‘ಹ್ಯಾಕಿಂಗ್‘ ಈ ಪದವನ್ನು ಕೇಳಿದಾಕ್ಷಣ ನಮ್ಮ ತಲೆಯಲ್ಲಿ ಒಂದು ರೀತಿಯ ನಕಾರಾತ್ಮಕ ಭಾವನೆ ಮೂಡುತ್ತದೆ. ಇದು ಗಣಕಲೋಕದಲ್ಲಿ ಒಂದು ಮಾಡಬಾರದ ಕೆಲಸ, ಇದೊಂದು ಅಪರಾಧ, ಹ್ಯಾಕರ್‌ಗಳ ಉದ್ದೇಶ ಸಾಮಾನ್ಯವಾಗಿ ಕೆಟ್ಟದ್ದೇ ಆಗಿರುತ್ತದೆ, ಹ್ಯಾಕರ್‌ಗಳು ಕೆಟ್ಟವರು, ಕಳ್ಳರು. ಹೀಗೆ ನಾನಾ ಬಗೆಯ ವಿಚಾರವನ್ನು ನಮ್ಮ ‘ಟೆಕ್‘ ಪ್ರಪಂಚ ಸಾಮಾನ್ಯರ ತಲೆಯಲ್ಲಿ ಬಿತ್ತಿಬಿಟ್ಟಿದೆ!
ಹೀಗಾಗಿ ನಮ್ಮಲ್ಲಿ ಹಲವರು, ಹ್ಯಾಕಿಂಗ್ ಎಂದರೇನು? ಇದು ನಿಜವಾಗಿಯೂ ಕೆಟ್ಟದೇ, ಅಥವಾ ಯಾವುದೋ ಒಂದು ಮಾಡಬಾರದ ಪಾಪದ ಕೆಲಸವೇ? ಅಥವಾ ‘ಹ್ಯಾಕಿಂಗ್‘ ಗೂ ಒಂದು ಒಳ್ಳೆಯ ಮುಖವಿದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗದೇ, ಸುಮ್ಮನಿದ್ದುಬಿಡುತ್ತೇವೆ! ‘ಯಾವುದೋ ಒಂದು ಜಾಲತಾಣವನ್ನು ಯಾರೋ ಹ್ಯಾಕ್ ಮಾಡಿ ಅನಧಿಕೃತವಾಗಿ ಒಳಹೊಕ್ಕು ಯಾವುದೋ ಗೌಪ್ಯ ಮಾಹಿತಿಯನ್ನು ಕದ್ದರಂತೆ’, ’ಯಾವುದೋ ಅಂತರಜಾಲ ಬ್ಯಾಂಕ್‌ನಿಂದ ’ಹ್ಯಾಕ್’ ಮಾಡಿ ಯಾರದೋ ಹಣವನ್ನು ಯಾರೋ ಕದ್ದರಂತೆ’, ಹೀಗೆಲ್ಲಾ ಕೇಳಿ ಕೇಳಿ ’ಹ್ಯಾಕ್’ ಎಂಬ ಪದವೇ ಕೆಲವರಿಗೆ ಅಸಹ್ಯಕರವಾಗಿಬಿಟ್ಟಿದೆ.
