HTML ಎಂಬುದು ಅಂತರ್ಜಾಲ ತಾಣಗಳನ್ನು ರಚಿಸಲು ಇರುವ ಶಿಷ್ಟತೆ. ಇದನ್ನು ಹೀಗೂ ಅರ್ಥೈಸಬಹುದು. ಕನ್ನಡದಂತಹ ಒಂದು ಭಾಷೆಯನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವ ಹಾಗೆ, HTML ಅನ್ನು ಬ್ರೌಸರುಗಳು ಅರ್ಥಮಾಡಿಕೊಳ್ಳುತ್ತವೆ. HTML5 ಇದರ ಇತ್ತೀಚಿನ ಆವೃತ್ತಿಯಾಗಿದ್ದು ಅತ್ಯಂತ ಕುತೂಹಲ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಇದರ ವೈಶಿಷ್ಟ್ಯವಿರುವುದು ಎಲ್ಲೆಯಿಲ್ಲದ ಹಾಗೆಯೇ ಎಲ್ಲದಕ್ಕೂ ಬಳಕೆಯಾಗಬಹುದಾದ, ಅಪರಿಮಿತ ಸಾಧ್ಯತೆಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಂಡು ಅನೇಕ ತಂತ್ರಜ್ಞಾನಗಳ ಹರಿವನ್ನು ಮುನ್ನಡೆಸಬಲ್ಲ ಚೈತನ್ಯದಲ್ಲಿ.

ಇದರ ವೈಶಿಷ್ಟ್ಯಗಳು ಎಷ್ಟರ ಮಟ್ಟಿಗೆ ವೆಬ್-ಟೆಕ್ನಾಲಜಿಯನ್ನು ಮೋಡಿಗೊಳಿಸಿದೆಯೆಂದರೆ, ಇದರ ಪ್ರಸ್ತಾವನೆ ಇನ್ನೂ ಕರಡಿನ ಹಂತಲ್ಲಿದ್ದರೂ ಕೂಡ, ಈಗಾಗಲೇ ಎಲ್ಲ ಬ್ರೌಸರುಗಳು ಇದರ ಬಹುತೇಕ ವೈಶಿಷ್ಟ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿವೆ.

ಹಾಗಿದ್ದಲ್ಲಿ, HTML5ನ ವೈಶಿಷ್ಟ್ಯಗಳು ಏನು ? ಏಕೆ ಎಲ್ಲ ಕಂಪನಿಗಳೂ ತಮ್ಮ ಬ್ರೌಸರುಗಳಲ್ಲಿ HTML5 ಅನ್ನು ಅಳವಡಿಸಿಕೊಳ್ಳುವಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ವೈಶಿಷ್ಟ್ಯಗಳು

೧. ಕ್ಯಾನ್ವಾಸ್ – ಮೊಟ್ಟಮೊದಲಿಗೆ

ಎಂಬ ಮಾಯಾಕುಂಚ. ಹಿಂದೆ, ವೆಬ್-ಪುಟಗಳಲ್ಲಿ ಚಿತ್ರಗಳನ್ನು ಬಿಡಿಸುವಂತಹ ಅಪ್ಲಿಕೇಶನ್ನುಗಳನ್ನು ಬಳಸಬೇಕೆಂದರೆ, ಫ್ಲಾಶ್ ಅಪ್ಲಿಕೇಶನ್ನುಗಳು ಬರೆಯಬೇಕಿತ್ತು. ಆದರೆ ಈಗ,

ಎಂಬ ಮಾಯಾಕುಂಚವನ್ನು ನಮ್ಮ ಅಂತರ್ಜಾಲ ತಾಣಗಳಲ್ಲಿ ಬಳಸಿದರೆ, ಯಾವುದೇ 3rd ಪಾರ್ಟಿ ಪ್ಲಗಿನ್ನುಗಳ ಸಹಾಯವಿಲ್ಲದೆ ನೇರವಾಗಿ ಬ್ರೌಸರಿನ ಒಳಗೇ ಚಿತ್ರಗಳನ್ನು ಬಿಡಿಸಬಹುದು. ಇಷ್ಟಕ್ಕೆ ನಿಲ್ಲದೆ,

