20ನೇ ಶತಮಾನದ ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ.

ವಸಾಹತೋತ್ತರ ಕರ್ನಾಟಕದ ನಿಸರ್ಗ ಚಿತ್ರಣಕ್ಕೆ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದರೂ ಸಹ, ಇನ್ನಿತರ ಪ್ರಕಾರಗಳಿಗೆ ಸಿಕ್ಕಂತ ಮನ್ನಣೆ ಇದಕ್ಕೆ ಸಿಕ್ಕಿರುವುದು ವಿರಳವೆಂದೇ ಹೇಳಬಹುದು. ವೆಂಕಟಪ್ಪನವರ ಆದಿಯಾಗಿ ಈಗಲೂ ಉತ್ತರಕರ್ನಾಟಕದ ಬಹುತೇಕ ಕಲಾವಿದರು ನಿಸರ್ಗಚಿತ್ರಣದಲ್ಲಿ ತೊಡಗಿದ್ದರು, ಕೇವಲ ಬೆರಳೆಣಿಕೆಯಷ್ಟು ಕಲಾವಿದರ ಕಲಾಕೃತಿಗಳನ್ನು ಹೊರತುಪಡಿಸಿದರೆ ನಿಸರ್ಗ ಚಿತ್ರಣಗಳನ್ನು ಕಲೆಯ ಮುಖ್ಯವಾಹಿನಿಯಾಗಿ, ಚರ್ಚೆಗೊಳಪಡಿಸುವುದಾಗಲಿ ಅಥವ ಕಲಾ ಇತಿಹಾಸದ ಪ್ರಮುಖ ಘಟ್ಟಗಳನ್ನು ಗುರುತಿಸುವ ಕಾರ್ಯ ನಡೆದಿಲ್ಲವೆಂಬ ಅಂಶವನ್ನು ಗುರುತಿಸಬಹುದು.

ಕೃಪೆ:   ಕರ್ನಾಟಕ ಚಿತ್ರಕಲಾ ಪರಿಷತ್ತು, ಗ್ರಂಥಾಲಯ ವಿಭಾಗ

ಕಲಾಶಾಲೆಗಳ ಪ್ರಭಾವ ನಿಸರ್ಗ ಪ್ರಕಾರದ ಮೇಲೆ

ವಸಾಹತೋತ್ತರ ಕರ್ನಾಟಕದ ಚಿತ್ರಕಲೆಯಲ್ಲಿನ ಪ್ರಮುಖ ಕಲಾವಿದರ ಕಲಾಕೃತಿಗಳಲ್ಲಿ ಎರಡು ಪ್ರಮುಖ ಕಾಲಾಶಾಲೆಗಳ ಅಭ್ಯಾಸ ಕ್ರಮದ ಪ್ರಭಾವಿತ ಶೈಲಿಗಳನ್ನು ಗುರುತಿಸುವುದಾದರೆ ಅದು ಜೆ.ಜೆ ಕಲಾಶಾಲೆಯ ಅಭ್ಯಾಸದಿಂದ ಪ್ರಭಾವಿತ ಶೈಲಿ. ಮತ್ತು ಕಲ್ಕತ್ತಾ, ಶಾಂತಿನಿಕೇತನದ ಬಂಗಾಲಿ ಪುನರುಜ್ಜೀವನ ಶೈಲಿ ಮತ್ತೊಂದು. ಇದಕ್ಕೂ ಮೊದಲು ಕರ್ನಾಟಕ ಕಲಾಭ್ಯಾಸಗಳನ್ನು ಸಾಂಪ್ರದಾಯಿಕ ಶೈಲಿಗಳೆ ಪ್ರಭಾವಿಸಿದ್ದು, ಬ್ರಿಟೀಷರ ಶೈಲಿಯ ಭಾರತೀಯ ಕಲಾಭ್ಯಾಸವನ್ನು ಮೈಸೂರು ರಾಜರ ಆಸ್ಥಾನ ಕಲಾವಿದರಲ್ಲಿ ಕಾಣಬಹುದು.

ಈ ಆಸ್ಥಾನ ಕೇಂದ್ರಿತ ಅಥವ ಮಹಾರಾಜರ ಪ್ರೋತ್ಸಾಹದಿಂದ ರಚಿತವಾಗುತ್ತಿದ್ದ ಕಲಾಕೃತಿಗಳು ಮಾಹಾರಾಜರಿಗಾಗಿ ಮಾತ್ರ ರಚಿಸುತ್ತಿದ್ದರಿಂದ ಅವು ಅರಮನೆಯ, ರಾಜನ ಒಡ್ದೋಲಗ, ವೈಭೋಗವನ್ನು ಪ್ರತಿನಿದಿಸುವ, ರಾಜನ ಸಂಭ್ರಮಾಚಾರಣೆಯನ್ನು ದಾಖಲಿಸುವ (ಕಾಲದ) ಕಲಾಕೃತಿಗಳಾಗಿ ಉಳಿದವೇ ಹೊರತು, ಅರಮನೆಯ ಸರಹದ್ದುಗಳನ್ನು ಮೀರಿ ಕಾಲ ಘಟ್ಟಗಳನ್ನು, ಪರಿಸರಗಳನ್ನು, ಜನಜೀವನದೊಂದಿಗೆ ಮೇಳೈಸುವ ನಿಸರ್ಗ ಚಿತ್ರಣಗಳು ಕಾಣಸಿಗುವುದೇಇಲ್ಲ. ಇಲ್ಲವೇ ದೊರಕಿದರೂ ಅವು ಕರ್ನಾಟಕದವರಲ್ಲದ ಕಲಾವಿದರು ಮತ್ತು ಬ್ರಿಟೀಷರಿಂದ ರಚಿತಗೊಂಡಿರುವ ಕಲಾಕೃತಿಗಳನ್ನಷ್ಟೇ ಕಾಣಬಹುದು.

