ಉಚಿತ ಮತ್ತು ಮುಕ್ತ ತಂತ್ರಾಂಶವು (FOSS) ತನ್ನ ಸಾಮರ್ಥ್ಯದಿಂದ ಈಗಾಗಲೆ ಜಗತ್ತಿನ ನಾನಾ ಮೂಲೆಗಳಿಂದ ಸಾಕಷ್ಟು ಗಮನವನ್ನು ಸೆಳೆದಿದೆ. ಸಮಾಜದ ವಿವಿಧ ಕ್ಷೇತ್ರಗಳು ಈಗಾಗಲೆ ಇದರ ವೈವಿಧ್ಯವಾದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಇದರಲ್ಲಿ ಪ್ರಮುಖವಾದುದೆಂದರೆ ಶಿಕ್ಷಣ ಕ್ಷೇತ್ರ. ಒಂದು ರೀತಿಯಲ್ಲಿ ನೋಡಿದರೆ FOSS ಮತ್ತು ಶಿಕ್ಷಣದ ಸಿದ್ಧಾಂತಗಳು ಹಲವಾರು ದೃಷ್ಟಿಗಳಲ್ಲಿ ಪರಸ್ಪರ ಒಂದನ್ನೊಂದು ಹೋಲುತ್ತವೆ. ತಾತ್ವಿಕವಾಗಿ ದೃಷ್ಟಿಯಿಂದ ನೋಡಿದರೆ, FOSS ತಂತ್ರಾಂಶಗಳನ್ನು ಹಂಚಿಕೊಂಡರೆ, ಶಿಕ್ಷಣವು ಜ್ಞಾನವನ್ನು ಹಂಚಿಕೊಳ್ಳುತ್ತದೆ. ಒಟ್ಟಾರೆಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ FOSS ಬಹಳಷ್ಟು ಸಾಧ್ಯತೆಗಳಿವೆ.

ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಈ ಸಾಧ್ಯತೆಗಳನ್ನು ವಿವರಿಸಲು ಪ್ರಯತ್ನಿಸಲಾಗಿದೆ.

ಕಲಿಕೆಯಲ್ಲಿ FOSS ಅನ್ನು ಬಳಸುವುದು ಮತ್ತು FOSS ಅನ್ನು ಕಲಿಯುವುದು ಎರಡೂ ಸಹ ಗಂಭೀರವಾಗಿ ಪರಿಗಣಿಸಬೇಕಿರುವ ವಿಷಯಗಳಾಗಿವೆ. ಇಂದಿನ ದಿನಗಳಲ್ಲಿ, ಗಣಕ ಮತ್ತು ಅದರ ಸಂಬಂಧಿ ಸಾಧನಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅನಿವಾರ್ಯವಾಗುತ್ತಿವೆ. ಹಾಗಿರುವಾಗ ಇಲ್ಲಿ FOSS ಅನ್ನೇ ಯಾಕೆ ಬಳಸಬೇಕು ಎನ್ನು ಪ್ರಶ್ನೆ ಉದ್ಭವಿಸುವುದು ಸಹಜ.

FOSS ನ ಇತಿಹಾಸವನ್ನು ಗಮನಿಸಿದಲ್ಲಿ, ಹೆಚ್ಚಿನ ತಂತ್ರಾಂಶಗಳ ಉಗಮವು ಶೈಕ್ಷಣಿಕ ರಂಗದಲ್ಲಿಯೆ ಆಗಿದೆ. ಉದಾಹರಣೆಗೆ, ಲಿನಸ್ ಟಾರ್ವೋಲ್ಡ್‍ 386 ಆರ್ಕಿಟೆಕ್ಚರ್ ಕುರಿತು ಕಲಿಯುವಾಗ ಮತ್ತು ಕಾರ್ಯಾಚರಣೆ ವ್ಯವಸ್ಥೆಯ (ಆಪರೇಟಿಂಗ್ ಸಿಸ್ಟಮ್) ಬಗ್ಗೆ ಹೆಚ್ಚಿನ ಅರಿವಿಗಾಗಿ ಪ್ರಯತ್ನಿಸಿದಾಗ ಲಿನಕ್ಸ್ ಹುಟ್ಟಿಕೊಂಡಿದ್ದು, Lyx ಎನ್ನುವ ವರ್ಡ್ ಪ್ರೊಸೆಸರ್ ಒಂದು ಕಾಲೇಜಿನ ಪ್ರಾಜೆಕ್ಟ್‍ ಆಗಿತ್ತು.

