‍‍‍ಕನ್ನಡ ನಿಘಂಟುಗಳನ್ನು ಕಂಪ್ಯೂಟರ್‌ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು ಸಾಧ್ಯವಾಗಿದ್ದಿಲ್ಲ. ನಮಗೆ ಬೇಕಿರುವ ಸ್ಪೆಲ್ ಚೆಕರ್, ಗ್ರಾಮರ್ ಚೆಕರ್ ಇತ್ಯಾದಿ ತಂತ್ರಾಂಶಗಳಿಗೆ ಟ್ಯಾಗ್ ಮಾಡಿರುವ ನಿಘಂಟುಗಳ ಅವಶ್ಯಕತೆ ಬಹಳಷ್ಟಿದೆ. ಇದನ್ನು ಸೃಷ್ಟಿಸುವ ಪುಟ್ಟ ಪುಟ್ಟ ಪ್ರಯತ್ನಗಳು ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಸದಸ್ಯರಿಂದ ಅಲ್ಲಲ್ಲಿ ಆದರೂ ಹೆಚ್ಚಿನ ಕೆಲಸ ಸಾಧ್ಯವಾಗಿದ್ದಿಲ್ಲ. ವಚನ ಸಂಚಯ, ದಾಸ ಸಂಚಯ ಹಾಗೂ ಇತ್ಯಾದಿ ಯೋಜನೆಗಳಲ್ಲಿ ಕಂಡುಬಂದ/ಬಿಡಿಸಿದ ಪದಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುವ ಉದ್ದೇಶವಿತ್ತು. ಈಗ ಇದಕ್ಕೆ ಮತ್ತೆ ಕಾಲ ಒದಗಿ ಬಂದಿದ್ದು, ನಿಘಂಟುವಿನಲ್ಲಿ ಏನೆಲ್ಲಾ ಸಾಧ್ಯತೆಗಳನ್ನು ನೋಡಬಹುದು ಎನ್ನುವ ಪ್ರಶ್ನೆಯ ಸುತ್ತ ನಾನು ಸೃಷ್ಟಿಸಿದ ಮೈಂಡ್ ಮ್ಯಾಪ್ ಒಂದನ್ನು ನಿಮ್ಮೆಲ್ಲರ ಮುಂದೆ ಪ್ರತಿಕ್ರಿಯೆಗಾಗಿ ಇಡುತ್ತಿದ್ದೇನೆ.

ನಿಘಂಟುಗಾಗಿ ಅಷ್ಟೇ ಅಲ್ಲದೇ, ಒಂದು ಕನ್ನಡ ಪದವನ್ನು ಮುಂದಿಟ್ಟುಕೊಂಡು ನಾವು ಕನ್ನಡದ ವ್ಯಾಕರಣವನ್ನು ಒಟ್ಟಾರೆಯಾಗಿ ನೋಡುವುದಕ್ಕೆ ಈ ಮೈಂಡ್ ಮ್ಯಾಪ್ ಯಾರಿಗೆ ಬೇಕಾದರು ಉಪಯೋಗಕ್ಕೆ ಬರಬಹುದು. ಮುಂದಿನ ದಿನಗಳಲ್ಲಿ ಇದರ ಸುತ್ತ ಪದಗಳ ವಿಶುಯಲೈಸೇಷನ್ ಜೊತೆಗೆ ಪದ ಬಳಕೆ ಮತ್ತು ಕಲಿಕೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ.

ಇಲ್ಲಿ ಸೇರಿಸಿರುವ ವ್ಯಾಕರಣ ಅಂಶಗಳನ್ನು ಒಂದಾಗಿಸಲು ಈಗಾಗಲೇ ಅನೇಕ ಸ್ನೇಹಿತರು ಖಾಸಗಿಯಾಗಿ ಸಹಕರಿಸಿರುತ್ತಾರೆ. ಇದು ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಚರ್ಚೆಗೆ ಒಳಪಟ್ಟು, ಭಾಷೆಯ ವ್ಯಾಕರಣದ ಎಲ್ಲವನ್ನೂ ಒಳಗೊಂಡಿರಬೇಕು ಎನ್ನುವುದು ಈ ಲೇಖನದ ಆಶಯ. ನಿಮ್ಮ ಅನಿಸಿಕೆ/ಪ್ರತಿಕ್ರಿಯೆ ಮತ್ತು ಇದರ ಸುತ್ತ ನಮ್ಮೊಡನೆ ಕೆಲಸ ಮಾಡಲು ಜೊತೆಯಾಗುವ ಆಸಕ್ತಿ ಇದ್ದಲ್ಲಿ – padasanchaya @ sanchaya.net ಗೆ ಒಂದು ಮಿಂಚೆ ಕಳುಹಿಸಿ.

‍‍‍

ಮಾಹಿತಿ: ಮೈಂಡ್ ಮ್ಯಾಪ್ – ನಾವು ಆಲೋಚಿಸುವಾಗ ನಮ್ಮ ಮೂಲ ಪ್ರಶ್ನೆ/ವಿಷಯದ ಸುತ್ತ ಸುಳಿದಾಡುವ ಎಲ್ಲ ಮಾಹಿತಿಗಳನ್ನು ಒಂದೆಡೆ ಕಟ್ಟಿಡಲು ಸಾಧ್ಯವಾಗಿಸುವ ತಂತ್ರಜ್ಞಾನ/ತಂತ್ರಾಂಶ. ಫ್ರೀ ಮೈಂಡ್, ಎಕ್ಸ್ ಮೈಡ್ ಇತ್ಯಾದಿ ಮುಕ್ತ ತಂತ್ರಾಂಶಗಳನ್ನು ಅಥವಾ ಇತರೆ ಖಾಸಗಿ ತಂತ್ರಾಂಶಗಳನ್ನು ಬಳಸಿ ಇದನ್ನು ಸೃಷ್ಟಿಸಬಹುದು.