ಅ) ಪ್ರಭುತ್ವ ಮತ್ತು ನಿಸರ್ಗ

ವಸಾಹತು ಕಾಲದಿಂದಲೇ ಪ್ರಾರಂಭಿಸಿ ಮಹಾರಾಜರ ಪ್ರೋತ್ಸಾಹದಿಂದ ಶಾಂತಿನಿಕೇತನದಲ್ಲಿ ಕಲಾವ್ಯಾಸಂಗ ಮಾಡಿ ಬಂದ ಕಲಾಕುಟುಂಬದ ಹಿನ್ನಲೆಯ ಕೆ.ವೆಂಕಟಪ್ಪನವರು ಈ ಮೇಲಿನ ದಾಖಲೆಗಳಿಗೆ ಅಪವಾದವೆಂಬಂತೆ ನಿಸರ್ಗ ದೃಶ್ಯಗಳ ರಚನೆಯಲ್ಲಿ ತೊಡಗಿದ್ದರು. ಇವರು ಪಡೆದುಕೊಂಡ ಶಿಕ್ಷಣದ ಪ್ರಭಾವದ ಹಿನ್ನಲೆಯಲ್ಲೇ ಈ ಚಿತ್ರಗಳನ್ನು ನೋಡುವುದಾದರೆ ಇವು ವಸಾಹತು ಶೈಲಿಗಳಿಂದ ಭಿನ್ನವಾಗಿ ನಿಲ್ಲುವುದು ಇವರ ಚಿತ್ರಗಳಲ್ಲಿ ಎಲ್ಲಿಯೂ ನಮಗೆ ಪ್ರಾಚೀನ ಕಟ್ಟಡಗಳ, ಸ್ಮಾರಕಗಳ ಚಿತ್ರಗಳು ಸಿಗುವುದಿಲ್ಲ. ಅಲ್ಲಿ ಸಿಗುವುದೆಲ್ಲ ಅಪ್ಪಟ ನಿಸರ್ಗ ಚಿತ್ರಗಳು. ಅಥವ ವಸಾಹತು ಶೈಲಿಯ ದಾಖಲೆಗಳಾಗಿ ಉಳಿಯಬೇಕೆಂಬ ಕಲಾರಚನೆಯನ್ನು ದಿಕ್ಕರಿಸಲೆಂದೇ ರಚನೆಯಾದ ವಿರೋಧಿನೆಲೆಯಲ್ಲಿ ರಚಿತ ಕಲಾಕೃತಿಗಳು. ಇದಕ್ಕೆ ಸ್ಪಷ್ಟ ಉದಹರಣೆ ಕೊಡಬಹುದಾದರೆ ಅದು

ವೆಂಕಟಪ್ಪನವರ ಅಗ್ರಹಾರದ ಒಂದು ಮರದ ಚಿತ್ರವನ್ನು ಉದಾಹರಿಸಬಹುದು. ಇಡೀ ಕಲಾಕೃತಿಯ ಚೌಕಟ್ಟಿನಲ್ಲಿ ಹೆಂಚಿನ ಮಾಡಿನ ಮುನ್ನಲೆಯಲ್ಲಿ ಮರವನ್ನು ಕೇಂದ್ರೀಕರಿಸಿ ಚಿತ್ರವನ್ನು ರಚಿಸಲಾಗಿದೆ. ವಸಾಹತುಗಳ ಪ್ರಭಾವವೇ ಎಲ್ಲ ಕಲಾಕೃತಿಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಲಘಟ್ಟದಲ್ಲಿ ರಚಿತವಾದ ಈ ಕಲಾಕೃತಿಯಲ್ಲಿ ಅಲ್ಲಿಯವರೆಗಿನ ಕಲಾಹಾದಿಯನ್ನೇ ಕವಲು ದಾರಿಯಲ್ಲಿ ನಡೆಸಲು ಪ್ರಯತ್ನಿಸಿರುವುದರ ಹಿಂದೆ ಶಾಂತಿನಿಕೇತನದ ಬಂಗಾಲಿ ಪುನರುಜ್ಜೀವನದ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದರೊಂದಿಗೆ ಈ ಕಲಾವಿದನಿಗೆ ಮೈಸೂರು ಸಂಸ್ಥಾನದ ವಸಾಹತು ನೀತಿಗಳು ಮತ್ತು ಅವರ ಪ್ರಭಾವಿತ ಸಂಸ್ಕೃತಿಯೆಡೆಗಿನ ತಿರಸ್ಕಾರ ಮತ್ತು ನಿರಾಕರಣೆಯೂ ಇರಬಹುದೇ ಎಂಬ ಅನುಮಾನವು ಮೂಡದೇ ಇರುವುದಿಲ್ಲ.
ವೆಂಕಟಪ್ಪನವರಿಗೆ ವಸಾಹತುಶಾಹಿ ಪ್ರಭಾವದೊಂದಿಗೆ ಬಹುಶಃ ಮಹಾರಾಜರ ಜನಪರಯೋಜನೆಗಳನ್ನು ಸಹ ತಮ್ಮ ಮೇಲಿನ ಋಣಭಾರ(ಶಾಂತಿನಿಕೇತನಕ್ಕೆ ವ್ಯಾಸಂಗದ ಸಲುವಾಗಿ ಕಳಿಸಿದ್ದು)ದರ ಸಲುವಾಗಿ ತಮ್ಮ ಕಲಾಕೃತಿಗಳಲ್ಲಿ ಎಲ್ಲೂ ದಾಖಲಿಸುವ ವೈಭವೀಕರಿಸುವ ಗೋಜಿಗೆ ಹೋಗಿಲ್ಲವೇನೋ ಎಂಬ ಸಂದೇಹವು ಮೂಡುತ್ತದೆ.

