ಕಂಪ್ಯೂಟರ್ ಇರುವುದು ಕೇವಲ ಗೇಮ್ಸ್ ಆಡುವುದಕ್ಕೆ ಎಂದು ತಿಳಿದಿದ್ದ ನನಗೆ ಅದರ ಅಗಾಧ ಸಾಧ್ಯತೆಗಳ ಹೆಬ್ಬಾಗಿನ್ನು ತೆರೆದಿಟ್ಟಿದ್ದೇ ಮುಕ್ತ ತಂತ್ರಾಂಶಗಳು. ಮುಕ್ತ ತಂತ್ರಾಂಶಗಳಿಲ್ಲದಿದ್ದರೆ ಇಂದು ತಂತ್ರಜ್ಞಾನವು ಖಂಡಿತಾ ಇಷ್ಟೊಂದು ಮುಂದುವರೆಯುತ್ತಿರಲಿಲ್ಲ. ಮುಕ್ತ ತಂತ್ರಾಂಶದ ಆಕರಗಳು(source code) ಎಲ್ಲರಿಗೂ ಮುಕ್ತವಾಗಿರುವುದರಿಂದ ಪ್ರತಿಯೊಬ್ಬರಿಗೂ ತಂತ್ರಾಂಶದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸಬಹುದು. ಮುಕ್ತ ತಂತ್ರಾಂಶಗಳು ಅತ್ಯಂತ ವೇಗವಾಗಿ ಹಾಗೂ ಹೆಚ್ಚು ಸಮರ್ಥವಾಗಿ ಬೆಳೆಯುವುದಕ್ಕೆ ಇದೇ ಕಾರಣ. ಇಂತಹ ಉದಾತ್ತ ಕಲ್ಪನೆಯನ್ನು ಮುಕ್ತ ತಂತ್ರಾಂಶಗಳ ಹೊರತಾಗಿ ಬೇರಡೆ ಕಾಣಲು ಸಾಧ್ಯವಿಲ್ಲ.

ಎಲ್ಲರಂತೆ ನಾನೂ ಮೊದಲು ಮೈಕ್ರೋಸಾಫ್ಟ್ ಕಂಪೆನಿಯ ವಿಂಡೋಸ್ ಕಾರ್ಯಚರಣ ವ್ಯವಸ್ಥೆಯನ್ನು(operating system) ಬಳಸುತ್ತಿದ್ದೆ. ಆದರೆ ಅದರಲ್ಲಿನ ನ್ಯೂನತೆಗಳು ಮತ್ತು ತೊಂದರೆಗಳು ನನ್ನನ್ನು ಮುಕ್ತ ತಂತ್ರಾಂಶಗಳ ಕಡೆ ಆಕರ್ಷಿಸಿತು. ಮುಕ್ತ ತಂತ್ರಾಂಶಗಳ ಬಳಕೆ ಎಂದರೆ ತಂತ್ರಾಂಶಗಳು ಮಾತ್ರ ಮುಕ್ತವಾಗಿದ್ದರೆ ಸಾಲದು, ನಾವು ಬಳಸುವ ಕಾರ್ಯಚರಣ ವ್ಯವಸ್ಥೆಯೂ ಮುಕ್ತವಾಗಿರಬೇಕು. ಆಗಲೇ ಮುಕ್ತ ತಂತ್ರಾಂಶದ ನಿಜವಾದ ಸಾಮರ್ಥ್ಯವನ್ನು ಅರಿಯಲು ಸಾಧ್ಯ. ಮುಕ್ತ ಕಾರ್ಯಚರಣ ವ್ಯವಸ್ಥೆಯಾದ ಗ್ನು/ಲಿನಕ್ಸ್ ಅನ್ನು ನನ್ನ 14ನೆಯ ವಯಸ್ಸಿನಿಂದಲೂ ಬಳಸಿಕೊಂಡು ಬಂದಿದ್ದೇನೆ. ಅದರ ಹಲವಾರು ರೂಪಾಂತರಗಳು ಲಭ್ಯವಿದ್ದರೂ, ಉಬುಂಟು ಆವೃತ್ತಿ ನನಗೆ ಮೊದಲಿನಿಂದಲೂ ಹೆಚ್ಚು ಆಪ್ತ. ಇದು ನನ್ನ ಎಲ್ಲಾ ದೈನಂದಿನ ತಂತ್ರಾಂಶದ ಅವಶ್ಯಕತೆಗಳನ್ನು ಪೂರೈಸುತ್ತದೆ. ಗ್ನು/ಲಿನಕ್ಸ್ ನನಗೇಕೆ ಇಷ್ಟ ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನು ನೀಡಬಹುದು.

