ಅದು ನಾನು ಕಾಲೇಜ್ ಮುಗಿಸಿ ಕೆಲಸಕ್ಕಾಗಿ ಕಾಯುತ್ತಿದ್ದ ದಿನಗಳು. ಪ್ರತಿ ದಿನವೂ ಏನು ಮಾಡುವುದು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ದಿನಪೂರ್ತಿ ಉತ್ತರದ ಹುಡುಕಾಟದಲ್ಲಿ ಕಳೆದು, ಕೊನೆಗೆ ಏನೂ ಮಾಡಲಿಲ್ಲ ಎಂಬ ನಿರಾಸೆಯೊಂದಿಗೆ ಕಾಲಹರಣ ಮಾಡುತ್ತಿದ್ದ ದಿನಗಳು. ಆಗ ನನಗೆ ಗೆಳೆಯರ ಮೂಲಕ ಅಂತರ್ಜಾಲದಲ್ಲಿ ಬ್ಲಾಗ್ ಎಂಬ ಪ್ರಪಂಚದ ಪರಿಚಯವಾಯಿತು. ಓದುವ ಹವ್ಯಾಸವನ್ನು ಚಿಕ್ಕ ವಯಸ್ಸಿನಿಂದಲೇ ಬೆಳೆಸಿಕೊಂಡಿದ್ದ ನನಗೆ ಸಹಜವಾಗಿ ಈ ಪ್ರಪಂಚ ಕುತೂಹಲಕಾರಿಯಾಗಿ ಕಂಡಿತು. ಸಿಕ್ಕ ಬ್ಲಾಗಿನ ಕೊಂಡಿಯನ್ನು ಕ್ಲಿಕ್ಕಿಸಿ, ಅದರಲ್ಲಿನ ಲೀಖನಗಳನ್ನು ಓದಿ, ಅಲ್ಲಿಂದ ಸಿಕ್ಕ ಮತ್ತೊಂದು, ಮಗದೊಂದು ಬ್ಲಾಗಿನ ಕೊಂಡಿಗಳನ್ನು ಕ್ಲಿಕ್ಕಿಸಿಕೊಂಡು ಓದುತ್ತ ಹೋದಂತೆ ಸಮಯ ಕಳೆಯುತ್ತಿದ್ದದೆ ತಿಳಿಯುತ್ತಿರಲಿಲ್ಲ. ನನ್ನ ಅಂದಿನ ಅವಶ್ಯಕತೆಗೆ ತಕ್ಕ ಗೆಳೆಯನಾಗಿ ಸಿಕ್ಕಿತು ಈ ಬ್ಲಾಗಿನ ಪ್ರಪಂಚ.

