ಅಣುಶಕ್ತಿ, ಅದರ ಉತ್ಪಾದನೆ ಮತ್ತು ಅದರಿಂದ ಆಗಬಹುದಾದ ವಿನಾಶದ ಬಗ್ಗೆ, ೨-೨-೨೦೧೩ ರಿಂದ ೩-೨-೨೦೧೩ ಫೆಬ್ರವರಿವರೆಗೆ ನೆಡೆದ ಯುರೇನಿಯಂ ಫಿಲಂ ಫೆಸ್ಟಿವಲ್ ನಮಗೆ ಜ್ಞಾನವನ್ನು ಹಾಗೂ ಮುನ್ನೆಚ್ಚರಿಕೆಯನ್ನು ನೀಡಿತು. ಇದರಲ್ಲಿ ಸುಮಾರು ಐವತ್ತು ಸಾಕ್ಷಚಿತ್ರಗಳನ್ನು ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಪ್ರದರ್ಶಿಸಲಾಯಿತು.

ಭಾರತ ದೇಶದಲ್ಲಿ ಹೆಚ್ಚಾಗಿ ನಾವೀಗ ಅಣುಶಕ್ತಿಯ ಮೇಲೆ ಅವಲಂಭಿತರಾಗುತ್ತಿರುವುದರಿಂದ, ಅಣುಶಕ್ತಿಗೆ ಬೇಕಿರುವ ಯುರೇನಿಯಂ ಮೈನಿಂಗ್ ನಲ್ಲಿ ಸರ್ಕಾರ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತದೆ. ಇಡೀ ದೇಶದಲ್ಲಿ ಅತ್ಯಧಿಕ ಯುರೇನಿಯಂ ಮೈನಿಂಗ್ ನೆಡೆಯುತ್ತಿರುವುದು ಜಾರ್ಕಂಡ್‌ನ ‘ಜಾದೂಗೋಡ’ ಎಂಬ ಎಕೈಕ ಪ್ರದೇಶದಲ್ಲಿ.

ಭಾರತದ ಎಲ್ಲ ರಾಜ್ಯಗಳು ಅಣುಶಕ್ತಿಯನ್ನು ಮತ್ತು ಅದರ ಉಪಯೋಗಗಳನ್ನು ಪಡೆದುಕೊಳ್ಳುತ್ತಿವೆ, ಆದರೆ ಕರ್ನಾಟಕ ಒಂದು ಹೆಜ್ಜೆ ಮುಂದೆ ಹೋಗಿ, ಯುರೇನಿಯಂ ಗಣಿಗಾರಿಕೆಯನ್ನು ಯಾದಗಿರಿಜಿಲ್ಲೆಯ ಶಹಾಪುರ ತಾಲ್ಲೂಖಿನ ಗೋಗಿ ಎಂಬಲ್ಲಿ ಪ್ರಾರಂಭಿಸಲು ಯೋಚಿಸುತ್ತಿದೆ. ಜೊತೆಗೆ ಮೈಸೂರಿನ ಹುಣಸೂರಿನ ಬಳಿ ಗೋಗಿಯಲ್ಲಿ ತೆಗೆದ ಅದಿರಿನ ಗುಣಮಟ್ಟ ವೃದ್ದಿ ಮಾಡುವ ಘಟಕ ಕೂಡ ನೆಲದಡಿಯಲ್ಲಿದ್ದು, ಕಣ್ಣಿಗೆ ಕಾಣದ್ದು ಮತ್ತು ಇದರಿಂದ ಉತ್ಪತ್ತಿಯಾದ ಯುರೇನಿಯಂ ಕೈಗಾದಲ್ಲಿ ವಿದ್ಯುತ್ ಶಕ್ತಿಯಾಗಿ ಮಾರ್ಪಡುತ್ತದೆ. ನಂತರದ ಹಂತದಲ್ಲಿ ಕೊನೆಗೆ ಉಳಿಯುವ ತ್ಯಾಜ್ಯ ಕೋಲಾರದ ಮತ್ತ್ಯಾವುದೋ ಪ್ರದೇಶದಲ್ಲಿ ಬರಿದು ಮಾಡುವ ಆಲೋಚನೆ ನೆಡೆಯುತ್ತಿದೆ. ಅಣುಶಕ್ತಿಯ ಗಣಿಗಾರಿಕೆ ಒಂದೇ ಹತ್ತಾರು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ವಿಶ್ವದ ಹಲವೆಡೆ ಸಾಬೀತಾಗಿದ್ದರೂ, ನಮ್ಮ ಕರ್ನಾಟಕದಲ್ಲಿ ಇದರ ಮುಂದಿನ ಹಂತದ ಬಳಕೆ ಮತ್ತು ತ್ಯಾಜ್ಯವೂ ಸೇರಿ ಮತ್ತೆಷ್ಟು ಅನಾಹುತಗಳಿಗೆ ನಾವು ತುತ್ತಾಗಬಹುದು ಎಂಬುದನ್ನು ಸ್ವಲ್ಪ ಅಲೋಚಿಸ ಬೇಕಿದೆ.