ಹಾಗಾದರೆ, ಹ್ಯಾಕಿಂಗ್ ಎಂದರೇನು? ಈ ಪ್ರಶ್ನೆಗೆ ಒಂದೇ ವಾಖ್ಯದಲ್ಲಿ ಉತ್ತರಿಸುವುದು ಕಷ್ಟ. ಆದರೂ ಸರಳವಾಗಿ ಹೇಳಬೇಕೆಂದರೆ ಗಣಕ ಅಥವಾ ಗಣಕಕ್ಕೆ ಸಂಬಂಧಿಸಿದ ತಂತ್ರಾಂಶ (Software), ಯಂತ್ರಾಂಶ (Hardware) ಕ್ಕೆ ಅಸಾಂಪ್ರದಾಯಿಕ, ಅಂದರೆ ರೂಢಿಯಲ್ಲಿರದ ಯಾವುದೋ ಒಂದು ಕ್ರಮದಿಂದ ಅಥವ ರೀತಿಯಲ್ಲಿ ಮಾಡುವ ಬದಲಾವಣೆ ಎಂದು ಹೇಳಬಹುದು. ಉದಾಹರಣೆಗೆ ನಿಮ್ಮ ಗಣಕದಲ್ಲಿ ಬಳಸುತ್ತಿರುವ ಒಂದು ನಿರ್ದಿಷ್ಟ video player ತಂತ್ರಾಂಶವು ಯಾವುದೋ ಒಂದು ಬಗೆಯ video ವನ್ನು ತೋರಿಸಲು ಅಸಮರ್ಥವಾದಾಗ, ಅದಕ್ಕೆ ಬೇಕಾದ ಪ್ಯಾಚ್‌ಅನ್ನು ಆ ತಂತ್ರಾಂಶದ ತಯಾರಕರು ಒದಗಿಸದೇ ಹೋದಾಗ, ನೀವು ಅಡ್ಡದಾರಿಯನ್ನು ಹಿಡಿಯಬೇಕಾಗಬಹುದು; ಅಂದರೆ, ಆ ತಂತ್ರಾಂಶದ ಸಂಕೇತವನ್ನು ಬದಲಾಯಿಸುವ ಅನುಮತಿ ಇಲ್ಲದೇ ಹೋದರೂ, ನಿಮ್ಮ ಬಳಕೆಯ ಅನುಕೂಲಕ್ಕಾಗಿ ಅದರಲ್ಲಿ ನೀವು ಸಣ್ಣದೊಂದು ಬದಲಾವಣೆ ಮಾಡಿ ಅದನ್ನು ನಿಮ್ಮ ಬಳಿಯೇ ಇಟ್ಟುಕೊಂಡಿದ್ದೀರಿ ಎಂದುಕೊಳ್ಳೋಣ; ಅಲ್ಲಿಗೆ, ಸಾಮಾನ್ಯ ಬಳಕೆದಾರನೊಬ್ಬನೂ ಹ್ಯಾಕರ್ ಆದಂತೆಯೆ! ಅದಕ್ಕೆ programming ಜ್ಞಾನ ಅಗತ್ಯ ಎಂಬುದು ಬೇರೆ ಮಾತು. ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ, ಒಂದು computer game ಅನ್ನು ಆಡುವುದು ಅತ್ಯಂತ ಕಠಿಣವಾದಾಗ, ಅದಕ್ಕೆ ಸಂಬಂಧಪಟ್ಟ cheat code ಗಳನ್ನು ಬಳಸುವುದನ್ನು ನಾವು ಕಂಡು-ಕೇಳಿಯೇ ಇರುತ್ತೇವೆ. ಇದೂ ಸಹಾ ಒಂದು ರೀತಿಯ ಹ್ಯಾಕಿಂಗ್!
