“ನಾವು ಯಾಕಾದ್ರೂ ಕೇಬಲ್ ಹಾಕ್ಸಿದೆವೋ, ಮಗ ಓದ್ತಾನೇ ಇಲ್ಲ”, “ನಾನು ಯಾಕಾದ್ರೂ ಇವಳಿಗೆ ಮೊಬೈಲ್ ಕೊಡ್ಸುದ್ನೋ, ಕಾಲೇಜ್ ಫ್ರೆಂಡ್ಸಿಗೆ ಯಾವಾಗ್ಲೂ SMS ಮಾಡ್ತಾನೇ ಇರ್ತಾಳೆ, ಕರೆನ್ಸಿ ಹಾಕ್ಸೀ ಹಾಕ್ಸೀ ಸಾಕಾಗಿದೆ” ಇಂತಹ ಮಾತುಗಳನ್ನು ನೀವು ಕೇಳಿಯೇ ಇರ್ತೀರಿ. ಆದರೆ, ಇವೆಲ್ಲವುಗಳನ್ನು ನೀವಾಳಿಸುವಂತಹ ಮಾತೆಂದರೆ. “ನಮ್ಮ ಮಗು ಟಾಕಿಂಗ್ ಟಾಮ್ ಹಾಕಿದ್ರೇನೆ ಊಟ ಮಾಡೋದು !!!!!” ಏನಿದು ಟಾಕಿಂಗ್ ಟಾಮ್ ? ಈಗಿನ ಚಿಕ್ಕಮಕ್ಕಳಿಗೆ ಊಟ ಮಾಡಿಸಲು ಅಮ್ಮಂದಿರು ಕಂಡು ಕೊಂಡಿರುವ ಉಪಾಯವೆಂದರೆ ಸ್ಮಾರ್ಟ್-ಫೋನುಗಳ ಆಟಗಳು. ಮಕ್ಕಳ ಊಟ ಮಾಡಿಸಲು ಬೆಕ್ಕಿನ ಸಹಾಯ ಬೇಕು ಎಂದರೆ ನೀವು ನಂಬಲೇಬೇಕು. ಈ ಸ್ಮಾರ್ಟ್ ಫೋನುಗಳು ಮಾಡಿರುವ ಮೋಡಿ ಒಂದೇ ಎರಡೇ.. ಟಾಕಿಂಗ್ ಟಾಮ್ ಐದು ಮನಸೆಳೆಯುವಂತಹ ಆಟಗಳನ್ನು ನಿಮಗೆ ಪರಿಚಯಿಸುವುದೇ ಈ ಬರಹದ ಉದ್ದೇಶ.

೧. Angry Birds – ಆಂಗ್ರಿ ಬರ್ಡ್ಸ್ ಹೆಸರು ಕೇಳಿರದ ಮಗು ಇಲ್ಲವೇ ಇಲ್ಲ ಎನ್ನಬಹುದೇನೋ. ಅಷ್ಟರ ಮಟ್ಟಿಗೆ ಇದು ಮೋಡಿ ಮಾಡಿದೆ. ಇದರ ಕತೆ ಹೀಗೆ. ಸುಂದರ ಪಕ್ಷಿಗೂಡು. ಅದರಲ್ಲಿ ಪಕ್ಷಿ ಕುಟುಂಬದ ವಾಸ. ಪಕ್ಷಿಗಳು ಹೊರಗಡೆ ಹೋದಾಗ, ಎಲ್ಲಿಂದಲೋ ಬಂದ ಹಂದಿಗಳು, ಮೊಟ್ಟೆಗಳನ್ನು ಕದ್ದೊಯ್ಯುತ್ತವೆ. ಆ ಕಳ್ಳ-ಹಂದಿಗಳನ್ನು ಹೊಡೆದುರುಳಿಸುವುದೇ ಹಕ್ಕಿಗಳ ಕೆಲಸ. ಇದಕ್ಕಾಗಿ ಅನೇಕ ಉಪಾಯಗಳನ್ನು ಹೂಡುತ್ತವೆ.. ಕಥಾಸಾರ ಇಷ್ಟೇ. ಆದರೆ, ಮುಂದೆ ಸಾಗುತ್ತ ಸಾಗುತ್ತ, ಅನೇಕ ಮಜಲುಗಳು ತೆರೆಯುತ್ತಾ ಹೋಗುತ್ತವೆ. ಈ ಆಟದಲ್ಲಿ ಆ ಪಕ್ಷಿಗಳು ಮಾಡುವ ಸದ್ದು ಕೂಡ ಅಷ್ಟೇ ಸ್ವಾರಸ್ಯಕರ.