ಮುಕ್ತ ಮತ್ತು ಉಚಿತ:

ಕೆಲವೊಮ್ಮೆ ತಂತ್ರಾಂಶಗಳಿಗೆ ಖರ್ಚು ಮಾಡುವ ಹಣ, ಕಂಪ್ಯೂಟರಿನ ಹಾರ್ಡ್ವೇರಿಗೆ ಹಾಕುವ ದುಡ್ಡಿಗಿಂತಲೂ ಹೆಚ್ಚಾಗಿರುತ್ತದೆ. ಅದು ಕೆಲವೊಮ್ಮೆ ಹೊರೆಯಾಗಲೂಬಹುದು. ಹಾಗೆಂದು ನಕಲಿ ಅಥವಾ ಕದ್ದ ತಂತ್ರಾಂಶಗಳನ್ನು ಬಳಸುವುದಕ್ಕೂ ಇಷ್ಟವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನನಗೆ ಹೊಸ ಭರವಸೆಯನ್ನು ಮೂಡಿಸಿದ್ದೇ ಗ್ನು /ಲಿನಕ್ಸ್. ಇದು ಉಚಿತವಾಗಿ ಸಿಗುವುದರ ಜೊತೆಗೆ ನಿಬಂಧನೆಗಳ ಹೊರತಾಗಿದೆ. ಇದರಿಂದ ನಾನು ಇದನ್ನು ಉಚಿತವಾಗಿ ಉಪಯೋಗಿಸುವುದರ ಜೊತೆಗೆ ಅದನ್ನು ನನ್ನ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು, ಬೇರೆಯವರೊಂದಿಗೆ ಹಂಚಿಕೊಳ್ಳಬಹುದು. ಇಂತಹ ಸ್ವಾತಂತ್ರ್ಯ ದುಡ್ಡು ಕೊಟ್ಟು ಕೊಳ್ಳುವ ತಂತ್ರಾಂಶಗಳಲ್ಲಿಯೂ ದೊರೆಯುವುದಿಲ್ಲ.

ವೈರಸ್ ರಹಿತ:

ನನ್ನ ವಿಂಡೋಸ್ ಕಾರ್ಯಚರಣ ವ್ಯವಸ್ಥೆ ಪದೇ ಪದೇ ವೈರಸ್ ಧಾಳಿಗೆ ತುತ್ತಾಗುತ್ತಿತ್ತು.. ಅದರಿಂದ ಸಾಕಷ್ಟು ಹಾನಿಯಾಗುವುದರ ಜೊತೆಗೆ ವೈರಸ್ ಪ್ರತಿರೋಧಕಗಳಿಗೂ ಸಾಕಷ್ಟು ಹಣ ಸುರಿಯಬೇಕಾಗಿತ್ತು. ಆದರೆ ಗ್ನು /ಲಿನಕ್ಸ್ ಸಂಪೂರ್ಣವಾಗಿ ವೈರಸ್ ಮುಕ್ತವಾಗಿರುವುದರಿಂದ ನನ್ನ ಕಂಪ್ಯೂಟರ್ ಧಾಳಿಕೋರರಿಗೆ ಗುರಿಯಾಗುವ ಭಯವಿರುವುದಿಲ್ಲ, ಹಾಗೂ ವೈರಸ್ ಪ್ರತಿರೋಧಕಗಳಿಗೆ ದುಡ್ಡು ಸುರಿಯಬೇಕಾಗಿಲ್ಲ.

