ನಗರಗಳನ್ನು ಕಟ್ಟುವ ಪರಿ

ಮಹಾತ್ಮ ಗಾಂಧಿಯವರು ಹಳ್ಳಿಗಳೆ ನಮ್ಮ ರಾಷ್ಟ್ರದ ಜೀವಾಳ ಎಂದು ಗ್ರಾಮ ಜೀವನವನ್ನು ಎತ್ತಿ ಹಿಡಿದು ವಿಶ್ವಕ್ಕೆ ಮಾದರಿ ಎಂದು ಸಾರಿದರು. ಆದರೆ ಭಾರತ ದೇಶದ ಸ್ವಾತಂತ್ರ್ಯ ಬಂದ ನಂತರ ಹಳ್ಳಿಗಳ ಜೀವನ ಮತ್ತು ಗ್ರಾಮೀಣ ಜೀವನ ವೈಖರಿಯನ್ನು ಕಡೆಗಣಿಸಲಾಯಿತು. ಹಳ್ಳಿಗಳಿಂದ ನಗರದತ್ತ ಒಲಸೆ ಬರುವ ಗುಂಪು ಹೆಚ್ಚುತ್ತಾ‌ ಹೋಗುತ್ತಿದೆ. ಎಲ್ಲರೂ ಬಯಸುವುದು ಎರಡು ತುತ್ತು ಊಟ, ರಾತ್ರಿ ಹೊತ್ತು ಮಲಗಲು ಒಂದು ಸೂರು, ಕೈಗೆ ಒಂದಿಷ್ಟು ದುಡ್ಡು ಕೊಡೂವ ಕೆಲಸ. ತೊಂಬತ್ತರ ದಶಕದಲ್ಲಿ ಪ್ರಾರಂಭಗೊಂಡ ಜಾಗತೀಕರಣದ ಪ್ರಕ್ರಿಯೆ ನಗರಕ್ಕೆ ವಲಸೆ ಬರುವವರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿತು. ಈಗ ನಗರಕ್ಕೆ ಯಾವ ಪ್ರಮಾಣದಲ್ಲಿ ಜನ ವಲಸೆ ಬರುತ್ತಿದ್ದಾರೆ ಎನ್ನುವುದನ್ನು ನೋಡೋಣ. ಬೆಂಗಳೂರಿಗೆ ವಲಸೆ ಬಂದ ಮಂದಿಯ ಪೈಕಿ ಉತ್ತರ ಪ್ರದೇಶದಿಂದ ಈಶಾನ್ಯ ಭಾರತದ ಅಸ್ಸಾಂ,ಮಣಿಪುರ ಮತ್ತು ಇತರೆ ರಾಜ್ಯಗಳ ಜನರು ಇದ್ದಾರೆ. ಬೃಹತ್ ಬೆಂಗಳುರು ನಗರ ಆಧಾರಿತ ಗಿರೀಶ್ ಕರ್ನಾಡರ ನಾಟಕ ‘ಬೆಂಗಳೂರು’ ಬಗ್ಗೆ ಬರೆಯುತ್ತಾ‌, ಜೋಗಿ ಹೀಗೆ ಬರೆದಿದ್ದಾರೆ , “ಮಹಾನಗರದ ಮಾಯೆ. ಬಯಕೆಗಳನ್ನು ಬೆಳೆಸುತ್ತಾ, ಆಮಿಷಗಳನ್ನು ತುಂಬುತ್ತಾ, ಮೋಹವನ್ನು ಮುಪ್ಪುರಿಗೊಳಿಸುತ್ತಾ, ಅಭಯವನ್ನು ನೀಡುತ್ತಾ, ಆತಂಕದಲ್ಲಿ ದೂಡುತ್ತಾ ಅದು ತನ್ನನ್ನು ತಾನು ಬದುಕಿಸಿಕೊಳ್ಳಲು ನೋಡುತ್ತದೆ.”