ಕುಂಚವನ್ನು ಬಳಸಿ ಅನೇಕ ಬಗೆಯ ಅನಿಮೇಶನ್ನುಗಳನ್ನು ಸೃಜಿಸಬಹುದು. ಹಿಂದೆ, miniclip.com ಅನ್ನು ಹೊಕ್ಕು ಅಲ್ಲಿದ್ದ ಆಟಗಳನ್ನು ಆಡುತಿದ್ದೆವು. ಅವೆಲ್ಲವೂ ಫ್ಲಾಶಿನಲ್ಲಿರುತ್ತಿದ್ದವು. ಈಗ ನೀವು html5games.com ಅನ್ನು ಹೊಕ್ಕು ಯಾವುದೇ ಪ್ಲಗಿನ್ನುಗಳ ಸಹಾಯವಿಲ್ಲದೆ ಆಟಗಳನ್ನು ಆಟಬಹುದು. ಇದರ ಬಹುದೊಡ್ಡ ಪ್ರಯೋಜನವೆಂದರೆ,

ಅ. ವೈರಸ್ಸುಗಳು ಬರುವ ಸಾಧ್ಯತೆ ಕಡಿಮೆ,
ಆ. ಫ್ಲಾಶ್ ಅನ್ನು ಕಡಿಮೆ ಬಳಸಿದಷ್ಟು ಕಂಪ್ಯೂಟರಿನ ಪವರ್ ಉಳಿತಾಯವಾಗುತ್ತದೆ.

೨. ಆಡಿಯೋ ಮತ್ತು ವೀಡಿಯೋ– ನೀವು youtube.com ತಾಣದಿಂದ ವೀಡಿಯೋಗಳನ್ನು ನೋಡಿರುತ್ತೀರೆಂದರೆ, ನಿಮ್ಮ ಕಂಪ್ಯೂಟರಿನಲ್ಲಿ ಫ್ಲಾಶ್ ಪ್ಲಗಿನ್ ಇದೆ ಎಂದು ಅರ್ಥೈಸಬಹುದು. ಹಾಗೆಯೇ ಹಾಡುಗಳನ್ನು ಕೇಳಲು windows media player, real player, winamp, quicktime, vlc player, ಮುಂತಾದ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಬಳಸಿರುತ್ತೇವೆ. ಆದರೆ HTML5ನಲ್ಲಿ ಪ್ರಸ್ತಾಪಿತವಾಗಿರುವ ಅಂಶವೆಂದರೆ, ಯಾವುದೇ ಒಂದು ತಂತ್ರಾಂಶದ ಮೇಲೆ ಅವಲಂಬಿತವಾಗದೆ, ನಮ್ಮ ನೆಚ್ಚಿನ ಬ್ರೌಸರುಗಳ ಒಳಗೆಯೇ ಹಾಡುಗಳನ್ನು ಕೇಳುವಂತಹ ವ್ಯವಸ್ಥೆ ಸೆಟ್ಟೇರಲಿದೆ. ಇದರ ಬಹುದೊಡ್ಡ ಪ್ರಯೋಜನವೆಂದರೆ ನಮ್ಮ ನೆಚ್ಚಿನ ಪ್ಲೇಲಿಸ್ಟುಗಳನ್ನು ವೆಬ್ ಅಪ್ಲಿಕೇಶನ್ನುಗಳಲ್ಲಿಯೇ ಜೋಡಿಸಿಡಬಹುದು. ಹಾಗೆಯೇ ಯಾವುದೇ 3rd party ಅಪ್ಲಿಕೇಶನ್ ನೆರವಿಲ್ಲದೆ ವೀಡಿಯೋಗಳನ್ನು ನೋಡುತ್ತಾ ಆನಂದಪಡಬಹುದು. ನೀವು ಹಾಡುಗಳನ್ನು ಓದಗಿಸುವಂತಹ ಒಂದು ಸಂಸ್ಥೆಯಾದರೆ, ನಿಮ್ಮ ಗ್ರಾಹಕರು ಯಾವ ಕಂಪ್ಯೂಟರ್ ಬಳಸುತ್ತಿದ್ದಾರೆ, ಯಾವ ಮೊಬೈಲ್ ಬಳಸುತ್ತಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಉತ್ತಮ ಹಾಡುಗಳನ್ನು ಗ್ರಾಹಕರಿಗೆ ಒದಗಿಸುವ ಕಾರ್ಯದಲ್ಲಿ ಹೆಚ್ಚು ಸಕ್ರಿಯರಾದರೆ ಸಾಕು. ಅಂದ ಹಾಗೆ, ಈಗಾಗಲೇ, ಗೂಗಲಿನವರು youtube.com ಅನ್ನು HTML5ಗೂ ಅನ್ವಯವಾಗುವಂತೆ,
http://www.youtube.com/html5 ಅನ್ನೂ ಬೆಂಬಲಿಸುತ್ತಿದ್ದಾರೆ.