ವೆಂಕಟಪ್ಪನವರ ಕೊಡೈಕೆನಾಲ್-ಊಟಿ ಚಿತ್ರಗಳು ಕೂಡ ಅಲ್ಲಿನ ಪರಿಸರವನ್ನು ದೃಶ್ಯದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತವೆಯೇ ಹೊರತು, ಆ ಪರಿಸರದ ವ್ಯಾಪ್ತಿಯಲ್ಲಿ ದಟ್ಟವಾಗಿ ವ್ಯಾಪಿಸಿದ್ದ ಬ್ರಿಟೀಷರ ವಾಸ್ತುಶಿಲ್ಪ ಕಟ್ಟಡಗಳು, ಸ್ಮಾರಕಗಳನ್ನಲ್ಲ. ಅದರ ಬದಲಿಗೆ ವಸಾಹತುಶಾಹಿ ಕಲಾಭ್ಯಾಸದ ಕಲಾಶಾಲೆಯಾದ ಜೆ.ಜೆ.ಕಲಾಶಾಲೆಯ ನೈಜ ಚಿತ್ರಣದ ಪ್ರಭಾವವನ್ನು ಕಾಣಬಹುದು. ವೆಂಕಟಪ್ಪನವರ ನಿಸರ್ಗ ಚಿತ್ರದಲ್ಲಿ ಕಾಣುವ ಮತ್ತೊಂದು ಅಂಶವೆಂದರೆ ಅವರ ನಿಸರ್ಗ ಚಿತ್ರಗಳಲ್ಲಿ ಎಲ್ಲಿಯೂ ಆಗಿನ ಜನ-ಜೀವನವು ಕಾಣುವುದಿಲ್ಲ. ಹಾಗಾಗಿ ಅವರ ಕಲಾಕೃತಿಗಳು ವಸಾಹತೋತ್ತರ-ಪೂರ್ವದ ಕಾಲಘಟ್ಟದಲ್ಲಿ ರಚಿತವಾಗಿದ್ದರೂ ಕಾಲದ ಗಣನೆಗೆ ಎಲ್ಲೂ ಒಳಗಾಗುವುದೇ ಇಲ್ಲ. ಹಾಗಾಗಿ ಅವು ಕಾಲದ ವ್ಯಾಪ್ತಿಯ ಹೊರಗೇ ಉಳಿಯುವಂತ ಸಾಂಪ್ರದಾಯಿಕ ಶೈಲಿಯ ಮುಂದುವರಿದ ಭಾಗದ ಕಲಾಕೃತಿಗಳಾಗಿ ನಿಲ್ಲುತ್ತವೆ. ಇವರ ಒಟ್ಟಾರೆ ನಿಸರ್ಗ ಚಿತ್ರಗಳನ್ನು ಗಮನಿಸಿದಲ್ಲ್ಲಿ ಇವು ಕಾ¯ದ ರಾಜಕೀಯ ನಡೆಗಳು, ವಸಾಹತುಶಾಹಿ ಪ್ರಭಾವ, ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಸ್ವಾತಂತ್ರ್ಯ ಪೂರ್ವದ ಮೂರು ದಶಕಗಳು ಮತ್ತು ಸ್ವಾತಂತ್ರ್ಯೋತ್ತರದ ಮೂರು ದಶಕಗಳು ಕರ್ನಾಟಕದಲ್ಲಿ, ಅದಕ್ಕೂ ಮುಂಚಿನ ಸಾಂಪ್ರದಾಯಿಕ ಶೈಲಿಗಳಿಂದ ಹೊರಬಂದು ಪಾಶ್ಚಿಮಾತ್ಯದ ಪ್ರಭಾವದಿಂದ ಪ್ರೇರಿತವಾಗಿ ಕರ್ನಾಟಕ ಕಲಾ ಇತಿಹಾಸದ ಆಧುನಿಕ ಕಲಾ ಪರ್ವದ ಬುನಾದಿ ಕರ್ನಾಟಕ ಕಲಾಚರಿತ್ರೆಗೆ ಕಟ್ಟಿಕೊಟ್ಟ ಕಾಲವೆಂದು ಗುರುತಿಸಬಹುದು. ಕಾರಣ ಅಲ್ಲಿಯವರೆಗು ಇದ್ದ ವಂಶಪಾರಂಪರ್ಯದ ಕಲಾಭ್ಯಾಸದಿಂದ ಹೊರಗೆ ಬಂದು, ವಸಾಹತುಶಾಹಿ ಕಲಾ ಶಿಕ್ಷಣವನ್ನು ಕಲಿಸಲು ಆರಂಭಿಸಿದ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟ್ಯೂಟ್ ಮತ್ತು ಹೆಚ್ಚಿನ ವ್ಯಾಸಂಗಕ್ಕೆ ಜೆ.ಜೆ.ಕಲಾಶಾಲೆಗೆ, ಮದ್ರಾಸು ಆರ್ಟ್ ಕಾಲೇಜ್ ಹೋಗುವ ಪರಿಪಾಠ ಆರಂಭವಾದ ಕಾಲವದು.

ಈ ಹಿಂದೆ ಹೇಳಿದಂತೆ ಕರ್ನಾಟಕದ ಕಲಾಚರಿತ್ರೆಯ ವಸಾಹತುಶಾಹಿ ಶೈಲಿಯ ಆಧುನಿಕ ಪರ್ವದ ಆರಂಭದ ಕಾಲದಲ್ಲಿ ಮೈಸೂರು ರಾಜಾಶ್ರಯದ ಕಲಾವಿದರಷ್ಟೇ ಅಲ್ಲದೆ ಮೈಸೂರು ಪ್ರಾಂತ್ಯದಲ್ಲೇ ಆದರೆ ಮೈಸೂರಿಗೆ ದೂರದ ಪ್ರದೇಶಗಳಾದ ಧಾರವಾಡ, ಕಲ್ಬುರ್ಗಿ, ಬೆಳಗಾವಿಯಲ್ಲೂ ಕೂಡ ಈ ವಸಾಹತುಶಾಹಿಯ ಪ್ರಭಾವದಿಂದಾಗಿ ಚಿತ್ರಕಲೆಯಲ್ಲಿ ಕಲಾಶಿಕ್ಷಣವನ್ನು ಪಡೆದು ಕಲಾಕೃತಿಗಳನ್ನು ರಚಿಸುವ ಕಲಾವಿದರ ಸಂಖ್ಯೆಯು ಜಾಸ್ತಿಯಾಯಿತು. ಅಲ್ಲಿನ ಬಹುತೇಕರು ಕಲಾ ಶಿಕ್ಷಣಕ್ಕೆ ಮುಂಬಯಿಯ ಜೆ.ಜೆಯನ್ನೇ ಆಯ್ದುಕೊಂಡದ್ದು ಹೆಚ್ಚು. ಅದರಲ್ಲಿ ಕೆಲವರು ಜೆ.ಜೆಯಲ್ಲಿ ಪ್ರವೇಶ ಸಿಗದೆ ಜಿ.ಎಸ್.ದಂಡಾವತಿ ಮಠರ ನೂತನ ಕಲಾಮಂದಿರದಲ್ಲಿ ಶಿಕ್ಷಣಪಡೆದವರು ಇದ್ದಾರೆ. ಆ ನಂತರದ ದಿನಗಳಲ್ಲಿ ಪ್ರಾರಂಭವಾದ ಡಿ.ವಿಹಾಲಭಾವಿ ಕಲಾಶಾಲೆ, ಗದಗಿನ ವಿಜಯ ಕಲಾಮಂದಿರದಲ್ಲು ಕಲಾಶಿಕ್ಷಣ ಪ್ರಾರಂಭವಾಯಿತು. 60-70ರ ದಶಕದಲ್ಲಿ ಕೆನ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತು ಆರಂಭವಾಯಿತು.

