ನೀವೂ ಪ್ರಯತ್ನಿಸಿ ಹಾಗೂ ನಿಮ್ಮ ಜ್ಞಾನದ ಹರಿವನ್ನು ಇತರರೊಡನೆ ಹಂಚಿಕೊಳ್ಳಿ…
ದಿನಗಳು
ಲೇಖಕರು
ಲೇಖನಗಳು
%
ಇ-ಪುಸ್ತಕ
ಅರಿವಿನ ಅಲೆಗಳು – ಗಣರಾಜ್ಯೋತ್ಸವದ ಅಲೆಗಳು ೨೦೧೩
ಸಂಪಾದಕೀಯ
ಎರಡು ವಸಂತಗಳನ್ನು ಕಳೆದಿರುವ ಅರಿವಿನ ಅಲೆಗಳಲ್ಲಿ ಅನೇಕರು ಈಗಾಗಲೇ ಬಹಳಷ್ಟು ವಿಚಾರಗಳನ್ನು ಕನ್ನಡಿಗರೊಂದಿಗೆ ಹಂಚಿಕೊಂಡಿದ್ದಾರೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಕನ್ನಡಿಗರಿಗೆ ಹತ್ತಿರವಾಗಬೇಕು ಎಂಬ ಆಶಯವನ್ನು ಹೊತ್ತು ವೇದಿಕೆಯನ್ನು ಸಿದ್ದಪಡಿಸಿದ್ದ ಸಂಚಯ ಈ ಎರಡು ವರ್ಷಗಳಲ್ಲಿ ಕಲಿತದ್ದು ಬಹಳ. ಕೇವಲ ತಂತ್ರಾಂಶ ಹಾಗೂ ತಂತ್ರಜ್ಞಾನವಷ್ಟೇ ಅಲ್ಲದೇ ಸಾಮಾನ್ಯ ವಿಜ್ಞಾನವನ್ನು ಒಳಗೊಂಡು ಕನ್ನಡದಲ್ಲಿ ಸುಲಭವಾಗಿ ಲಭ್ಯವಿರದ ಈ ಕ್ಷೇತ್ರಗಳಲ್ಲಿಯೂ, ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲು ಸಂಚಯ ‘ವಿಜ್ಞಾನ, ತಂತ್ರಜ್ಞಾನ, ಹಾಗು ತಂತ್ರಾಂಶ ಕುರಿತ, ಅನುಭವಿ ವಿಚಾರ ಸಂಗ್ರಹ’ವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಚಯದ ಇತ್ತೀಚಿನ ಪ್ರಕಟಣೆ ‘ಸಂಚಯ – ಹೊಸ ರೂಪ‘ದಲ್ಲಿ ಓದಬಹುದು. ವಾರ್ಷಿಕ ಕಾರ್ಯಕ್ರಮದಲ್ಲಿ ಕೆಲ ಬದಲಾವಣೆಗಳು ಕೂಡ ಅರಿವಿನ ಅಲೆಗಳ ಈ ಸಂಚಿಕೆಯಿಂದ ಜಾರಿಗೆ ಬರುತ್ತಿವೆ.
ಗಣರಾಜ್ಯೋತ್ಸವ ಆಚರಣೆಯ ಈ ವಿಶೇಷ ಸಂಚಿಕೆಯನ್ನು ಅನಿಲ್ ರಮೇಶ್ ಅವರು ಬರೆದಿರುವ ‘ಪಕ್ಷಿ ವೀಕ್ಷಣೆ’ ಎಂಬ ಲೇಖನದಿಂದ ಪ್ರಾರಂಭಿಸುತ್ತಿದ್ದು, ವಿಜ್ಞಾನದೆಡೆಗೆ ನಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಹುಮುಖ್ಯವಾಗಿ ಬೇಕಿರುವ, ನಮ್ಮ ಸುತ್ತಮುತ್ತಲಿನ ಪರಿಸರದ ವೀಕ್ಷಣೆಯ ವಿಚಾರವನ್ನೂ, ಅದನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಅನುಕೂಲವಾಗುವಂತೆ ಅದನ್ನು ಸಂಗ್ರಹಿಸಿಟ್ಟುಕೊಳ್ಳುವ ಪರಿಪಾಠದ ಬಗ್ಗೆ ಹೇಳುತ್ತಾರೆ. ಜೊತೆಗೆ ಅದಕ್ಕೆ ಒಂದು ಮಾದರಿಯನ್ನೂ ನಿಮಗೆ ಇದರಲ್ಲಿ ಒದಗಿಸಿದ್ದಾರೆ.
ಎಂದಿನಂತೆ ಅರಿವಿನ ಅಲೆಗಳು – ಸಾಮಾನ್ಯನ ಜ್ಞಾನ ಭಂಡಾರವನ್ನು ಹೆಚ್ಚಿಸಲು ತನ್ನ ಶಕ್ತಿಗೆ ಅನುಸಾರವಾಗಿ ಹೊಸ ಹೊಸ ಲೇಖನಗಳನ್ನು ನಿಮ್ಮ ಮುಂದೆ ಮುಂದಿನ ಹಲವಾರು ದಿನಗಳಲ್ಲಿ ತರಲಿದೆ. ಈ ಅಲೆಗಳ ಸರದಿಗೆ ನಿಮ್ಮದೂ ಒಂದು ಲೇಖನ ಸೇರಲಿ, ಜ್ಞಾನದ ಅವಶ್ಯಕತೆ ಇರುವೆಲ್ಲೆಡೆ ಈ ಅಲೆಗಳನ್ನು ಹರಿಯ ಬಿಡಲು ನಿಮ್ಮ ಸಹಕಾರವೂ ದೊರೆಯಲಿ ಎಂದು ವಿನಂತಿಸುತ್ತಾ,
ಅರಿವಿನ ಅಲೆಗಳು ತಂಡ – ಸಂಚಯ
ಮುನ್ನುಡಿ
ಅರಿವಿನ ಅಲೆಗಳು – ೨೦೧೨
ಸಂಪಾದಕೀಯ
ಜಗತ್ತಿನ ಎಲ್ಲ ಮಾನವರು ಪರಸ್ಪರ ಒಳಿತಿಗಾಗಿ ತಮ್ಮ ಜ್ಞಾನದ ಅರಿವನ್ನು ಬೇರೆಯವರೊಡನೆ ಹಂಚಿಕೊಳ್ಳುತ್ತಾ, ಅದನ್ನು ಮುಂದಿನ ಪೀಳಿಗೆಯ ಸ್ವಾವಲಂಬನೆಗಾಗಿ, ಉದ್ಧಾರಕ್ಕಾಗಿ, ಹೊಸ ಆವಿಷ್ಕಾರ ಹಾಗೂ ಅನ್ವೇಷಣೆಗಳಿಗೆ ಬಳಸಲು, ಅಧ್ಯಯನ ನಡೆಸಲು ಮತ್ತು ಅದರಿಂದ ಸಂಪಾದಿಸಿದ/ಸೃಷ್ಟಿಸಿದ ಹೊಸತನ್ನು ಮತ್ತೆ ಇತರರೊಡನೆ ಹಂಚಿಕೊಳ್ಳಲು ಸಾಧ್ಯವಾಗಿಸುವುದೇ ನಿಜವಾದ ಸ್ವಾತಂತ್ರ್ಯ..
