉಪಯುಕ್ತ ಮತ್ತು ಸುಲಭ ಲಭ್ಯವಾಗುತ್ತವೆ. ಮುದ್ರಿತ ಪುಸ್ತಕಗಳ ಡಿಜಿಟಲ್‌ ರೂಪ ಹೊಸ ಓದುಗರನ್ನು, ಹೊಸ ಓದುವಿಕೆಗಳನ್ನು ಸಾಧ್ಯಮಾಡುತ್ತದೆ. ಮುದ್ರಿತ ಪುಸ್ತಕಗಳ ಡಿಜಿಟಲ್‌ ರೂಪದಿಂದ ಇವತಿನ ಕನ್ನಡದ ಬಳಕೆಯ ನಿದರ್ಶನಗಳನ್ನು ಆಧರಿಸಿ ನಿಘಂಟುಗಳನ್ನು ರಚಿಸಲು, ಭಾಷಾಶಾಸ್ತ್ರದ ಚಿಂತನೆಗಳನ್ನು ಪ್ರೇರಿಸಲು ಜಗತ್ತಿನಾದ್ಯಂತ ಇರುವ ಕನ್ನಡ ಓದುಗರಿಗೆ, ಆಸಕ್ತರಿಗೆ ತಕ್ಕ ಸಾಮಗ್ರಿ ದೊರೆತಂತಾಗುತ್ತದೆ. ಈ ಬಗ್ಗೆ ಹೆಚ್ಚು ಗಮನ ಹರಿದಿಲ್ಲ, ಗಮನಿಸಬೇಕಾದದ್ದು ಅಗತ್ಯ. ಹೇಗಿದ್ದರೂ ಬರೆಹಗಾರರು ಮುದ್ರಣಕ್ಕೆಂದು ಡಿಟಿಪಿ ಮಾಡಿಸಿರುತ್ತಾರೆ, ಅದನ್ನೇ ಬಳಸಿಕೊಂಡು ಡಿಜಿಟಲ್‌ ಪುಸ್ತಕ ಮಾಡುವುದು ಅಂಥ ಖರ್ಚಿನ ಬಾಬತ್ತು ಕೂಡ ಅಲ್ಲ.

ಕೀರ್ತನೆಗಳ “ಡಿಜಿಟಲೈಸ್‌’ ಪ್ರಯತ್ನದ ಬಗ್ಗೆ ,  ಇತ್ತೀಚಿಗಿನ ಹೊಸ ಕೆಲಸದ ಬಗ್ಗೆ ಹೇಳಿ.
ವಚನ ಸಂಚಯವನ್ನು ಸಮಗ್ರಗೊಳಿಸುವ ಪ್ರಯತ್ನ ನಡೆದಿದೆ. ಅಂದರೆ ಪದಗಳಿಗೆ ಅರ್ಥ, ವಚನಕಾರರ ಪರಿಚಯ, ಪ್ರಮುಖ ವಚನಕಾರರ ರಚನೆಗಳಿಗೆ ಇರುವ ಪಾಠಾಂತರದ ಅಳವಡಿಕೆ, ವಚನಗಳ “ಕೇಳು’ ರೂಪ, ವಚನಗಳನ್ನು ಕುರಿತು ಬಂದಿರುವ ಮಹತ್ವದ ಶೋಧ, ಮತ್ತು ಲೇಖನಗಳ ಸಂಗ್ರಹ, ಎಲ್ಲಕ್ಕಿಂತ ಮಿಗಿಲಾಗಿ ವಚನಗಳ ಹಸ್ತಪ್ರತಿಗಳನ್ನು ಸ್ಕ್ಯಾನ್‌ ಮಾಡಿಸಿ ರಕ್ಷಿಸಿಡುವುದು ಇಂಥವು. ವಚನಸಂಚಯ ಇನ್ನೂ ತಿದ್ದುಪಡಿಗೊಳ್ಳುತ್ತಿರುವ, ಬೆಳೆಯುತ್ತಿರುವ ತಾಣ.

ದಾಸಸಾಹಿತ್ಯ ಪಠ್ಯಗಳು ಸಿದ್ಧವಾಗಿವೆ. ಯಾವ ರೀತಿಯಲ್ಲಿ “ಹುಡುಕು’ ಸೌಲಭ್ಯ ನೀಡಿದರೆ ಬಳಸುವವರಿಗೆ ಅನುಕೂಲವಾದೀತು ಎಂಬ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಕಾರಣ ವಚನಗಳಿಗಿಂತ ಕೀರ್ತನೆಗಳು ಗಾತ್ರದಲ್ಲಿ ದೊಡ್ಡವು; ವಚನಗಳಲ್ಲಿ ನಿರ್ದಿಷ್ಟ  ಪದವನ್ನು ಹುಡುಕುವವರು ಹೆಚ್ಚು ಜನ ಇರುವ ಹಾಗೆ ದಾಸಸಾಹಿತ್ಯದಲ್ಲಿ ಸಾಲುಗಳನ್ನೋ, ಸ್ಟಾಂಜಾಗಳನ್ನೋ ಹುಡುಕುವವರು ಇದ್ದಾರು. ದಾಸಸಾಹಿತ್ಯ ತಾಣ ಕುರಿತು ಚರ್ಚೆ ನಡೆದಿದೆ.

