ಹೆಚ್ಚು-ಕಡಿಮೆ ನೀವು ಯಾವುದೇ ಕ್ಷೇತ್ರದ ಉದ್ಯೋಗದಲ್ಲಿದ್ದರೂ ಒಂದು ಪ್ರಾಜೆಕ್ಟ್ (ಯೋಜನೆ) ಸಾಮಾನ್ಯವಾಗಿ ಇದ್ದೇ ಇರುತ್ತದೆ. ಉದ್ಯೋಗವೇ ಏಕೆ, ನಿಮ್ಮದೇ ಆದ ಚೆಂದದ ಮನೆ ಕಟ್ಟ ಬೇಕೆಂದಿದ್ದರೂ ಅದಕ್ಕೊಂದು ಯೋಜನೆ ಹಾಕಲೇ ಬೇಕು. ಈ ಯೋಜನೆಗಾಗಿ ಇಂತಿಷ್ಟು ಜನಗಳು ಇರಬೇಕು, ಇಂತಿಷ್ಟು ಕೆಲಸದ ತುಣುಕುಗಳು, ಇಂತಿಂಥ ದಿನವೇ ಈ ಕಾರ್ಯಗಳು ಮುಗಿಯಬೇಕು, ಎಂಬ ಲೆಕ್ಕವನ್ನು ಪ್ರಾಜೆಕ್ಟ್ ಆರಂಭಿಸುವ ಮುನ್ನವೇ ಸಾಮಾನ್ಯವಾಗಿ ನಿರ್ಧರಿಸಲಾಗುತ್ತದೆ.

ಪ್ರತಿ ಉದ್ಯೋಗಿಯನ್ನು ಯಾವ ರೀತಿಯಲ್ಲಿ ಈ ಪ್ರಾಜೆಕ್ಟ್ ಗೋಸ್ಕರ ಬಳಸಿಕೊಳ್ಳಬಹುದು, ಪ್ರಾಜೆಕ್ಟ್ ಸಮಯಕ್ಕೆ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದು ಪ್ರತಿ ಪ್ರಾಜೆಕ್ಟ್ ಮ್ಯಾನೇಜರ್ ನ /ಯೋಜನೆ ನಿರ್ವಹಿಸುವವನ ತಲೆ ಬಿಸಿ.

ಈ ತಲೆಬಿಸಿಯನ್ನು ಕೊಂಚ ಹೋಗಲಾಡಿಸಿ, ಪ್ರಾಜೆಕ್ಟ್ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಲೆಂದು ಪ್ರಾಜೆಕ್ಟ್ ಮ್ಯಾನೇಂಜ್‍ಮೆಂಟ್ (ಯೋಜನಾ ನಿರ್ವಹಣೆ) ತಂತ್ರಾಂಶಗಳು ಬಹಳಷ್ಟಿವೆ.
ಇವುಗಳಲ್ಲಿ ಓಪನ್‍ಪ್ರಾಜ್ ಮತ್ತು ಗ್ಯಾಂಟ್ ಪ್ರಾಜೆಕ್ಟ್ ಮುಕ್ತ ತಂತ್ರಾಂಶಗಳು ಪ್ರಮುಖವಾದುವು.

ಸಾಮಾನ್ಯವಾಗಿ ಪ್ರಾಜೆಕ್ಟ್ ನಡೆಸುವಾಗ ಎದುರಾಗುವ ಪ್ರಶ್ನೆಗಳನ್ನು/ಸವಾಲುಗಳನ್ನು ಎದುರಿಸಲು ಇಂಥ ತಂತ್ರಾಂಶಗಳು ಸ್ವಲ್ಪ ಮಟ್ಟಿಗೆ ಸಹಾಯವನ್ನು ನೀಡುತ್ತದೆ ಹಾಗೂ ಪ್ರಾಜೆಕ್ಟ್ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ.

