ದಿನ ದಿನ ಬಗೆ ಬಗೆಯ ಸ್ಮಾರ್ಟ್ ಮೊಬೈಲ್ ಫೋನ್ ಗಳ ಆವಿಷ್ಕಾರದ ಜೊತೆ ಜೊತೆಗೆ ಅವುಗಳ ಸಾಮರ್ಥ್ಯ ಗಣಕಯಂತ್ರಗಳನ್ನು ಹೋಲುವಲ್ಲಿ ಯಶಸ್ವಿಯಾಗುತ್ತಿದೆ. ಸಾಮಾನ್ಯ ಮನುಷ್ಯನಿಂದ ಹಿಡಿದು ಐಟಿ ದಿಗ್ಗಜರೂ ಕೂಡ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮೊಬೈಲ್ ಫೋ‌ನ್‌ಗಳ ಮೊರೆ ಹೋಗುತ್ತಿದ್ದಾರೆ. ಶಾಪಿಂಗ್ ಮಾಡಲು, ಸಿನಿಮಾ ಟಿಕೆಟ್ ಖರೀದಿಸಲು, ಹಣ ಪಾವತಿಸಲು, ಹೀಗೆ ಹಲವಾರು ಕೆಲಸಗಳು ತಮ್ಮ ಪುಟ್ಟ ಮೊಬೈಲ್ ಫೋನ್ ಗಳ ಸಹಾಯದಿಂದ ಕ್ಷಣಾರ್ಧದಲ್ಲಿ ಮುಗಿಸುತ್ತಾರೆ. ಆದರೆ ಅದು ಎಷ್ಟು ಸುರಕ್ಷಿತ ಎಂಬುದನ್ನು ಯೋಚಿಸುವ ಗೊಡವೆಗೆ ಹೋಗುವುದಿಲ್ಲ. ಗಣಕಯಂತ್ರಗಳಲ್ಲಿ ಸುರಕ್ಷತೆಯ ಕೊರತೆಯಿಂದಾಗುವ  ಕಂಡು ಬರುವ ಎಲ್ಲಾ ರೀತಿಯ ದುಷ್ಪರಿಣಾಮಗಳು ನಾವು ಮೊಬೈಲ್ ಫೋನ್ ಗಳಲ್ಲೂ ಸಹ ಕಾಣಬಹುದು. ಮೊಬೈಲ್ ಫೋನ್ ಗಳ ಕಾರ್ಯ ಕ್ಷಮತೆಯ ವೇಗ ಹೆಚ್ಚಿದಂತೆ ಅವುಗಳ ಅಂತರ್ಜಾಲ ಸಂಪರ್ಕ ಸಾಮರ್ಥ್ಯವು ಹೆಚ್ಚಾಗಿದೆ. ಇದರಿಂದ ನಿಮ್ಮ ವೈಯುಕ್ತಿಕ ಹಾಗು ಗೌಪ್ಯ ಮಾಹಿತಿಯು ಎಲ್ಲರಿಗೂ ಮುಕ್ತವಾಗಿ ಸೋರಿ ಹೋಗುವ ಸಾದ್ಯತೆಗಳಿವೆ. ಇಂತಹ ಹಲವಾರು ಮಾಹಿತಿಗಳು ವೈರಸ್ ಅಥವಾ ಮಾಲ್ವೇರ್ ಸಹಾಯದಿಂದ ಸುಲಭವಾಗಿ ಅಟ್ಯಾಕರ್ ಗಳ ಪಾಲಾಗಬಹುದು. ದಿನಕ್ಕೆ ಸಾವಿರಾರು ಮೊಬೈಲ್ ತಂತ್ರಾಶಗಳು ಅಭಿವೃದ್ದಿಯಾಗುವುದರ ಜೊತೆಗೆ ಸುರಕ್ಷತೆಯ ಕೊರತೆಯೂ ಗಣನೀಯವಾಗಿ ಹೆಚ್ಚಾಗಿದೆ.