ಡ್ರೈವರ್‌ಗಳಿಂದ ಅನುಷ್ಟಾಪಿಸುವುದರಿಂದ ಮುಕ್ತಿ:

ವಿಂಡೋಸ್‌ನಲ್ಲಿ ಪ್ರತಿಯೊಂದು ಸಾಧನವನ್ನು(hardware) ಬಳಸುವುದಕ್ಕೆ ಡ್ರೈವರ್‌ಗಳ ಅಗತ್ಯವಿರುತ್ತಕದೆ. ಪ್ರಿಂಟರಿನಿಂದ ಹಿಡಿದು ಮೌಸಿಗೂ ಡ್ರೈವರ್ ಅಳವಡಿಸಿದ್ದು ನನಗೆ ನೆನಪಿದೆ. ಕೆಲವೊಮ್ಮೆ ಸರಿಯಾದ ಡ್ರೈವರ್‌ಗಳು ಸಿಗದಿದ್ದರೆ ಹಾರ್ಡ್ವೇರುಗಳು ನಿಷ್ಪ್ರಯೋಜಕವಾಗುತ್ತದೆ. ಆದರೆ ಗ್ನು /ಲಿನಕ್ಸಿನಲ್ಲಿ ಇಂತಹ ಡ್ರೈವರ್ ತೊಂದರೆಗಳು ಇರುವುದಿಲ್ಲ. ಬಹುತೇಕ ಎಲ್ಲಾ ಸಾಧನಗಳಿಗೆ ಬೇಕಾದ ಡ್ರೈವರ್‌ಗಳು ಮೊದಲೇ ಇರುತ್ತೆ. ನಾನು ಮೊದಲ ಬಾರಿಗೆ ಪ್ರಿಂಟರ್‌ನ್ನು ಗ್ನು /ಲಿನಕ್ಸಿಗೆ ಕನೆಕ್ಟ್ ಮಾಡಿದ ಕೂಡಲೇ “ಪ್ರಿಂಟ್ ಮಾಡುವುದಕ್ಕೆ ರೆಡಿಯಾಗಿದ್ದೇನೆ” ಎಂಬ ಸಂದೇಶ ನೋಡಿ ಆಶ್ಚರ್ಯಪಟ್ಟಿದ್ದೆ!

ತಂತ್ರಾಂಶಗಳ ಲಭ್ಯತೆ:

ನನಗೆ ಬೇಕಾದ ತಂತ್ರಾಂಶಗಳನ್ನು ಪಡೆಯಲು ಎಲ್ಲೆಲ್ಲೋ ಅಲೆಯಬೇಕಾಗಿಲ್ಲ. ಗ್ನು /ಲಿನಕ್ಸಿನಲ್ಲಿರುವ “ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್”ನ ಮುಖಾಂತರ ನನಗೆ ಬೇಕಾದ ಎಲ್ಲಾ ತಂತ್ರಾಂಶಗಳನ್ನು ಒಂದೆಡೆ ಪಡೆದುಕೊಳ್ಳಬಹುದು. ಉಬುಂಟುವಿನಲ್ಲಿ ಇರುವ “ಉಬುಂಟು ಸಾಫ್ಟ್ವೇರ್ ಸೆಂಟರ್” ಮುಖಾಂತರವಂತೂ ಒಂದೇ ಮೌಸ್ ಕ್ಲಿಕ್ಕಿನ ಮೂಲಕ ಬೇಕಾದ ತಂತ್ರಾಂಶವನ್ನು ತಕ್ಷಣ ಸ್ಥಾಪಿಸಿಕೊಳ್ಳಬಹುದು. ಜೊತೆಗೆ ಇವು ಪರೀಕ್ಷೆಗೆ ಒಳಪಟ್ಟಿರುವುದರಿಂದ ಯಾವುದೇ ಭಯವಿಲ್ಲದೆ ಬಳಸಬಹುದು. ಆದರೆ ಇಂಟರ್‌ನೆಟ್ ಮುಖಾಂತರ ಇಳಿಸಿಕೊಂಡು ವಿಂಡೋಸ್‌ನಲ್ಲಿ ಸ್ಥಾಪಿಸಿಕೊಂಡ ತಂತ್ರಾಂಶಗಳು ಯಾವಾಗಲೂ ಅಪಾಯಮುಕ್ತ ಎನ್ನಲು ಸಾಧ್ಯವಿಲ್ಲ.