ಕಲಿಕೆಯಲ್ಲಿ FOSS ನ ಪಾತ್ರವನ್ನು ಮೂರು ಭಾಗವಾಗಿ ವಿಂಗಡಿಸಬಹುದು

೧. ಮುಕ್ತ ವಿಷಯ/ಓಪನ್ ಕಂಟೆಂಟ್

ಮುಕ್ತ ಮತ್ತು ಉಚಿತ ಜ್ಞಾನವನ್ನು ಪ್ರೋತ್ಸಾಹಿಸುವ ಜನರಿಂದ ಮುಕ್ತ ಕೃತಿಗಳು ಅಥವ ಪಠ್ಯದ ರಚನೆಯಾಗುತ್ತಿರುವುದು ಮತ್ತು ಅದನ್ನು ಉಚಿತವಾಗಿ ಹಂಚಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿದೆ. ಇದು ಪಠ್ಯ, ಧ್ವನಿ ಅಥವ ಚಲನಚಿತ್ರ ರೂಪದಲ್ಲಿ ಇರಬಹುದು. ಮೂಲ ಲೇಖಕನ ಹೆಸರನ್ನು ಹಾಗೆಯೆ ಇರಿಸಿಕೊಳ್ಳುವುದು, ಪಠ್ಯದ ಮೂಲ ಆಶಯವನ್ನು ಬದಲಾಯಿಸದೆ ಇರುವುದು ಮುಂತಾದ ಕೆಲವು ಕನಿಷ್ಟ ನಿರ್ಬಂಧಗಳನ್ನು ಹೊಂದಿರುವ ಕ್ರಿಯೇಟೀವ್ ಕಾಮನ್ಸ್‍ನಂತಹ ವಿಶಿಷ್ಟವಾದ ಪರವಾನಗಿ ಮುಖಾಂತರ ಈ ರೀತಿ ರಚನೆಯಾದ ಕೃತಿಯನ್ನು ಸಮಾಜಕ್ಕೆ ನೀಡಲಾಗುತ್ತದೆ. ಈ ಬಗೆಯ ಪ್ರಯತ್ನಗಳಲ್ಲಿ ಅತ್ಯಂತ ಯಶಸ್ವಿಯಾದವೆಂದರೆ, ಪಿಡಿಎಫ್ ರೂಪದಲ್ಲಿ ಮಿಲಿಯನ್ನುಗಟ್ಟಲೆ ಪುಸ್ತಕಗಳನ್ನು ಒದಗಿಸುವ ಪ್ರಾಜೆಕ್ಟ್‍ ಗುಟೆನ್‌ಬರ್ಗ್ (gutenberg.org), ಹೆಸರಾಂತ ಪುಸ್ತಕಗಳನ್ನು ಧ್ವನಿ ರೂಪದಲ್ಲಿ ನೀಡುವ librivox.org, ವಿಶ್ವದ ಪ್ರತಿಯೊಂದು ವಿಷಯದ ಕುರಿತು ಮಾಹಿತಿಯನ್ನು ಹೊಂದಿರುವ ವಿಕಿಪಿಡಿಯಾ, MIT ಯ ಓಪನ್ ಕೋರ್ಸ್ ವೇರ್ ಇನಿಶಿಯೇಟಿವ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಪ್ರಯತ್ನಗಳ ಒಟ್ಟಾರೆ ಉದ್ಧೇಶವು ಕಲಿಕೆಯಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