ಅರಿವಿನ ಅಲೆಗಳು ತನ್ನ ಎರಡನೆ ವರ್ಷದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಈ ಅಂಶವನ್ನು ಮತ್ತೆ ಎತ್ತಿ ಹಿಡಿದಿದೆ. ಸಂಚಯದ ತಂಡ ಎಂದಿನಂತೆ ಹೊಸ ಲೇಖಕ/ಲೇಖಕಿಯರನ್ನು ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಬರೆಯಲು ಪ್ರೇರೇಪಿಸಿದೆ. ಹೀಗೆ ಸಮುದಾಯದ ಮುಖೇನ ಸಂಪಾದಿಸಿದ, ಕನ್ನಡದ ೧೦ ಹೊಸ ಅರಿವಿನ ಅಲೆಗಳ ಹರಿವು ನಿಮ್ಮ ಮುಂದಿದೆ. ಸಾಮಾನ್ಯನಿಗೆ ಜ್ಞಾನದ ಅರಿವನ್ನು ತಲುಪಿಸುವ ನಮ್ಮ ಈ ಕಾರ್ಯದಲ್ಲಿ ಬೆಂಬಲಿಸಿ, ಭಾಗವಹಿಸಿದ ಎಲ್ಲರಿಗೂ ನಮ್ಮ ತಂಡ ಧನ್ಯವಾದಗಳನ್ನು ಅರ್ಪಿಸುತ್ತದೆ. ಪರಿಸರ, ತಂತ್ರಜ್ಞಾನ, ಸಮಾಜ, ಸ್ವತಂತ್ರತೆ, ಸಮುದಾಯ, ವರ್ಚುಯಲ್ ಜಗತ್ತು, ಕಲೆ, ಇತಿಹಾಸ ಹೀಗೆ ಹೊಸ ವಿಷಯಗಳು ನಿಮ್ಮ ಗಣಕದ ಪರದೆಯ ಮೇಲೆ…
ಸಂಚಯದ ‘ಅರಿವಿನ ಅಲೆಗಳ‘ ತಂಡದ ಈ ವರ್ಷದ ಇ-ಪುಸ್ತಕಕ್ಕೆ ಮುನ್ನುಡಿ ಬರೆದವರು ಪತ್ರಕರ್ತ ಚಾಮರಾಜ ಸವಡಿ. ಅರಿವನ್ನು ಹಲವಾರು ದಾರಿಗಳ ಮೂಲಕ ಸರಿಯಾದ ವ್ಯಕ್ತಿಗಳಿಗೆ ಸೇರಲು ಮಾಡುವುದು ಹೇಗೆ? ಪತ್ರಿಕೆ, ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮ ಹೀಗೆ ಹಲವಾರು ವಿಷಯಗಳ ಸುತ್ತಲೇ, ಕೆಲಸ ಮಾಡುತ್ತ, ತಂತ್ರಜ್ಞಾನದ ಬಳಕೆ ಇತ್ಯಾದಿಗಳ ಬಗ್ಗೆ ಹತ್ತಾರು ವಿಷಯಗಳನ್ನು ಚರ್ಚಿಸುತ್ತಾ, ತಮ್ಮ ಅನುಭವಗಳನ್ನು, ಆಸಕ್ತಿಗಳನ್ನು ಹಂಚಿಕೊಳ್ಳುವ ಇವರು, ೨೦೧೨ರ ಅರಿವಿನ ಅಲೆಗಳನ್ನು ಎಲ್ಲರಿಗೆ ಪರಿಚಯಿಸಿದ್ದಾರೆ. ಹೊಸ ಲೇಖಕರನ್ನು ಉತ್ತೇಜಿಸುವ, ಹೊಸ ಪ್ರಯೋಗಗಳನ್ನು ಸ್ವಾಗತಿಸುವ ಇವರ ಉತ್ಸಾಹಕ್ಕೆ ನಾವು ಆಭಾರಿ.
ಪ್ರತಿಯೊಂದು ಸಂಚಿಕೆಗೂ ಅದರದ್ದೇ ಒಂದು ಸುಂದರ ಮುಖಪುಟ, ಅದಕ್ಕೆ ಬಲನೀಡುವ ಛಾಯಾಚಿತ್ರಗಳು, ಆ ಛಾಯಚಿತ್ರಗಳಿಗೆ ಡಿಜಿಟಲ್ ತಂತ್ರಜ್ಞಾನದಲ್ಲೊಂದಿಷ್ಟು ಚಮತ್ಕಾರದ ಮಂತ್ರ. ಇವೆಲ್ಲ ಅರಿವಿನ ಅಲೆಗಳ ಮೂಲ ಉದ್ದೇಶವನ್ನು ಸುಲಭವಾಗಿ ಚಿತ್ರದ ಮೂಲಕ ತಿಳಿಸಲು ಸಾಧ್ಯವಾಗಿಸಿವೆ. ಪವಿತ್ರ ತೆಗೆದ ಚಿತ್ರಗಳಿಗೆ ಮೂರ್ತರೂಪ ಕೊಟ್ಟಿರುವ ಮಂಸೋರೆಯ ಕೈಚಳಕ ಈಗಾಗಲೇ ನಿಮ್ಮ ಮುಂದಿದೆ.
ಇವರಿಬ್ಬರ ಕೊಡುಗೆ ಓದುಗರಿಗೂ ಮೆಚ್ಚುಗೆ ಆಗುತ್ತದೆ ಎಂದು ನಂಬುತ್ತೇವೆ. ಜೊತೆಗೆ ಸಂಚಿಕೆಯ ಎಲ್ಲ ಲೇಖನಗಳನ್ನು ಮತ್ತೆ ಮತ್ತೆ ತಿದ್ದಿ ತೀಡಿದ್ದು ಪವಿತ್ರ. ತಪ್ಪುಗಳೇನಾದರೂ ನುಸುಳಿದ್ದಲ್ಲಿ, ಅವುಗಳನ್ನು ಮತ್ತೆ ಕಂಡು ಹಿಡಿಯುವ ನಿಮ್ಮ ತಾಳ್ಮೆಗೆ ಧನ್ಯವಾದ.
ಇದೇ ಸಂದರ್ಭದಲ್ಲಿ, ಅರಿವಿನ ಅಲೆಗಳನ್ನು ಮೊಬೈಲ್ ಮತ್ತು ಟ್ಯಾಬ್ಲೆಟ್ಗಳಲ್ಲಿ ಕೂಡ ಓದಲು ಸುಲಭವಾಗುವಂತೆ ಆಂಡ್ರಾಯ್ಡ್ ನಲ್ಲಿ ಲಭ್ಯವಾಗಿಸುವ ಕೆಲಸ ನಡೆದಿದೆ. ೨೦೧೨ರ ಸಂಚಿಕೆ ಈಗಾಗಲೇ ಗೂಗಲ್ ಪ್ಲೇನಲ್ಲಿ ಲಭ್ಯವಿದ್ದು, ೨೦೧೨ರ ಈ ಹೊಸ ಆವೃತ್ತಿ ಕೂಡ ನಿಮ್ಮ ಆಂಡ್ರಾಯ್ಡ್ ಫೋನ್ ಹೊಕ್ಕಲು ಇನ್ನು ಹೆಚ್ಚು ಸಮಯ ಬೇಕಿಲ್ಲ ಎಂದು ತಿಳಿಸಲು ಹರ್ಷಿಸುತ್ತೇವೆ.
ಕಳೆದ ವರ್ಷದ ಲೇಖನಗಳ ಜೊತೆಗೆ, ಈ ವರ್ಷದ ಲೇಖನಗಳನ್ನು ಪ್ರಕಟವಾದ ತಕ್ಷಣ ಓದಿ, ಇತರರೊಡನೆ ಹಂಚಿಕೊಳ್ಳುತ್ತಾ, ಪ್ರತಿಕ್ರಿಯೆಗಳನ್ನು ನೀಡಿದ ಎಲ್ಲ ಓದುಗರಿಗೆ ನಮ್ಮ ತಂಡ ಧನ್ಯವಾದಗಳು. ಓದುಗರು, ಬರೀ ಓದುಗರಾಗದೆ ಮುಂದಿನ ದಿನಗಳಲ್ಲಿ ಅರಿವಿನ ಅಲೆಗಳ ಹರಿವಿಗೆ ತಮ್ಮ ಕೊಡುಗೆಯನ್ನೂ ನೀಡಬೇಕೆಂದು ಕೋರುತ್ತೇವೆ.
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ‘ಗಳ ಮೂಲಕ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ, ಅಧ್ಯಯನ, ಅಭಿವೃದ್ಧಿಯ ಪಥದಲ್ಲಿ ಮುಂದುವರೆಯಲು ಪ್ರೇರೇಪಿಸುವ ಸಮುದಾಯದ ಎಲ್ಲರಿಗೂ ಈ ವರ್ಷದ ಈ ಸಂಚಿಕೆ ಸಮರ್ಪಿತ.