ನನಗೆ ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ನಿಂತಾಗಲೆಲ್ಲಾ‌ ಈ ಭಾವನೆ ಹೃದಯದಲ್ಲಿ ಮಿಡುಕಾಡುತ್ತಿರುತ್ತದೆ. ಆತಂಕ ಮತ್ತು ಆಮಿಷಗಳು ಬೃಹತ್ ನಗರಗಳ ಜೀವನಾಡಿ. ಅದರಿಂದ ನಾವು ನಗರಗಳನ್ನು ಕಟ್ಟುವ, ನಗರಗಳನ್ನು ಬೆಳೆಸುವ ಮತ್ತು ನಗರದಲ್ಲಿ ನಡೆಯುವ ಮಾನವ ಜೀವನದ ಕಲ್ಪನೆಯನ್ನು ಕುರಿತು ಜಿಜ್ಞಾಸೆಯನ್ನು ಬೆಳೆಸಿಕೊಳ್ಳದಿದ್ದರೆ ಇತ್ತ ನಗರದಲ್ಲಿ ಅಸ್ತಿತ್ತ್ವ ಕಳೆದುಕೊಂಡು ಅತ್ತ ಹಳ್ಳಿಗಳು ಆರ್ಥಿಕ ಬಿಕ್ಕಟಿನಿಂದ ಅಸ್ತಿಪಂಜರಗಳಾಗಿ ಬಿಟ್ಟಾಗ, ನೆಲೆಯಿದ್ದು ನೆಲೆ ಕಳೆದುಕೊಂಡ ,ದೇಹವಿದ್ದು ವಿದೇಹರಾಗಿ, ರೂಪವಿದ್ದು ಕುರೂಪಿಗಳಾಗಿ, ಹಣವಿದ್ದು ಭಿಕ್ಷುಕರಾಗಿ, ಪ್ರಜ್ಞೆಯಿದ್ದು ಮೂರ್ಛೆ ಹೋದಂತವರಾಗುತ್ತೇವೆ. ಸದ್ಯದ ನಗರಗಳನ್ನು ಕಟ್ಟುವ ಪರಿಯನ್ನು ನೋಡಿದಾಗ ಕಾಣುವುದಾದರೇನು – ದಿನ ನಿತ್ಯ ರಸ್ತೆ ಅಗೆಯುವುದು, ಗುಂಡಿ ತೋಡುವುದು, ಸಣ್ಣ್ ದಾದ ರಸ್ತೆಯಲ್ಲಿ ಇದ್ದಕಿದ್ದಂತೆ ಐದು ಸಾವಿರ ಅಪಾರ್ಟ್ ಮೆಂಟ್ ಎದ್ದು ಬಿಡುವುದು, ಬಡವರನ್ನು ಒಕ್ಕಲೆಬ್ಬಿಸಿ ಮಾಲ್ ಕಟ್ಟುವುದು – ಹೀಗೆ ಸರ್ಕಾರದ ಕ್ರಿಯೆಗಳನ್ನು, ವ್ಯಕ್ತಿಯ ವ್ಯಯಕ್ತಿಕ ಕರ್ಮ ಖಾಂಡವನ್ನು ಮತ್ತು ಖಾಸಗಿ ಕಂಪನಿಗಳ ಆಕಾಂಕ್ಷೆಗಳನ್ನು ಒಳಗೊಂಡ ಯೋಜನೆಗಳನ್ನು ಸಮಗ್ರವಾಗಿ ಅವಲೋಕಿಸಿದರೆ ಎಲ್ಲವೂ‌ ಒಟ್ಟಿನಲ್ಲಿ ನಗರವನ್ನು ಹರಿದರಿದು ಛಿದ್ರ ಛಿದ್ರವನ್ನಾಗಿ ಮಾಡುತ್ತಿರುವುದು ಗೋಚರವಾಗುತ್ತದೆ.