ಮೇಲಿನ ಉದಾಹರಣೆಗಳನ್ನು ಗಮನಿಸಿದರೆ, ಹ್ಯಾಕಿಂಗ್ ಕೆಟ್ಟದ್ದೇನೂ ಅಲ್ಲ ಎಂಬ ಭಾವನೆ ಮೂಡುತ್ತದೆ ಅಲ್ಲವೇ? ನಿಜ, ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗುತ್ತಿದೆ. ಕೆಲವು ಫೋನ್‌ಗಳಲ್ಲಿ ಕೆಲವು apps (ಆಂಡ್ರಾಯ್ಡ್‌ಫೋನ್‌ಗಳಿಗಾಗಿ ತಯಾರಿಸಿದ ತಂತ್ರಾಂಶಗಳು) ಅನ್ನು ಬಳಸುವುದು ಕಷ್ಟಕರವಾಗಿರುತ್ತದೆ. ಆಗ ಅಂತಹಾ ಫೋನ್‌ಗಳಲ್ಲಿ ನಮಗೆ ಬೇಕಾದಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೆಕಾಗುತ್ತದೆ. ಇದೂ ಸಹಾ ಹ್ಯಾಕಿಂಗ್! ಹೀಗೆ ಹೇಳುತ್ತಾ ಹೋದರೆ ಹ್ಯಾಕಿಂಗ್ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಣಕದ ಆರಂಭದ ದಿನಗಳಲ್ಲಿ ಈ ಹ್ಯಾಕಿಂಗ್‌ನ್ನು ಗಣಕದಲ್ಲಿನ ಕೆಲ ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಬಳಸುತ್ತಿದ್ದರು. ಈ ’ಹ್ಯಾಕಿಂಗ್’ ಎಂಬುದು ಗಣಕ ಪ್ರಪಂಚಕ್ಕೆ ಒಂದು ವರ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಮಾಜ ಘಾತುಕರ ಕೈಗೆ ಇದು ಸಿಕ್ಕಿ ಇದು ಒಂದು ಶಾಪವಾಗಿ ಬದಲಾಗುತ್ತಿದೆ. ಈಗಲೂ ಕೆಲವು ಹ್ಯಾಕರ್‌ಗಳು ಅಸಾಂಪ್ರದಾಯಿಕ ದಾರಿಯಲ್ಲಿಯೇ, ಕೆಲವು ಅದ್ಬುತ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ಆಂಡ್ರಾಯ್ಡ್ನಲ್ಲಿ ಕನ್ನಡ ಭಾಷೆಯನ್ನೂ ಫೋನನ್ನು ಹ್ಯಾಕ್ ಮಾಡಿಯೇ ಕನ್ನಡ ಅಕ್ಷರಗಳನ್ನು ತೋರಿಸಬೇಕಾಗಿತ್ತು (rooting) ಎಂಬುದು ಸುಳ್ಳಲ್ಲವಷ್ಟೇ? ಹ್ಯಾಕಿಂಗ್ ಎಂಬುದು ಕೇವಲ ಗಣಕ ಲೋಕದಲ್ಲಷ್ಟೇ ಅಲ್ಲ, ಅನೇಕ ಎಲಕ್ಟ್ರಾನಿಕ್ಸ್ ಗ್ಯಾಡ್ಜೆಟ್‌ಗಳಿಗೂ ಅನ್ವಯವಾಗುತ್ತದೆ. ಕೆಲವೊಮ್ಮೆ ಕೆಲವು ಎಲಕ್ಟ್ರಾನಿಕ್ ಉಪಕರಣಗಳ ರಿಪೇರಿ ಸಾಮಾನ್ಯ ರೀತಿಯಲ್ಲಿ ಅಸಾಧ್ಯವಾಗಿರುತ್ತದೆ. ಆದರೆ, ಕೆಲವು ಹ್ಯಾಕ್ ಮಾರ್ಗಗಳಿಂದ ಅದು ಸಾಧ್ಯವಾಗಬಹುದು.
ಕೊನೆಯ ಮಾತು: ದುಷ್ಟ ಹ್ಯಾಕರ್‌ಗಳಿಂದ ಅಂತರಜಾಲದಲ್ಲಿನ ಮಾಹಿತಿ, ನಮ್ಮ-ನಿಮ್ಮ ಕಂಪ್ಯೂಟರ್ಗಳನ್ನು ಹಾಗೂ ಸರಕಾರಕ್ಕೆ ಹಾಗೂ ದೇಶಕ್ಕೆ ಸಂಬಂಧಿಸಿದ ಅತೀ ಗೌಪ್ಯ ಮಾಹಿತಿಗಳನ್ನು ರಕ್ಷಿಸಿಕೊಳ್ಳಲು ಹ್ಯಾಕರ್ಗಳನ್ನೇ ಬಳಸಿಕೊಳ್ಳಲಾಗುತ್ತದೆ ಎಂಬುದು ನಿತ್ಯ ಸತ್ಯ! ಎಲ್ಲಿಯವರೆಗೆ ಹ್ಯಾಕರ್‌ಗಳಿಂದ ಅಪಾಯವಿದೆಯೋ, ಅಲ್ಲಿಯವರೆಗೆ ಅದೇ ರೀತಿಯ ಹ್ಯಾಕರ್‌ಗಳಿಂದಲೇ ರಕ್ಷಣೆ ಪಡೆಯಬೇಕಾಗುತ್ತದೆ.