ಆ) ನಿಸರ್ಗ ಚಿತ್ರಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವ

ಈ ಎಲ್ಲ ಬೆಳವಣಿಗೆಗಳ ಹಿಂದೆ ಅದಾಗಲೇ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟೀಷರ ಜೆ.ಜೆ ಪ್ರಭಾವ ಕಲಾವಿದರ ಕಲಾಕೃತಿಗಳ ರಚನೆಯಲ್ಲಿ ಆಳವಾಗಿ ಬೇರೂರಿದ್ದರಿಂದ ಅಲ್ಲಿಯವರೆಗೂ ಅಂದರೆ ವಸಾಹತುಶಾಹಿಗೂ ಮೊದಲಿನ ಸಾಂಪ್ರದಾಯಿಕ ಚಿತ್ರಗಳಲ್ಲಿ

ಹಿನ್ನಲೆಯಾಗಿದ್ದ ನಿಸರ್ಗ ಚಿತ್ರಗಳ ಸಂಪ್ರದಾಯ, ಸಾಂಪ್ರದಾಯಿಕತೆಯಿಂದ ಹೊರಬಂದು ತಮ್ಮದೇ ಪ್ರತ್ಯೇಕ ಅಸ್ತಿತ್ವವನ್ನು ಪಡೆದುಕೊಳ್ಳತೊಡಗಿದವು. ಸಾಂಪ್ರದಾಯಿಕ ಚಿತ್ರಗಳಲ್ಲಿನ ಪೌರಾಣಿಕ, ಧಾರ್ಮಿಕ ಚಿತ್ರಗಳಲ್ಲಿ ಮುನ್ನಲೆಯ ವಿಷಯಕ್ಕೆ ಪೂರಕವಾಗಿ ಹಿನ್ನಲೆಯಲ್ಲಿ ರಚಿತವಾಗುತ್ತಿದ್ದ ಮಹಲುಗಳು, ಪರಿಸರಗಳು ಮುನ್ನಲೆಗೆ ಬಂದು ನಿಂತು ಕಲಾಕೃತಿಯ ಮೂಲವಸ್ತು ವಿಷಯವಾಗತೊಡಗಿತು. ಅಲ್ಲಿಯವರೆಗು ಸ್ಮೃತಿಯು ಉದ್ದೀಪಿಸುವಂತ ಕಾಲ್ಪನಿಕ ಭವನ ಪರಿಸರಗಳನ್ನು ತ್ಯಜಿಸಿ. ನಿಸರ್ಗದಲ್ಲೇ ಕೂತು ಸ್ಥಳದಲ್ಲೇ ಚಿತ್ರ ರಚಿಸುವ ಅಭ್ಯಾಸ ಪ್ರಾರಂಭವಾಯಿತು. ಆ ಮೂಲಕ ವಸಾಹತು ಶೈಲಿಯ ಸ್ಮಾರಕಗಳನ್ನು, ಕಟ್ಟಡಗಳನ್ನು, ದೇವಸ್ಥಾನಗಳನ್ನು , ಪರಿಸರಗಳನ್ನು ರಚಿಸುವುದು ಪ್ರಾರಂಭವಾಯಿತು. ಕೆಲವರು ತಮ್ಮ ಆಯ್ಕೆಯ ವಿಷಯಗಳನ್ನಾದರಿಸಿ ತಮ್ಮ ಪರಿಸರದಿಂದ ದೂರದ ಸ್ಥಳಗಳಿಗೆ ಹೋಗಿ ಚಿತ್ರ ರಚಿಸುತ್ತಿದ್ದರೆ ಕೆಲ ಕಲಾವಿದರು ತಮ್ಮ ಸುತ್ತಮುತ್ತಲಿನ ಪರಿಸರವನ್ನೇ ತಮ್ಮ ಆಯ್ಕೆಯ ವಿಷಯಗಳನ್ನಾಗಿಸುತ್ತಿದ್ದರು. ಈ ಆಯ್ಕೆಯ ಪ್ರಕ್ರಿಯೆಯಲ್ಲೇ ಕಲಾವಿದರಿಗೆ ಸೌಂದರ್ಯ, ರೂಪಕ, ಪ್ರತಿಮೆ, ರಸಗ್ರಹಣಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಎದುರಿಸಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಆಗಿನ ಕಲಾವಿದರ ಕಲಾಕೃತಿಗಳಲ್ಲಿ ನೋಡಬಹುದು. ಇದಕ್ಕಾಗಿ ಬಹುತೇಕ ಕಲಾವಿದರು ಪಾಶ್ಚಿಮಾತ್ಯದ ಇಸಂಗಳಿಗೆ ಶರಣಾಗಿರುವುದು ಕಾಣಬಹುದು.

ಒಂದೆಡೆ ಬಂಗಾಲಿ ಪ್ರಭಾವ ಇನ್ನೊಂದೆಡೆ ಜೆ.ಜೆ ಕಲಾಶಾಲೆಯ ಭಾರತೀಯ ವಸಾಹತುಶಾಯಿಯ ಪ್ರಭಾವ, ಪಾಶ್ಚಿಮಾತ್ಯದ ಇಸಂಗಳ ಮಧ್ಯೆ ಒಂದಷ್ಟು ಕಾಲದಲ್ಲಿ ರಚಿತವಾದ ನಿಸರ್ಗ ಚಿತ್ರಗಳಲ್ಲಿ ಪ್ರಭಾವಗಳಿಂದ ಹೊರಗುಳಿದ/ಹೊರಗುಳಿಯಲು ಪ್ರಯತ್ನಿಸಿರುವ ನಿರ್ಲಿಪ್ತತೆಯನ್ನು ಬಹು ಸಂಖ್ಯೆಯಲ್ಲಿ ಕಾಣಬಹುದು. ಆ ನಿಪ್ರ್ತತೆಯೇ ಕರ್ನಾಟಕದ ನಿಸರ್ಗ ಚಿತ್ರಗಳಿಗೆ ಬೇರೆ ಪ್ರದೇಶಗಳಿಗಿಂತ ಭಿನ್ನವಾದ ಒಳಪದರಗಳನ್ನು ಒಳಗೊಂಡಂತ ಒಳಗೊಳ್ಳಬಹುದಾದ ಸಾಧ್ಯತೆಗಳನ್ನು ಹುಟ್ಟಿಹಾಕಿತು.

III. ಅಂತರ್ ಶಿಸ್ತೀಯ ಸಾಧ್ಯತೆಯ ಸೂಚಿ :

ಅ) ಕನ್ನಡ ಸಿನಿಮಾದ ಕಲಾನಿರ್ದೇಶನ ಮತ್ತು ನಿಸರ್ಗ ಚಿತ್ರ ಪ್ರಕಾರ.

