ಮೊನ್ನೆ ನನ್ನ ಇಮೆಯ್ಲ್ ನಲ್ಲಿ ಮಿತ್ರರೊಬ್ಬರು ನನಗೆ ಹೀಗೆ ಬರೆದಿದ್ದರು: “ನೀವು ಬರೆದಿದ್ದ ಅರುಂಧತೀ ದರ್ಶನ ಬರಹ ಚೆನ್ನಾಗಿತ್ತು. ನೀವು ಬೆಂಗಳೂರಿನಲ್ಲಿ ಈ ನಕ್ಷತ್ರವನ್ನು ನೋಡಲು ಅನುಕೂಲವಾಗುವ ಹಾಗೆ ಸೂಚನೆಗಳನ್ನು ಕೊಟ್ಟಿದ್ದಿರಿ. ಈ ನಕ್ಷತ್ರ ನಾವಿರುವ ಕ್ಯಾಲಿಫೋರ್ನಿಯಾದ ಸನಿವೇಲ್ ನಲ್ಲೂ ಕಾಣುತ್ತದೆಯೇ ಇಲ್ಲವೇ? ಕಾಣುವುದಿದ್ದರೆ ಹೇಗೆ ತಿಳಿಸುತ್ತೀರಾ?”. ಈ ಪ್ರಶ್ನೆ ನನಗೆ ಈಚಿನ ದಶಕದಲ್ಲಿ, ಸಾಮಾನ್ಯ ನೋಡುಗನಿಗಾಗಿ ಸಿಕ್ಕಿರುವ ಆಕಾಶ ವೀಕ್ಷಣೆಯ ಹೊಸ ದಾರಿಯನ್ನ ಮನಸ್ಸಿಗೆ ನೆನಪಿಸಿತು. ನಾನು ನಿಜವಾಗಿ ತಂತ್ರಾಂಶ ತಂತ್ರಜ್ಞನೇನಲ್ಲ, ಆದರೂ ಈ ಅರಿವಿನ ಅಲೆಗಳು ಸರಣಿಯಲ್ಲಿ ಒಂದು ಮುಕ್ತ ತಂತ್ರಾಂಶದ ಬಗ್ಗೆ ಒಬ್ಬ ಬಳಕೆದಾರನ ನೋಟದಿಂದ ಬರೆಯಲು ಈ ಪ್ರಶ್ನೆ ಕಾರಣವಾಗಿ, ನಾನು ಬಳಸಿರುವ ಒಂದು ಮುಕ್ತ ತಂತ್ರಾಂಶದ ಬಗ್ಗೆ ಬರೆಯೋಣವೆಂದು ಹೊರಟಿದ್ದೇನೆ.

ನಾನು ಐದನೇಯದೋ ಆರನೆಯದೋ ತರಗತಿಗೆ ಹೋಗುತ್ತಿದ್ದ ಕಾಲದ ಮಾತು. ಅದು ಹೇಗೋ ನನಗೆ ಈ ಆಕಾಶವೀಕ್ಷಣೆಯ ಹುಚ್ಚು ಹಿಡಿಯಿತು. ನನ್ನ ಗೆಳೆಯರಲ್ಲಿ ಆಗಲಿ, ಮನೆಯಲ್ಲಿ ಆಗಲೀ, ಅಥವಾ ಪರಿಚಿತರಲ್ಲಿ ಆಗಲೀ ಯಾರಿಗೂ ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ. ನಮ್ಮೂರ ಗ್ರಂಥಾಲಯದಲ್ಲಿ ಸಿಕ್ಕ ಕೆಲವು ಪುಸ್ತಕಗಳನ್ನು ಓದಿ, ಹೇಗೋ ಕೆಲವು ನಕ್ಷತ್ರಗಳನ್ನು, ರಾಶಿಗಳನ್ನು ಗುರುತಿಸುವುದನ್ನು ಕಲಿತಿದ್ದಾಯಿತು. ಅಪರೂಪಕ್ಕೊಮ್ಮೆ ಸೈಯನ್ಸ್ ಟುಡೇ ಪತ್ರಿಕೆಯಲ್ಲೋ, ಮತ್ತೆಲ್ಲಾದರೂ ತಿಂಗಳ ಆಕಾಶದ ನಕ್ಷೆ ಸಿಕ್ಕಿಬಿಟ್ಟರೆ ಹಿಗ್ಗು ಹೇಳತೀರದಾಗಿರುತ್ತಿತ್ತು. ಒಂದು ನಕ್ಷತ್ರವನ್ನೋ, ನೆಬ್ಯುಲಾವನ್ನೋ ನೋಡಿ ಗುರುತಿಸಿದರೆ ಅದೇ ಹೆಚ್ಚು ಹೆಚ್ಚು. ನಂತರ ೮೫ ನೇ ಇಸವಿಯ ಸಮಯದಲ್ಲಿ ಹ್ಯಾಲಿ ಧೂಮಕೇತು ಬಂದ ಸಮಯದಲ್ಲಿ ಕೈಗೊಂದು ದೂರದರ್ಶಕವೂ ಸಿಕ್ಕಾಗ, ಆಕಾಶದಲ್ಲಿ ಆ ಧೂಮಕೇತುವಿನ ಉಂಡೆಯನ್ನು ಗುರ್ತಿಸುವುದು ಹುಲ್ಲು ಬಣವೆಯಲ್ಲಿ ಸೂಜಿ ಹುಡುಕಿದಷ್ಟೇ ಕಷ್ಟವಾಗಿತ್ತೇನೋ ಎಂದು ನೆನಪು.