ಮಹಾತ್ಮ ಗಾಂಧಿಯವರು ಬಟ್ಟೆಯನ್ನು ನೂಲುವುದು, ಗಾಣದ ಎಣ್ಣೆ ತೆಗೆಯುವುದು, ಗುಡಿ ಕೈಗಾರಿಕೆ ಹೀಗೆ ಕೈ ಕಸುಬಿಗೆ ಪ್ರಾಧಾನ್ಯ ಕೊಡುವ ಗ್ರಾಮೀಣ ಜೀವನದ ವಕ್ತಾರರಾದರೆ, ಅಂಬೇಡ್ಕರ್ ಭಾರತೀಯ ಗ್ರಾಮೀಣ ಬದುಕು ದಲಿತರಿಗೆ ದುಸ್ತರವಾಗಿದೆ, ಹಳ್ಳಿಗಳು ಜಾತಿ ಪದ್ಧತಿಯ ಕೊಳಕು ಹೊತ್ತಿರುವ ತಿಪ್ಪೆ ಗುಂಡಿಯೆಂಬ ಭಾವನೆಯಿಂದ ವಿಪರೀತ ತಿರಸ್ಕಾರದಿಂದ ನೋಡಿದರು. ಅಂಬೇಡ್ಕರ್ ಹಳ್ಳಿಗಳನ್ನು ತೊರೆದು ದಲಿತರು ನಗರಗಳಿಗೆ ನುಗ್ಗಲು ಕರೆಯಿತ್ತರು. ಆದರೆ ಇಬ್ಬರು ಮುಂದೆ ಬರುವ ಪೀಳಿಗೆಗೆ ಭೂಮಿಯನ್ನು ಬಳಸುವ, ನೀರನ್ನು ಪ್ರೀತಿಸುವ ರೀತಿ, ವಾಯುವನ್ನು ತಿಳಿಯಾಗಿಸುವ ಕಲೆಯ ಬಗ್ಗೆ ಮಾತಾನ್ನಾಡಲಿಲ್ಲಾ. ಅದರಿಂದ ಭಾರತದ ಯಾವುದೇ ನಗರಕ್ಕೆ ಹೋದರು ಅಲ್ಲಿ ಕೆರೆಯಾಗಲಿ ಅಥವಾ‌ನದಿಯಾಗಲಿ ಇದ್ದರೆ ಅದು ಕೊಚ್ಚೆಯನ್ನು ಹೊತ್ತ ಚರಂಡಿಯಾಗಿರುತ್ತದೆ. ಯಮುನೆ, ಗಂಗೆಯರೆ ವಿಪರೀತ ಮಾಲಿನ್ಯಗೊಂಡಿರುವುದು.

ಹೀಗೆ ಗ್ರಾಮ ಬದುಕಿನ ಸರಳತೆಯು ಇಲ್ಲದೆ, ದೊಡ್ಡ ನಗರವನ್ನು ಕಟ್ಟುವ ಮತ್ತು ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕುಶಲತೆಯು ಇಲ್ಲದೆ ಕನ್ನಡ ನಾಡಿನ ಜನ ತ್ರಿಶಂಕು ಸ್ವರ್ಗ ವಾಸಿಗಳಾಗಿದ್ದೇವೆ. ಇತ್ತ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ವಾದಗಳನ್ನು ಜೊತೆ ಜೊತೆಗೆ ಸಂಯೋಜಿಸುವ ದಿಕ್ಕಿನಲ್ಲಿ ಸಣ್ಣ ಸಣ್ಣ ನಗರಗಳನ್ನು ಕಟ್ಟುವ ಆವಶ್ಯಕತೆ ಇಂದು ನಮಗಿದೆ.

ಮಹಾತ್ಮ ಗಾಂಧಿಯವರು ಬಯಸಿದಂತೆ ಸರಳತನವನ್ನು ಒಳಗೊಂಡು, ಅಂಬೇಡ್ಕರ್ ಬಯಸಿದಂತೆ ಅಸಮಾನಾತೆ ಮತ್ತು ಶೋಷಣೆಯನ್ನು ಮೀರಿದ ಜಾಗದ ಕಲ್ಪನೆ ನಾವು ಮಾಡಲೇ ಬೇಕು.ಇಂದಿನ ಗ್ರಾಮೀಣ ಜೀವನ ಮತ್ತು ನಗರ ಜೀವನ ಎರಡು ತಮ್ಮ ಹದವನ್ನು ಕಳೆದುಕೊಂಡಿವೆ. ಎರಡು ಜಾಗದಲ್ಲಿ ಮನುಷ್ಯ ತನ್ನನ್ನು ತಾನು ಕಳೆದುಕೊಂಡಂತೆ ಭಾಸವಾಗುತ್ತಿದೆ.