ಎಂದಿನಂತೆ ಅರಿವಿನ ಅಲೆಗಳು ಕ್ರಿಯೇಟೀವ್ ಕಾಮನ್ಸ್ ನಡಿಯಲ್ಲಿ ಮುಕ್ತವಾಗಿ ಹಂಚಿಕೆಗೆ ಲಭ್ಯವಿದೆ. ನಮ್ಮ ತಂಡದ ಕಾರ್ಯಗಳೊಂದಿಗೆ ಕೈ ಜೋಡಿಸಲು ನಮಗೊಂದು ಮಿಂಚಂಚೆ ಕಳಿಸಲು ಮರೆಯಬೇಡಿ.
ಓಂಶಿವಪ್ರಕಾಶ್ ಎಚ್.ಎಲ್
ಅರಿವಿನ ಅಲೆಗಳು ತಂಡ – “ಸಂಚಯ”
ಮುನ್ನುಡಿ
ನಾಡಿನ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ತಂತ್ರಜ್ಞಾನ ಕುರಿತ ಲೇಖನಗಳನ್ನು ಆಗಾಗ ಬರೆಯುತ್ತಿದ್ದೆ. ಅವುಗಳ ಪೈಕಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳೂ ಇದ್ದವು. ಈ ಕುರಿತು ನನ್ನೊಂದಿಗೆ ಒಮ್ಮೆ ವ್ಯಂಗ್ಯವಾಗಿ ಮಾತಾಡಿದ ಖ್ಯಾತ ಪತ್ರಕರ್ತರೊಬ್ಬರು, ಆರೋಗ್ಯ ವಿಷಯ ಬರೆಯೋದಕ್ಕೆ ನೀವೇನು ಡಾಕ್ಟರಾ? ಎಂದಿದ್ದರು.
ಬಾಹ್ಯಾಕಾಶದ ಬಗ್ಗೆ ನೀವು ಬರೆದಿದ್ದೀರಲ್ಲ, ನೀವೇನು ಅಲ್ಲಿಗೆ ಹೋಗಿದ್ದಿರಾ? ಎಂದು ನಾನು ಮರುಪ್ರಶ್ನಿಸಿದ್ದೆ.
ನನ್ನ ಈ ಮರು ಸವಾಲು ಆ ಪತ್ರಿಕೆಯಲ್ಲಿ ನಾನು ಬರೆಯಬಹುದಾಗಿದ್ದ ಹಲವಾರು ಅವಕಾಶಗಳನ್ನು ಕಸಿದುಕೊಂಡಿತಾದರೂ, ತಕ್ಕ ಉತ್ತರ ಕೊಟ್ಟ ತೃಪ್ತಿ ಈಗಲೂ ನನ್ನಲ್ಲಿದೆ.
‘ಅರಿವಿನ ಅಲೆಗಳು’ ಪುಸ್ತಕ ಓದುತ್ತಿದ್ದಾಗ, ನನ್ನಂತೆ ಯೋಚಿಸಿರುವ ಹಲವಾರು ಜನರನ್ನು ಇಲ್ಲಿ ಒಟ್ಟೊಟ್ಟಿಗೇ ನೋಡಿ, ಓದಿ ಸಂತಸವಾಯಿತು. ಏಕೆಂದರೆ, ಸಮುದಾಯದ ಅಭಿವೃದ್ಧಿಗಾಗಿರುವ ಪ್ರತಿಯೊಂದರ ಬಳಕೆ, ಅಭಿವೃದ್ಧಿ ಮತ್ತು ಹಂಚಿಕೆ ಮುಕ್ತವಾಗಿರಬೇಕೆಂಬ ಪರಿಕಲ್ಪನೆ ಇಲ್ಲಿದೆ. ವೈದ್ಯಕೀಯದ ಬಗ್ಗೆ ವೈದ್ಯನೊಬ್ಬ ಮಾತ್ರ ಬರೆಯಬೇಕು, ತಂತ್ರಜ್ಞಾನದ ಕುರಿತು ತಾಂತ್ರಿಕ ವಿದ್ಯಾರ್ಥಿ, ಕೃಷಿಯ ಬಗ್ಗೆ ರೈತ ಎಂಬೆಲ್ಲ ಧೋರಣೆಗಳು ಪುರೋಹಿತಶಾಹಿ ಯೋಚನೆಯ ಸಂಕೇತವಾಗುತ್ತವೆ. ಅಂಥ ಯೋಚನಾಧಾಟಿಯನ್ನು ಮೀರಿನಿಂತ ಈ ಲೇಖನಗಳು ವಿಷಯವೊಂದನ್ನು ಸರಳವಾಗಿ ತಿಳಿಸುವ ಮತ್ತು ಓದುವ ಖುಷಿ ನೀಡುತ್ತವೆ.
ಪಪ್ಪಿ ಲಿನಕ್ಸ್ ಕುರಿತು ಬರೆದ ಪ್ರಶಾಂತ್ ಜ.ಚಿ; ಹಿತ್ತಲಗಿಡದ ಮಹತ್ವ ಬರೆದ ಲಾವಣ್ಯ; ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ತಿಳಿಸಿರುವ ಮೊದ್ಮಣಿ ಮಂಜುನಾಥ್; ಬ್ಲಾಗಿನ ಬಾಗಿಲು ತೆರೆದ ಸುಹಾಸ್; ಹಾವುರಾಣಿಯ ಅನಿಲ್ ರಮೇಶ್; ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ ಬರೆದ ಮಂಸೋರೆ, ವಿಕಿಪೀಡಿಯ ಕುರಿತು ಬರೆದಿರುವ ಹರೀಶ್, ಎಚ್.ಟಿ.ಎಂ.ಎಲ್.ನ ಸುನೀಲ್ ಜಯಪ್ರಕಾಶ್, ಹ್ಯಾಕಿಂಗ್ ಮಾಡಿರುವ ಶ್ರೀಧರ ಟಿ.ಎಸ್. ಮತ್ತು ಕಲಿಕೆ ಮತ್ತು ಫಾಸ್ ಕುರಿತು ಬರೆದಿರುವ ಶಂಕರ ಪ್ರಸಾದ್ ನನಗೆ ಗೊತ್ತಿರುವಂತೆ ಮೂಲತಃ ಬರಹಗಾರರಲ್ಲ. ತಮ್ಮ ಮೆಚ್ಚಿನ ವಿಷಯಗಳ ಕುರಿತ ಅವರ ಆಸಕ್ತಿ ಮತ್ತು ತಿಳಿವಳಿಕೆ, ಅವರೊಳಗಿನ ಬರಹಗಾರನನ್ನು ಎಚ್ಚರಿಸಿದೆ. ಅದರ ಫಲ ನಿಮ್ಮ ಮುಂದಿದೆ. ಅದರಲ್ಲೂ ಶ್ರೀಧರ್ ಟಿ.ಎಸ್. ಅವರ ಸಾಧನೆ ಮನತಟ್ಟುತ್ತದೆ. ಬಾಹ್ಯ ದೃಷ್ಟಿ ಇಲ್ಲದಿದ್ದರೂ ಅವರ ಆಸಕ್ತಿ ನಮ್ಮ ಮನಸ್ಸುಗಳನ್ನು ಹ್ಯಾಕ್ ಮಾಡುತ್ತದೆ. ಅರಿವಿನ ಅಲೆಗಳು ಎಂಬ ಪದ ಬಳಕೆಯ ಜೀವಂತ ಮಾದರಿಯಂತಿದ್ದಾರೆ ಶ್ರೀಧರ್.
ಉತ್ತಮವಾಗಿದ್ದೆಲ್ಲ ಮುಕ್ತವಾಗಿರಲಿ, ಮೆಚ್ಚುವಂತಿರಲಿ ಎಂಬ ಆಶಯದೊಂದಿಗೆ ಅರಿವಿನ ಅಲೆಗಳು ದೂರದ ತೀರಗಳನ್ನೂ ನಿರಂತರವಾಗಿ ತಾಕುವಂತಾಗಲಿ. ಸಂಚಯ ತಂಡದ ಶ್ರಮ ಮತ್ತು ಆಸಕ್ತಿ ಹೊಸ ಅರಿವನ್ನು ಹುಟ್ಟುಹಾಕುವಂತಾಗಲಿ.