ಆದರೆ ಇವತ್ತಿನ ವಿಷಯ ಹಾಗಿಲ್ಲ. ಒಂದು ವೇಳೆ ಆಕಾಶವೀಕ್ಷಣೆಯಲ್ಲಿ ನಿಮಗೆ ಆಸಕ್ತಿ ಇದ್ದರೆ ನಿಮಗೆ ದಾರಿ ತೋರುವ ತಂತ್ರಾಂಶಗಳು ಈಗ ನಿಮ್ಮ ಕೈಯಳತೆಯಲ್ಲೇ ಇವೆ. ಚಿಕ್ಕವರು ದೊಡ್ಡವರು ಎನ್ನದೆ ಎಲ್ಲರಿಗೂ ಆಕಾಶದ ಅದ್ಭುತಗಳನ್ನು ಕಂಪ್ಯೂಟರ್ ತೆರೆಯ ಮೇಲೇ ಮೂಡಿಸುತ್ತವೆ. ಹಾಗಂತ ಆಕಾಶ ನೋಡೋದು ಯಾಕೆ ಅಂತ ಕಂಪ್ಯೂಟರ್ ಮುಂದೇ ಕುಳಿತುಬಿಡಬೇಡಿ ಮತ್ತೆ! ಆಕಾಶದಲ್ಲಿ ನೋಡಿ ಹುಡುಕುವ ಮೊದಲು ಕಂಪ್ಯೂಟರಿನಲ್ಲಿ ನೀವು ನೋಡಬೇಕಾದ ನಕ್ಷತ್ರ ಪುಂಜವನ್ನೋ, ಗ್ರಹವನ್ನೋ ಅದರ ಸುತ್ತ ಮುತ್ತನ ಪ್ರದೇಶಗಳನ್ನೂ ಹೇಗಿದೆಯೆಂದು ನೋಡಿ ಸ್ವಲ್ಪ ಮನದಟ್ಟು ಮಾಡಿಕೊಂಡರೆ, ಮತ್ತೆ ರಾತ್ರಿಯ ಕತ್ತಲಲ್ಲಿ ನೋಡಹೊರಟಾಗ ನೀವು ಆ ತಾರೆಗಳ ನಡುವೆ ಕಳೆದು ಹೋಗುವ ಸಂದರ್ಭ ಇರೋದಿಲ್ಲ. ನೋಡೋದು ಸುಲಭ ಆಗತ್ತೆ.