೩. ಸ್ಮಾಟ್ ಆದ ಇನ್ಪುಟ್ ಕಂಟ್ರೋಲ್ಸ್– ಸಾಮಾನ್ಯವಾಗಿ ವೆಬ್ ವಿನ್ಯಾಸಗಾರರು ಅನೇಕ ರೀತಿಯ ಇನ್ಪುಟ್ ಕಂಟ್ರೋಲುಗಳನ್ನು ಬಳಸುತ್ತಾರೆ.

ಉದಾ:-
type = text, submit, password, textarea.

ಹಿಂದೆ, ಯಾವುದಾದರು ಇನ್ಪುಟ್ ಕಂಟ್ರೋಲಿನಲ್ಲಿ email ನಮೂದಿಸಬೇಕಿದ್ದರೆ, ಆ email ಸರಿಯಾಗಿ ನಮೂದಾಗಿದೆಯೇ ಎಂಬುದನ್ನು ಪರೀಕ್ಷಿಸಲು ವೆಬ್ ವಿನ್ಯಾಸಗಾರರು, ಸಾಮಾನ್ಯವಾಗಿ ಜಾವಾಸ್ಕ್ರಿಪ್ಟ್ ಬಳಸಿ ಪರೀಕ್ಷಿಸಬೇಕಿತ್ತು. ಆದರೆ ಈಗ

ಎಂದು ಬಳಸಿದರೆ, ಆಯಾ ಬ್ರೌಸರುಗಳೇ ಈ ಇನ್ಪುಟ್ ಕಂಟ್ರೋಲಿನಲ್ಲಿ ನಮೂದಾದ ಪಠ್ಯವನ್ನು ತಾವೇ ಪರೀಕ್ಷಿಸುತ್ತವೆ.

ಹೀಗೆ, html5ನಲ್ಲಿ ಪ್ರಸ್ತಾಪವಾಗಿರುವ ಇತರ ಕಂಟ್ರೋಲುಗಳೆಂದರೆ
color, date, datetime, datetime-local, email, month, number, range, search, tel, time, url, week

ಇದರ ಪೂರ್ಣವಿವರಗಳನ್ನು http://www.w3schools.com/html5/html5_form_input_types.asp ಪಡೆಯಬಹುದು.

೪. ಭೌಗೋಳಿಕ ಪರಿಚಾರಿಕೆಗಳು – ಅಂತರ್ಜಾಲ ಬಳಕೆದಾರ ಎಲ್ಲಿದ್ದಾನೆ, ಆತನಿರುವ ಜಾಗದಲ್ಲಿ ಆತನಿಗೆ ಬೇಕಾದ ಸೇವೆಗಳು ಏನು ಎಂಬ ವಿಚಾರದ ಬಗ್ಗೆ ಅನೇಕ ಕಂಪನಿಗಳು ಬಗೆಬಗೆಯ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿವೆ. HTML5 ನಲ್ಲಿ ಪ್ರಸ್ತಾಪಿತವಾಗಿರುವ ಮತ್ತೊಂದು ಮುಖ್ಯ ಅಂಶವೆಂದರೆ, ಇದರ ಭೌಗೋಳಿಕ ಪರಿಚಾರಿಕೆಗಳು. ವೆಬ್ ಅಪ್ಲಿಕೇಶನ್ನು, ಆಯಾ ಬಳಕೆದಾರ ಜಗತ್ತಿನ ಯಾವ ಮೂಲೆಯಲ್ಲಿ ಇದ್ದಾನೆ ಎಂಬುದನ್ನು ತಿಳಿದುಕೊಂಡು ಆತನಿಗೆ ಬೇಕಾದ ಸ್ಥಳೀಯ ಸೇವೆಯನ್ನು ಕೊಡುವಂತಹ ವ್ಯವಸ್ಥೆ ಮಾಡಿಕೊಂಡಿವೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದಾಗಿದೆ.
http://dev.w3.org/geo/api/spec-source.html