ಉದಾಹರಣೆಗೆ, ಪ್ರತಿ ಪ್ರಾಜೆಕ್ಟ್ ಮ್ಯಾನೇಜರ್ ಗೆ ಕಾಡುವ ಪ್ರಶ್ನೆಗಳಾದ:

೧.ಪ್ರಾಜೆಕ್ಟ್ ಸಂಪೂರ್ಣಗೊಳಿಸಲು ಎಷ್ಟು ದಿನಗಳು ಬೇಕಾಗುತ್ತದೆ?
೨. ಪ್ರಾಜೆಕ್ಟ್ ನಲ್ಲಿ ಪಾಲ್ಗೊಳ್ಳುವ ಯಾವ ಉದ್ಯೋಗಿಯ ತಲೆಯ ಮೇಲೆ ಹೆಚ್ಚು ಜವಾಬ್ದಾರಿಗಳು, ಕೆಲಸಗಳು ಇರುತ್ತವೆ?
೩. ಪ್ರಾಜೆಕ್ಟ್ ನಲ್ಲಿರುವ ಪ್ರತಿ ತುಂಡು-ತುಣುಕುಗಳಲ್ಲಿ, ಯಾವ ಕೆಲಸವಾದ ಮೇಲೆ ಮುಂದಿನ ಕೆಲಸವನ್ನು ನಡೆಸಬಹುದು? ಯಾವ ಯಾವ ಕೆಲಸಗಳನ್ನು ಒಮ್ಮೆಲೇ ನಡೆಸಬಹುದು?
೪. ಈ ಪ್ರಾಜೆಕ್ಟ್ ನಲ್ಲಿ ಯಾವ ಕೆಲಸ ಮತ್ತೊಂದು ಸಂಸ್ಥೆಯ/ಮತ್ತೊಂದು ಗುಂಪಿನ ಮೇಲೆ ಅವಲಂಬಿಸಿದೆ?
೫. ಒಬ್ಬ ಉದ್ಯೋಗಿ ಮಾಡುತ್ತಿರುವ ಕೆಲಸದಲ್ಲಿ ಪ್ರಗತಿ ಸಾಧಿಸದಿದ್ದರೆ, ಈ ಕೆಲಸದ ತುಣುಕುಗಳನ್ನು ಮತ್ತೊಬ್ಬ ಉದ್ಯೋಗಿಗೆ ಹಂಚಲು ಸಾಧ್ಯವೇ?
೬. ಪ್ರಾಜೆಕ್ಟ್ ನಲ್ಲಿ ಇಲ್ಲಿಯವರೆಗೂ ಎಷ್ಟು ಕೆಲಸ ಪೂರ್ಣಗೊಂಡಿದೆ? ಇನ್ನೆಷ್ಟು ಮಿಕ್ಕಿವೆ?
೭. ಸಮಯಕ್ಕೆ ಸರಿಯಾಗಿ ಈ ಪ್ರಾಜೆಕ್ಟ್ ಮುಗಿಸಲು ಸಾಧ್ಯವೆ?
೮. ಪ್ರಾಜೆಕ್ಟ್ ಮುಗಿಸಲು ವೆಚ್ಚವೆಷ್ಟಾಗುತ್ತದೆ? ಯಾವ ಕೆಲಸದ ತುಣುಕಿಗೆ ಎಷ್ಟು ಖರ್ಚು ಆಗಬಹುದು?

ಎಂಬಂಥ ವಿಷಯಗಳನ್ನು ಇಂಥ ತಂತ್ರಾಂಶಗಳು ವಿವರವಾಗಿ ಕಣ್ಮುಂದೆ ಬಿಚ್ಚಿಡುತ್ತವೆ.

ಇಂಥ ತಂತ್ರಾಂಶವನ್ನು ಸರಿಯಾಗಿ ಬಳಸಿಕೊಂಡಲ್ಲಿ, ಪ್ರಾಜೆಕ್ಟ್ ಆರಂಭಿಸುವ ಮುನ್ನವೇ ಹೊಸದಾದ ಪ್ರಾಜೆಕ್ಟ್ ಇಂಥ ದಿನವೇ ಮುಗಿಯುತ್ತದೆ ಎಂದು ವಿಶ್ವಾಸವಾಗಿ ಹೇಳಬಹುದು. ಈಗಾಗಲೇ ನಡೆಯುತ್ತಿರುವ ಪ್ರಾಜೆಕ್ಟ್ ಪ್ರಗತಿಯಲ್ಲಿ ಅಕಸ್ಮಾತ್ ಗೊಂದಲದ ಪರಿಸ್ಥಿತಿ ಬಂದಲ್ಲಿ, ಯಾವ ರೀತಿ ಮತ್ತೊಮ್ಮೆ ಈ ಪ್ರಾಜೆಕ್ಟ್ ಅನ್ನು ಸರಿ ದಾರಿಗೆ ತರಬಹುದು ಎಂಬಲ್ಲಿ ಇಂಥ ತಂತ್ರಾಂಶಗಳು ಬಹು ಉಪಯುಕ್ತವಾಗಿದೆ.