ಈಗಾಗಲೇ ನೀವೆಲ್ಲ ಊಹಿಸಿರುವಂತೆ ಬ್ಲಾಗ್ ಎಂದರೆ, “online ದಿನಚರಿ”. ಬ್ಲಾಗಿನಲ್ಲಿ, ಅದರ ಬ್ಲಾಗರ್ ಏನು ಬೇಕಾದರೂ ದಾಖಲಿಸಬಹುದು. ತನ್ನ ಖಾಸಗಿ ವಿಷಯಗಳೊಂದಿಗೆ, ತನ್ನ ಪ್ರವಾಸ ಕಥನ, ಕವಿತೆ, ತನ್ನ ಅಪರಿಮಿತವಾದ ಜ್ಞಾನ ಭಂಡಾರ, ಆಲೋಚನೆ, ಹೊಸ ಆವಿಷ್ಕಾರ. ತನ್ನ ನೆಚ್ಚಿನ ನಾಯಿ ಮರಿ ಹಾಕಿದ ಸಂತಸದ ವಿಷಯ.. ಹೀಗೆ, ಅಲ್ಲಿ ಬ್ಲಾಗರ್ ಏನು ಬರೆಯಬಹುದು, ಏನು ಬರೆಯಬಾರದು ಎಂಬುದರ ಬಗ್ಗೆ ಯಾವ ಕಡಿವಾಣವೂ ಇರುವುದಿಲ್ಲ. ಆದರೆ ಏನು ಓದಬೇಕು, ಏನು ಓದಬಾರದು ಎಂಬ ಕಡಿವಾಣ ನಮಗಂತೂ ಖಂಡಿತ ಇರುತ್ತದೆ. ನನ್ನ ಮೊದಲ ಕೆಲವು ದಿನಗಳ ಬ್ಲಾಗ್ ಅನುಭವದಲ್ಲಿ ನನಗೆ ಎದುರಾದ ಸಮಸ್ಯೆ ಇದೇ. ಒಂದು ಬ್ಲಾಗ್ ತಾಣದಿಂದ ಇನ್ನೊಂದು ತಾಣಕ್ಕೆ ನೆಗೆಯುತ್ತ, ಜ್ಞಾನವನ್ನು ಬಸಿಯುತ್ತ ಹೋದಂತೆ, ಮೊದಲು ನೋಡಿದ ತಾಣ/ಬ್ಲಾಗ್ ಸಂಪೂರ್ಣ ಮರೆತು ಹೋಗುತಿತ್ತು. ಮತ್ತೆ ಅದೇ ವಿಷಯದ ಬಗ್ಗೆ ತಿಳಿಯಲು ಬಯಸಿದಾಗ ಅದನ್ನು ಹೆಕ್ಕಿ ತೆಗೆಯಲು ಗೂಗಲ್ ಮೊರೆ ಹೋಗಬೇಕಿತ್ತು. ಇಲ್ಲವಾದರೆ ನನ್ನ ಬ್ರೌಸರ್ ನಲ್ಲಿ ಇರುತ್ತಿದ್ದ ಸಾವಿರ URLಗಳ ನಡುವೆ ಇಡೀ ಬ್ಲಾಗಿನ ಕೊಂಡಿಯನ್ನು ಹುಡುಕಬೇಕಿತ್ತು. ದಿನ ಕಳೆದಂತೆ ಈ ಕೆಲಸ ಮತ್ತಷ್ಟು ಕ್ಲಿಷ್ಟವಾಗತೊಡಗಿತು. ಅಷ್ಟೇ ಅಲ್ಲದೆ ನನ್ನ  ನೆಚ್ಚಿನ ಬ್ಲಾಗ್ ನಲ್ಲಿ ಹೊಸ ಲೇಖನದ ಸೇರ್ಪಡೆಯಾದರೆ ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಇದಕ್ಕೆ ಪರಿಹಾರವನ್ನು ಹುಡಕಬೇಕು ಎಂದು ಗೂಗಲ್ ನಲ್ಲಿ ಜಾಲಾಡಿದಾಗ ಸಿಕ್ಕ ಪರಿಹಾರಗಳಲ್ಲಿ ನನಗೆ ಮೆಚ್ಚುಗೆಯಾದದ್ದು “ಗೂಗಲ್ ರೀಡರ್”. (reader.google.com)

“ಗೂಗಲ್ ರೀಡರ್” ಗೂಗಲ್ ನ ಹಲವು ಆವಿಷ್ಕಾರಗಳಲ್ಲಿ ಒಂದು. ನಮಗೆ ಬೇಕಾದ ಯಾವುದೇ  ಬ್ಲಾಗಿನ  URL ಅನ್ನು ಇಲ್ಲಿ ಒಮ್ಮೆ ಫೀಡ್ ಮಾಡಿಬಿಟ್ಟರೆ ಆಯಿತು, ರೀಡರ್ ಅದರ ಅಡ್ರೆಸ್ ಮತ್ತು ಮಾಹಿತಿಯನ್ನು ಸದಾ ತನ್ನ ಬಳಿ ಇಟ್ಟುಕೊಂಡಿರುತ್ತದೆ ಮತ್ತು ನಮಗೆ ಯಾವಾಗ ಬೇಕಾದರೆ ಆಗ ನಮಗೆ ನೀಡುತ್ತದೆ. ಇದು ನಮ್ಮ ಗೂಗಲ್ ಅಕೌಂಟ್ ಜೊತೆಗೆ ಬೆಸೆದುಕೊಂದಿರುವುದರಿಂದ, ಇದನ್ನು ನಾವು ಎಲ್ಲಿ ಬೇಕೆಂದರೆ ಅಲ್ಲಿ, ಅಂತರ್ಜಾಲದ ಲಭ್ಯತೆಯಿರುವಲ್ಲೆಲ್ಲ ವೀಕ್ಷಿಸಬಹುದು. ಅಂದರೆ, ನನ್ನ ಆಫೀಸಿನ ಸಮಯದಲ್ಲಿ ಸಮಯ ಸಿಕ್ಕಾಗ, ಪ್ರಯಾಣ ಮಾಡುವಾಗ ನನ್ನ ಮೊಬೈಲ್ ನಲ್ಲಿ ಹೀಗೆ. ಇಷ್ಟೇ ಅಲ್ಲದೆ ನನಗೆ ಬೇಕಾದ ಎಲ್ಲ ಬ್ಲಾಗನ್ನು ಕೇವಲ  ಬ್ರೌಸೆರ್ ನ ಒಂದೇ  ಕಿಟಕಿಯಲ್ಲಿ ನೋಡಬಹುದು ಹಾಗೂ ಯಾವುದೇ ಬ್ಲಾಗಿನಲ್ಲಿ ಹೊಸ ಲೇಖನದ ಸೇರ್ಪಡೆಯಾದರೆ, ಆ ಬ್ಲಾಗಿನ ಹೆಸರು ದಪ್ಪಕ್ಷರದಲ್ಲಿ ಮೂಡುವುದರಿಂದ ನಾನು ಸದಾ updated ಆಗಿರಬಹುದು.