ದಯವಿಟ್ಟು ಗಮನಿಸಿ: ಈ ತಾಣದ ನಿರ್ಮಾಣಕ್ಕೆ ಉಚಿತವಾಗಿ ಲಭಿಸುವ ತಂತ್ರಾಂಶಗಳನ್ನೇ ಬಳಸಲಾಗಿದೆ. ಜೊತೆಗೇ ಇದೇ ಮಾದರಿಯನ್ನು ಅಳವಡಿಸಿಕೊಂಡು ಯಾರು ಬೇಕಾದರೂ ಯಾವುದೇ ಕನ್ನಡ ಪಠ್ಯವನ್ನು ಈ ರೀತಿಯಲ್ಲಿ ಮಂಡಿಸಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಮುಕ್ತವಾಗಿ ಇಡಲಾಗಿದೆ. “ಜ್ಞಾನವು ಮುಕ್ತವಾಗಿ ದೊರೆಯಬೇಕು’ ಅನ್ನುವ ತತ್ವದ ಬಗ್ಗೆ ನಂಬಿಕೆ ಇರುವುದರಿಂದಲೇ ಈ ಜಾಲತಾಣವೂ, ಬಳಸಿರುವ ತಂತ್ರಜ್ಞಾನವೂ ಮುಕ್ತವಾಗಿಯೇ ಇವೆ. ಬಸವಣ್ಣನಿಗೇ ಇರದ ಕಾಪಿ ರೈಟು ನಮಗೆ ಯಾಕೆ ಬೇಕು?

ಯುವ ಸಾಫ್ಟ್ವೇರ್‌ ಇಂಜಿನಿಯರ್‌ಗಳು ಇದರ‌ ಬಗ್ಗೆ ವಹಿಸಿದ ಆಸಕ್ತಿಯ ಬಗ್ಗೆ?

ವಚನಗಳನ್ನು ಕುರಿತ ನನ್ನ ಅಪೇಕ್ಷೆ, ಹಂಬಲಕ್ಕೆ ಗೆಳೆಯ ವಸುಧೇಂದ್ರ, ಅವರ ಮೂಲಕ ಓಂಶಿವಪ್ರಕಾಶ್‌, ಪವಿತ್ರಾ ಮತ್ತು ದೇವು ಅವರೆಲ್ಲ ಕೈ ಜೋಡಿಸಿದ್ದಾರೆ. ಸುಮಾರು 2 ಲಕ್ಷ ಹಿಟ್‌ಗಳನ್ನು ಪಡೆದಿರುವ ಜಾಲ ತಾಣ ಇದು. ಜಗತ್ತಿನ ವಿವಿಧ ದೇಶಗಳ ವಿದ್ವಾಂಸರೂ ಈ ತಾಣ ಬಳಸುತ್ತಿ¨ªಾರೆ. ನಾಡಿನ ಹಲವು ಭಾಗಗಳಲ್ಲಿ ವಚನ ಸಂಚಯ ತಂಡವನ್ನು ಕರೆದು ಗೌರವಿಸಿದ್ದೂ ಇದೆ. ತಂತ್ರಜ್ಞಾನ ಭಾಷಾಮುಖೀ, ಜನಮುಖೀಯಾದಾಗ ಎಂಥ ಸಂಚಲನ ಉಂಟಾಗುತ್ತದೆ ಅನ್ನುವುದು ತರುಣ ತಂತ್ರಜ್ಞಾನಿಗಳ ಅರಿವಿಗೂ ಬಂದಿದೆ.

ಕನ್ನಡ ಕ್ಲಾಸಿಕಲ್‌ ಭಾಷೆಯಾಗಿರುವ ಈ ಹೊತ್ತಿನಲ್ಲಿ ಆಗಲೇಬೇಕಾದ ಮುಖ್ಯ ಕಾರ್ಯವೆಂದರೆ 20ನೆಯ ಶತಮಾನದ ಆರಂಭದವರೆಗಿನ ಕನ್ನಡದ ಕೃತಿಗಳೆಲ್ಲವನ್ನೂ ಡಿಜಿಟೈಸ್‌ ಮಾಡಿ ಸಂರಕ್ಷಿಸುವುದು. ಇದಕ್ಕೆ ಅಗತ್ಯವಾದ ತಂತ್ರಜ್ಞಾನವೂ ಸಿದ್ಧವಿದೆ. ತರುಣರೂ ಮನಸ್ಸು ಮಾಡುತ್ತಾರೆ. ಹಣವೂ ಅಷ್ಟು ಖರ್ಚಾಗದು. ಒಂದು ವರ್ಷದ ಸಾಹಿತ್ಯ ಸಮ್ಮೇಳನಕ್ಕೋ, ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ವಿಶೇಷ ಅನುದಾನವಾಗಿ ನೀಡುವ ಹಣವೋ ಈ ಕಾರ್ಯಕ್ಕೆ ಧಾರಾಳವಾಗಿ ಸಾಕಾದೀತು. ಕನ್ನಡ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳಲು ಜಾಗತಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ವಿಧಿಯಿಲ್ಲ.[:]