೨. ಮುಕ್ತ ತಂತ್ರಾಂಶ

ಕಲಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಗಣಕ ಅಥವ ಗಣಕದ ರೀತಿಯ ಸಾಧನಗಳ ಪಾತ್ರ ಮಹತ್ತರವಾಗಿದೆ. ಕಂಪ್ಯೂಟರ್ ಸಿಮುಲೇಶನ್, ಇಂಟರಾಕ್ಟೀವ್ ಎನಿಮೇಶನ್ಸ್‍ ಮುಂತಾದವು ಈ ಪಂಗಡಕ್ಕೆ ಸೇರುತ್ತವೆ. ವೈಯಕ್ತಿಕ ತರಬೇತಿ ಮತ್ತು ಪ್ರತ್ಯೇಕ ಕಾರ್ಯನಿರ್ವಹಣೆ ಆಧರಿತವಾದ ಕಲಿಕೆ ಪ್ರಕ್ರಿಯೆಗಾಗಿ ಕೆಲವು ನಿಶ್ಚಿತ ವಿಷಯಗಳಿಗೆ ಸಂಬಂಧಿಸಿದ (ಉದಾ., ಆಲ್ಜೀಬ್ರಾದ ಸಮೀಕರಣಗಳನ್ನು ಬಿಡಿಸಲು) ಚತುರ ಕಲಿಕಾ ವ್ಯವಸ್ಥೆಗಳು ಈ ಗುಂಪಿಗೆ ಸೇರುತ್ತವೆ. ಲಿನಕ್ಸ್ ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಮುಕ್ತ ತಂತ್ರಾಂಶ ಪರವಾನಗಿ ಅಡಿಯಲ್ಲಿ ಬರುವ ಇಂತಹ ಹಲವಾರು ತಂತ್ರಾಂಶಗಳನ್ನು ನಾವು ಕಾಣಬಹುದು ಹಾಗೂ ಇವುಗಳಲ್ಲಿ ಹೆಚ್ಚಿನವುಗಳ ವಿಂಡೋಸ್ ಆವೃತ್ತಿಗಳೂ ಸಹ ಉಚಿತವಾಗಿ ದೊರೆಯುತ್ತವೆ. ಚಿಣ್ಣರಿಂದ ಹಿಡಿದು ಉನ್ನತ ವ್ಯಾಸಂಗದ ವಿದ್ಯಾರ್ಥಿಗಳ ಕಲಿಕೆಯನ್ನು ಸುಲಭವಾಗಿಸಲು ಭೌತಶಾಸ್ತ್ರ, ಗಣಿತ, ಖಗೋಳ ವಿಜ್ಞಾನ, ರಸಾಯನ ಶಾಸ್ತ್ರ, ಮುಂತಾದ ವಿಭಾಗಗಳಿಗೆ ಸಂಬಂಧಿಸಿದ ನೂರಾರು ತಂತ್ರಾಂಶಗಳನ್ನು ಕಾಣಬಹುದು. schoolforge.net ಎಂಬ ತಾಣದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಈ ಎಲ್ಲಾ ತಂತ್ರಾಂಶಗಳ ಬೃಹತ್ ಸಂಗ್ರಹವೇ ಇದೆ. ಇವುಗಳ ಕೆಲವು ಉದಾಹರಣೆಗಳೆಂದರೆ:

 • Chemlab – ರಸಾಯನ ಶಾಸ್ತ್ರದ ಪ್ರಯೋಗಗಳು
 • Earth3D – ಭೂಮಿಯ ವಾಸ್ತವಿಕ 3D ಚಿತ್ರಣ
 • Stellarium – ವಾಸ್ತವಿಕ ಪ್ಲಾನೆಟೋರಿಯಮ್
 • Units – ಮಾನಕಗಳ ಪರಿವರ್ತನೆ
 • Kalzium – ಪಿರಿಯೋಡಿಕ್ ಟೇಬಲ್,
 • Atomix ಭೌತಶಾಸ್ತ್ರದ ಆಟಗಳು
 • tux4kids ಮಕ್ಕಳಿಗಾಗಿನ ಕಲಿಕೆ ಮತ್ತು ಆಟಗಳ ಸಂಗ್ರಹ