ಶ್ರೀಧರ್ ಟಿ ಎಸ್ ಅವರು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಅಬಸಿ ಗ್ರಾಮದವರು. ಹುಟ್ಟಿನಿಂದಲೇ ಅಂಧರಾಗಿರುವ ಇವರು, ಮೈಸೂರಿನ ಜೆ ಎಸ್ ಎಸ್ ಅಂಗವಿಕಲರ ಪಾಲಿಟೆಕ್ನಿಕ್‌ನಲ್ಲಿ ’Computer Applications for the Visually Impaired’ ಎಂಬ ಡಿಪ್ಲೊಮಾ ಪಡೆದಿದ್ದಾರೆ. ಕಂಪ್ಯೂಟರ್‌ನ ಪರದೆಯ ಮೇಲೆ ಬರೆದಿರುವ ಪಠ್ಯವನ್ನು ಧ್ವನಿ ರೂಪಕ್ಕೆ ಪರಿವರ್ಥಿಸಿ ಓದಿ ಹೇಳುವ ತಂತ್ರಾಂಶವೊಂದನ್ನು ಕನ್ನಡ ಭಾಷೆಗೂ ತರುವಲ್ಲಿ ಕೆಲಸ ಮಾಡಿದ್ದಾರೆ. ಈಸ್ಪೀಕ್ ಎಂಬ, (ಮೊದಲೇ ಆಂಗ್ಲ ಭಾಷೆಯಲ್ಲಿ ಲಭ್ಯವಿದ್ದ) ಒಂದು ಮುಕ್ತ ತಂತ್ರಾಂಶದ ಕರ್ತೃ ಜೋನಾಥನ್ ಡಡ್ಡಿಂಗ್‌ಟನ್ ಎಂಬ ಆಂಗ್ಲ Engineer ರನ್ನು ಸಂಪರ್ಕಿಸಿ, ಅದೇ ತಂತ್ರಾಂಶವನ್ನು ಕನ್ನಡಕ್ಕೂ ತಂದಿದ್ದಾರೆ. ಇದರ ನೆರವಿನಿಂದ ಅಂಧರು, ಅನಕ್ಷರಸ್ತರು, ಹಾಗು ಕನ್ನಡ ಭಾಷೆ ಮಾತನಾಡಲು ಬಂದರು, ಓದಲು
ಬಾರದವರೂ ಸಹಾ ಪ್ರಯೋಜನ ಪಡೆಯಬಹುದು. ಭಾರತದಲ್ಲಿರುವ ಬೆರಳೆಣಿಕೆಯಷ್ಟು ಅಂಧ Software Engineer ಗಳಲ್ಲಿ ಇವರೂ ಒಬ್ಬರು. ಅಂಧರಿಗೆ, ಹಾಗು ಸಮಾಜಕ್ಕೆ ಅನುಕೂಲವಾಗಬಲ್ಲ ಉಚಿತ ತಂತ್ರಾಂಶಗಳ ಅಭಿವೃದ್ಧಿಗಾಗಿ ಕೆಲಸ ಮಾಡುವ ಉದ್ದೇಶವನ್ನು ಇವರು ಹೊಂದಿದ್ದಾರೆ.