“ಬುದ್ದಾ ವೀಪ್ಸ್ ಇನ್ ಜಾದೂಗೋಡಾ” (Budda Weeps in Jadugoda) ಸಿನಿಮಾ, ಯುರೇನಿಯಂ ಅಂತರರಾಷ್ಟ್ರಿಯ ಸಿನಿಮೋತ್ಸವದಲ್ಲಿ ಜಾದೂಗೋಡಾದಲ್ಲಿ ಭಾರತದ ಯುರೇನಿಯಂ ಗಣಿಗಾರಿಕೆಯ ಹಿಂದಿನ ಚಿತ್ರಣವನ್ನು ಎಲ್ಲರ ಮುಂದೆ ತೆರೆದಿಟ್ಟಿತು. ಜಾದೂಗೋಡಾದ ಗಣಿಗಾರಿಕೆಯ ಹಿಂದಿನ ಅನೈತಿಕತೆಗಳು, ಅದು ತಂದೊಡ್ಡುತ್ತಿರುವ ಶ್ವಾಸಕೋಶದ ಕ್ಯಾನ್ಸರ್, ಥೈರಾಯ್ಡ್ ಗ್ರಂಥಿ, ರಕ್ತ, ಮೂಳೆ ಮತ್ತು ಹುಟ್ಟಿನಿಂದಲೇ ಬರುವ ಅನೇಕ ಕಾಯಿಲೆಗಳ ಅಂದರೆ ಕೈಕಾಲುಗಳೇ ಇಲ್ಲದಿರುವ ಮಗುವಿನ ಜನನಗಳು ಕಂಡು ಬಂದಿರುವುದು, ಈ ಪ್ರದೇಶದಲ್ಲಿರುವ ಗರ್ಭಿಣಿ ಸ್ರೀಯರ ಭ್ರೂಣದ ಮೇಲಾಗುತ್ತಿರುವ ಪರಿಣಾಮಗಳು, ಪಶು, ಪಕ್ಷಿಗಳ ಮೇಲೆ, ಇಲ್ಲಿನ ಕಾಡುಗಳ ಜೊತೆಗೆ ಪರಿಸರ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ನೋಡುಗರ ಮುಂದಿರಿಸಲಾಯ್ತು. ಇದೆಲ್ಲದರ ಹಿಂದಿರುವ ಸಂಸ್ಥೆಗಳು ಜಾದೂಗೋಡಾದಲ್ಲಿನ ಗಣಿಗಾರಿಕೆಯಿಂದ ಯಾವುದೇ ಹಾನಿ ಇಲ್ಲ ಎಂದು ಹೇಳುತ್ತಿರುವುದರ ಹಿಂದಿನ ಸತ್ಯಾಂಶವನ್ನು ಬಿಚ್ಚಿಡುತ್ತಾ, ಆರೋಗ್ಯ ಕೇಂದ್ರಗಳು ಹಾಗೂ ಹಣಕಾಸಿನ ಯಾವುದೇ ರೀತಿಯ ಸಹಾಯವನ್ನು ಸುತ್ತಮುತ್ತಲಿನ ಜನರಿಗೆ ನೀಡದೆ ಅವರ ಜೀವನವನ್ನು ಅಸಮತೋಲನದ ತಳಹದಿಗೆ ತಳ್ಳಿರುವುದನ್ನು ಈ ಸಿನೆಮಾ ತೋರಿಸಿತು. ಈ ಪರಿಸ್ಥಿತಿ ಕರ್ನಾಟಕದ ಗೋಗಿಯಲ್ಲಿಯೂ ಮತ್ತೊಂದು ಜಾದೂಗೋಡ ಸೃಷ್ಟಿಸಬಹುದಲ್ಲವೇ?