ಸಮುದಾಯದಿಂದ ಸಹಾಯ:

ಗ್ನು /ಲಿನಕ್ಸಿನಲ್ಲಿ ಏನಾದರೂ ತೊಂದರೆಗಳು ಕಂಡುಬಂದರೆ ಸಹಾಯ ಮಾಡಲು ಗ್ನು /ಲಿನಕ್ಸ್ ಸಮುದಾಯ ಸದಾ ಸಿದ್ಧವಾಗಿರುತ್ತದೆ. ಇದರಿಂದ ತಂತ್ರಾಂಶದಲ್ಲಿನ ಯಾವುದೇ ತೊಂದರೆಯ ಪರಿಹಾರಕ್ಕಾಗಿ ದಿನಗಟ್ಟಲೇ ಕಾಯಬೇಕಾಗಿಲ್ಲ. ಸಮಸ್ಯೆಯನ್ನು ಸಮುದಾಯದಲ್ಲಿ ಹಂಚಿಕೊಂಡರೆ ಆದಷ್ಟು ಶೀಘ್ರವಾಗಿ ಪರಿಹಾರ ನಿಮ್ಮ ಮುಂದಿರುತ್ತದೆ! ಅಲ್ಲದೇ ನೀವು ಸಮುದಾಯದಲ್ಲಿ ಭಾಗವಹಿಸುವುದರಿಂದ ಬೇರೆಯವರ ತೊಂದರೆಗಳನ್ನೂ ಬಿಡಿಸಿದ ತೃಪ್ತಿ ಸಿಗುತ್ತದೆ.

ಇವು ಕೇವಲ ಪಟ್ಟಿ ಮಾಡಬಹುದಾದ ಕೆಲವು ಕಾರಣಗಳಷ್ಟೆ. ಇನ್ನೂ ಹಲವಾರು ಕಾರಣಗಳಿಂದ ಗ್ನು /ಲಿನಕ್ಸ್ ನನ್ನ ಅಚ್ಚುಮೆಚ್ಚಿನ ಕಾರ್ಯಚರಣ ವ್ಯವಸ್ಥೆಯಾಗಿದೆ. ಉದಾಹರಣೆಗೆ,

ಗ್ನು /ಲಿನಕ್ಸ್ ನನ್ನ ಶೈಕ್ಷಣಿಕ ಚಟುವಟಿಕೆಗಳಿಗೂ ಸಹಾಯ ಮಾಡುತ್ತದೆ. ಆ ಉದ್ದೇಶಗಳಿಗೆಂದೇ ಇರುವ “ಎಡುಬುಂಟು” ವಿದ್ಯಾರ್ಥಿಗಳಿಗೆ ಉಪಯೋಗಕರ. ಉದಾಹರಣೆಗೆ ರಸಾಯನಶಾಸ್ತ್ರದಲ್ಲಿ ಬಳಸುವ “ಆವರ್ತ ಕೋಷ್ಟಕ”ವು (periodic table) ಗ್ನು /ಲಿನಕ್ಸಿನಲ್ಲಿ GPeriodic ಎಂಬ ತಂತ್ರಾಂಶದ ಮೂಲಕ ಲಭ್ಯವಿದೆ. ಇದರಲ್ಲಿ ಪ್ರತಿಯೊಂದು ಮೂಲ ಧಾತುವಿನ ಬಗ್ಗೆ ವಿವರವಾದ ಮಾಹಿತಿಯಿದೆ. ಈ ಮೊದಲು ಇಂತಹ ಶೈಕ್ಷಣಿಕ ತಂತ್ರಾಂಶಗಳನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದೆ. ಆದರೆ ಅವು ಪರಿಪೂರ್ಣವಾಗಿರುತ್ತಿರಲಿಲ್ಲ. ಈಗ ಗ್ನು/ಲಿನಕ್ಸಿನಲ್ಲಿ ನನಗೆ ಬೇಕಾದ ಎಲ್ಲಾ ಶೈಕ್ಷಣಿಕ ತಂತ್ರಾಂಶಗಳನ್ನು ಉಚಿತವಾಗಿಯೇ ಪಡೆಯುತ್ತೇನೆ.