ಇದೇ ಕಾಲಘಟ್ಟದಲ್ಲಿ ಚಿತ್ರಕಲೆಯನ್ನು ಹೊರತುಪಡಿಸಿ ಇನ್ನಿತರ ಸಾಹಿತ್ಯ, ಸಿನಿಮಾದಲ್ಲಿನ ನಿಸರ್ಗ ಚಿತ್ರಗಳಿಗೆ ಸಂಭಂದಿಸಿದಂತೆ ಅವಲೋಕಿಸಿದರೆ ಸಾಹಿತ್ಯವು ದೃಶ್ಯಪ್ರದಾನವಾದ ಚಿತ್ರಕಲೆ ಮತ್ತು ಸಿನಿಮಾಗಿಂತ ಮೊದಲೇ ಧಾರ್ಮಿಕ ಮತ್ತು ಪುರಾಣಗಳ ಚೌಕಟ್ಟನ್ನು ಮೀರಿ ಸಮಾಜದೊಳಗಿನ ಸಾಮಾಜಿಕ ಸಂಗತಿಗಳನ್ನು ಚರ್ಚಿಸಲು ಆರಂಭಿಸಿದ್ದರಿಂದ, ಜೊತೆಗೆ ಸ್ವಾತಂತ್ರ್ಯ ಚಳುವಳಿಗೆ ಪೂರಕವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರಿಂದ, ಕರ್ನಾಟಕದ ಪರಿಸರವನ್ನು ಕಟ್ಟಿಕೊಡುವಂತ ವಿಫುಲ ಸಾಹಿತ್ಯ ಸೃಷ್ಠಿಯಾಯಿತು. ಆ ಮೂಲಕ ಆ ಅರವತ್ತು ವರ್ಷಗಳ ಕಾಲಾವದಿಯ ಚಿತ್ರಣ ಅಕ್ಷರ ರೂಪದಲ್ಲಿ ದಾಖಲಾಯಿತು. ಆದರೆ ‘ಸತಿ ಸುಲೋಚನ’ ಸಿನಿಮಾ ಮೊದಲ ಕನ್ನಡ ಸಿನಿಮಾ ಆಗಿ 1934ರಲ್ಲಿ ತೆರೆಕಂಡರು. ಸರಿ ಸುಮಾರು 50-60 ರ ದಶಕದವರೆಗೆ ಕನ್ನಡ ಸಿನಿಮಾಗಳು ಕೆಲವೊಂದು ನಿರ್ಧಿಷ್ಟ ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಚಿತ್ರೀಕರಿಸುತ್ತಿದ್ದುದ್ದು ಮದ್ರಾಸಿನ ಸ್ಟುಡಿಯೋಗಳಲ್ಲಿ. ಹಾಗಾಗಿ ನಿರ್ಧಿಷ್ಟ ದೃಶ್ಯಗಳಿಗಾಗಿ ಚಿತ್ರೀಕರಿಸಲ್ಪಡುತ್ತಿದ್ದ ಹಿನ್ನಲೆಗಳೇ ನಮಗೆ ಸುಮಾರು 20 ವರ್ಷಗಳ ದೃಶ್ಯ ದಾಖಲೆಗಳಾಗಿ ದೊರಕುವುದು.

ಆ ಲಭ್ಯವಿರುವ ದೃಶ್ಯಗಳು ಅದಾಗಲೇ ಗುರುತಿಸಲ್ಪಡುತ್ತಿದ್ದ ಸ್ಮಾರಕ, ವಾಸ್ತುಕಟ್ಟಡಗಳೇ ಬಹುತೇಕ ಇರುವುದು. ಅವು ಗುರುತಿಸಲ್ಪಡುತ್ತಿದ್ದವು ಗುರುತಿಸಲ್ಪಡುವಂತಹುವುವು ಎಂದೇ ಆ ದೃಶ್ಯಗಳನ್ನು ಹಿನ್ನಲೆಯಲ್ಲಿ ಬಳಸಲಾಗುತ್ತಿತ್ತು. ಪೌರಾಣಿಕ ಸಿನಿಮಾಗಳಿಂದ ಸಾಮಾಜಿಕ ಕಥೆಯಾದರಿಸಿ ಸಿನಿಮಾಗಳು ಬಂದಂತೆಲ್ಲಾ ಕರ್ನಾಟಕದ ಬೇರೆ ಬೇರೆ ಭಾಗದ ನಿಸರ್ಗವು ಸಿನಿಮಾಗಳಲ್ಲಿ ದಾಖಲಾಗುತ್ತಿತ್ತು. ಈ ಹಿಂದೆ ಹೇಳಿದಂತೆ ಸ್ಟುಡಿಯೋಗಳಲ್ಲಿ ಸಿನಿಮಾ ಚಿತ್ರಿಕರಿಸುವುದು ಸಮಾಜಿಕ ಸಿನಿಮಾಗಳು ಬಂದ ಮೇಲೆ ಸುಮಾರು ವರ್ಷಗಳ ಕಾಲ ಮುಂದುವರಿಯಿತು. ಅದು ಮನೆಗಳ ಒಳಾಂಗಣಕ್ಕೆ ಸಂಬಂಧಿಸಿದಂತೆ.

ಸಮಾಜದಲ್ಲಿನ ಮೇಲಸ್ತರ – ಕೆಳಸ್ತರ- ಮಧ್ಯಮವರ್ಗ ಹೀಗೆ ವರ್ಗಗಳಿಗೆ ಸಂಬಂದಿಸಿದ ವಸ್ತುಗಳನ್ನು ಆ ಹಿನ್ನಲೆಯ ಮನೆಯನ್ನು ನೆನಪಿಸುವಂತ ಹಿನ್ನಲೆಯಲ್ಲಿ ಸಂಯೋಜಿಸುವುದರ ಮೂಲಕ ನೀಜಜೀವನದ ಹಿನ್ನಲೆಗಳನ್ನು ಪುನರ್ ರೂಪಿಸಿರುವುದರ ಮೂಲಕ ವರ್ಗಗಳ ಪುನರ್ ಸೃಷ್ಠಿಯ ರೂಪದ ಚೌಕಟ್ಟನ್ನು ಕಟ್ಟಿಕೊಡಲಾಯಿತು.

