ಪ್ರಿಯ ಓದುಗರೆ,

‘ಸಂಚಯ’, ಕನ್ನಡವನ್ನು ಕುರಿತಾದ ಮುಕ್ತ ತಂತ್ರಾಂಶಗಳನ್ನು ಒಂದುಗೂಡಿಸುವ ವೇದಿಕೆ, ಸಮುದಾಯ ಯೋಜನೆ. ಈಗ ನಡೆಯುತ್ತಿರುವ, ಯೋಜನೆಯಲ್ಲಿರುವ, ಮುಕ್ತ ಕನ್ನಡ ತಂತ್ರಾಂಶಗಳ ಕೆಲಸಗಳು ಹತ್ತು ಹಲವೆಡೆ ಹಂಚಿಹೋಗಿವೆ. ಒಂದೊಂದು ಗುಂಪು ತನ್ನದೇ ಆದ ಕೆಲಸಗಳಲ್ಲಿ ತೊಡಗಿದೆ. ಅವೆಲ್ಲುದರ ಮೂಲ ಉದ್ಧೇಶ ಕನ್ನಡ ಮುಕ್ತ ತಂತ್ರಾಂಶದ ಅಭಿವೃದ್ಧಿಯಾದರೂ, ಯಾರು ಯಾವ ಕೆಲಸವನ್ನು ಮಾಡುತ್ತಿರುವರೆಂದು ತಿಳಿಯದಾಗಿದೆ. ಇಂತಹ ಕೆಲಸಕಾರ್ಯಗಳನ್ನು ಮಾಡುತ್ತಿರುವ ಗುಂಪುಗಳನ್ನು, ತಂತ್ರಾಂಶ ಅಭಿವೃದ್ಧಿಗಾರರನ್ನು ಒಂದು ಸೂರಿನಡಿ ತರುವ ಉದ್ಧೇಶ ಈ ‘ಸಂಚಯ’ದ್ದು.

ಒಂದು ಸೂರಿನಡಿ ತರುವುದು ಎಂದರೆ, ಅವರೆಲ್ಲರನ್ನು ಕಟ್ಟಿಹಾಕುವುದೆಂದರ್ಥವಲ್ಲ ಆದರೆ, ಕನ್ನಡ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಆಸಕ್ತರಾದವರು ಅವುಗಳ ಬಗ್ಗೆ ಒಂದೇ ಕಡೆ ಮಾಹಿತಿಯನ್ನು ಪಡೆಯುವಂತವರಾಗಲಿ ಎಂಬುದು ನಮ್ಮ ಆಶಯ.

ಸಂಚಯದಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳ ಕುರಿತಾದ ವಿಷಯಗಳನ್ನು ನೀಡಲು, ಭಾಗವಹಿಸಲು ಇಚ್ಚಿಸುವವರು, ತಾವು ಅಭಿವೃದ್ಧಿ ಪಡಿಸುತ್ತಿರುವ, ಅಭಿವೃದ್ಧಿ ಪಡಿಸಿರುವ, ಮುಕ್ತವಾದ, ಕನ್ನಡ ಭಾಷೆಯನ್ನು ಕುರಿತಾದ ತಂತ್ರಾಂಶದ ಬಗ್ಗೆ ‘ಸಂಚಯ’ ವ್ಯವಸ್ಥಾಪಕ ಗುಂಪಿಗೆ ಒಂದು ಮಿಂಚಂಚೆಯನ್ನು ಕಳುಹಿಸುವುದು. ವ್ಯವಸ್ಥಾಪಕ ಗುಂಪು ಅದನ್ನು ಪರಿಶೀಲಿಸಿದ ಬಳಿಕ, ಅಭಿವೃದ್ಧಿದಾರರಿಗೆ, ‘ಸಂಚಯ’ದಲ್ಲಿ ಒಂದು ಖಾತೆಯನ್ನು ನೀಡುತ್ತದೆ ಹಾಗೂ ಅವರು ನೀಡಿರುವ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ಪ್ರಕಟಿಸುತ್ತದೆ. ಕಾಲಕ್ರಮೇಣ, ತಮ್ಮ ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿಗಳ ಬಗ್ಗೆ ಅಭಿವೃದ್ಧಿಗಾರರು ಸಂಚಯದಲ್ಲಿ ತಿಳಿಸುತ್ತಾ ಹೋಗಬಹುದು. ತಮ್ಮ ಕಾರ್ಯದಲ್ಲಿ ಆಸಕ್ತಿ ತೋರುವ ಇತರ ಅಭಿವೃದ್ಧಿಗಾರರನ್ನು ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ತಮ್ಮ ತಂತ್ರಾಂಶದ ಬಗ್ಗೆ ಪ್ರತಿಕ್ರಿಯೆಗಳನ್ನು ಪಡೆಯಬಹುದು.

ಕಾಲಕ್ರಮದಲ್ಲಿ, ಮುಕ್ತ ತಂತ್ರಾಂಶದ ಅಭಿವೃದ್ಧಿ ಕಾರ್ಯಗಳಿಗೆ ಅನುವಾಗುವಂತೆ ಮತ್ತಷ್ಟು ಸುಧಾರಣೆಗಳನ್ನು ‘ಸಂಚಯ’ ತರುತ್ತಿರುತ್ತದೆ.

ಬನ್ನಿ, ಎಲ್ಲರಿಗೂ ಉಪಯುಕ್ತವಾದ, ಮುಕ್ತ, ಕನ್ನಡ ತಂತ್ರಾಂಶಗಳನ್ನು ತಯಾರಿಸೋಣ, ಎಲ್ಲ ಸೇರಿ ಅಭಿವೃದ್ಧಿಪಡಿಸೋಣ.