ಅರಿವಿನ ಅಲೆಗಳ ಲೇಖನಗಳನ್ನು ಒಟ್ಟುಗೂಡಿಸುವುದು, ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು ಒಟ್ಟಾಗಿ ಒಂದು ಜವಾಬ್ದಾರಿ. ಸಾಮಾನ್ಯನೂ, ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು, ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ, ಅನುಸ್ಥಾಪನೆ, ಸಂಶೋದನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಅವರ ಬಿಡುವಿನ, ಕೆಲವೊಮ್ಮೆ ಕೆಲಸದ ನಡುವಿನ ಕೆಲಕ್ಷಣಗಳಲ್ಲಿ ಪದಗಳ ಹರಿವಿಗೆ ಹಿಡಿದು ಅಲೆಗಳಾಗಿ ಪರಿವರ್ತಿಸುವ ಸಂಪಾದನೆಯ ಕಾರ್ಯ ಸುಲಲಿತವಾಗಿ ೧೪ ದಿನಗಳೂ ನೆಡೆಯಿತು. ಎಲ್ಲರಿಗೂ ಒಂದು ತಿಂಗಳ ಗಡುವು ಕೊಟ್ಟು, ಬರೆಯಲೇ ಬೇಕು, ಇತರರೊಡನೆ ವಿಷಯ ಹಂಚಿಕೊಳ್ಳಬೇಕು ಎನ್ನುವವರಿಗೆ ಒಂದು ವೇದಿಕೆ ಸೃಷ್ಟಿಸಿ ಅಲೆಗಳ ಆಗಮನಕ್ಕೆ ಕಾಯ್ದ ದಿನಗಳ ನೆನಪು ಇನ್ನೂ ಹಸಿರಾಗಿದೆ. ನಂತರ ದಿನ ದಿನಕ್ಕೂ ಬೇಕಾದ ಲೇಖನಗಳನ್ನು ಓದಿ, ಪರಿಷ್ಕರಿಸಿ, ಮತೊಮ್ಮೆ ಲೇಖಕರಿಂದಲೇ ಕೆಲವನ್ನು ತಿದ್ದಿಸಿ, ನಿಮ್ಮ ಮುಂದಿಟ್ಟದ್ದು, ಇಡೀ ತಂಡವೇ ತಮ್ಮನ್ನು ತಾವು ಸಂಪಾದಕೀಯದಲ್ಲಿ ತೊಡಗಿಸಿಕೊಂಡದ್ದು ವಿಶೇಷ. ಅದಕ್ಕೆಲ್ಲದಕ್ಕಿಂತಲೂ, ಸ್ನೇಹಿತರು ಬರೆದ ಲೇಖನಗಳು ಮತ್ತಷ್ಟು ಸ್ನೇಹಿತರಿಗೆ ಬರೆಯಲು ಪ್ರೋತ್ಸಾಹಿಸಿದವು. ಎಲ್ಲ ಲೇಖಕ/ಲೇಖಕಿಯರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಕೆಲಸದಲ್ಲಿ ತಂಡದೊಂದಿಗೆ ಕೈಸೇರಿಸಿದ್ದು ಗಮನಕ್ಕೆ ಬಂದ ಅಂಶ. ಎಲ್ಲರಿಗೂ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಬಗೆಗಿನ ಲೇಖನಗಳನ್ನು ಬರೆಯಲು, ಇತರರೊಡನೆ ನಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಳ್ಳಲು ಯಾವಾಗಲೂ ನಮ್ಮನ್ನು ಹುರಿದುಂಬಿಸಿ, ತಿದ್ದಿದವರು ಹಿರಿಯ ಪತ್ರಕರ್ತ ಎನ್. ಎ. ಎಮ್ ಇಸ್ಮಾಯಿಲ್. ತಂತ್ರಜ್ಞಾನದ ಆಳಕ್ಕೆ ಇಳಿದು, ತಂತ್ರಜ್ಞರಂತೆಯೇ ತಮ್ಮ ಕಾರ್ಯಗಳಲ್ಲೂ ಪ್ರಾಯೋಗಿಕವಾಗಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಸುಲಲಿತವಾಗಿ ಬಳಸಿಕೊಳ್ಳುವ ಇವರು ಅರಿವಿನ ಅಲೆಗಳ, ಸ್ವಾತಂತ್ರ್ಯದ ಬೇಕು, ಬೇಡಗಳ ಎಳೆಗಳನ್ನು ಸಾಂದರ್ಭಿಕ ಮುನ್ನುಡಿಯನ್ನು ಬರೆಯುವ ಮೂಲಕ ಮತ್ತೊಮ್ಮೆ ಯುವ ಪೀಳಿಗೆಗೆ ನಮ್ಮ ಜವಾಬ್ದಾರಿಯನ್ನು ನೆನಪಿಸಿದ್ದಾರೆ. ಅವರಿಗೆ ನಮ್ಮೆಲ್ಲರ ನಮನಗಳು. ಅರಿವಿನ ಅಲೆಗಳ ಮೂಲ ಸ್ಪ್ರೂರ್ತಿ ಪಡೆದದ್ದು, ಅದರ ಸರಳ ಸುಂದರ ನಿಲುವು ಅಂತರ್ಜಾಲ ಪುಟಗಳ ರೂಪ ವಿನ್ಯಾಸದಲ್ಲಿಯೂ ನಿರೂಪಣೆಗೊಂಡದ್ದು ಅರವಿಂದನಿಂದ. ಅಲೆಗಳಿಗೆ ಅರಿವಿನ ಮೊದಲನೆ ಹೆಸರು ಹೊಳೆದದ್ದು ಪವಿತ್ರಳಿಗಾದರೆ, ಬೆಂಬಲಕ್ಕೆ ರವಿ ಜೊತೆಗಿದ್ದರು. ನಂತರದ ಫಲಿತಾಂಶ ನಿಮ್ಮ ಮುಂದಿದೆ.