ಆ) ಕನ್ನಡ ಸಾಹಿತ್ಯ ಮತ್ತು ದೃಶ್ಯಕಲೆಯಲ್ಲಿ ನಿಸರ್ಗ :

ಸಾಹಿತ್ಯ ವಿಮರ್ಶಕ ಡಿ. ಆರ್ ನಾಗರಾಜ್ ತಮ್ಮ ಅಮೃತ ಮತ್ತು ಗರುಡ ಪುಸ್ತಕದಲ್ಲಿ ಶಿವರಾಮ ಕಾರಂತರ ಕುರಿತಂತೆ ಬರೆಯುವಾಗ ಸ್ವಾತಂತ್ರ್ಯ ಪೂರ್ವದಲ್ಲಿದ್ದ ರಾಜಕೀಯ ಕಲ್ಪನೆಗಳು ಸ್ವಾತಂತ್ರ್ಯಾನಂತರ ನಿಂತುಹೋಗಿವೆ ಎಂದು ಉಲ್ಲೇಖಿಸಿದ್ದಾರೆ. ಅದನ್ನೇ ಚಿತ್ರಕಲೆಗೆ ಸಂಬಂದಿಸಿದಂತೆ ನೋಡುವುದಾದರೆ ರಾಜಕೀಯ ಪ್ರೇರಿತ ಕಲಾಕೃತಿ ರಚನೆ ಮತ್ತು ವಸಾಹತುಶಾಯಿ ಪ್ರಭಾವದಿಂದ ಪ್ರಾರಂಭವಾದ ಆಧುನಿಕ ನಿಸರ್ಗಚಿತ್ರಣಗಳ ರಚನೆಯಲ್ಲಿ ರಚಿಸುವುದು ಸ್ಥಳದಲ್ಲೇ ಆದರು ಅಲ್ಲಿ ಕಣ್ಣಿಗೆ ಕಾಣುವ ಚಿತ್ರಕ್ಕಿಂತ ಸ್ಮೃತಿಯೊಳಗೆ ಆಳವಾಗಿ ಅಚ್ಚಾಗಿರುವ ರೂಪಕ ರಸಗ್ರಹಣಗಳ ಆಧಾರಿತ ನಿಸರ್ಗ ಚಿತ್ರಗಳು ರಚನೆಯಾಗಿರುವುದು ಹೆಚ್ಚು.

20 ನೇ ಶತಮಾನದ ಕರ್ನಾಟಕದ ಕಲೆಯು ಭಾರತೀಯ ಕಲಾ ಇತಿಹಾಸಕ್ಕೆ ತನ್ನದೇ ವಿಶಿಷ್ಠವೆನಿಸುವ ಶೈಲಿ, ಚಟುವಟಿಕೆಗಳ ಮೂಲಕ ತನ್ನ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅಂತಹ ಚಟುವಟಿಕೆಗಳು, ಕಲಾಕೃತಿಗಳ ಮೂಲಕ ಆಯಾ ಕಾಲದ ಕರ್ನಾಟಕದ ಕಲಾ ಇತಿಹಾಸದ ಪ್ರಮುಖ ಬದಲಾವಣೆಗಳನ್ನು ನಾವು ಗುರುತಿಸಬಹುದಾಗಿದೆ.

ಆದರೆ ನಿಸರ್ಗ ಚಿತ್ರಗಳಲ್ಲಿ ಮಾತ್ರ ವಿಭಿನ್ನವಾದ ವಾತವರಣವಿದೆ. ಇಲ್ಲಿಯವರೆಗೂ ರಚಿಸಲ್ಪಟ್ಟಿರುವ ಬಹುತೇಕ ನಿಸರ್ಗಚಿತ್ರಗಳನ್ನೆಲ್ಲಾ ಒಟ್ಟುಗೂಡಿಸಿ ನೋಡಿದಾಗ ಈ ಚಿತ್ರಗಳಲ್ಲಿ ಕಂಡುಬರುವ ಮೂರು ಪ್ರಮುಖ ವಿಷಯಗಳೆಂದರೆ, ಹಳ್ಳಿಗಳು, ಪ್ರಕೃತಿ, ಸ್ಮಾರಕಗಳು.. ಇವಷ್ಟೇ ಅಲ್ಲದೇ ಇವನ್ನೂ ಮೀರುವಂತ ಕರ್ನಾಟಕದ ಚಿತ್ರಣವನ್ನು ಡಿ.ವಿ.ಜಿ, ಕುವೆಂಪು, ಕಾರಂತರು, ತೇಜಸ್ವಿ, ಚಿತ್ತಾಲರು ಇನ್ನೂ ಅನೇಕ ಸಾಹಿತಿಗಳು ಕರ್ನಾಟಕದ, ಕರ್ನಾಟಕದ್ದೇ ಆದ ಚಿತ್ರಣವನ್ನು ತಮ್ಮ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಅಕ್ಷರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂತಹದೇ ಅವಕಾಶಗಳನ್ನು ಕನ್ನಡ ಚಿತ್ರರಂಗ ಕಪ್ಪು-ಬಿಳುಪು ಚಿತ್ರಗಳಿಂದ ಆರಂಭಿಸಿ ಈಗಿನವರೆಗೂ ತಮ್ಮ ದೃಶ್ಯ ಚೌಕಟ್ಟಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ. ಚಿತ್ರಕಲೆಯಲ್ಲಿ ಇದಕ್ಕೆ ವಿಭಿನ್ನವಾದ ವಾತಾವರಣ ನಿರ್ಮಾಣಗೊಂಡಿದ್ದು , ದೃಶ್ಯಕಲೆಯಲ್ಲಿನ ಇನ್ನುಳಿದ ಕಲಾಕೃತಿಗಳಂತೆ ನಿಸರ್ಗ ಚಿತ್ರಗಳಿಗೆ ಇಂತಹ ವಸ್ತುನಿಷ್ಠ, ಮೌಲಿಕ ಅಂಶಗಳನ್ನು ಗುರುತಿಸಿ ಕ್ರೋಢಿಕರಿಸಿ, ವಿಮರ್ಶಿಸಬೇಕಾದ ಅಗತ್ಯವಿದೆ.