೫. ಅಂತರ್ಜಾಲವಿಲ್ಲದಿದ್ದಾಗಲೂ ಬಳಸಬಹುದಾದ ವೆಬ್ ಅಪ್ಲಿಕೇಶನ್ನುಗಳ ಸಾಧ್ಯತೆ – HTML5 AppCache ಎನ್ನುವಂತಹ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸುತ್ತದೆ. ಹಾಗೆಯೇ ಎರಡು ಬಗೆಯ ಸಣ್ಣ ಪ್ರಮಾಣದ ಮಾಹಿತಿ ಶೇಖರಿಸಿಡಬಹುದಾದಂತಹ ಸಾಧ್ಯತೆಯನ್ನೂ ಪ್ರಸ್ತಾಪಿಸುತ್ತದೆ. ಅವುಗಳೆಂದರೆ, localStorage ಮತ್ತು sessionStorage. ಇವುಗಳನ್ನು ಬಳಸಿ, ಅಂತರ್ಜಾಲ ಸಂಪರ್ಕವಿಲ್ಲದಿದ್ದಾಗಲೂ ಕೂಡ ನಾವು ವೆಬ್ ಅಪ್ಲಿಕೇಶನ್ನುಗಳು ಬಳಸಲು ಸಾಧ್ಯವಾಗುತ್ತದೆ. ಉದಾ: ನಾವು ಗೂಗಲ್ ಡಾಕ್ಸ್ ಬಳಸಿ ಕಡತಗಳನ್ನು ಸಂಪಾದಿಸುತ್ತಿದ್ದಾಗ, ಅಂತರ್ಜಾಲ ಸಂಪರ್ಕ ಕಡಿತಗೊಂಡರೆ, ಭಯಪಡಬೇಕಿಲ್ಲ, ನಮ್ಮ ಬ್ರೌಸರಿನಲ್ಲಿ ಕೆಲಸ ಮುಂದುವರೆಸುತ್ತಾ ಸಂಪಾದನೆಗಳನ್ನು ಉಳಿಸುತ್ತಿರಬಹುದು. ಮತ್ತೆ ಸಂಪರ್ಕ ಪುನಶ್ಚೇತನಗೊಂಡಾಗ, ಅಪ್ಲಿಕೇಶನ್ ಸ್ಥಳೀಯ ಸಂಪಾದನೆಗಳನ್ನು ತಾನಾಗಿಯೇ ಅಂರ್ಜಾಲದಲ್ಲಿ ಉಳಿಸುತ್ತದೆ.

೬. ಸಾರ್ವತ್ರಿಕ ಪ್ರಯೋಜನಗಳು – HTML5 ನಲ್ಲಿ ಬರೆದಂತಹ ಅಪ್ಲಿಕೇಶನ್ನುಗಳು ಯಾವುದೇ ಆಪರೇಟಿಂಗ್ ಸಿಸ್ಟಮ್, ಬ್ರೌಸರ್, ಮೊಬೈಲುಳಿಗೆ ಸೀಮಿತವಾಗಿಲ್ಲ. ಈಗಾಗಲೇ ಮೊಬೈಲುಗಳ ಮೂಲಕ ಅಂತರ್ಜಾಲವನ್ನು ಬಳಸುವವರ ಸಂಖ್ಯೆ ಕಂಪ್ಯೂಟರ್ ಮೂಲಕ ಬಳಸುವವರಿಗೆ ಹೆಚ್ಚಿದೆ. ಈ ನಿಟ್ಟಿನಲ್ಲಿ HTML5ನ ಪ್ರಸ್ತುತತೆ ಏರುತ್ತಲೇ ಸಾಗಿದೆ. HTML5ನಲ್ಲಿ ರಚಿತವಾದ ಪುಟವು, ಮೊಬೈಲ್ ಸ್ನೇಹಿಯಾಗಿಯೂ ಕೆಲಸಮಾಡುತ್ತದೆ.

HTML5 ವೈಶಿಷ್ಟ್ಯಗಳನ್ನು ತಿಳಿದುಕೊಂಡು ನಾವು ಇದರ ಪ್ರಯೋಜನಗಳತ್ತ ಕಣ್ಣು ಹರಿಸೋಣ.