ಇ-ಪುಸ್ತಕಕ್ಕೆ ಸುಂದರ ಮುಖಪುಟದ ವಿನ್ಯಾಸ ಮಾಡಿದ್ದು ಮಂಸೋರೆ. ಅರಿವಿನ ಅಲೆಯ ಲೋಗೊದ ವಿನ್ಯಾಸಕ್ಕೆ ಸಹಾಯ ಮಾಡಿದ ಸಿಜು. ಮುಖಪುಟದ ಛಾಯಾಚಿತ್ರ ಪವಿತ್ರ ಕ್ಯಾಮೆರಾದಿಂದ ಹೊರ ಬಂದಿದ್ದು. ನಿಮ್ಮೆಲ್ಲರ ಕ್ರಿಯಾಶೀಲತೆಗೆ ನಮ್ಮೆಲ್ಲರ ಮೆಚ್ಚುಗೆಗಳು.

ಬರೆದ ಪುಟಗಳಿಗೆ, ಫೇಸ್‌ಬುಕ್, ಟ್ವಿಟರ್, ಬ್ಲಾಗ್, ಬಝ್, ಫ್ಲಸ್ ಹೀಗೆ ಹತ್ತಾರು ಸಮುದಾಯ ತಾಣಗಳಲ್ಲಿನ ಓದುಗರ ಪ್ರತಿಕ್ರಿಯೆ, ನಾವು ಬರೆದದ್ದು ಯಾರಿಗಾದರೂ ತಲುಪಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡಿತು. ಓದುಗರಿಗೆಲ್ಲರಿಗೂ ಅರಿವಿನ ಅಲೆಗಳು ಸ್ವಾತಂತ್ರ್ಯದ ಸವಿಯನ್ನು ಒದಗಿಸಿದೆ ಎಂಬ ತೃಪ್ತಿ ನೀಡಿದ ನಿಮಗೆ ನಮ್ಮ ವಂದನೆಗಳು.
ಜೊತೆಗೆ ಲೇಖನಗಳು ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಎಲ್ಲರಿಗೂ ಮುಕ್ತವಾಗಿ ಹಂಚಿಕೆಯಾಗಲಿದೆ. ಯಾವುದೇ ಬದಲಾವಣೆಯಿಲ್ಲದೆ, ವಾಣಿಜ್ಯ ಉದ್ದೇಶ ರಹಿತ ಬಳಕೆಗೆ, ೨೦೧೧ರ ಸ್ವಾತಂತ್ರ ದಿನಾಚರಣೆಯಂದು ‘ಅರಿವಿನ ಅಲೆಗಳು’ ಲೇಖನಗಳನ್ನು ಇ-ಪುಸ್ತಕ ರೂಪದಲ್ಲಿ ನಿಮ್ಮ ಮುಂದಿಡಲು ‘ಸಂಚಯ’ ತಂಡ ಸಂತಸ ಪಡುತ್ತದೆ. ಇ-ಪುಸ್ತಕದ ಅಲೆಗಳ ಜ್ಞಾನದ ಹರಿವನ್ನು ಮತ್ತಷ್ಟು ಕನ್ನಡಿಗರಿಗೆ ನಾವೆಲ್ಲರೂ ಸೇರಿ ತಲುಪಿಸೋಣ. ಕನ್ನಡದ ಭಾಷೆ, ತಂತ್ರಜ್ಞಾನ, ಸಂಸ್ಕೃತಿಯ ವಿಸ್ತರಣೆಗೆ ಕಂಕಣ ಬದ್ದರಾಗೋಣ.

ನಿಮಗೆ ನಮ್ಮ ಕೆಲಸ ಹಿಡಿಸಿದ್ದಲ್ಲಿ, ನಮ್ಮೊಡನೆ ಕೈ-ಜೋಡಿಸಲು ಇಚ್ಚಿಸಿದ್ದಲ್ಲಿ ಸಣ್ಣದೊಂದು ಮಿಂಚಂಚೆ ನಮಗೆ ತಲುಪಿಸಲು ಮರೆಯಬೇಡಿ.

ಓಂಶಿವಪ್ರಕಾಶ್ ಎಚ್.ಎಲ್
ಅರಿವಿನ ಅಲೆಗಳು ತಂಡ – “ಸಂಚಯ”