ಅಷ್ಟೇ ಅಲ್ಲದೆ, ಕೆಲವು ಲಿನಕ್ಸ್ ಡಿಸ್ಟ್ರಿಬ್ಯೂಶನ್‌ಗಳು, ಕಲಿಕೆಗಾಗಿ ಮೀಸಲಿರಿಸಲಾದ ಆವೃತ್ತಿಗಳನ್ನು ಅಥವ ಅನ್ವಯಗಳ ಪಟ್ಟಿಯನ್ನು ಹೊಂದಿವೆ. ಅವುಗಳಲ್ಲಿ ಹೆಸರಿಸಬಹುದಾದವುಗಳೆಂದರೆ, ಡಿಬಿಯನ್‌ನ Skolelinux (http://skolelinux.org/) ಮತ್ತು DebianEdu (http://wiki.debian.org/DebianEdu), ಉಬುಂಟುವಿನ Edubuntu (http://edubuntu.com/), ಫೆಡೋರಾದ Fedora Education Spin (https://fedoraproject.org/wiki/Features/Education), CDAC ನ EduBoss (http://bosslinux.in/eduboss) GNOME ಪರಿಯೋಜನೆಯ GNOME Science CD (https://live.gnome.org/GnomeScienceCD) ಮತ್ತು KDE ಯ kdeedu (http://edu.kde.org/) .

ವರ್ಲ್ಡ್‍ ವೈಡ್ ವೆಬ್‌ನ ಸ್ಥಾಪಕರಾದಂತಹ ಟಿಮ್ ಬರ್ನರ್ಸ್ ಲೀಯು ಮುಂದಿನ ಪೀಳಿಗೆಯ ಅಂತರಜಾಲವು ಅಂಗವಿಕಲರೂ ಸೇರಿದಂತೆ ಜಗತ್ತಿನ ಎಲ್ಲಾ ವರ್ಗದ ಜನರೂ ಬಳಸುವಂತಾಗಬೇಕು ಎಂದು ಕನಸು ಕಂಡಿದ್ದರು. ಕೇವಲ ದೈಹಿಕ ನ್ಯೂನತೆಯಿಂದಾಗಿ ಅವರ ಕಲಿಕೆಯ ವ್ಯಾಪ್ತಿಯು ಮೊಟಕುಗೊಳ್ಳಬಾರದು. ಅದು ಭೌತಶಾಸ್ತ್ರವೇ ಇರಬಹುದು ಅಥವ ಗಣಕ ವಿಜ್ಞಾನವೆ ಇರಬಹುದು. ಮುಕ್ತ ತಂತ್ರಾಂಶದ ಚಳುವಳಿಯು ಈ ಸಮಸ್ಯೆಯನ್ನು ಮೊದಲೆ ಗುರುತಿಸಿ ಸ್ಕ್ರೀನ್‌ ರೀಡರ್, ಸ್ಪೀಚ್ ರೆಕಗ್ನೈಸರ್, ಬ್ರೈಲ್ ಸಿಸ್ಟಮ್‌ ಮುಂತಾದ ಹಲವಾರು ವ್ಯವಸ್ಥೆಗಳನ್ನು ಒದಗಿಸಿದೆ. Gnome ಎಕ್ಸೆಬಿಲಿಟಿ ಎನ್ನುವುದು ಯಾವುದೆ Gnome ಅನ್ವಯದ ಸೋರ್ಸ್ ಕೋಡ್‌ ಅನ್ನು ಹಾಗೆಯೆ ಇರಿಸಿಕೊಂಡು ಮಾತಿನ ಮೂಲಕ ಬಳಸಬಹುದಾದ ಒಂದು ಶಕ್ತಿಯುತವಾದ ತಂತ್ರಾಂಶವಾಗಿದೆ.