೧. ವೆಬ್ ವಿನ್ಯಾಸಗಾರರಿಗೆ – ವೆಬ್ ವಿನ್ಯಾಸಗಾರರಿಗೆ HTML5 ಮತ್ತಷ್ಟು ವೆಬ್-ಸ್ನೇಹಿಯಾಗಲಿದೆ. ಇದರ ಬಹುದೊಡ್ಡ ಪ್ರಯೋಜನವೆಂದರೆ, HTML5 ಅಪ್ಲಿಕೇಶನ್ ಬರೆದರೆ ಅದನ್ನು ಕಂಪ್ಯೂಟರಿನ ಬ್ರೌಸರ್, ಮೊಬೈಲ್ ಬ್ರೌಸರ್, ಸ್ಮಾರ್ಟ್ ಟೀವಿ, XBOX ಎಲ್ಲೆಡೆಯೂ ಅದೇ ವಿನ್ಯಾಸ ಕೆಲಸಮಾಡುತ್ತದೆ. ಈಗೀಗ, ವೆಬ್ ವಿನ್ಯಾಸಗಾರರು ಅನೇಕ ಬಗೆಯ ತಾಂತ್ರಿಕ ವಿಚಾರಗಳಿಂದ ವಿಚಲಿತರಾಗದೆ, HTML5 ಕಂಪ್ಲೈಯಂಟ್ ವೆಬ್ ಅಪ್ಲಿಕೇಶನ್ನು ಅನ್ನು ರಚಿಸುತ್ತಿದ್ದಾರೆ.

೨. ಸಾಮಾನ್ಯ ಬಳಕೆದಾರರಿಗೆ – HTML5 ತಂತ್ರಜ್ಞಾನದ ಬಹುದೊಡ್ಡ ಪ್ರಯೋಜನ ಪಡೆಯುವರೆಂದರೆ ಸಮಾನ್ಯ ಬಳಕೆದಾರರು. ನಾವು ಬಳಸುವ ಲ್ಯಾಪಟಾಪ್, ಮೊಬೈಲು, ಟ್ಯಾಬ್ಲೆಟ್ಟು, ಟೀವಿ ಕಡಿಮೆ ವಿದ್ಯುತ್ ಮತ್ತು ಹೆಚ್ಚು ಕಾರ್ಯಕ್ಷಮತೆ ಹೊಂದಿರಬೇಕು ಎಂದು ಬಯಸುತ್ತೇವೆ. HTML5 ಆ ನಿಟ್ಟಿನಲ್ಲಿ ನಮ್ಮ ನಮ್ಮ ಸಿಸ್ಟಮ್ಮುಗಳಲ್ಲಿ ನಾವು ಅನುಸ್ಥಾಪಿಸಿರುವಂತಹ 3RD ಪಾರ್ಟಿ ತಂತ್ರಾಂಶಗಳ ಮೇಲೆ ನಮ್ಮ ಅವಲಂಬನೆ ಕಡಿಮೆಯಾಗುತ್ತದೆ.

೩. ಆಡ್-ಏಜೆನ್ಸಿಗಳಿಗೆ – ಆನ್ಲೈನ್ Ad Agency ಗಳ ಬಹುದೊಡ್ಡ ತಲೆನೋವೆಂದರೆ ಹೇಗೆ, ತಾವು ಹೆಚ್ಚು ಹೆಚ್ಚು ಜನರನ್ನು ತಲುಪುವುದು ಎಂಬುದು. HTML5 ಎಂಬುದು Ad Agency ಗಳಿಗೆ ವರದಾನವಾಗಿ ಪರಿಣಮಿಸಿದೆ. HTML5ನಲ್ಲಿ ಬರೆದಂತಹ ಅಪ್ಲಿಕೇಶನ್ನುಗಳು ಕಂಪ್ಯೂಟರಿನ ಬಹುತೇಕ ಎಲ್ಲ ಬ್ರೌಸರುಗಳಲ್ಲಿಯೂ ಹಾಗೆಯೇ ಮೊಬೈಲಿನಲ್ಲಾದರೆ, ಐಫೋನ್, ಆಡ್ರಾಯ್ಡ್, ವಿಂಡೋಸ್ 7.5 ನಲ್ಲಿಯೂ ಕೆಲಸ ಮಾಡುತ್ತವೆ.