ನಾನು ಬೆಂಗಳೂರಿಗೆ ಹೊಸದಾಗಿ ಬಂದಾಗ ಬಸ್ಸ್ ಹತ್ತಿದ ಕೂಡಲೆ ಜಯನಗರ ಕಾಂಪ್ಲೆಕ್ಸ್ ಗೆ ಟಿಕೇಟ್ ಕೊಡೀ ಅಂತಿದ್ದರು. ಈ‌ ಕಾಂಪ್ಲೆಕ್ಸ್ ಅನ್ನುವ ಪದದ ಅರ್ಥ ತಿಳಿದುಕೊಳ್ಳುವುದಕ್ಕೆ, ಕಾಂಪ್ಲೆಕ್ಸ್ ಬಳಿ ಹೋಗಿ ನೋಡಿದೆ. ಕಾಂಪ್ಲೆಕ್ಸ್ ಅಂದರೆ ನೂರಾರು ಚಟುವಟಿಕೆಗಳು ನಡೆಯುವ ಕೇಂದ್ರ, ಇದು ಬಹು ಮಹಡಿ ಕಟ್ಟಡವನ್ನು ಒಳಗೊಂಡಿರುತ್ತದೆ. ಒಳಗೇನಿದೆ ಎನ್ನುವುದು ಹೊರಗಿನವರಿಗೆ ಸರಳವಾಗಿ ತಿಳಿಯುವುದಿಲ್ಲಾ. ಬೆಂಗಳುರಂತೂ ವಿಪರೀತ ‘ ಕಾಂಪ್ಲೆಕ್ಸ್ ಸಿಸ್ಟಮ್ ‘ . ನೀರಾಗಲಿ, ಬೆಂಕಿಯಾಗಲಿ, ಊಟವಾಗಲಿ ದುಡ್ಡೂ ತೆತ್ತು ಬೇರೆಲ್ಲಿಂದಲೋ ಧಿಮಾಕಿನಿಂದ ತರುವ ಈ ಊರಿಗೆ ಹಣವಿದ್ದರೆ ಎಲ್ಲವೂ ಸಲೀಸಾಗಿ ನಿಭಾಯಿಸಬಹುದೆಂಬ ಹಿರಿದಾದ ಭ್ರ್..ಮೆ..ಯಿದೆ. ನಗರಗಳು ದೊಡ್ಡದಾದಷ್ಟು ಕಾಂಪ್ಲೆಕ್ಸ್ ಆಗುತ್ತವೆ. ಕಾಂಪ್ಲೆಕ್ಸಿಟಿ ಅಥವಾ‌ ಸಂಕೀರ್ಣತೆ ಹೆಚ್ಚಾದಷ್ಟು ಮನುಷ್ಯನ ಆತ್ಮವನ್ನು ಬಂಧನದಲ್ಲಿಡುತ್ತವೆ. ನಗರಗಳು ಭಯವನ್ನು ಉತ್ಪತ್ತಿ ಮಾಡಿ ಮನುಷ್ಯನನ್ನು ಏಕಾಂಗಿ ಮಾಡುತ್ತವೆ. ಅದರಿಂದ ಮನುಷ್ಯ ಮನುಷ್ಯನನ್ನು ಹತ್ತಿರ ತರುವ, ಮಾನವ ಹೃದಯಗಳನ್ನು ಒಂದುಗೂಡಿಸುವ , ಮಾನವ ಕಿವಿಗಳಿಗೆ ಹಿತಕರಿಯಾದ ಸ್ಥಳಗಳನ್ನು ಸೃಷ್ಠಿಸ ಬೇಕು. ಯಾವಾಗ ಮನುಷ್ಯರು ಸಮಾಜ ಮತ್ತು ತನ್ನ ಸುತ್ತಲಿನ ಜಗತ್ತಿನಿಂದ ವಿಮುಖರಾಗದೆ ಅರಿವಿನಿಂದ ಬದುಕುತ್ತಾರೋ ಆಗ ಕಾಂಪ್ಲೆಕ್ಸಿಟಿಯು ಸಡಿಲಗೊಳ್ಳುತದೆ ಎಂದು ನಾನು ನಂಬಿದ್ದೇನೆ.