ಕಲಿಕೆಯ ನಿರ್ವಹಣೆ

ಶಾಲೆ/ಕಾಲೇಜಿನ ನಿರ್ವಹಣೆ, ಪಠ್ಯಕ್ರಮವನ್ನು ನೋಡಿಕೊಳ್ಳುವಿಕೆ, ಫಲಿತಾಂಶದ ಸಂಸ್ಕರಣೆ, ಮೌಲ್ಯಮಾಪನ ನಡೆಸುವಿಕೆ, ಅಸೈನ್ಮೆಂಟ್ ಸಲ್ಲಿಕೆ ಮತ್ತು ಮೌಲ್ಯಮಾಪನೆ, ಪಠ್ಯಕ್ರಮಕ್ಕೆ ಅಗತ್ಯವಾದ ಸಾಮಗ್ರಿಗಳ ಸಿದ್ಧಪಡಿಕೆ ಮುಂತಾದ ಕಾರ್ಯಗಳಿಗೆ ನೆರವು ನೀಡಬಲ್ಲ ತಂತ್ರಾಂಶಗಳು ಉಪಕರಣಗಳು ಈ ವರ್ಗದ ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ ಹಲವಾರು ಮುಕ್ತ ಮತ್ತು ಉಚಿತ ತಂತ್ರಾಂಶಗಳಾಗಿವೆ. ಯುನೆಸ್ಕೋದ ಕಲಿಕೆಗೆ ಸಂಬಂಧಿಸಿದ ಜಾಲತಾಣದಲ್ಲಿ FOSS ಗಾಗಿ ಒಂದು ವಿಭಾಗವನ್ನೇ ಮೀಸಲಿರಿಸಲಾಗಿದೆ. ಒಂದೆಡೆಯಲ್ಲಿ ಯುನೆಸ್ಕೋದಂತಹ ಅಂತರಾಷ್ಟ್ರೀಯ ಸಂಸ್ಥೆಗಳು FOSS ಮತ್ತು ಕಲಿಕೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಎಂದು ತೋರಿಸಿದರೆ, ಇನ್ನೊಂದೆಡೆಯಲ್ಲಿ ದೊಡ್ಡ ಸಂಖ್ಯೆಯ ಮತ್ತು ಗುಣಮಟ್ಟದ ಸಂಪನ್ಮೂಲಗಳು ದೊರೆಯುತ್ತವೆ ಎನ್ನುವುದನ್ನು ಇದು ತೋರಿಸುತ್ತದೆ.

ಯಾವುದೆ ಶಾಲೆಯಲ್ಲಿ ನಿರ್ವಹಣೆಗಾಗಿ ಹಲವು ಬಗೆಯ ತಂತ್ರಾಂಶ ವ್ಯವಸ್ಥೆಗಳು ನೆರವಾಗುತ್ತವೆ. ಹಳೆಯ ಯಂತ್ರಾಂಶಗಳಲ್ಲಿಯೂ ಸಹ ಓಡಬಲ್ಲ, ಲಿನಕ್ಸ್ ಒಂದು ಉತ್ತಮ ಸಂಪನ್ಮೂಲವಾಗಿ ಒದಗಬಲ್ಲದು. ನಿರ್ವಹಣೆಯಲ್ಲಿ ನೆರವಾಗುವ ಇನ್ನಿತರೆ ತಂತ್ರಾಂಶಗಳಲ್ಲಿ ಪ್ರಮುಖವಾದವುಗಳೆಂದರೆ:

 • ಯೋಜನಾ ನಿರ್ವಹಣೆ – Planner
 • ದಸ್ತಾವೇಜು (ಡಾಕ್ಯಮೆಂಟ್) ರಚನೆ – LibreOffice (Openoffice), Latex
 • ಆಡಿಯೋ ರೆಕಾರ್ಡ್/ಮಾರ್ಪಡಿಸುವಿಕೆ – Audicity
 • ಜಾಲ ತಾಣ ನಿರ್ಮಾಣ – Nyu
 • ಕಲಿಕೆಯ ನಿರ್ವಹಣೆ – Moodle
 • ಶಾಲೆಯ ವ್ಯವಸ್ಥಾಪನೆ – Schooltool
 • 3D ಎನಿಮೇಶನ್ – Blender
 • ರೇಖಾಕೃತಿ ಸಂಪಾದನೆ – Dia
 • ಚಿತ್ರ ಸಂಸ್ಕರಣೆ – Gimp
 • ಪುಟದ ವಿನ್ಯಾಸ – Scribus
 • ನಕ್ಷೆ ರಚನೆ – kmplot

ಶಿಕ್ಷಣ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ಈಗಾಗಲೆ ಸಾಕಷ್ಟು ಅಳವಡಿಕೆಗಳಾಗಿವೆ. ಕೇರಳ ಸರ್ಕಾರವು ಈ ವಿಷಯದಲ್ಲಿ ಸಾಕಷ್ಟು ಆಸಕ್ತಿ ತೋರಿಸಿವೆ. ಹಲವಾರು ಸರ್ಕಾರೇತರ ಸಂಸ್ಥೆಗಳು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವು ಹಳ್ಳಿಗಳಲ್ಲಿ ಸುಲಭವಾಗಿ ಹರಡುವಂತೆ ದೊರೆಯುವಂತೆ ಮಾಡುವ ಪ್ರಯತ್ನದಲ್ಲಿ ಭಾಗಿಯಾಗಿವೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿಯೊಂದು ಮಗುವೂ ಸಹ ಪ್ರಾಥಮಿಕ ಶಿಕ್ಷಣ ಪಡೆಯುವುದು ದುಸ್ತರವಾಗಿರುವಾಗ ಗಣಕ ಮತ್ತದರ ತಂತ್ರಾಂಶಗಳಿಗಾಗಿ ಹಣ ವೆಚ್ಚಮಾಡುವುದು ಸುಲಭದ ಮಾತಲ್ಲ. ಇಂತಹ ಸನ್ನಿವೇಶದಲ್ಲಿ FOSS ಬಹು ಮಟ್ಟಿಗೆ ಈ ಹೊರೆಯನ್ನು ತಗ್ಗಿಸಬಲ್ಲದು. ಇದು ಕೇವಲ ಹಣವನ್ನು ಉಳಿಸುವುದು ಮಾತ್ರವಲ್ಲದೆ, ವಿಶ್ವಾಸಾರ್ಹತೆ, ಕಾರ್ಯನಿರ್ವಹಣೆ ಮತ್ತು ಉತ್ತಮ ಸುರಕ್ಷತೆಯನ್ನೂ ಒದಗಿಸುತ್ತದೆ.

FOSS ಅನ್ನು ಕಲಿಕೆಯಲ್ಲಿ ಬಳಸುವುದರ ಜೊತೆಗೆ, ಅದನ್ನು ಪಠ್ಯದ ಒಂದು ಭಾಗವಾಗಿಸುವುದರಿಂದ ವಿದ್ಯಾರ್ಥಿಗಳಿಗಾಗುವ ಒಂದು ಅತ್ಯಂತ ಪ್ರಮುಖವಾದ ಪ್ರಯೋಜನವೆಂದರೆ ತಂತ್ರಾಂಶಗಳ ತಳಹದಿಯಾದಂತ ಸೋರ್ಸ್ ಕೋಡ್‌ ಅನ್ನು ಅವಲೋಕಿಸುವ ಅವಕಾಶ. ಇದರಿಂದಾಗಿ ವಿದ್ಯಾರ್ಥಿಗಳು ನಿಜವಾದ ಪ್ರೊಗ್ರಾಮ್‌ಗಳನ್ನು ಅಧ್ಯಯನ ಮಾಡಲು ಸಾಧ್ಯವಿರುತ್ತದೆ. ಅಲ್ಲದೆ ಇದರಲ್ಲಿನ ಪ್ರಾದೇಶೀಕರಣ (ಲೋಕಲೈಸೇಶನ್) ಅವಕಾಶದಿಂದಾಗಿ ಇಂಗ್ಲೀಷಿನ ಜ್ಞಾನದ ಕೊರತೆಯಿಂದಾಗಿ ಆಧುನಿಕ ತಂತ್ರಜ್ಞಾನದಿಂದ ವಂಚಿತರಾಗುವುದನ್ನು ತಪ್ಪಿಸುತ್ತದೆ. ಒಟ್ಟಿನಲ್ಲಿ FOSS ನ ಸರಿಯಾದ ರೀತಿಯ ಅಳವಡಿಕೆ ಮತ್ತು ಬಳಕೆಯು ಸಮಾಜದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅಂತರವನ್ನು ಕಡಿಮೆಮಾಡಲು ಸಾಧ್ಯವಿದೆ.