ಮೊಬೈಲ್ ಸುರಕ್ಷತೆಯ ಮಾರ್ಗಗಳಲ್ಲಿ ಪ್ರಮುಖವಾದುದು ಆಂಟಿ-ವೈರಸ್ ಬಳಕೆ:
ಆರಂಭದ ದಿನಗಳಲ್ಲಿ ಗಣಕಯಂತ್ರಕ್ಕೆ ಮಾತ್ರ ಸೀಮಿತವಾಗಿದ್ದ, ಸುರಕ್ಷತೆಯ ಮಾರ್ಗವಾಗಿ ತಯಾರಾಗುತ್ತಿದ್ದ ಆಂಟಿ ವೈರಸ್ ಗಳು, ನಂತರದ ದಿನಗಳಲ್ಲಿ ಮೊಬೈಲ್ ಜಗತ್ತಿಗೂ ಕಾಲಿರಿಸಿದವು. ಎಲ್ಲಾ  ಮಾಹಿತಿ ಸುರಕ್ಷೆಯ ಬಗ್ಗೆ ಗಮನ ಹರಿಸುವ ಪ್ರತಿಷ್ಠಿತ ಕಂಪೆನಿಗಳು (ಉದಾ: Kasperksy, Trend Micro, Symatec, Mcafee, AVG, ಮುಂತಾದವು) ಮೊಬೈಲ್ ಆಂಟಿವೈರಸ್ ತಂತ್ರಾಂಶಗಳನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಕೆಲವು ಪರವಾನಗಿ ಸಹಿತ ತಂತ್ರಾಂಶಗಳು,  ಪರವಾನಗಿ ಸಹಿತ ಆಂಟಿವೈರಸ್ ತಂತ್ರಾಶಗಳು ಪರವಾನಗಿ ರಹಿತ ತಂತ್ರಾಶಗಳಿಂತ ಹೆಚ್ಚಿನ ಅನುಕೂಲತೆಗಳನ್ನು ಹೊಂದಿರುತ್ತವೆ. ನಿಮ್ಮ ಮೊಬೈಲ್ ಬಳಕೆ, ಅಂರ್ತಜಾಲದಲ್ಲಿ ಮಾಹಿತಿ ವಿನಿಯೋಗ, ಅದರಲ್ಲಿನ ಮಾಹಿತಿ ಸುರಕ್ಷತೆಯ ಪ್ರಾಮುಖ್ಯತೆಯ ಮೇರೆಗೆ ಆಂಟಿವೈರಸ್ ಗಳನ್ನು ಅನುಸ್ಥಾಪಿಸ ಕೊಳ್ಳಬಹುದು.