,

೪. ಗೇಮ್ಸ್ ಡೆವೆಲಪರುಗಳಿಗೆ – ಗೇಮ್ಸ್ ಡೆವೆಲಪರುಗಳಿಗೆ HTML5 ವರದಾನವಾಗಿ ಪರಿಣಮಿಸಿದೆ. ಬ್ರೌಸರುಗಳ ಕಾರ್ಯಕ್ಷಮತೆ ಹೆಚ್ಚಿದಷ್ಟೂ, HTML5ನ ವ್ಯಾಪ್ತಿ ಉದ್ದಗಲಕ್ಕೂ ಹರಡುತ್ತಿದೆ. HTML5ನಲ್ಲಿ ಬರೆದಂತಹ ಆಟ, ಕಂಪ್ಯೂಟರ್ ಹಾಗು ಮೊಬೈಲ್ ಎರಡರಲ್ಲಿಯೂ ಕೆಲಸ ಮಾಡುತ್ತದೆಯಾದ್ದರಿಂದ, ಅನೇಕ ಕಂಪನಿಗಳು HTML5 ನೈಪುಣ್ಯತೆಯನ್ನು ಸಾಧಿಸಲು ವಿಶೇಷ ತಂಡಗಳನ್ನು ರಚಿಸುತ್ತಿವೆ.

ಎಚ್ಚರಿಕೆಗಳು – ಹಾಗಿದ್ದಲ್ಲಿ HTML5 ನಲ್ಲಿ ಎಲ್ಲವೂ ಇದೆಯೇ ? ಇದರಿಂದ ಫ್ಲಾಶ್ ಹೊರಟುಹೋಗುತ್ತದೆಯೇ ಎಂದರೆ ಉತ್ತರ “ಇಲ್ಲ”. ಅನಿಮೇಶನ್ ತಯಾರಿಕೆಗಳಲ್ಲಿ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಆಥರಿಂಗ್ ಟೂಲ್ಸ್(ಸೃಜಿಸುವ ಸಾಧನಗಳು) ಬೇಕಾಗುತ್ತವೆ. HTML5ಗೆ ಈ ರೀತಿಯ ಸಾಧನಗಳು ಸದ್ಯಕ್ಕೆ ಕಡಿಮೆಯೇ. ಅಡೋಬೆ ಕಂಪನಿಯವರು ಕೂಡ ಈಗಾಗಲೇ HTML5 ಪರಿಣತಿ ಹೊಂದಿದ ಫ್ರೇಮವರ್ಕುಗಳನ್ನು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದಾರೆ. ಫ್ಲಾಶ್ ಮೇಲಿನ ಅವಲಂಬನೆ ಸಂಪೂರ್ಣವಾಗಿ ಹೋಗುವುದಿಲ್ಲವಾದರೂ, ಅದರ ಪ್ರಭಾವ ಈಗಾಗಲೇ ತಗ್ಗಿದೆ ಹಾಗು ಮುಂದೆ ಮತ್ತಷ್ಟು ತಗ್ಗಲಿದೆ ಎಂಬುದು ಮಾತ್ರ ಸುಸ್ಪಷ್ಟ. ಆದರೆ, ವೆಬ್-ತಂತ್ರಜ್ಞಾನದಲ್ಲಿ ಖಂಡಿತವಾಗಿಯೂ HTML5 ಇತರ ಎಲ್ಲ ವೆಬ್-ಟೆಕ್ನಾಲಜಿಗಳ ಮುಂದೆ ಗಂಭೀರ ಸವಾಲೊಡ್ಡಲಿದೆ. ನೀವು ವೆಬ್-ತಂತ್ರಜ್ಞರಾದರೆ ನೀವು HTML5 ತಿಳಿದುಕೊಳ್ಳಲೇಬೇಕಾದ ತಂತ್ರಜ್ಞಾನವಾಗಿದೆ ಮತ್ತು ನೀವು ಸಾಮಾನ್ಯ ಬಳಕೆದಾರರಾದರೆ, ನೀವು ಬಳಸುವ ವೆಬ್ ತಾಣಗಳು(ಹಾಗೆಯೇ ಅಪ್ಲಿಕೇಶನ್ನುಗಳು) HTML5 ಕಂಪ್ಲಯಂಟ್ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಪ್ರಯೋಜನಕಾರಿಯಾಗಲಿದೆ.

 

HTML5 ಬಗ್ಗೆ ಮತ್ತಷ್ಟು ತಿಳಿಯಲು

೧. http://html5demos.com/

೨. http://diveintohtml5.info/

೩. http://www.w3schools.com/html5/default.asp

 

ಸುನಿಲ್ ಜಯಪ್ರಕಾಶ್, ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. “ನನ್ನಿ ಸುನಿಲ” ಎಂಬುದು ನನಗೂ ಇಷ್ಟವಾದ ಹೆಸರು. www.chukkiworks.com ನ ಕಣಸುಗಾರ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಮತ್ತೊಂದು ಕಣಸು. ಇವುಗಳ ನಡುವೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ…  [email protected]