‘ಕಾರ್ಬನ್ ಮುಕ್ತ ‘ ನಗರಗಳು

ಯುರೋಪಿನ ಹಲವಾರು ನಗರಗಳು ‘ಕಾರ್ಬನ್ ಮುಕ್ತ ‘ ಯೋಜನೆಯನ್ನು ರೂಪಿಸಿಕೊಂಡು ಕಾರ್ಯತತ್ಪರರಾಗಿದ್ದಾರೆ. ಈ ನಗರಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವುದಕ್ಕೆ ಸೈಕಲ್ ಇದ್ದರೆ ಸಾಕು. ಕಚೇರಿ, ವಸತಿ, ಶಾಲೆ ಮತ್ತು ಆಸ್ಪತ್ರೆ ಮತ್ತು ಇತರೆ ಸೊಉಕರ್ಯಗಳು ಸಮಗ್ರವಾಗಿ ಪೂರ್ವದಲ್ಲಿ ನಿಗಧಿ ಪಡಿಸಿದ ಸ್ಥಳದಲ್ಲಿಯೆ ಕಟ್ಟುತ್ತಾರೆ. ಇದರಿಂದ ಊರನ್ನು ಕಟ್ಟಿದ ಮೇಲೆ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲಾ. ನಮ್ಮಲ್ಲಿ ಸರ್ಕಾರಕ್ಕಾಗಲಿ ಅಥವಾ‌ ಇತರೆ ಖಾಸಗಿ ಸಂಸ್ಥೆಗಳಿಗಾಗಲಿ ಇಂತಹ ದೂರದೃಷ್ಠಿ ಇರುವುದಿಲ್ಲಾ. ಅದರಿಂದ ನಮ್ಮ ನಗರದ ಗುಣಮಟ್ಟ ತೀರಾ‌ ಕಳಪೆಯಾಗಿದೆ. ಒಳ್ಳೆಯ ರಸ್ತೆಯಾಗಲಿ ಅಷ್ಟೇಕೆ ರಡೆಯಲು ಒಳ್ಳಯ ಪುಟ್ ಪಾತ್ ಕೂಡ ಇರುವುದಿಲ್ಲ. ಆದರೆ ನಮ್ಮ ಪೂರ್ವಜರು ಕಟ್ಟಿದ ನಗರಗಳಲ್ಲಿ ಒಂದು ರೀತಿಯ ವ್ಯವಸ್ಥಿತವಾದ ಶಿಸ್ತು ಕಾಣಿಸುತ್ತದೆ. ಶ್ರೀ ರಂಗಂ ದೇವಸ್ಥಾನ ವಿಶ್ವದಲ್ಲಿಯೆ ದೊಡ್ಡ ಧಾರ್ಮಿಕ ‘ಕಾಂಪ್ಲೆಕ್ಸ್’. ಆ ಊರನ್ನು ಕಟ್ಟುವಾಗ ನೀರಿನ ಬಗ್ಗೆ ಮುಂಚಿತವಾಗಿಯೆ ಚಿಂತಿಸಿದ್ದರು.