೨. Talking Tom – ಇದು ಒಂದು ಬೆಕ್ಕು. ನಾವು ಏನು ಮಾತನಾಡುತ್ತೇವೆಯೇ ಅದನ್ನೇ ಬೆಕ್ಕಿನ ರೀತಿಯಲ್ಲಿ ಹೇಳುತ್ತದೆ. ಹಾಗೆಯೇ ಅನೇಕ ಬಗೆಬಗೆಯ ಹಾವಭಾವ, ಬಿಂಕುಬಿನ್ನಾಣಗಳನ್ನು ಪ್ರದರ್ಶಿಸುತ್ತದೆ. ಉದಾ :- ಇದಕ್ಕೆ ಹಾಲು ಕುಡಿಸಬಹುದು. ಮೂತಿ ನೀವರಿಸಬಹುದು. ಹಾಗೆಯೇ, ಇದರ ಬಾಲ ತುಳಿದಾಗ, ಕೋಪವೂ ಬರುತ್ತದೆ. ಇದು ಮಾತನಾಡುವ ಶೈಲಿ ಯಾರನ್ನೇ ಆದರೂ ಮಾತನಾಡಲು ಪ್ರೇರೇಪಿಸುತ್ತದೆ. ಇದನ್ನೇ ಬಳಸಿ, ಮಲ್ಲಿ ಸಣ್ಣಪ್ಪನವರ್ ಎನ್ನುವವರು ಹೊಸ ವರ್ಷದ ಶುಭಾಶಯಗಳನ್ನು ಹೀಗೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ, ಅದನ್ನು ಕೇಳಿ ಆನಂದಿಸಿ.

೩. Water – ಇದು ಡಿಸ್ನಿಯವರು ತಯಾರು ಮಾಡಿರುವ ಆಟ. ಇದರ ಕಥಾನಾಯಕ ಒಂದು ಮೊಸಳೆ. ಇದಕ್ಕೆ ನಾವು ಸ್ನಾನ ಮಾಡಿಸಬೇಕು. ಆದರೆ ನೀರಿಲ್ಲ. ಅಲ್ಲೆಲ್ಲೋ ಇರುವ ನೀರನ್ನು ಇದರ ಸ್ನಾನದ ಕೋಣೆಗೆ ತರಿಸಿಬೇಕು. ಅಷ್ಟೇ. ಹಿಂದೆ ಭಗೀರಥ ಗಂಗೆಯಂಥ ಗಂಗೆಯನ್ನು ಭೂಲೋಕಕ್ಕೆ ತರಿಸಲು ಎಷ್ಟೆಷ್ಟೋ ಕಷ್ಟ ಪಟ್ಟಿದ್ದನಂತೆ. ಮುಂದೆ ಹೋದಂತೆಲ್ಲ, ನೀರಿನ ಜೊತೆ, ಆಸಿಡ್ ಕೂಡ ಬರುತ್ತದೆ. ನೀರು ಮತ್ತು ಆಸಿಡ್ ಬೆರೆಯದಂತೆ ಮಾಡಿ, ಕೇವಲ ನೀರು ಮಾತ್ರವೇ ಸ್ನಾನದ ಕೋಣೆಗೆ ಹೋಗುವಂತೆ ಮಾಡಬೇಕು. ನಾವೆಲ್ಲರೂ ಅಭಿನವ ಭಗೀರಥರಾಗಬೇಕಿದ್ದರೆ, ಈ ಆಟವನ್ನು ಆಡಲೇಬೇಕು.