ಚಾಮರಾಜ ಸವಡಿ
ಹಿರಿಯ ಪತ್ರಕರ್ತರು
ಅರಿವಿನ ಅಲೆಗಳು – ೨೦೧೧
ಸಂಪಾದಕೀಯ
ಅರಿವಿನ ಅಲೆಗಳ ಲೇಖನಗಳನ್ನು ಒಟ್ಟುಗೂಡಿಸುವುದು, ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು ಒಟ್ಟಾಗಿ ಒಂದು ಜವಾಬ್ದಾರಿ. ಸಾಮಾನ್ಯನೂ, ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು, ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ, ಅನುಸ್ಥಾಪನೆ, ಸಂಶೋದನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಅವರ ಬಿಡುವಿನ, ಕೆಲವೊಮ್ಮೆ ಕೆಲಸದ ನಡುವಿನ ಕೆಲಕ್ಷಣಗಳಲ್ಲಿ ಪದಗಳ ಹರಿವಿಗೆ ಹಿಡಿದು ಅಲೆಗಳಾಗಿ ಪರಿವರ್ತಿಸುವ ಸಂಪಾದನೆಯ ಕಾರ್ಯ ಸುಲಲಿತವಾಗಿ ೧೪ ದಿನಗಳೂ ನೆಡೆಯಿತು. ಎಲ್ಲರಿಗೂ ಒಂದು ತಿಂಗಳ ಗಡುವು ಕೊಟ್ಟು, ಬರೆಯಲೇ ಬೇಕು, ಇತರರೊಡನೆ ವಿಷಯ ಹಂಚಿಕೊಳ್ಳಬೇಕು ಎನ್ನುವವರಿಗೆ ಒಂದು ವೇದಿಕೆ ಸೃಷ್ಟಿಸಿ ಅಲೆಗಳ ಆಗಮನಕ್ಕೆ ಕಾಯ್ದ ದಿನಗಳ ನೆನಪು ಇನ್ನೂ ಹಸಿರಾಗಿದೆ. ನಂತರ ದಿನ ದಿನಕ್ಕೂ ಬೇಕಾದ ಲೇಖನಗಳನ್ನು ಓದಿ, ಪರಿಷ್ಕರಿಸಿ, ಮತೊಮ್ಮೆ ಲೇಖಕರಿಂದಲೇ ಕೆಲವನ್ನು ತಿದ್ದಿಸಿ, ನಿಮ್ಮ ಮುಂದಿಟ್ಟದ್ದು, ಇಡೀ ತಂಡವೇ ತಮ್ಮನ್ನು ತಾವು ಸಂಪಾದಕೀಯದಲ್ಲಿ ತೊಡಗಿಸಿಕೊಂಡದ್ದು ವಿಶೇಷ. ಅದಕ್ಕೆಲ್ಲದಕ್ಕಿಂತಲೂ, ಸ್ನೇಹಿತರು ಬರೆದ ಲೇಖನಗಳು ಮತ್ತಷ್ಟು ಸ್ನೇಹಿತರಿಗೆ ಬರೆಯಲು ಪ್ರೋತ್ಸಾಹಿಸಿದವು. ಎಲ್ಲ ಲೇಖಕ/ಲೇಖಕಿಯರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಕೆಲಸದಲ್ಲಿ ತಂಡದೊಂದಿಗೆ ಕೈಸೇರಿಸಿದ್ದು ಗಮನಕ್ಕೆ ಬಂದ ಅಂಶ. ಎಲ್ಲರಿಗೂ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಬಗೆಗಿನ ಲೇಖನಗಳನ್ನು ಬರೆಯಲು, ಇತರರೊಡನೆ ನಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಳ್ಳಲು ಯಾವಾಗಲೂ ನಮ್ಮನ್ನು ಹುರಿದುಂಬಿಸಿ, ತಿದ್ದಿದವರು ಹಿರಿಯ ಪತ್ರಕರ್ತ ಎನ್. ಎ. ಎಮ್ ಇಸ್ಮಾಯಿಲ್. ತಂತ್ರಜ್ಞಾನದ ಆಳಕ್ಕೆ ಇಳಿದು, ತಂತ್ರಜ್ಞರಂತೆಯೇ ತಮ್ಮ ಕಾರ್ಯಗಳಲ್ಲೂ ಪ್ರಾಯೋಗಿಕವಾಗಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಸುಲಲಿತವಾಗಿ ಬಳಸಿಕೊಳ್ಳುವ ಇವರು ಅರಿವಿನ ಅಲೆಗಳ, ಸ್ವಾತಂತ್ರ್ಯದ ಬೇಕು, ಬೇಡಗಳ ಎಳೆಗಳನ್ನು ಸಾಂದರ್ಭಿಕ ಮುನ್ನುಡಿಯನ್ನು ಬರೆಯುವ ಮೂಲಕ ಮತ್ತೊಮ್ಮೆ ಯುವ ಪೀಳಿಗೆಗೆ ನಮ್ಮ ಜವಾಬ್ದಾರಿಯನ್ನು ನೆನಪಿಸಿದ್ದಾರೆ. ಅವರಿಗೆ ನಮ್ಮೆಲ್ಲರ ನಮನಗಳು. ಅರಿವಿನ ಅಲೆಗಳ ಮೂಲ ಸ್ಪ್ರೂರ್ತಿ ಪಡೆದದ್ದು, ಅದರ ಸರಳ ಸುಂದರ ನಿಲುವು ಅಂತರ್ಜಾಲ ಪುಟಗಳ ರೂಪ ವಿನ್ಯಾಸದಲ್ಲಿಯೂ ನಿರೂಪಣೆಗೊಂಡದ್ದು ಅರವಿಂದನಿಂದ. ಅಲೆಗಳಿಗೆ ಅರಿವಿನ ಮೊದಲನೆ ಹೆಸರು ಹೊಳೆದದ್ದು ಪವಿತ್ರಳಿಗಾದರೆ, ಬೆಂಬಲಕ್ಕೆ ರವಿ ಜೊತೆಗಿದ್ದರು. ನಂತರದ ಫಲಿತಾಂಶ ನಿಮ್ಮ ಮುಂದಿದೆ.
ಇ-ಪುಸ್ತಕಕ್ಕೆ ಸುಂದರ ಮುಖಪುಟದ ವಿನ್ಯಾಸ ಮಾಡಿದ್ದು ಮಂಸೋರೆ. ಅರಿವಿನ ಅಲೆಯ ಲೋಗೊದ ವಿನ್ಯಾಸಕ್ಕೆ ಸಹಾಯ ಮಾಡಿದ ಸಿಜು. ಮುಖಪುಟದ ಛಾಯಾಚಿತ್ರ ಪವಿತ್ರ ಕ್ಯಾಮೆರಾದಿಂದ ಹೊರ ಬಂದಿದ್ದು. ನಿಮ್ಮೆಲ್ಲರ ಕ್ರಿಯಾಶೀಲತೆಗೆ ನಮ್ಮೆಲ್ಲರ ಮೆಚ್ಚುಗೆಗಳು.
ಬರೆದ ಪುಟಗಳಿಗೆ, ಫೇಸ್‌ಬುಕ್, ಟ್ವಿಟರ್, ಬ್ಲಾಗ್, ಬಝ್, ಫ್ಲಸ್ ಹೀಗೆ ಹತ್ತಾರು ಸಮುದಾಯ ತಾಣಗಳಲ್ಲಿನ ಓದುಗರ ಪ್ರತಿಕ್ರಿಯೆ, ನಾವು ಬರೆದದ್ದು ಯಾರಿಗಾದರೂ ತಲುಪಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡಿತು. ಓದುಗರಿಗೆಲ್ಲರಿಗೂ ಅರಿವಿನ ಅಲೆಗಳು ಸ್ವಾತಂತ್ರ್ಯದ ಸವಿಯನ್ನು ಒದಗಿಸಿದೆ ಎಂಬ ತೃಪ್ತಿ ನೀಡಿದ ನಿಮಗೆ ನಮ್ಮ ವಂದನೆಗಳು.