ನನ್ನ ಬ್ಲಾಗ್ ಪಯಣ ಇನ್ನಷ್ಟು ಮುಂದುವರೆದು ನಾನೊಂದು ಬ್ಲಾಗ್ ಅನ್ನು ಬರೆಯಬೇಕು ಎಂಬ ಯೋಚನೆಯಲ್ಲಿದ್ದಾಗ ನನಗೆ ಎದುರಾದ ಪ್ರಶ್ನೆ ಕನ್ನಡಲ್ಲಿ ಬರೆಯುವುದು ಹೇಗೆ ಎಂಬುದು. “ಬರಹ” ಮತ್ತು “ನುಡಿ” ಎಂಬ ಎರಡೂ ತಂತ್ರಾಂಶಗಳು ಪರಿಚಿತವಾಗಿದ್ದರೂ, ನನಗೆ ಅದರಲ್ಲಿ ಬರೆಯುವುದು ಬಹಳ ಕಷ್ಟಕರವಾಗಿಯೇ ತೊರುತ್ತಿತ್ತು. ಆಗ ಪುನಹ ನನ್ನ ಸಹಾಯಕ್ಕೆ ನಿಂತದ್ದು ಗೂಗಲ್. ಗೂಗಲ್ ನ “ಗೂಗಲ್ ಟ್ರಾನ್ಸ್ಲಿಟರೇಟ್” (transliterate.google.com) ಎಂಬ ಮತ್ತೊಂದು ಆವಿಷ್ಕಾರ ಕನ್ನಡದಲ್ಲಿ ಬರೆಯುವ ಕೆಲಸವನ್ನು ಇಂಗ್ಲಿಷ್ ನಲ್ಲಿ ಬರೆಯುವಷ್ಟೆ ಸುಗಮಗೊಳಿಸಿತು. ಇದೊಂದು “ಮಶಿನ್ ಲರ್ನಿಂಗ್ ಟೂಲ್ ” ಆಗಿರುವುದರಿಂದ ನಾವು ಬರೆದಂತೆ ಪದಗಳನ್ನು ತನ್ನ ನೆನಪಿಗೆ ಸೇರಿಸಿಕೊಂಡು ಆ ಪದವನ್ನು ಬೇರೆ ಯಾರಾದರು ಬರೆಯಲು ಪ್ರಯತ್ನ ಪಟ್ಟರೆ ತನ್ನ ಸೂಚನಾ ಕಿಟಕಿಯಲ್ಲಿ ತೋರಿಸಿವುದರ ಮೂಲಕ  ಕನ್ನಡದಲ್ಲಿ ಬರೆಯುವುದನ್ನು ಮತ್ತಷ್ಟು ಸುಗಮಗೊಳಿಸಿತು.