ತುಂಬಾ ತಂತ್ರಾಂಶಗಳನ್ನು ಒಟ್ಟಿಗೆ ಉಪಯೋಗಿಸುವಾಗ ಕೆಲವೊಮ್ಮೆ ಎಲ್ಲಾ ಕಲಸುಮೆಲೋಗರವಾಗಿ ತೊಂದರೆಯುಂಟಾಗುತ್ತದೆ. ಆದರೆ ಗ್ನು /ಲಿನಕ್ಸಿನಲ್ಲಿರುವ “ವರ್ಕ್ ಸ್ಪೇಸ್ ಸ್ವಿಚರ್” ಅನೇಕ ತಂತ್ರಾಂಶಗಳನ್ನು ಒಟ್ಟಿಗೆ ಬಳಸುವಾಗ ಸಹಾಯಕಾರಿ. ಬೇರೆ ಬೇರೆ ತಂತ್ರಾಂಶಗಳನ್ನು ಬೇರೆ ಬೇರೆ ವರ್ಕ್ ಸ್ಪೇಸ್‌ಗಳಲ್ಲಿ ತೆರೆಯುವುದರಿಂದ ಅನಗತ್ಯ ಗೊಂದಲಗಳು ಉಂಟಾಗುವುದಿಲ್ಲ.

ಇನ್ನು ಗ್ನು /ಲಿನಕ್ಸ್ ನನ್ನ ಹವ್ಯಾಸಗಳಿಗೂ ರೆಕ್ಕೆ ಹಚ್ಚಿದೆ. ನನಗೆ ಮೊದಲಿನಿಂದಲೂ ಆಕಾಶ ವೀಕ್ಷಣೆಯೆಂದರೆ ಕುತೂಹಲ. ಗ್ನು /ಲಿನಕ್ಸಿನಲ್ಲಿ ಸ್ಟೆಲ್ಲೇರಿಯಮ್ ಎಂಬ ತಂತ್ರಾಂಶ ಲಭ್ಯವಿದೆ. ಇದರಲ್ಲಿ ಆಕಾಶವು ಬರಿಗಣ್ಣಿಗೆ ಅಥವಾ ಟೆಲಿಸ್ಕೋಪ್ ಮೂಲಕ ಹೇಗೆ ಕಾಣುತ್ತದೆಯೋ ಹಾಗೆಯೇ ಕಂಪ್ಯೂಟರ್ ಸ್ಕ್ರೀನ್ ಮೇಲೆ ತೋರಿಸುತ್ತದೆ. ಇದರಿಂದ ನಾನು ಖಗೋಳಶಾಸ್ತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.

ಗ್ನು /ಲಿನಕ್ಸಿನಲ್ಲಿ ನನಗೆ ಇನ್ನೊಂದು ಇಷ್ಟವಾದ ವಿಷಯವೆಂದರೆ ಕೆಲವು ಅತ್ಯವಶ್ಯವಾದ ತಂತ್ರಾಂಶಗಳನ್ನು ಹೊಸದಾಗಿ ಸ್ಥಾಪಿಸಿಕೊಳ್ಳಬೇಕಾಗಿಲ್ಲ. ಉದಾಹರಣೆಗೆ Office suite, PDF reader, ವೆಬ್ ಬ್ರೌಸರ್, ಇಮೇಜ್ ಎಡಿಟರ್‌ ಇತ್ಯಾದಿ ತಂತ್ರಾಂಶಗಳು ಗ್ನು /ಲಿನಕ್ಸ್ ಜೊತೆಗೇ ಇನ್ಸ್ಟಾಲ್ ಆಗುವುದರಿಂದ ಸರಿಯಾದ ತಂತ್ರಾಂಶಗಳನ್ನು ಹುಡುಕಲು ಸಮಯ ವ್ಯರ್ಥ ಮಾಡಬೇಕಾಗಿಲ್ಲ.