ಜೊತೆಗೆ ಲೇಖನಗಳು ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಎಲ್ಲರಿಗೂ ಮುಕ್ತವಾಗಿ ಹಂಚಿಕೆಯಾಗಲಿದೆ. ಯಾವುದೇ ಬದಲಾವಣೆಯಿಲ್ಲದೆ, ವಾಣಿಜ್ಯ ಉದ್ದೇಶ ರಹಿತ ಬಳಕೆಗೆ, ೨೦೧೧ರ ಸ್ವಾತಂತ್ರ ದಿನಾಚರಣೆಯಂದು ‘ಅರಿವಿನ ಅಲೆಗಳು’ ಲೇಖನಗಳನ್ನು ಇ-ಪುಸ್ತಕ ರೂಪದಲ್ಲಿ ನಿಮ್ಮ ಮುಂದಿಡಲು ‘ಸಂಚಯ’ ತಂಡ ಸಂತಸ ಪಡುತ್ತದೆ. ಇ-ಪುಸ್ತಕದ ಅಲೆಗಳ ಜ್ಞಾನದ ಹರಿವನ್ನು ಮತ್ತಷ್ಟು ಕನ್ನಡಿಗರಿಗೆ ನಾವೆಲ್ಲರೂ ಸೇರಿ ತಲುಪಿಸೋಣ. ಕನ್ನಡದ ಭಾಷೆ, ತಂತ್ರಜ್ಞಾನ, ಸಂಸ್ಕೃತಿಯ ವಿಸ್ತರಣೆಗೆ ಕಂಕಣ ಬದ್ದರಾಗೋಣ.
ನಿಮಗೆ ನಮ್ಮ ಕೆಲಸ ಹಿಡಿಸಿದ್ದಲ್ಲಿ, ನಮ್ಮೊಡನೆ ಕೈ-ಜೋಡಿಸಲು ಇಚ್ಚಿಸಿದ್ದಲ್ಲಿ ಸಣ್ಣದೊಂದು ಮಿಂಚಂಚೆ ನಮಗೆ ತಲುಪಿಸಲು ಮರೆಯಬೇಡಿ.
ಓಂಶಿವಪ್ರಕಾಶ್ ಎಚ್.ಎಲ್
ಸಂಪಾದಕರು
ಅರಿವಿನ ಅಲೆಗಳು ತಂಡ
ಸಂಚಯ – ಮುಕ್ತ ಕನ್ನಡ ತಂತ್ರಾಂಶಗಳಿಗೊಂದು ತಾಣ
ಮುನ್ನುಡಿ
ಯಾವುದೂ ಇಲ್ಲದಿರುವಾಗಲೂ ಎಲ್ಲವೂ ಸರಿಯಾಗಿರುವುದು
ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ತಮ್ಮದೊಂದು ಭಾಷಣದಲ್ಲಿ ಮಹಾಭಾರತದ ಪ್ರಸಂಗವೊಂದನ್ನು ಉಲ್ಲೇಖಿಸಿದ್ದರು. ಮಹಾಭಾರತದ ಯಾವ ಭಾಗದಲ್ಲಿ ಈ ಪ್ರಸಂಗವಿದೆ ಎಂಬುದು ನನಗೀಗ ನೆನಪಿಲ್ಲ. ತೋಳ್ಪಾಡಿಯವರ ಮಾತುಗಳ ಒಟ್ಟು ಸಾರಾಂಶ ಹೀಗಿತ್ತು. ಧರ್ಮವೆಂದರೆ ಏನು ಎಂಬುದಕ್ಕೆ ಉತ್ತರಿಸುತ್ತಾ ಹೋಗುವ ಧರ್ಮರಾಯ ತನ್ನ ಕಾಲದಲ್ಲಿದ್ದ ನೀತಿ, ನಿಯಮಗಳನ್ನೆಲ್ಲಾ ಉಲ್ಲೇಖಿಸಿ ಇದರಂತೆ ನಡೆಯುವುದು ಧರ್ಮ ಎನ್ನುತ್ತಾನೆ. ಆದರೆ ಅವನು ತನ್ನ ಮಾತನ್ನು ಅಷ್ಟಕ್ಕೇ ನಿಲ್ಲಿಸಿದರೆ ಈ ನೀತಿ, ನಿಯಮಗಳ ಅಗತ್ಯವೇ ಇಲ್ಲದಿದ್ದ ಕಾಲವನ್ನು ನೆನಪಿಸಿಕೊಂಡು ಆ ಸ್ಥಿತಿಯನ್ನು ನಿಜವಾದ ಧರ್ಮ ಎನ್ನುತ್ತಾನೆ.
ವಿಧಿ-ನಿಷೇಧಗಳು, ನೀತಿ-ನಿಯಮಗಳನ್ನು ರೂಪಿಸಿ ಒಂದು ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವ ಕ್ರಿಯೆಯನ್ನು ನಾವು ಆಧುನಿಕ ಎಂದು ಭಾವಿಸಿದ್ದೇವೆ. ವಾಸ್ತವದಲ್ಲಿ ಇದೊಂದು ದೌರ್ಬಲ್ಯ. ವಿವೇಕವುಳ್ಳ ಮನುಷ್ಯ ಸಹಜವಾಗಿ-ಮನುಷ್ಯ ಸಹಜವಾಗಿ- ಬದುಕಿಬಿಟ್ಟರೆ ಯಾವ ನೀತಿ, ನಿಯಮ, ವಿಧಿ, ನಿಷೇಧಗಳ ಅಗತ್ಯವಿರುವುದಿಲ್ಲ. ಮಾನವನ ‘ಸಹಜ’ ಗುಣ ಮರೆಯಾಗುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಬದುಕಿಗೆ ನೀತಿ, ನಿಯಮ, ವಿಧಿ, ನಿಷೇಧಗಳೆಲ್ಲಾ ಅಗತ್ಯವಾಗಿಬಿಡುತ್ತವೆ. ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಯ ನಿಜವಾದ ಅರ್ಥ ‘ಹೀಗೆಯೇ ಇರಬೇಕು’ ಎಂಬ ನಿಯಮಗಳಿಲ್ಲದ ಸಂದರ್ಭದಲ್ಲಿಯೂ ಎಲ್ಲವೂ ಸರಿಯಾಗಿರುವುದು. ಹೀಗೆ ಹೇಳಿದ ಕ್ಷಣವೇ ಇದೆಲ್ಲಾ ಅತಿ ಆದರ್ಶದ ಮಾತುಗಳು ಎಂಬ ಟೀಕೆ ಕೇಳಿಬರುತ್ತದೆ. ಇದೇ ಟೀಕೆಯನ್ನು ಸ್ವಲ್ಪ ಮೃದುಗೊಳಿಸಿ ಇನ್ನು ಕೆಲವರು ‘ಇದು ಪ್ರಾಯೋಗಿಕವಲ್ಲ’ ಎನ್ನುತ್ತಾರೆ. ಒಂದು ಬಗೆಯಲ್ಲಿ ಗಾಂಧೀ ಆರ್ಥಿಕತೆಯನ್ನು ಯಾವತ್ತೂ ಪ್ರಯೋಗಿಸದೆ ಅದು ಪ್ರಾಯೋಗಿಕವಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಭಾರತೀಯ ನೀತಿ ನಿರೂಪಕ ನಿಲುವು. ಅಥವಾ ವಿಧಿ-ನಿಷೇಧಗಳು, ನೀತಿ-ನಿಯಮಗಳೊಳಗೇ ಬದುಕುವುದು ಅಭ್ಯಾಸವಾಗಿ ಅದಿಲ್ಲದೆ ಬದುಕಿಲ್ಲ ಎಂಬ ಬಾವಿಯ ಕಪ್ಪೆಯಂಥ ಮನಸ್ಥಿತಿ.