ಕೆಲವು ದಿನಗಳ ಹಿಂದೆ ಗೋಕರ್ಣಕ್ಕೆ ಹೋಗಿದ್ದೆ. ‘ಕಾರ್ – ಮುಕ್ತ’ ನಗರದ ಕಲ್ಪನೆ ನನ್ನ ಮನಸ್ಸಿನಲ್ಲಿ ಇತ್ತು ಆದರೆ ಇಲ್ಲಿ ಅಂತಹ ಊರು ನನ್ನ ದೇಶದ ಹಿತ್ತಲಿನಲ್ಲಿಯೆ ಇರುವುದನ್ನು ಕಂಡು ಹಿಗ್ಗಿದೆ. ಸದ್ಯಕ್ಕೆ ಒಂದು ನಗರದ ನೀಲ ನಕ್ಷೆಯನ್ನು ಕೆಳಗೆ ಕೊಟ್ಟಿರುವೆನು. ಈ ನಗರ ಯುರೋಪಿನ ಡಚ್ ದೇಶದಲ್ಲಿದೆ. ಊರಿನ ಒಳಗಡೆ ಬಾರಿ ವಾಹನಗಳಿಗೆ ಮತ್ತು ವೇಗವಾಗಿ ಹೋಗುವ ವಾಹನಗಳ ಚಲನೆಯನ್ನು ನಿಷೇದಿಸಿದೆ. ಇನ್ನು ಹಲವಾರು ನಗರಗಳು ಸೈಕಲ್ ಸುಗಮವಾಗಿ ಚಲಿಸಲು ವಿವಿಧ ರೀತಿಯ ಸವಲತ್ತುಗಳನ್ನು ಒದಗಿಸಿರುತ್ತಾರೆ. ಈ ಕೆಲವು ಸವಲತ್ತುಗಳ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ. ಅದಲ್ಲದೇ ಯೂರೋಪಿಯನ್ ದೇಶಗಳು ಸೈಕಲ್ ಬಳಕೆಯನ್ನು ಎಷ್ಟರ ಮಟ್ಟಿಗೆ ಉತ್ತೇಜನ ನೀಡಿದೆ ಎನ್ನುವುದು ಕೆಳಗಿನ ಚಿತ್ರಗಳಿಂದ ಸಾಬೀತಾಗುತ್ತದೆ.

ಲೇಖಕ: ಮುರಳಿ ಎಚ್. ಆರ್.

ಪರಿಸರ ಪ್ರೇಮಿ, ಸೈಕಲ್ ಚಾಲಕ ಹಾಗೂ ಸೈಕಲ್ ಚಾಲನೆಯ ಮಹತ್ವಗಳ ಪ್ರಚಾರಕ. ಸೈಕಲ್ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬುದು ಮುರಳಿ ಅವರ ಹೊಸ ಕನಸು. ಬಿಎಂಟಿಸಿ ಜತೆ ಕೈ ಜೋಡಿಸಿ ಎಲ್ಲಾ ಟಿಟಿಎಂಸಿಗಳಲ್ಲಿ ಸೈಕಲ್ ಬಸ್‌ಗಳನ್ನು ರೂಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದಲ್ಲದೆ ಸೈಕಲ್ ಆರ್ಥಿಕತೆ ಕುರಿತು ಗುಬ್ಬಿ ಲ್ಯಾಬ್ಸ್ ಜತೆಗೂಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹಣಕಾಸು ವ್ಯವಸ್ಥೆಗೆ ಸೈಕಲ್‌ಗಳು ಹೇಗೆ ನೆರವಾಗಿವೆ ಎಂಬುದನ್ನು ತಿಳಿಸುವುದು ಸಂಶೋಧನೆಯ ಉದ್ದೇಶ. ದಿನಪತ್ರಿಕೆ ಮಾರುವವರು, ಕೊರಿಯರ್ ಸಂಸ್ಥೆಗಳು, ಹಾಲು ಮಾರಾಟಗಾರರು ಇತ್ಯಾದಿ ಸಮುದಾಯಗಳ ಸೈಕಲ್ ಬಳಕೆ ಹಾಗೂ ಅದರ ಆರ್ಥಿಕ ಲಾಭಗಳನ್ನು ಸಂಶೋಧನೆಯಲ್ಲಿ ಅವಲೋಕಿಸಲಾಗುತ್ತಿದೆ.