ಆತ್ಮೀಯರೇ,
ಬಹಳ ದಿನಗಳ ಅನುಭವ, ಅವಲೋಕನಗಳ ಬಳಿಕ ಸಂಚಯವನ್ನು ಕೇವಲ ತಂತ್ರಾಂಶದ ಕಾರ್ಯಗಳಿಗೆ ಮೀಸಲಿಡುವುದು ಅಷ್ಟು ಉಪಯುಕ್ತವಲ್ಲವೆಂಬದು ದೃಢವಾಗಿದೆ. ಬದಲಿಗೆ, ಅದನ್ನು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೂ ವಿಸ್ತರಿಸುವುದರಿಂದ, ಕನ್ನಡದಲ್ಲಿ ಸುಲಭವಾಗಿ ಲಭ್ಯವಿರದ ಈ ಕ್ಷೇತ್ರಗಳಲ್ಲಿಯೂ, ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯು ಮೂಢಿದೆ.
ಈ ನಿಟ್ಟಿನಲ್ಲಿ, ಸಂಚಯದ ಕಾರ್ಯವನ್ನು ‘ವಿಜ್ಞಾನ, ತಂತ್ರಜ್ಞಾನ ಹಾಗೂ ತಂತ್ರಾಂಶಗಳ ಅನುಭವಿ ಮಾಹಿತಿ ಸಂಗ್ರಹ’ವನ್ನಾಗಿ ಮಾರ್ಪಾಡು ಮಾಡಲಾಗಿದೆ. ಇದರ ಮೂಲ ಉದ್ದೇಶ, ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಹತ್ತು ಹಲವು ಉಪಯುಕ್ತ, ಮುಕ್ತ ಮಾಹಿತಿಗಳನ್ನು, ಆಸಕ್ತ ಬರಹಗಾರರ ನೆರವಿನಿಂದ ಒಂದೆಡೆ ಸಂಗ್ರಹಿಸುವುದು. ಇದಕ್ಕಾಗಿ, ನಿಮ್ಮಿಂದ ಸಕ್ರಿಯ ಭಾಗಿತ್ವವನ್ನು ನಿರೀಕ್ಷಿಸಲಾಗಿದೆ. ನೀವು ಮಾತ್ರವಲ್ಲದೆ, ನಿಮಗೆ ಪರಿಚಯವಿರುವ ಸಹೃದಯ ಮಿತ್ರರನ್ನೂ ಆಮಂತ್ರಿಸಿ, ಅವರನ್ನು ನಮ್ಮ ತಂಡಕ್ಕೆ ಪರಿಚಯಿಸಿ, ಕನ್ನಡದಲ್ಲಿ ಮುಕ್ತ, ಸರಳ ಹಾಗೂ ಸುಂದರವಾಗಿ ವಿಜ್ಞಾನ, ತಂತ್ರಜ್ಞಾನ ಹಾಗೂ ತಂತ್ರಾಂಶಗಳ ಮಾಹಿತಿ ಲೇಖನಗಳನ್ನು ಬರೆಯುವ ಬರಹಗಾರರ ಸಮುದಾಯವನ್ನು ನಿರ್ಮಿಸುವಲ್ಲಿ, ಸಹಕರಿಸುತ್ತೀರೆಂದು ತಿಳಿಯುತ್ತೇವೆ.
ಸಂಚಯದಲ್ಲಿ ನೀವು ಬರೆಯುವ ಲೇಖನಗಳನ್ನು team@sanchaya.net ಮಿಂಚಂಚೆಗೆ ಕಳುಹಿಸಿ. ಲೇಖನಗಳ ರೂಪಗಳನ್ನು ಒಂದೇ ರೀತಿಯಲ್ಲಿ ಕಾಪಾಡುವ, ನಿರ್ವಹಿಸುವ ದೃಷ್ಟಿಯಿಂದ ಸದ್ಯದ ವ್ಯವಸ್ಥೆಯಲ್ಲಿ, ಸಂಚಯದಲ್ಲಿ ಲೇಖನವನ್ನು ಪ್ರಕಟಿಸುವ ಅಧಿಕಾರವನ್ನು ಸಂಚಯದ ಚಿಕ್ಕ ನಿರ್ವಹಣ ತಂಡ ಮಾತ್ರ ಹೊಂದಿದೆ. ಈ ಕಾರಣದಿಂದಾಗಿ, ಲೇಖಕರು ತಮ್ಮ ಲೇಖನಗಳನ್ನು ಮಿಂಚಂಚೆ ಮಾಡಿದರೆ ಸಾಕಾಗುತ್ತದೆ. ಅದನ್ನು ಕ್ರಮಬದ್ಧವಾಗಿ ಪ್ರಕಟಿಸುವ ಹೊಣೆಯನ್ನು ಈ ಚಿಕ್ಕ ಗುಂಪು ನಿರ್ವಹಿಸುತ್ತದೆ.
ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಪುಟವನ್ನು ನೋಡಿ.
ಇಂತಿ, ಸಂಚಯ ನಿರ್ವಹಣ ತಂಡ