ಸ್ವಾತಂತ್ರ್ಯದ ಮುಂಜಾವಿನಲ್ಲಿ ಹೊರಬರುತ್ತಿರುವ ಈ ಕೃತಿಯ ಬರೆಹಗಳೆಲ್ಲವೂ ತಂತ್ರಜ್ಞಾನದ ಸಂದರ್ಭದಲ್ಲಿ ಸ್ವಾತಂತ್ರ್ಯದ ಸ್ವರೂಪವನ್ನು ನಿರ್ವಚಿಸಿ ಅದರ ಪ್ರಾಯೋಗಿಕತೆಯನ್ನೂ ವಿವರಿಸುತ್ತಿವೆ. ಸ್ವಾತಂತ್ರ್ಯ ದಿನವನ್ನು ಮುಂದಿಟ್ಟುಕೊಂಡು ಹದಿನಾಲ್ಕು ದಿನಗಳ ಕಾಲ ಹದಿನಾಲ್ಕು ಮಂದಿ ಗೆಳೆಯರು ಮಾಡಿರುವ ಈ ಪ್ರಯತ್ನ ಹಲವು ಕಾರಣಕ್ಕೆ ವಿಶಿಷ್ಟ. ಬಹುಶಃ ಕನ್ನಡದಲ್ಲಿ ನಡೆಯುತ್ತಿರುವ ಈ ಬಗೆಯ ಮೊದಲ ಪ್ರಯೋಗ. ಹಾಗೆಯೇ ಈಗ ನಿಮ್ಮ ಕೈಯಲ್ಲಿರುವುದು ಪ್ರಾಯಶಃ ಕನ್ನಡದ ಮೊದಲ ಇ-ಪುಸ್ತಕ. ಇದಕ್ಕೂ ಮೊದಲು ಕನ್ನಡದಲ್ಲಿ ಇ-ಪುಸ್ತಕ ಇತ್ತು. ಆದರೆ ಅದು ನಿಜ ಅರ್ಥದ ಇ-ಪುಸ್ತಕವಾಗಿರಲಿಲ್ಲ. ಮುದ್ರಿತ ಪುಸ್ತಕವೊಂದರ ಪಿಡಿಎಫ್ ಆವೃತ್ತಿಯಷ್ಟೇ ಆಗಿತ್ತು. ಅದು ‘ಇ-ಪಠ್ಯ’ವಾಗಿರಲಿಲ್ಲ. ಈ ಕಾರಣದಿಂದ ‘ಅರಿವಿನ ಅಲೆಗಳು’ ಕನ್ನಡದ ಮೊದಲ ಇ-ಪಠ್ಯವಿರುವ ಇ-ಪುಸ್ತಕವಾಗುತ್ತದೆ.
ಅಲೆಗಳು ನಿಯತವಾಗಿ ಒಂದರ ಹಿಂದೊಂದರಂತೆ ದಡದತ್ತ ಧಾವಿಸುತ್ತವೆ. ಅರವಿಂದ, ಶಿವು, ಪವಿತ್ರ ಮತ್ತು ರವಿ ಈ ಅಲೆಗಳನ್ನು ಇನಿಷಿಯೇಟ್ ಮಾಡಲು ಅಗತ್ಯವಿರುವ ಮೂಲಸೌಕರ್ಯವನ್ನು ಸ್ಥಾಪಿಸಿ ಮೊದಲ ಅಲೆಗಳನ್ನು ಸೃಷ್ಟಿಸಿದರೆ ಉಳಿದವರು ಅಲೆಗಳ ವಿಸ್ತಾರವನ್ನು ಹೆಚ್ಚಿಸಿದ್ದಾರೆ. ಈ ಬರೆಹವನ್ನು ನೀವು ಓದುತ್ತಿದ್ದೀರಿ ಎಂದಾದರೆ ಅಲೆ ದಡ ಸೇರುವ ಕ್ರಿಯೆಯೂ ಆರಂಭಗೊಂಡಿದೆ ಎಂದರ್ಥ. ಈ ಅರಿವಿನ ಅಲೆಗಳನ್ನು ಸೃಷ್ಟಿಸಿರುವವರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರ್ಥ. ಅಲೆಗಳು ದಡ ಸೇರುವ ಕ್ರಿಯೆಗೊಂದು ನಿಯತತೆ ಇದೆ. ಅಲೆ ಅಪ್ಪಳಿಸುವುದಕ್ಕಾಗಿ, ಅಲೆ ಬಂದು ನೇವರಿಸುವುದಕ್ಕಾಗಿ ಕಾಯುತ್ತಿರುವ ಅಂಚು ಜ್ಞಾನ ಸಮುದ್ರದ ಆಳದಲ್ಲಿರುವ ರಹಸ್ಯಗಳಿಗಾಗಿ ಕಾಯುತ್ತಿರುತ್ತದೆ. ಅಂಚಿನ ಕಾಯುವಿಕೆಯನ್ನು ಅಸಹನೀಯಗೊಳಿಸದೆ ಅಲೆಗಳ ವೇಗವನ್ನು ವರ್ಧಿಸುವ ಜವಾಬ್ದಾರಿಯನ್ನು ಅರಿವಿನ ಅಲೆಗಳ ಗೆಳೆಯರು ತಾವೇ ತಾವಾಗಿ ತೆಗೆದುಕೊಂಡಿದ್ದಾರೆ. ಸ್ವಾತಂತ್ರ್ಯ ಈ ಮುಂಜಾವಿನಲ್ಲಿ ನನ್ನನ್ನು ಬರೆಯಲು ಹಚ್ಚಿದ ಈ ಗೆಳೆಯರು ತಮ್ಮ ಮುಂದಿನ ಬರಹಗಳಿಗಾಗಿ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆಯ ತನಕ ಕಾಯಿಸುವುದಿಲ್ಲ ಎಂಬ ಭರವಸೆ ನನ್ನದು.
ಹಿರಿಯ ಪತ್ರಕರ್ತರು
ಅರಿವಿನ ಅಲೆಗಳು ಬಳಗ:
ಹಳ್ಳಿಮನೆ ಅರವಿಂದ
ಊರು ಉತ್ತಮೇಶ್ವರ,ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ನಮ್ಮ ಮನೆಯ ಹೆಸರು ಹಳ್ಳಿಮನೆ, ಹಾಗಾಗಿ ಗೆಳೆಯರು ಹಳ್ಳಿಮನೆ ಅರವಿಂದ ಅಂತಲೂ ಕರೆಯುವುದು ಉಂಟು.
ಬೆಂಗಳೂರಿನಲ್ಲೊಂದು ಕಂಪನಿಯಲ್ಲಿ ತಂತ್ರಾಂಶ ತಂತ್ರಜ್ಞ. ಚಾರಣಗಳು, ಛಾಯಾಗ್ರಹಣ ಮತ್ತು ಮುಕ್ತ ತಂತ್ರಾಂಶಗಳಲ್ಲಿ ಒಲವು. ತಂತ್ರಜ್ಞಾನದ ಬಗ್ಗೆ ಹೊಸತಾಗಿ ತಿಳಿಯುವುದೆಂದರೆ ಎಲ್ಲಿಲ್ಲದ ಉತ್ಸಾಹ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಇನ್ನೂ ತೀರದ ಆಸೆ 🙂
Web | Hosabelaku | Twitter
ಓಂಶಿವಪ್ರಕಾಶ್ ಎಚ್.ಎಲ್
ಹವ್ಯಾಸ, ಕೆಲಸ ಎರಡೂ ನನ್ನ ನೆಚ್ಚಿನ ತಂತ್ರಜ್ಞಾನವೇ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಳಕೆ, ಭೋದನೆ, ಅಳವಡಿಕೆ, ಅಭಿವೃದ್ದಿ ಖುಷಿ ಕೊಡುವ ಕೆಲಸಗಳು. ಮೂಲತ: ಬೆಂಗಳೂರಿನವನೇ ಆದ ನಾನು ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದು, ನನ್ನ ಅರಿವಿನ ಒಂದಷ್ಟು ಭಾಗವನ್ನು ಕನ್ನಡಿಗರೊಂದಿಗೆಲಿನಕ್ಸಾಯಣದ ಮೂಲಕ ಹಂಚಿಕೊಳ್ಳುತ್ತೇನೆ. ಕನ್ನಡದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ದಿಗೆ ಮತ್ತು ಅವುಗಳ ಬಗೆಗಿನ ಬರಹದೆಡೆಗೆ ವಿಷೇಶ ಆಸಕ್ತಿ. ವಿರಾಮದ ವೇಳೆ ಕ್ಯಾಮೆರಾ, ಸೈಕಲ್, ಪ್ರವಾಸ, ಜೊತೆಗೆ ಒಂದಿಷ್ಟು ಸಾಲುಗಳನ್ನು ಹೆಣೆಯುವುದು ಇತ್ಯಾದಿ.. ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತೇನೆಂಬ ನಂಬಿಕೆಯಿಲ್ಲ, ಆದರೂ ಒಂದಿಷ್ಟು ಮಂದಿಗಾದರೂ ಒಳ್ಳೆಯ ಮಾಹಿತಿ ಒದಗಿಸಬಲ್ಲೆ ಎಂಬ ನಂಬಿಕೆಯಿದೆ.