ಆಂಟಿವೈರಸ್ ಬಳಸುವುದರಿಂದ:
ಅ. ನಿಮ್ಮ ಮೊಬೈಲ್ ನಲ್ಲಿರುವ ಕಡತಗಳು ಹಾಗು ಯಾವುದೇ ಮಾಹಿತಿಗಳ ಸೋರಿಕೆಯನ್ನು ತಡೆಯಬಹುದು.
ಆ. ಮೊಬೈಲ್ ನಲ್ಲಿ ಆಗಲೇ ಅನುಸ್ಥಾಪಿತವಾಗಿರುವ ತಂತ್ರಾಶಗಳು ಇತರೆ ವೈರಸ್, ಮಾಲ್ವೇರ್ ಗಳಿಂದಾಗುವ ತೊಂದರೆಗಳನ್ನು ತಡೆಗಟ್ಟಬಹುದು.
ಇ. ಆಂಟಿವೈರಸ್ ನಲ್ಲಿ ನಿಮ್ಮ ಅಗತ್ಯನುಸಾರ ಅಂತರ್ಜಾಲದಲ್ಲಿ ಬ್ರೌಸಿಂಗ್ ಅನ್ನು ಸುರಕ್ಷಿತಗೊಳಿಸಬಹುದು.
ಈ. ನಿಮ್ಮ ಅಂತರ್ಜಾಲ ಬ್ರೌಸಿಂಗ್ ಗುರುತುಗಳನ್ನು ಗೋಪ್ಯವಾಗಿಡಬಹುದು.
ಉ. ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಅದರ ಮೌಲ್ಯ ಕೂಡ ಹೆಚ್ಚಾಗಿದೆ. ವೈಯುಕ್ತಿಕ ಕೆಲಸಗಳಿಗಾಗಿ ಉಪಯೋಗವಾಗುತ್ತಿದ್ದ  ಮೊಬೈಲ್ ಗಳು, ಇತ್ತೀಚೆಗೆ ಕಂಪನಿಯ ಕೆಲಸಗಳನ್ನು ನಿರ್ವಹಿಸುವಶ್ಟು ಸಾಮರ್ಥ್ಯವನ್ನು ಹೊಂದಿವೆ. ಕಂಪನಿಯ ಮಿಂಚಂಚೆಗಳನ್ನು ನೋಡುವುದು, ನಿಂತಲ್ಲಿಯೇ ಹೊಸ ಕಡತಗಳನ್ನು ಸ್ರುಷ್ಟಿಸ ಬಹುದು. ಇದರಿಂದಾಗಿ ಮೊಬೈಲ್ ಗಳ ಕಳ್ಳತನಗಳು ಸಾಮಾನ್ಯವಾಗಿವೆ. ಕೆಲವು ಮೊಬೈಲ್ ಆಂಟಿ-ವೈರಸ್ ತಂತ್ರಾಶಗಳು ಕಳುವಾದ ಮೊಬೈಲ್ ಗಳನ್ನು ಹುಡುಕುವಲ್ಲಿ ಸಹಾಯಕ್ಕೆ ಬರುವುದು.
ಊ. ಮೊಬೈಲ್ ಗಳ ಬಳಕೆ ಸುಲಭವಾದ್ದರಿಂದ ಮಕ್ಕಳಿಗೂ ಅದು ಅಚ್ಚು ಮೆಚ್ಚು. ಮಕ್ಕಳು ಆಟವಾಡಲು, ವಿದ್ಯಾರ್ಥಿಗಳು ತತ್ ಕ್ಷಣದ ಮಾಹಿತಿಗಳಿಗಾಗಿ ಮೊಬೈಲ್ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇನ್ನು ಕೆಲವು ಮನೆಗಳಲ್ಲಿ ಮಕ್ಕಳಿಗೂ ಪ್ರತ್ಯೇಕ ಮೊಬೈಲ್ ಗಳನ್ನು ಕೊಡಿಸಿರುತ್ತಾರೆ. ಮೊಬೈಲ್ ಆಂಟಿ-ವೈರಸ್ ತಂತ್ರಾಶಗಳು ಮಕ್ಕಳಿಗೆ ಅಗತ್ಯವಿಲ್ಲದ, ಅನವಶ್ಯಕ ಮಾಹಿತಿಗಳನ್ನು ಬ್ರೌಸ್ ಮಾಡುವದನ್ನು ತಡೆಯಬಲ್ಲುದು. ಹಾಗೆಯೇ ಮಕ್ಕಳ ಹಾಗು-ಹೋಗುಗಳನ್ನು ತಮ್ಮ ತಂದೆತಾಯಿಗಳಿಗೆ ತಿಳಿಸುವಲ್ಲಿ ಸಹಾಯ ಮಾಡಬಲ್ಲದು.
ಋ. ಅನವಶ್ಯಕ ಕರೆಗಳು ಅಥವಾ ಮೆಸ್ಸೇಜ್ ಗಳನ್ನು ತಡೆಯಬಹುದು.

ಗಣಕಯಂತ್ರ ಹಾಗು ಮೊಬೈಲ್ ಗಳ ಕಾರ್ಯ ನಿರ್ವಹಿಸುವ ಅಂತರ ಕಡಿಮೆಯಾದಂತೆ, ಗಣಕಯಂತ್ರ ಗಳಿಗೆ ಅನ್ವಯವಾಗುವ ಎಲ್ಲಾ ಸುರಕ್ಷಯ ಮಾರ್ಗಗಳನ್ನು ನಾವು ಇಲ್ಲಿ ಸ್ಮರಿಸಬಹುದು. ಕೆಲವು ಮುಖ್ಯ ಸೆಕ್ಯುರಿಟಿ ಪಾಲಿಸಿಗಳನ್ನು ಗಮನಿಸಿ.