ಇವುಗಳಿಗೆ ಪ್ಲಾನೆಟೇರಿಯಮ್ ತಂತ್ರಾಂಶ ಎಂದು ಒಟ್ಟಿಗೆ ಸಾರಾಸಗಟಾಗಿ ಹೆಸರಿಸಿ ಹೇಳುವುದು ರೂಢಿ. ಪ್ಲಾನೆಟೇರಿಯಂ ನಲ್ಲಿ ಹೇಗೆ ಒಂದು ಗೋಲಾಕಾರದ ತೆರೆಯ ಮೇಲೆ ಆಕಾಶದ ಗೋಲದಲ್ಲಿ ಕಾಣುವ ನಕ್ಷತ್ರಗಳನ್ನು ತೋರಿಸಲಾಗುವುದೋ ಅಂತಹದ್ದೇ ತಂತ್ರಾಂಶದಿಂದ ನಮ್ಮ ಕಂಪ್ಯೂಟರ್ ಮೇಲೂ ಆಕಾಶದ ದೃಶ್ಯಗಳನ್ನ ಮೂಡಿಸಬಹುದು. ಹಲವಾರು ಈ ರೀತಿಯ ಮುಕ್ತ ಪ್ಲಾನೆಟೇರಿಯಂ ತಂತ್ರಾಂಶಗಳಿವೆ, ಅವುಗಳಲ್ಲಿ ಸ್ಟೆಲೇರಿಯಂ ಕೂಡಾ ಒಂದು. ಸ್ಟೆಲೇರಿಯಂ ಎನ್ನುವುದು ನಿಮಗೆ ವಿಂಡೋಸ್ ಆಪರೇಟಿಂಗ್ ಸಿಸ್ಟಂಗೆ ಆಗಲಿ, ಇಲ್ಲವೇ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗೆ ಆಗಲಿ ಎಲ್ಲದರಲ್ಲೂ ಮುಕ್ತವಾಗಿ ಹಾಗೂ ಉಚಿತವಾಗಿ ದೊರೆಯುವ ಪ್ಲಾನೆಟೇರಿಯಂ ತಂತ್ರಾಂಶ. ಆಕಾಶದ ಮೊದಮೊದಲ ಪರಿಚಯ ಮಾಡಿಕೊಳ್ಳುತ್ತಿರುವವರಿಗೆ ಸ್ಟೆಲೇರಿಯಂ ಸ್ವಲ್ಪ ಹೆಚ್ಚು ಸುಲಭ ಎನ್ನಬಹುದು.

ನಿಮಗೆ ಗ್ರಹಗಳನ್ನ ನೋಡುವ ಉದ್ದೇಶವಿದ್ದಾಗ, ಅದರಲ್ಲೂ ಪ್ರಕಾಶ ಕಡಿಮೆ ಇರುವ ಶನಿ, ಬುಧ, ಅಥವಾ ಬರಿಗಣ್ಣಿಗೆ ಬಹಳ ಕಷ್ಟಪಟ್ಟು ಕಾಣಬಲ್ಲ ಯುರೇನಸ್ ಆಗಲೀ, ಅಥವಾ ಆಗಾಗ್ಗೆ ಒಳಸೌರವ್ಯೂಹಕ್ಕೆ ಭೇಟಿ ಕೊಡುವಂತಹ ಧೂಮಕೇತು ಇಂತಹವುಗಳನ್ನು ಗುರುತಿಸಬೇಕಾದರೂ, ಅವು ಆಕಾಶದಲ್ಲಿರುವ ಸ್ಥಾನಗಳು(ಬೇರೆ ತಾರೆಗಳಿಗೆ ಸಾಪೇಕ್ಷವಾಗಿ ಎಲ್ಲಿವೆ ಎನ್ನುವುದನ್ನು) ತಿಳಿದಿದ್ದರೆ ಅವುಗಳನ್ನ ಬರಿಗಣ್ಣಿನಲ್ಲಾಗಲಿ, ಬೈನಾಕ್ಯುಲರ್ ನಲ್ಲಿ ಆಗಲಿ ಅಥವಾ ದೂರದರ್ಶಕದಲ್ಲಿ ಆಗಲಿ ಹುಡುಕಿ ನೋಡುವುದು ಚಿಟಿಕೆ ಹೊಡೆಯುವಷ್ಟೇ ಸುಲಭ ನಿಮಗೆ. ದಿವಸ, ಸಮಯ, ಮತ್ತೆ ನೀವು ಆಕಾಶವನ್ನು ನೋಡುತ್ತಿರುವ ಸ್ಥಳ ಇವುಗಳನ್ನು ಸ್ಟೆಲೇರಿಯಂನಲ್ಲಿ ಸೇರಿಸಿದರೆ, ನಿಮ್ಮ ಆಕಾಶದ ದೃಶ್ಯ ತಯಾರ್!