ಮುಂದುವರೆದಂತೆ ಉಂಟಾದ ಮತ್ತೊಂದು  ಸಮಸ್ಯೆಯೆಂದರೆ, “ಗೂಗಲ್ ಟ್ರಾನ್ಸ್ಲಿಟರೇಟ್” ಗೆ ಅಂತರ್ಜಾಲದ ಹಂಗು. ನನ್ನ ಅಂತರ್ಜಾಲದ ಸಂಪರ್ಕ ಕೊನೆಗೊಂಡರೆ, ಅಥವಾ ಸಂಪರ್ಕವೇ ಇಲ್ಲದಿದ್ದರೆ ಕನ್ನಡದ ಬರವಣಿಗೆ ಸಾಗುತ್ತಿರಲಿಲ್ಲ. ನಾನಾಗಲೇ windows ನಿಂದ ಲಿನಕ್ಸ್ ಗೆ ಬಂದಾಗಿತ್ತು. ಲಿನಕ್ಸ್ ನಲ್ಲಿ ಈ ಸಮಸ್ಯೆಗೆ ಬಹಳ ಸುಲಭವಾದ ಪರಿಹಾರ ದೊರಕಿತು. ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ  ಕನ್ನಡ  language pack ಮತ್ತು iBus ಎಂಬ ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಂಡ ಮೇಲೆ ಇಂಗ್ಲಿಷ್ ನಲ್ಲಿ ಬರೆದಷ್ಟೆ ಸುಲಭವಾಗಿ ಕನ್ನಡದಲ್ಲೂ ಬರೆಯುವುದು ಸಾಧ್ಯವಾಗಿದೆ, ಅಂತರ್ಜಾಲದ ಹೊರತಾಗಿಯೂ ಕೂಡ.

ದಿನ ಕಳೆದಂತೆ ತಂತ್ರಜ್ಞಾನ  ಬದಲಾಗುತ್ತಿದೆ. ಎರಡು ವರ್ಷದ ಕೆಳಗೆ laptopನಲ್ಲಿ ಮಾಡುತ್ತಿದ್ದ ಕೆಲಸವೆಲ್ಲವನ್ನು ಈಗ smartphoneನಲ್ಲಿ ಮಾಡಬಹುದಾಗಿದೆ. ಹಾಗೆಯೇ ಗೂಗಲ್ ರೀಡರ್ ನandroid application ಸಹ ಲಭ್ಯವಿದ್ದು ಈಗ ನನ್ನ ಸಂಪೂರ್ಣ ಓದುವಿಕೆ ಮೊಬೈಲ್ ನಲ್ಲೆ ನಡೆಯುತ್ತದೆ. ಕೆಲವು ಮೊಬೈಲ್ ಗಳಲ್ಲಿ ಕನ್ನಡ font support ಇಲ್ಲದಿರುವುದರಿಂದ ಓದುವುದು ಸಾಧ್ಯವಾಗದೆ ಇದ್ದಾಗ laptopನ ಮೊರೆ ಹೋಗದೆ ಇರಲಾಗುವುದಿಲ್ಲ. ಆದರೆ ಈ ನಿಟ್ಟಿನಲ್ಲಿ ಬಹಳಷ್ಟು ಕೆಲಸ ನಡೆಯುತ್ತಿರುವುದರಿಂದ ಬೇಗಲೇ ಇದು ಸಹ ನಮ್ಮ ಅಂಗೈಗೆ ಬರುವುದನ್ನು ಕಾಯಬಹುದು.

ಸುಹಾಸ್

ಸುಹಾಸ್

ಸುಹಾಸ್
ಬೆಂಗಳೂರಿನಲ್ಲಿ ವಾಸ, ಬಿ.ಇ. ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಹಾಗೂ ಹೊಟ್ಟೆಪಾಡಿಗೆ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿನೀಯರ್ ಉದ್ಯೋಗ. ಓದುವುದು ಹವ್ಯಾಸಕ್ಕಿಂತ ಹೆಚ್ಚು , ಬರೆಯುವುದು ಓದುವುದಕ್ಕಿಂತ ಕಡಿಮೆ. ಸಂಗೀತ ಮತ್ತು ಸಿನಿಮಾ ಆಕರ್ಷಣೆ. ದಿನದ ಹೆಚ್ಚು ಸಮಯವನ್ನು ಕಂಪ್ಯೂಟರ್ ನ ಮುಂದೆಯೇ ಕಳೆಯುವುದರಿಂದ ಅದರಲ್ಲೂ ಸಹ ಕನ್ನಡವನ್ನು ಕಾಣುವಲ್ಲಿ ಅಪರಿಮಿತ ಆಸೆ. ಪ್ರವಾಸ, ಅದರ ಕಥನ, ಇತ್ತೀಚಿಗೆ ಛಾಯಾಗ್ರಹಣೆ, ಅಲ್ಲೊಂದು ಕಥೆ, ಇಲ್ಲೊಂದು ಚುಟುಕು, ಹೀಗೆ ಸದಾ ಹೊಸತನದ ಅನ್ವೇಷಣೆಯಲ್ಲಿ ಓಡುತ್ತಿರುವ ದಿನಗಳನ್ನು ಹಿಡಿಯುವಲ್ಲಿ ನಿರಂತರ ಪ್ರಯತ್ನ.