ಉದಾಹರಣೆಗೆ, ಮನೆ ಕಟ್ಟುವಾಗ ಈ ಯೋಜನೆಯ ಪ್ರಗತಿಯನ್ನು/ಸ್ಥಿತಿಯನ್ನು ಗ್ಯಾಂಟ್ ಪ್ರಾಜೆಕ್ಟ್ ನಲ್ಲಿ ಈ ಕೆಳಕಂಡ ರೀತಿಯಲ್ಲಿ ಬಳಸಿಕೊಳ್ಳಬಹುದು:

(ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕ್ಲಿಕ್ ಮಾಡಿ)

ಈ ಯೋಜನೆಯಲ್ಲಿ ಬೇಕಾಗುವ ಸಿಬ್ಬಂದಿಯ ವಿವರಗಳನ್ನು ಈ ರೀತಿ ನೀಡಬಹುದು:

(ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕ್ಲಿಕ್ ಮಾಡಿ)

ಖರ್ಚು ವೆಚ್ಚಗಳ ನಿರ್ವಹಣೆ ಗ್ಯಾಂಟ್ ಪ್ರಾಜೆಕ್ಟ್ ನಲ್ಲಿ ಮಾಡಲಾಗದಿದ್ದರೂ ಓಪನ್ ಪ್ರಾಜೆಕ್ಟ್ ನಲ್ಲಿ ಮಾಡಬಹುದು..ಇದರ ಉದಾಹರಣೆ ಇಲ್ಲಿದೆ:

ಈ ರೀತಿ ಯೋಜನೆಯ ನಿರ್ವಹಣೆಯಲ್ಲಿ ಗ್ಯಾಂಟ್ ಪ್ರಾಜೆಕ್ಟ್/ಓಪನ್ ಪ್ರಾಜ್ ಬಹು ಉಪಕಾರಿ.

ಕೊ: ಈ ಉಪಯುಕ್ತ ಮುಕ್ತ ತಂತ್ರಾಂಶವನ್ನು ತಿಳಿದಿರುವ ನೀವು, ಇನ್ನು ಮುಂದೆ ಯಾರಾದರೂ Microsoft Project ಯೋಜನೆಯನ್ನು ನಿಮಗೆ ತೋರಿದಲ್ಲಿ, openproj ಮತ್ತು ganttproject ಬಗ್ಗೆ ಅವರಿಗೆ ತಿಳಿಸಿ ದುಡ್ಡನ್ನು ಉಳಿಸಬಹುದೆಂಬ ಕಿವಿ ಮಾತು ಹೇಳಿ!

ಶ್ರೀನಿವಾಸ್ ಪಿ ಎಸ್ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರಲ್ಲೇ! ಕಂಪ್ಯೂಟರ್ ಪದವೀಧರರಾದ ಇವರು, ಸುಮಾರು ಹನ್ನೊಂದು ವರ್ಷಗಳಿಂದ ಹಲವಾರು ನೆಟ್ ವರ್ಕಿಂಗ್ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿರುವರು. ಹಲವು ಹವ್ಯಾಸಗಳಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಪ್ರವಾಸ, ಚಾರಣ, ಛಾಯಾಗ್ರಹಣ, ವ್ಯಂಗ್ಯಚಿತ್ರಕಲೆ, ಹಾಡು-ಕವನ-ಚುಟುಕಗಳನ್ನು ಬರೆಯುವುದು ಅಚ್ಚುಮೆಚ್ಚು.