ಅ. ಮೊಬೈಲ್ ಪ್ರವೇಶ ದ್ವಾರಗಳಿಗೆ ಪಾಸ್ ವರ್ಡ್ ಅಥವಾ  ಪ್ಯಾಟರ್ನ್ ಗಳುಳ್ಳ(ರೇಖಾಚಿತ್ರದ)  ಪಾಸ್ ಕೀ ಗಳನ್ನು ಬಳಸಿ. ಹಲವು ಬಾರಿ ತಪ್ಪಾದ ಪಾಸ್ ವರ್ಡ್ ಬಳಕೆಯಾದರೆ, ನಿಮ್ಮ ಮೊಬೈಲ್ ನಲ್ಲಿರುವ ಮಾಹಿತಿಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕುವಂತೆ ಸೆಟ್ ಮಾಡಿ ಕೊಳ್ಳಿ.
ಆ. ಮಾಹಿತಿ ವಿನಿಮಯ ಹಾಗು ನಿಮ್ಮ ಮುಖ್ಯ ಕೆಲಸಗಳಿಗೆ ನಂಬಿಕಾರ್ಹ ಮೊಬೈಲ್ ಗಳನ್ನು ಮಾತ್ರ ಬಳಸಿ.
ಇ. ನಿಮ್ಮ ಮೊಬೈಲ್ ಗಳು ನಂಬಲರ್ಹವಲ್ಲದ ನೆಟ್ ವರ್ಕ್ ಹಾಗು ಮಾಹಿತಿಗಳ ಸಂಪರ್ಕ ಹೊಂದದಂತೆ ಕಾಳಜಿ ವಹಿಸಿ.
ಈ. ಅಪರಿಚಿತ ಹೊಸ ಮೊಬೈಲ್ ತಂತ್ರಾಂಶಗಳನ್ನು ಅನುಸ್ಥಾಪಿಸವುದನ್ನು ತಪ್ಪಿಸಿ.
ಉ. ಆಗಲೇ ಅನುಸ್ಥಾಪಿತವಾಗಿರುವ ಮೊಬೈಲ್ ತಂತ್ರಾಂಶಗಳ ತಂತ್ರಾಂಶಗಳ ಅಪ್ಡೇಟ್ ಗಳನ್ನು ಬಳಸಿ.
ಊ. ಮೊಬೈಲ್ ಅಂತರ್ಜಾಲ ಬಳಕೆಸುವಾಗ ನಿಮಗಲ್ಲದ ಮಿಂಚಂಚೆಗಳನ್ನು ನೋಡುವುದಾಗಲಿ, ಅಟ್ಯಾಚ್ಮೆಂಟ್ ಗಳನ್ನು ಡೌನ್ಲೋಡ್ ಮಾಡುವುದನ್ನು ತಪ್ಪಿಸಿ.
ಋ. ಮೊಬೈಲ್ ಡಿಸ್ಕ್ ಗಳನ್ನು ಎನ್ಕ್ರಿಪ್ಟ್ ಮಾಡಿ ಸಂರಕ್ಷಿಸಿ.
ಎ. ಇವೆಲ್ಲೆಕ್ಕು ಮುಖ್ಯ ನಿಮ್ಮ ಮೊಬೈಲ್ ಬೇರೆಯವರ ಕೈ ಸೇರದಂತೆ ಎಚ್ಚರವಹಿಸಿ.

ಪ್ರಸ್ತುತ ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸುರಕ್ಷೆಯ ಕೊರತೆಯಿಂದಾಗುವ ದುಷ್ಪರಿಣಾಮದ ಸಾಧ್ಯತೆಗಳನ್ನು ತಡೆಯಲು ಇರುವ ಮಾರ್ಗಗಳನ್ನು ಪರಿಚಯಿಸಿಕೊಡುವುದು ಈ ಅಲೆಯ ಮುಖ್ಯ ಉದ್ದೇಶ. ಇಲ್ಲಿ ಕೆಲವು ಅತೀ ಮುಖ್ಯವೆನಿಸುವ ಸಮಸ್ಯೆಗಳನ್ನು ಮಾತ್ರ ನಿಮಗೆ ಪರಿಚಯಿಸಿದ್ದೇನೆ.

ಲೇಖಕಿ: ಪವಿತ್ರ. ಹೆಚ್

ಸಾಫ್ಟ್ ವೇರ್  ಪ್ರಪಂಚದ ಮಾಹಿತಿ ಸುರಕ್ಷೆಯ ಬಗ್ಗೆ ರಿಸರ್ಚ್ ಸ್ಪೆಷಲಿಸ್ಟ್ ಆಗಿರುವ ಇವರು, ಪರಿಸರ ಪ್ರೇಮಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ಬರವಣಿಗೆಯ ವಿಶ್ಲೇಷಣೆ (Handwriting Analysis) ಯಲ್ಲಿಯೂ ಪದವಿಯನ್ನು ಹೊಂದಿದ್ದಾರೆ. ಇವರು ಬಿಡುವಿನ ಸಮಯದಲ್ಲಿ ಕಿಂದರಜೋಗಿ, ಕನ್ನಡ ವಿಕಿಪೀಡಿಯ ಹಾಗು ಇತರೆ ಕನ್ನಡೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಪ್ರಕೃತಿಯ ಸಹಜ ಸೌಂದರ್ಯವನ್ನು ಕ್ಯಾಮೆರಾದ ಕಣ್ಣಿನಿಂದ ಸೆರೆಹಿಡಿಯುವ ಉದಯೋನ್ಮುಕ ಛಾಯಾಗ್ರಾಹಕಿ.