ಶಂಕರ್ ಪ್ರಸಾದ್. ಎಮ್ ವಿ, ಹುಟ್ಟು ಮತ್ತು ಬಾಲ್ಯ ಶೃಂಗೇರಿ ಸಮೀಪದ ತುಂಗೆಯ ತಟದಲ್ಲಿರುವ ಪುಟ್ಟ ಹಳ್ಳಿಯಲ್ಲಿ. ಓದಿದ್ದು ವಸ್ತುವಿಜ್ಞಾನದಲ್ಲಿ ಎಂಎಸ್ಸಿ. ಬೆಂಗಳೂರಿನ ಎನ್‌ಎಎಲ್‌ನ ವಸ್ತುವಿಜ್ಞಾನ ವಿಭಾಗದಲ್ಲಿ ಒಂದಿಷ್ಟು ವರ್ಷ ವಾಸ ಸಹಾಯಕ ಸಂಶೋಧಕನಾಗಿ ಕೆಲಸ ಮಾಡಿದೆ. ಜೊತೆಗೆ ಕನ್ನಡದ ವಾರ್ಷಿಕ ವಿಜ್ಞಾನ ಪತ್ರಿಕೆಯಾದ ಕಣಾದ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ ಅನುಭವ. ನಂತರ ಮುಕ್ತ ತಂತ್ರಾಂಶಗಳೆಡೆಗೆ ಒಲವು. ಪ್ರಸಕ್ತ ಮುಕ್ತ ತಂತ್ರಾಂಶವನ್ನು ಒದಗಿಸುವ ಸಂಸ್ಥೆಯಲ್ಲಿ ಅನುವಾದಕನಾಗಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಫೈರ್ಫಾಕ್ಸ್, ಗ್ನೋಮ್, ಕೆಡಿಇ, ಫೆಡೋರ, ಓಪನ್ಆಫೀಸ್ ಮುಂತಾದ ಹೆಚ್ಚಿನ ಎಲ್ಲಾ ಮುಕ್ತತಂತ್ರಾಂಶಗಳ ಕನ್ನಡ ಅನುವಾದದಲ್ಲಿ ಕೈಜೋಡಿಸಿದ್ದೇನೆ. ಈ ಅನುವಾದಗಳಲ್ಲಿ ಶಿಷ್ಟತೆಯನ್ನು ತರುವುದು ಮುಂದಿನ ಗುರಿ. ವಿಜ್ಞಾನ ಹಾಗು ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನೂ ಸಹ ಬರೆದಿದ್ದೇನೆ. ಸಾಹಿತ್ಯ ಹಾಗು ಕ್ರಿಕೆಟ್‌ನೆಡೆಗೆ ಅಪರಿಮಿತ ಆಸಕ್ತಿ, ಒಂದಿಷ್ಟು ಸಣ್ಣ ಪುಟ್ಟ ಕವನಗಳನ್ನೂ ಸಹ ಗೀಚಿದ್ದೇನೆ.