ಎರಡು ದಿನಗಳ ಯುರೇನಿಯಂ ಅಂತರರಾಷ್ಟ್ರೀಯ ಸಿನಿಮೋತ್ಸವ ವಿರಳವಾದ ಸಾಕ್ಷ್ಯಚಿತ್ರಗಳನ್ನೂ, ಸಿನಿಮಾಗಳನ್ನೂ ಜನರಿಗೆ ಪರಿಚಯಿಸುತ್ತಾ, ಯುರೇನಿಯಂ ಮೈನಿಂಗ್, ಅದರ ಅಭಿವೃದ್ದಿಯ ಹಂತಗಳು, ಉಪಯೋಗಗಳು, ಅಪಾಯಗಳು, ದುರುಪಯೋಗಗಳು ಹೀಗೆ ಹತ್ತಾರು ವಿಷಯಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿಚಾರಗಳನ್ನು ಮಂಡಿಸಿತು. ನ್ಯೂಕ್ಲಿಯರ್ ತ್ಯಾಜ್ಯ ವಿಸರ್ಜನೆಯೇ ಅಣುಶಕ್ತಿ ಉಪಯೋಗದ ಅತಿದೊಡ್ಡ ತೊಂದರೆಯಾಗುತ್ತಿರುವುದನ್ನು ಬಿಂಬಿಸಲಾಯ್ತು. ನ್ಯೂಕ್ಲಿಯರ್ ಥರ್ಮಲ್ ಪ್ಲಾಂಟ್ (ಅಣು ಉಷ್ಣಶಕ್ತಿ ಕೇಂದ್ರ)ಗಳ ಉಪಯೋಗದಿಂದ ಆಗುವ ಪ್ರಯೋಜನಕ್ಕಿಂತ ಹೆಚ್ಚು ಖರ್ಚಿನ ಹೊರೆ ನಮ್ಮ ಮೇಲೆ ಬೀಳುತ್ತಿದೆ ಎಂಬುದು ಕೂಡ ಗಮನಿಸಬೇಕಾದ ಅಂಶ.

ಅಣುಶಕ್ತಿಯ ಉತ್ಪಾದನೆಯ ಮೊದಲ ಹಂತ, ಗಣಿಗಾರಿಕೆಯಿಂದ ಅದರ ತ್ಯಾಜ್ಯ ನಿರ್ವಹಣೆಯವರೆಗೆ ತೀಕ್ಷ್ಣ ಅಣು ವಿಕಿರಣ ಸೋರಿಕೆಯಿಂದ ನಾವು ಮತ್ತೊಂದು ಮಹಾ ವಿಪತ್ತಿಗೆ ಗುರಿಯಾಗುತ್ತಲೇ ಇದ್ದೇವೆ.

ಲೇಖಕ: ಡಾ. ಗುರುಪ್ರಸಾದ್ ಬೆಂಗಳೂರು, ಕನ್ನಡಕ್ಕೆ ಓಂಶಿವಪ್ರಕಾಶ್ ಎಚ್.ಎಲ್

ಹವ್ಯಾಸ, ಕೆಲಸ ಎರಡೂ ನನ್ನ ನೆಚ್ಚಿನ ತಂತ್ರಜ್ಞಾನವೇ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಳಕೆ, ಭೋದನೆ, ಅಳವಡಿಕೆ, ಅಭಿವೃದ್ದಿ ಖುಷಿ ಕೊಡುವ ಕೆಲಸಗಳು. ಮೂಲತ: ಬೆಂಗಳೂರಿನವನೇ ಆದ ನಾನು ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದು, ನನ್ನ ಅರಿವಿನ ಒಂದಷ್ಟು ಭಾಗವನ್ನು ಕನ್ನಡಿಗರೊಂದಿಗೆ ಲಿನಕ್ಸಾಯಣದ ಮೂಲಕ ಹಂಚಿಕೊಳ್ಳುತ್ತೇನೆ. ಕನ್ನಡದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ದಿಗೆ ಮತ್ತು ಅವುಗಳ ಬಗೆಗಿನ ಬರಹದೆಡೆಗೆ ವಿಷೇಶ ಆಸಕ್ತಿ. ವಿರಾಮದ ವೇಳೆ ಕ್ಯಾಮೆರಾ, ಸೈಕಲ್, ಪ್ರವಾಸ, ಜೊತೆಗೆ ಒಂದಿಷ್ಟು ಸಾಲುಗಳನ್ನು ಹೆಣೆಯುವುದು ಇತ್ಯಾದಿ.. ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತೇನೆಂಬ ನಂಬಿಕೆಯಿಲ್ಲ, ಆದರೂ ಒಂದಿಷ್ಟು ಮಂದಿಗಾದರೂ ಒಳ್ಳೆಯ ಮಾಹಿತಿ ಒದಗಿಸಬಲ್ಲೆ ಎಂಬ ನಂಬಿಕೆಯಿದೆ.