ಇಂತಹ ತಂತ್ರಾಂಶ ಸಿಗುವ ಮೊದಲು ಆಕಾಶ ವೀಕ್ಷಕರು ಬೇರೆ ಬೇರೆ ತಿಂಗಳಿಗೆ ಆಕಾಶವನ್ನು ನೋಡಲು ಬೇರೆ ಬೇರೆ ನಕ್ಷೆಗಳನ್ನಿಟ್ಟುಕೊಂಡು ಒದ್ದಾಡಬೇಕಾಗುತ್ತಿತ್ತು. ಸ್ಟೆಲೇರಿಯಂ ಬಳಕೆಯಿಂದ ಇದರ ಅಗತ್ಯವೇ ಇಲ್ಲ ಈಗ. ಅಂದ ಹಾಗೆ, ಮೊದಲು ನನ್ನ ಗೆಳೆಯರು ಕೇಳಿದ ಪ್ರಶ್ನೆಗೂ ಉತ್ತರ ಕೊಡೋದು ಕೂಡ ಸುಲಭ. ಬೆಂಗಳೂರಿನ ಅಕ್ಷಾಂಶ ರೇಖಾಂಶಗಳ ಬದಲು ಸನಿವೇಲ್ ನ ಅಕ್ಷಾಂಶ ರೇಖಾಂಶ ಗಳನ್ನು ಸ್ಟೆಲೇರಿಯಮ್ ಗೆ ಹಾಕಿದರೆ ಆಯಿತು. ಬೇರೆ ಬೇರೆ ಸ್ಥಳಗಳಿಂದ ನಮ್ಮ ಕಣ್ಣಿಗೆ ಕಾಣುವ ಆಕಾಶದ ನೋಟ ಬೇರೆ ಬೇರೆ ಅನ್ನೋದನ್ನ ಮನನ ಮಾಡಿಕೊಳ್ಳಬಹುದು. ಈ ತಂತ್ರಾಂಶಗಳಿಂದ ನಾವು ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನಾವಿರುವಲ್ಲಿಂದ ಆಕಾಶ ಹೇಗೆ ಕಾಣುತ್ತೆ ಅನ್ನುವುದನ್ನು ಸಲೀಸಾಗಿ ನೋಡಿಬಿಡಬಹುದು!

 

ಹಂಸಾನಂದಿ, ಹಾಸನದಲ್ಲಿ ಹುಟ್ಟಿ ಬೆಳೆದು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ ’ಹಂಸಾನಂದಿ’( ರಾಮಪ್ರಸಾದ್.ಕೆ.ವಿ), ಚೆನ್ನೈನಲ್ಲಿ ಮಾಸ್ಟರ್ಸ್ ಪದವಿ ಪಡೆದು, ಪುಣೆ, ಬೆಂಗಳೂರು ಮೊದಲಾದ ಕಡೆ ಕೆಲಸ ಮಾಡಿ ಹಲವು ವರ್ಷಗಳಿಂದ ಕ್ಯಾಲಿಫೋರ್ನಿಯಾದ ಸಿಲಿಕನ್ ವ್ಯಾಲಿಯಲ್ಲಿ ಇಂಟಿಗ್ರೇಟೆಡ್ ಚಿಪ್ ವಿನ್ಯಾಸಕರಾಗಿ ಕೆಲಸ ಮಾಡಿದ್ದು, ಈಗ ಪೋಗ್ರಾಮಬಲ್ ಲಾಜಿಕ್ ಕಂಪೆನಿಯೊಂದರಲ್ಲಿ ಉದ್ಯೋಗಿ. ಕನ್ನಡ, ಇಂಗ್ಲಿಷ್, ಹಿಂದಿ,ಮರಾಠಿ, ತಮಿಳು, ವಿಎಚ್‍ಡಿಎಲ್,ವೆರಿಲಾಗ್, ಸಿಸ್ಟಮ್ ವೆರಿಲಾಗ್, ಸಿಸ್ಟಮ್ ಸಿ ಹೀಗೆ ಹಲವು ಭಾಷೆಗಳಲ್ಲಿ ಮಾತಾಡಬಲ್ಲರು. ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ವಾರ್ಷಿಕ ಪತ್ರಿಕೆ ’ಸ್ವರ್ಣಸೇತು’ವಿನ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ ಅನುಭವ. ಆಕಾಶದಲ್ಲಿ ನಡೆಯುವ ಆಸಕ್ತಿ ಮೂಡಿಸುವ ವಿದ್ಯಮಾನಗಳ ಬಗ್ಗೆ ಸರಳವಾದ ಕನ್ನಡದಲ್ಲಿ ಬರೆಯುವುದು ಮತ್ತು ತಮ್ಮ ಬ್ಲಾಗ್ ಗಳ ಓದುಗರಲ್ಲಿ ಆಕಾಶ ವೀಕ್ಷಣೆಯಲ್ಲಿ ಆಸಕ್ತಿ ಮೂಡಿಸುವುದು ಇವರಿಗೆ ಬಹಳ ಸಂತಸ ಕೊಡುವ ಸಂಗತಿಗಳು. ಸಂಸ್ಕೃತ ಸುಭಾಷಿತಗಳನ್ನು ಕನ್ನಡಿಸಿರುವ ಇವರ ಸಂಗ್ರಹ ’ಹಂಸನಾದ’ ೨೦೧೧ ರಲ್ಲಿ ಪ್ರಕಟವಾಗಿದೆ.