ಪವಿತ್ರ. ಹೆಚ್
ಸಾಪ್ಟ್ವೇರ್ ಪ್ರಪಂಚದ ಮಾಹಿತಿ ಸುರಕ್ಷೆಯ ಬಗ್ಗೆ ರಿಸರ್ಚ್ ಸ್ಪೆಷಲಿಸ್ಟ್ ಆಗಿರುವ ಪವಿತ್ರ, ಪರಿಸರ ಪ್ರೇಮಿ. ಇವರು ಮಂಡ್ಯ ಜಿಲ್ಲೆಯ, ಮಳವಳ್ಳಿ ಎಂಬ ಹಳ್ಳಿಯಿಂದ ಬಂದವರು, ಬಿ.ಇ. ಕಂಪ್ಯೂಟರ್ ಸೈನ್ಸ್ ಪದವೀಧರೆ ಹಾಗೂ ಬಿಟ್ಸ್ ಪಿಲಾನಿ ಎಂ.ಎಸ್. ಸ್ನಾತಕೋತ್ತರ ಪದವಿಧರೆ. ಜೊತೆಗೆ ವೈದ್ಯಕೀಯ ನ್ಯಾಯಶಾಸ್ತ್ರ (Forensic Science)ದಲ್ಲಿ ಬಳಸುವ ಬರವಣಿಗೆಯ ವಿಶ್ಲೇಷಣೆಯಲ್ಲಿಯೂ (Handwriting Analyst) ಇವರು ಪದವಿಯನ್ನು ಹೊಂದಿದ್ದಾರೆ.
ಪ್ರಕೃತಿಯ ಸಹಜ ಸೌಂದರ್ಯವನ್ನು ಕ್ಯಾಮೆರಾದ ಕಣ್ಣಿನಿಂದ ಸೆರೆಹಿಡಿಯುತ್ತಿರುವ ಉದಯೋನ್ಮುಕ ಛಾಯಾಗ್ರಾಹಕಿ. ಕನ್ನಡ ಬ್ಲಾಗ್ ಲೋಕಕ್ಕೆ ಇಣುಕು ಹಾಕುತ್ತಾ, ಅಲ್ಲಲ್ಲಿ ಕಂಡು ಬರುವ ಪಕ್ಷಿ, ಹೂವು, ಸಸ್ಯಗಳ ಹೆಸರುಗಳನ್ನು ಇತರರಿಗೆ ತಿಳಿಸುತ್ತಾ, ಅನೇಕ ಕಡೆಗಳಲ್ಲಿ ಇಂಗ್ಲೀಷ್ ಹಾಗೂ ಕನ್ನಡ ಹೆಸರನ್ನೂ ಸೂಚಿಸುತ್ತ ತಮ್ಮ ಗೆಳೆಯರ ಬಳಗವನ್ನು ಚಕಿತಗೊಳಿಸುತ್ತಾರೆ.
ರವಿಶಂಕರ್ ಹರನಾಥ್
ಮೂಲತಃ ಬೆಂಗಳೂರಿನವ. ವಿದ್ಯಾಭ್ಯಾಸ ಬೆಂಗಳೂರು, ಮೈಸೂರುಗಳಲ್ಲಿ. ಯಾಂತ್ರಿಕ ಇಂಜಿನಿಯರಿಂಗ್‌ನಲ್ಲಿ ಪದವಿ. ಸದ್ಯಕ್ಕೆ, ಬೆಂಗಳೂರಿನಲ್ಲೇ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗ. ಸುಮಾರು ಹತ್ತುವರ್ಷಗಳ ಕೆಲಸ ಕಾರ್ಯಗಳಲ್ಲಿ, ಲಿನಕ್ಸ್ ದಿನನಿತ್ಯದ ಬಳಕೆಯ ವಸ್ತುವಾಗಿದೆ. ತಂತ್ರಜ್ಞಾನವನ್ನು ಹೊರತು ಪಡಿಸಿದರೆ, ಚಾರಣ, ಪ್ರವಾಸ ಹಾಗೂ ಚಿತ್ರ ಕಲೆಯಲ್ಲಿ ಆಸಕ್ತಿ. ಮುಕ್ತ ತಂತ್ರಾಂಶಗಳಲ್ಲಿ, ಕನ್ನಡ ಮಾಧ್ಯಮದ ಅಳವಡಿಕೆಯನ್ನು, ಬಳಕೆಯನ್ನು ಸುಧಾರಿಸುವುದರಲ್ಲಿ, ವಿಶೇಷ ಒಲವು.
ಆಶಯ
ಆಗಸ್ಟ್ ೧ ರಿಂದ ೧೪ ರವರೆಗೆ ದಿನವೂ ಒಂದೊಂದು ಹೊಸ ವಿಷಯಗಳು. ದಿನನಿತ್ಯ ಬಳಸುವ ಮುಕ್ತ ತಂತ್ರಾಂಶ/ತಂತ್ರಜ್ಞಾನಗಳ ಬಗ್ಗೆಯ ಲೇಖನಗಳು ೧೪ ಅಲೆಗಳ ರೂಪದಲ್ಲಿ ನಿಮಗೆಲ್ಲರಿಗೂ ಸಿಗಲಿದೆ. ಆಗಸ್ಟ್ ೧೫ ರಂದು ಎಲ್ಲಾ ಅಲೆಗಳನ್ನೂ ಒಂದೇ ಕಡೆ ಸೇರಿಸಿ e-ಪುಸ್ತಕ ಬಿಡುಗಡೆ ಮಾಡಲಾಗುವುದು.
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ದಿನನಿತ್ಯ ಬಳಸುತ್ತಿದ್ದು ಅದರ ಅನುಭವಗಳನ್ನು ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಅರಿವಿನ ಅಲೆಗಳನ್ನು ಪ್ರಾರಂಭಿಸಿದೆವು. ಅಂತರ್ಜಾಲದಲ್ಲಿ ತಂತ್ರಜ್ಞಾನದ ಲೇಖನಗಳು ಕನ್ನಡದಲ್ಲಿ ಇರುವುದು ಕಡಿಮೆ, ಬರೆಯಬೇಕೆಂದು ಬಹಳಷ್ಟು ಬಾರಿ ಅನಿಸಿದ್ದರೂ ಅದಕ್ಕೋಸ್ಕರ ಬಿಡುವು ಮಾಡಿಕೊಳ್ಳಲಾಗಿರಲಿಲ್ಲ. ಏನು ಬರೆಯುವುದು? ಯಾರು ಓದುತ್ತಾರೆ ಎಂಬ ನಮ್ಮೆಲ್ಲರ ಮನದಲ್ಲಿದ್ದ ಪ್ರಶ್ನೆಗೆ ಉತ್ತರ ಹುಡುಕಿ ಹೊರಟಾಗ ಈ ರೀತಿಯ ಸ್ವಾತಂತ್ರೋತ್ಸವದ ಯೋಚನೆ ಬಂತು. ಬರೆಯಬೇಕೆನಿಸಿದವರಿಗೆ ಕಾರಣವೂ ಸಿಕ್ಕಿತು, ಒಪ್ಪಿಕೊಂಡ ದಿನಕ್ಕೇ ಲೇಖನ ಮುಗಿಸ ಬೇಕಾದ್ದರಿಂದ ಬರೆಯಲು ತಡೆಯಾಗಿದ್ದ ಆಲಸ್ಯವೂ ಹೋಯಿತು.