ಈಗಿನ ಕಲಾವಲಯದಲ್ಲಿ ಹುಡುಕಿದರೆ ಅತಿ ಹೆಚ್ಚು ನಿಸರ್ಗಚಿತ್ರ ಕಲಾವಿದರು ನಮಗೆ ಉತ್ತರಕರ್ನಾಟಕದಲ್ಲಿ ಕಂಡುಬರುತ್ತಾರೆ. ಬೆಂಗಳೂರು ಮೈಸೂರು ಕಡೆಗಳಲ್ಲು ಕಲಾವಿದರು ಇದ್ದಾಗ್ಯೂ ಅವರಿಗೆ ಅದು ಕೇವಲ ಕಲಾಭ್ಯಾಸದಲ್ಲಿ ಒಂದು ಭಾಗವಷ್ಟೇ ಆಗಿ ಉಳಿದುಕೊಂಡಿದೆ. ಇವರ ಕಲಾಕೃತಿಗಳಲ್ಲಿಯೂ ಸಹ ಸಿದ್ದ ಮಾದರಿ ಕಲಾಕೃತಿಗಳನ್ನು ಕಾಣಬಹುದೇ ಹೊರತು, ಸಧ್ಯದ ನಗರೀಕರಣದಲ್ಲಿ ಮುಖ್ಯವಾಗುವ ಅಂಶಗಳ ನಗಣ್ಯವೇನೋ ಎಂಬಂತ ಭಾವನೆ ಅಡಕವಾಗಿರುವುದನ್ನು ಕಾಣಬಹುದು.

ಉತ್ತರಕರ್ನಾಟಕದ ಕಡೆಗಿನ ಕಲಾವಿದರ ನಿಸರ್ಗಚಿತ್ರಗಳಲ್ಲಿಯೂ ಸಹ ಈ ಮೇಲಿನ ಅಂಶ,ಸಿದ್ಧಸೂತ್ರಗಳ ಗಾಡಪ್ರಭಾವವನ್ನು ಕಾಣಬಹುದು. ಅಲ್ಲಿನ ಕಲಾಕೃತಿಗಳಲ್ಲಿಯೂ ಸಹ ಬಹುತೇಕ ಹಳ್ಳಿಗಳ, ಸ್ಮಾರಕಗಳ ಚಿತ್ರಗಳೇ ಹೆಚ್ಚು ಕಾಣಸಿಗುತ್ತವೆ. ಆದರೆ ಈ ಕಲಾಕೃತಿಗಳಲ್ಲಿ ಕಾಣಬರುವ ಪ್ರಮುಖ ಅಂಶವೆಂದರೆ ಆ ಚಿತ್ರಗಳು ಮೂಲ ಸ್ಥಳಗಳನ್ನು ಉದ್ದೀಪಿಸುವ ನೆನಪನ್ನು ಮರುಕಳಿಸುವುದಕ್ಕಷ್ಟೇ ಸೀಮಿತವಾಗುತ್ತವೆ ಹೊರತು ಅದನ್ನು ಮೀರಿದ ಸಾಂಸ್ಕೃತಿಕ, ದೃಶ್ಯಪರಂಪರೆಯನ್ನು ಗುರುತಿಸಿ ಕ್ರೋಢಿಕರಿಸಿ ದಾಖಲಿಸುವ ಅವಶ್ಯಕತೆ ಈ ಕೃತಿಗಳಿಗಿದೆ.

ಈ ಮೇಲೆ ಉಲ್ಲೇಖಿಸಿರುವ ಕಾಲಘಟ್ಟದಲ್ಲಿ ನಿಸರ್ಗ ಚಿತ್ರಗಳನ್ನು ರಚಿಸುತ್ತಿದ್ದ ಪ್ರಮುಖ ಕಲಾವಿದರೆಂದರೆ

ಕೆ. ವೆಂಕಟಪ್ಪ, ರುಮಾಲೆ ಚನ್ನಬಸವಯ್ಯ, ಎನ್. ಹನುಮಯ್ಯ, ಪಾವಂಜೆ ಗೋಪಾಲಕೃಷ್ಣಯ್ಯ, ಸೋಮಶೇಖರ ಸಾಲಿ, ಅಮೆನ್ ಸಾಹೆಬ್ ಕಮಡೋಳಿ, ಟಿ.ಪಿ. ಅಕ್ಕಿ, ಎನ್.ಎಸ್. ಸುಬ್ಬು ಕೃಷ್ಣ, ಎಂ.ವೀರಪ್ಪ., ಪಿ.ಆರ್.ತಿಪ್ಪೇಸ್ವಾಮಿ, ಎಸ್.ಎಂ ಪಂಡಿತ್, ಎಂ.ಎ.ಚೆಟ್ಟಿ, ಎಂ.ವಿ. ಮಿಣಜಗಿ, ಬಸವರಾಜ ಹಳ್ಳಿಜೋಳ, ಎಫ್.ಎಂ ಸೂಫಿ, ಡಿ.ವಿ. ಹಾಲಭಾವಿ, ಬಿ.ಕೆ. ಹುಬ್‍ಲಿ, ಪಿ. ಸುಬ್ಬರಾವ್, ಎಂ.ಎಸ್. ಶುದ್ದೋದನ, ಎಸ್.ಎಸ್. ಕುಕ್ಕೆ, ಎಸ್.ನಂಜುಂಡಸ್ವಾಮಿ, ಎಂ.ಟಿ.ವಿ ಆಚಾರ್ಯ, ಕೆ.ಕೆ. ಹೆಬ್ಬಾರ್, ದಂಡಾವತಿ ಮಠ, ಜಿ.ಎಸ್. ಶೆಣೈ, ಜೆ.ಎಸ್. ಖಂಡೇರಾವ್.

IV. ಕರ್ನಾಟಕ ಏಕೀಕರಣದ ಕಾಲಘಟ್ಟದ ನಿಸರ್ಗ ಚಿತ್ರಗಳ ಹಿನ್ನಲೆಯಲ್ಲಿ ಆಧುನಿಕ ಕರ್ನಾಟಕ

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಅವದಿ ಕರ್ನಾಟಕದ ಈಗಿನ ಭೌಗೋಳಿಕ ಪ್ರದೇಶಕ್ಕೆ ಸಂಬಂದಪಟ್ಟಂತೆ ಬಹುಮುಖ್ಯ ಕಾಲಘಟ್ಟವಾಗಿದೆ. ಕಾರಣ ಇದು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದಿದ್ದು ಮಾತ್ರವಲ್ಲದೆ, ಸ್ವಾತಂತ್ರ್ಯದ ಹೋರಾಟದ ಜೊತೆ-ಜೊತೆಗೆ ಸ್ಥಳೀಯ ನಾಯಕರ ಹೋರಾಟದ ಫಲವಾಗಿ, ಮೈಸೂರು ರಾಜರ ಸಾಮ್ರಾಜ್ಯ ಅಖಂಡ ಭಾರತದ ಭಾಗವಾಗಿ ಕನ್ನಡ ಮಾತಾಡುವ ಪ್ರದೇಶಗಳ ಭೌಗೋಳಿಕ ನಕ್ಷೆಯಾಗಿ ರೂಪುಗೊಂಡು ಕರುನಾಡೆಂಬ ಕರ್ನಾಟಕವೆಂದು ರೂಪುಗೊಂಡ ಕಾಲಾವದಿ.