೪. Cut the Rope – ಇದರ ಕಥಾನಾಯಕ ನಾಯಿಮರಿ. “ನಾಯಿಮರಿ ನಾಯಿಮರಿ ತಿಂಡಿ ಬೇಕೆ” ಹಾಡು ಕೇಳದ ಕನ್ನಡದ ಮಕ್ಕಳು ಇಲ್ಲವೇ ಇಲ್ಲವೇನೋ. ಈ ಆಟವೂ ಹಾಗೆ. ಆ ನಾಯಿಮರಿಗೆ ನಾವು ತಿಂಡಿ ಕೊಡಿಸಬೇಕು. ಇದಕ್ಕೆ ನೂರಾರು ಅಡಚಣೆಗಳು. ಅದರಲ್ಲಿ ಬಹುದೊಡ್ಡ ಅಡಚಣೆಯೆಂದರೆ ಮುಳ್ಳುಗಳು ಮತ್ತು ಜೇಡಗಳು. ಇವುಗಳು ತಿಂಡಿಯನ್ನು ನಾಯಿಮರಿಗೆ ತಿನ್ನಿಸುವ ಹಾದಿಯಲ್ಲಿ ಅಡ್ಡಗಾಲು ಇಡುತ್ತಿರುತ್ತವೆ.

೫. Temple Run – ಇದರಲ್ಲಿ ಬರುವವರು ಒಂದು ರೀತಿಯ ಸಾಹಸಿಗಳು. ಇವರು ಅದ್ಯಾವುದೋ ಹಳೆ ಕಾಲದ ದೇವಸ್ಥಾನವನ್ನು ಹೊಕ್ಕಿರುತ್ತಾರೆ. ಆಗ, ಅಲ್ಲಿರುವ ಪಿಶಾಚಿಯಂತಹ ಕಾವಲುಗಾರರು ಇವರನ್ನು ಅಟ್ಟಿಸಿಕೊಂಡು ಬರುತ್ತಾರೆ. ಇವರು ತಪ್ಪಿಸಿಕೊಳ್ಳಬೇಕು. ಹೀಗೆ ಸುಮ್ಮನೆ ಓಡುತ್ತಲೇ ಇರಬೇಕು. ಹಾಗೆಯೇ ಓಡುವಾಗ ಅನೇಕ ಅಡಚಣೆಗಳು ಎದುರಾಗುತ್ತವೆ.

ಇಷ್ಟೇ ಅಲ್ಲದೆ, ಪಿಟ್ಜಾ ಪಾರ್ಟಿ, ಫಾರ್ಮ್-ಫ್ರೆನ್ಸಿ, ವೂಡೂ ಫ್ರೆಂಡ್ಸ್. ಆಂಟ್ ಸ್ಮಾಶರ್, ಡ್ರೆಸ್ ಪ್ರಿನ್ಸೆಸ್, ಸ್ಟಿಕ್ ಟೆನ್ನಿಸ್, ಸ್ಟಿಕ್ ಕ್ರಿಕೆಟ್, ಗಾರ್ಡೆನ್ ವಾರ್…. ಹೀಗೆ ಅನೇಕ ಆಟಗಳಿವೆ. ಇನ್ನೇಕ ತಡ.. ನಿಮ್ಮ ನಿಮ್ಮ ಸ್ಮಾರ್ಟ್ ಫೋನ್ ತೆಗೆದು, ಆಟಗಳನ್ನು ಆಡಲು ಅನುವಾಗಿ.

ಲೇಖಕ: ಸುನಿಲ್ ಜಯಪ್ರಕಾಶ್

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. “ನನ್ನಿ ಸುನಿಲ” ಎಂಬುದು ನನಗೂ ಇಷ್ಟವಾದ ಹೆಸರು. www.chukkiworks.com ನ ಕಣಸುಗಾರ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಮತ್ತೊಂದು ಕಣಸು. ಇವುಗಳ ನಡುವೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ… [email protected]