ರವಿಶಂಕರ್ ಹರನಾಥ್, ಮೊದ್ಮಣಿ ಮಂಜುನಾಥ್, ವಿಜಯ್ ಕುಮಾರ್ ಎಂ, ಸುನಿಲ್ ಜಯಪ್ರಕಾಶ್, ಪವಿತ್ರ ಹೆಚ್, ಎಂ.ಕೆ. ರೇಖಾವಿಜೇಂದ್ರ, ಹಳ್ಳಿಮನೆ ಅರವಿಂದ, ಪ್ರಸನ್ನ ಎಸ್ ಪಿ, ಓಂಶಿವಪ್ರಕಾಶ್ ಎಚ್.ಎಲ್, ಶಂಕರ್ ಪ್ರಸಾದ್. ಎಮ್ ವಿ, ಹಂಸಾನಂದಿ, ಹರೀಶ್, ಶ್ರೀನಿವಾಸ್ ಪಿ ಎಸ್, ಹರ್ಷ ಪೆರ್ಲ
ಈ ಕಾರ್ಯಕ್ರಮ ಮಾಡಲು ಸ್ಪೂರ್ತಿ phpadvent.org ಎನ್ನುವ ವೆಬ್ ಸೈಟ್ ನಿಂದ. ಅವರು ಕ್ರಿಸ್ಮಸ್ ಆಚರಿಸುವ ಸಲುವಾಗಿ ಡಿಸೆಂಬರ್ ೧ ರಿಂದ ೨೪ ರವರೆಗೆ ಇದೇ ತರಹ PHP ಎಂಬ ತಂತ್ರಾಂಶದ ಬಗೆಗಿನ ಲೇಖನಗಳನ್ನು ಬರೆದು ಹಂಚಿಕೊಳ್ಳುತ್ತಾರೆ.
ನಮ್ಮ ಬಳಗಕ್ಕೆ ಏನಾದರೂ ಹೇಳುವುದಿದ್ದರೆ arivu AT sanchaya DOT net ಗೆ ಬರೆದು ಕಳಿಸಿ.
ಹಕ್ಕುಗಳು, ಹಂಚಿಕೆ
‘ಅರಿವಿನ ಅಲೆಗಳು’ – ಸಂಚಯ ತಂಡ ೨೦೧೧ರಲ್ಲಿ ಸ್ವಾತಂತ್ರೋತ್ಸವದ ವಿಶೇಷ ಆಚರಣೆಗಾಗಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಳಕೆದಾರರು, ತಂತ್ರಜ್ಞರು ಇತ್ಯಾದಿ ಸಮುದಾಯದ ಸದಸ್ಯರಿಂದ ಸಂಗ್ರಹಿಸಿದ ಲೇಖನಗಳನ್ನು ಆಗಸ್ಟ್ ೧, ೨೦೧೧ ರಿಂದ ಆಗಸ್ಟ್ ೧೪, ೨೦೧೧ ರ ವರೆಗೆ http://arivu.sanchaya.net ನಲ್ಲಿ ಪ್ರಕಟಿಸಿಲು ಪ್ರಾರಂಭಿಸಿದ ಯೋಜನೆ ಆಗಿರುತ್ತದೆ. ೨೦೧೨ರಲ್ಲೂ ಈ ಕಾರ್ಯಕ್ರಮದ ಪುನರಾವರ್ತನೆಯಾಗಿದ್ದು,. ಈ ಎಲ್ಲ ಲೇಖನಗಳ ಸಂಪೂರ್ಣ ಹಕ್ಕುಗಳು ಲೇಖಕರದ್ದೇ ಆಗಿರುತ್ತವೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಜೊತೆಗೆ, ವಿಜ್ಞಾನ, ತಂತ್ರಜ್ಞಾನ, ಸಮಾಜ, ಸಮುದಾಯ ಇತ್ಯಾದಿಗಳ ವಿಷಯದ ಅರಿವನ್ನು ಕನ್ನಡಿಗರಲ್ಲಿ ಪಸರಿಸಲು ಒಟ್ಟುಗೊಂಡ ಲೇಖಕರು, ಈ ಎಲ್ಲ ಲೇಖನಗಳನ್ನು ಮುಕ್ತವಾಗಿ ಕನ್ನಡಿಗರೊಂದಿಗೆ ಹಂಚಿಕೊಳ್ಳ ಬಯಸಿರುತ್ತಾರೆ. ಅರಿವಿನ ಅಲೆಗಳು ಸಂಗ್ರಹದ ಲೇಖನಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಬಿಡುಗಡೆಗೊಳಿಸಲಾಗಿದೆ. ಈ ಮುಖೇನ ಲೇಖನವನ್ನು ಅರಿವಿನ ಅಲೆಗಳು ಮತ್ತು ಸಂಚಯದ ಉಲ್ಲೇಖದೊಡನೆ, ಲೇಖಕರ ಹೆಸರು ಹಾಗೂ ಪರಿಚಯದೊಂದಿಗೆ, ಯಾವುದೇ ಬದಲಾವಣೆಗಳಿಲ್ಲದೆ, ವಾಣಿಜ್ಯ ಉದ್ದೇಶ ರಹಿತ ಜ್ಞಾನದ ಹಂಚಿಕೆಗೆ ಮಾತ್ರ ಬಳಸಬಹುದಾಗಿದೆ. ಈ ಸಂಚಿಕೆ ಅಥವಾ ಇದರ ಲೇಖನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಜನೆ ಇರುವ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಮುದ್ರಣಾಲಯ, ಪ್ರಕಾಶಕರು ಇತ್ಯಾದಿ ಮೊದಲು arivu AT sanchaya.net ಗೆ ಮಿಂಚಂಚೆ ಕಳುಹಿಸಿ ನಮ್ಮ ಒಪ್ಪಿಗೆ ಪಡೆದು ನಂತರವೇ ಮುಂದುವರೆಯ ತಕ್ಕದ್ದು.
ಅರಿವಿನ ಅಲೆಗಳು – ಪಿ.ಡಿ.ಎಫ್ , ಇ-ಪಬ್ ಇತರೆ ಇ-ಸಂಚಿಕೆಗಳನ್ನು ಮುದ್ರಿಸುವಾಗ, ಇತರರೊಡನೆ ಹಂಚಿಕೊಳ್ಳುವಾಗ ಯಾವುದೇ ರೀತಿಯ ಬದಲಾವಣೆಯನ್ನು ಮಾಡದಿರಿ.
ಅರಿವಿನ ಅಲೆಗಳು | Arivina Alegalu by ಸಂಚಯ | Sanchaya is licensed under a Creative Commons Attribution-NonCommercial-NoDerivs 3.0 Unported License. Permissions beyond the scope of this license may be available at http://arivu.sanchaya.net/license
ಅರಿವಿನ ಅಲೆಗಳು | Arivina Alegalu by ಸಂಚಯ | Sanchaya is licensed under a Creative Commons Attribution-NonCommercial-NoDerivs 3.0 Unported License. Permissions beyond the scope of this license may be available at http://arivu.sanchaya.net/license
Frequently Asked Questions
Lorem ipsum dolor sit amet, consectetur adipiscing elit. Nunc aliquam justo et nibh venenatis aliquet. Morbi mollis mollis pellentesque. Aenean vitae erat velit. Maecenas urna sapien, dignissim a augue vitae, porttitor luctus urna. Morbi scelerisque semper congue. Donec vitae congue quam. Pellentesque convallis est a eros porta, ut porttitor magna convallis.
Donec quis felis imperdiet, vestibulum est ut, pulvinar dolor. Mauris laoreet varius sem, tempus congue nibh elementum facilisis. Aliquam ut odio risus. Mauris consectetur mi et ante aliquam, eget posuere urna semper. Vestibulum vestibulum rhoncus enim, id iaculis eros commodo non.