ಹಾಗಾಗಿ ಅಲ್ಲಿಯವರೆಗೂ ಉತ್ತರಕರ್ನಾಟಕದ ಕೆಲ ಭಾಗಗಳು ಹೈದರಾಬಾದ್ ನವಾಬರ ಆಳ್ವಿಕೆಯಲ್ಲಿ ಇದ್ದಂತಹುವು. ಕನ್ನಡ ಭಾಷಿಕರ ಆದಾರದ ಮೇಲೆ ಕರ್ನಾಟಕದ ಭಾಗವಾಗಿದ್ದು ಅಲ್ಲಿನ ಸಾಹಿತ್ಯ ಚಿತ್ರಕಲೆಯ ಅಭ್ಯಾಸಕ್ರಮಕ್ಕೆ ಕರ್ನಾಟಕ ಕಲೆ ಎಂಬ ಚೌಕಟ್ಟೌ ರೂಪುಗೊಂಡ ಕಾಲ ಸ್ವಾತಂತ್ರ್ಯೋತ್ತರ ಭಾರತದ ಪ್ರಾರಂಭಿಕ ಕಾಲಘಟ್ಟ. ಆದ್ದರಿಂದ ಸಧ್ಯದ ಈಗಿನ ಕರ್ನಾಟಕ ಕಲೆ ಎಂಬ ಚೌಕಟ್ಟಿನಲ್ಲಿ ಅಂದಿನ ಮೈಸೂರು ಕಲೆ, ಮೈಸೂರು ಅರಸರ ಕೃಪಾಪೋಷಿತ ವಸಾಹತುಶಾಹಿ ಪ್ರಭಾವದ ಹಿನ್ನಲೆಯಲ್ಲಿ ತನ್ನ ಆರಂಭಿಕ ದಿನಗಳನ್ನು ಕಂಡ ಕರ್ನಾಟಕ ಕಲೆ, ಮುಂದಿನ ದಿನಗಳಲ್ಲಿ ಕಲಾಶಾಲೆಗಳ ಒಳ ಹೊರಗನ್ನು ರೂಪಿಸಿದ ನಿಸರ್ಗ ಚಿತ್ರಣದ ಪ್ರಕಾರದ ಕುರಿತಂತೆ ಸಂಶೋಧಿಸಿ, ದಾಖಲಿಸಿ ಚರ್ಚಿಸುವುದು ಇಂದಿನ ಕಲಾವಲಯ ಮತ್ತು ಕಲಾಶಾಲೆಗಳ ಅಭ್ಯಾಸಕ್ರಮದಲ್ಲಿ ಬಹು ಮುಖ್ಯವಾಗಿದೆ.

V. ಗ್ರಂಥಋಣಿ :

1. ವಸಾಹತು ಕಾಲೀನ ಕರ್ನಾಟಕ : ಡಾ. ಎಸ್. ಚಂದ್ರಶೇಖರ್
2. ಕಲಾಪ್ರಪಂಚ : ಡಾ. ಶಿವರಾಮ ಕಾರಂತ
3. ನೋಟ ಪಲ್ಲಟ : ಎಚ್ . ಎ. ಅನಿಲ್ ಕುಮಾರ್
4. ಶಂಕರಗೌಡ ಬೆಟ್ಟದೂರು : ಎಚ್. ಎ. ಅನಿಲ್ ಕುಮಾರ್
5. ಕರ್ನಾಟಕ ಲಲಿತಾ ಅಕಾಡೆಮಿ ಪ್ರಕಟಿತ ಕಲಾವಿದರ ಕುರಿತ ಸಮಗ್ರ ಪುಸ್ತಕಗಳು.
6. ಜ್ಞಾಪಕ ಚಿತ್ರಶಾಲೆ : ಡಿ.ವಿ.ಜಿ
7. ಕಾನೂರು ಹೆಗ್ಗಡತಿ -1938 : ಕುವೆಂಪು
8. ಆಬೋಲಿನ ಮತ್ತು ಇತರ ಕಥೆಗಳು : ಯಶವಂತ ಚಿತ್ತಾಲ
9. when was modernism in Indian Art : Geetha Kapur (Arts & Ideas journal )
10. Cinema and the Desire for modernity : Madhava Prasad (Arts & Ideas journal )
11. Whose culture is it? Contesting the modern : Tejaswini Niranjan (Arts & Ideas journal )
12. Visualizing the Nation The iconography of a ‘National Art’ in Modern India : Tapati Guha Thakurta (Arts & Ideas journal )
13. 1934 ರಲ್ಲಿ ತೆರೆಕಂಡ ಮೊದಲ ಕನ್ನಡ ಸಿನಿಮಾ ಸತಿಸುಲೋಚನ ಮತ್ತು 1934 ರಿಂದ 1970 ರವರೆಗಿನ ಕನ್ನಡ ಸಿನಿಮಾಗಳು. ಅದರಲ್ಲಿ ಪ್ರಮುಖವಾಗಿ ಬಳಕೆಯಾಗಿರುವ ನಿಸರ್ಗ ಚಿತ್ರಗಳನ್ನು ಕುರಿತಂತೆ ಬೇಡರ ಕಣ್ಣಪ್ಪ, ಚಂದವಳ್ಳಿ ತೋಟ, ಅಮರ ಶಿಲ್ಪಿ ಜಕಣಾಚಾರಿ, ನಾಂದಿ, ಭೂದಾನ, ಸ್ಕೂಲ್ ಮಾಸ್ಟರ್, ಸರ್ವ ಮಂಗಳ, ಬೆಳ್ಳಿಮೋಡ, ಸಂಸ್ಕಾರ ಚಿತ್ರಗಳು

 ಮಂಸೋರೆ. ವೃತ್ತಿ ಚಿತ್ರಕಲಾವಿದ., ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಸ್ನಾತಕೋತ್ತರ ಪದವೀದರ. ಸದ್ಯ ಚಿತ್ರರಂಗದಲ್ಲಿ ಸ್ವತಂತ್ರ ಕಲಾ ನಿರ್ದೇಶಕ