ಗ್ನು /ಲಿನಕ್ಸ್ ತುಂಬಾ ಸಧೃಢ ಆಪರೇಟಿಂಗ್ ಸಿಸ್ಟಮ್. ಒಮ್ಮೆ ಸ್ಥಾಪಿಸಿಕೊಂಡುಬಿಟ್ಟರೆ ಸಾಕು, ಯಾವುದೇ ತೊಂದರೆ ಕೊಡದಂತೆ ಕಾರ್ಯ ನಿರ್ವಹಿಸಿಕೊಂಡು ಹೋಗುತ್ತದೆ. ಆಪರೇಟಿಂಗ್ ಸಿಸ್ಟಮ್‌ಗಳು ಪದೇ ಪದೇ ಹಾಳಾಗುವ ವಿಷಯವನ್ನೇ ನೀವು ಮರೆತುಬಿಡುತ್ತೀರ! ಕೆಲಸ ಮಾಡುವಾಗ ಹ್ಯಾಂಗ್ ಆಗುವುದಿಲ್ಲ. ಅಂದರೆ ನಿಮ್ಮ ಕಂಪ್ಯೂಟರಿಗೆ ರೀಸ್ಟಾರ್ಟ್ ಬಟನ್‌ನ ಅಗತ್ಯವೇ ಇರುವುದಿಲ್ಲ!

ಇನ್ನೇಕೆ ತಡ? ನೀವಿನ್ನೂ ಮುಕ್ತ ತಂತ್ರಾಂಶದ ಸ್ವಾತಂತ್ರ್ಯವನ್ನು ಅನುಭವಿಸಿರದಿದ್ದರೆ ಇಂದೇ ಮುಕ್ತ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಿ . ತೊಂದರೆಗಳು ಕಂಡುಬಂದರೆ ಗ್ನು /ಲಿನಕ್ಸ್ ಸಮುದಾಯ ನಿಮ್ಮ ಸಹಾಯಕ್ಕೆ ಸದಾ ಸಿದ್ಧವಿರುತ್ತದೆ. ಭಯ ಬಿಟ್ಟು ಸ್ವಾತಂತ್ರ್ಯದ ಜಗತ್ತಿಗೆ ಮುಕ್ತ ತಂತ್ರಾಂಶವೆಂಬ ಹೆಬ್ಬಾಗಿಲ ಮೂಲಕ ಪ್ರವೇಶಿಸಿ!

ಪ್ರಸನ್ನ ಎಸ್ ಪಿ ಹುಟ್ಟಿದ್ದು ಬೆಳೆದಿದ್ದೆಲ್ಲಾ ಕರ್ನಾಟಕದ ಮಲೆನಾಡಿನಲ್ಲಿ. ನನ್ನ ಸ್ವಂತ ಊರು ಕೊಪ್ಪ ತಾಲ್ಲೂಕಿನ ಶಂಕರಪುರ. ವಿಜ್ಞಾನ, ತಂತ್ರಜ್ಞಾನ ಹಾಗೂ ಕಂಪ್ಯೂಟರ್‍ ನನ್ನ ಆಸಕ್ತಿಯ ವಿಷಯಗಳು. ಬೇರೆಯವರಿಗೆ ಕಂಪ್ಯೂಟರ್‌ನ ಬಗ್ಗೆ ಹೇಳಿಕೊಡುವುದು ನನಗೆ ಖುಷಿ ನೀಡುವ ಸಂಗತಿ. ಅಂತರ್ಜಾಲದಲ್ಲಿ ಕನ್ನಡ ಭಾಷೆಯಲ್ಲಿ ಕಂಪ್ಯೂಟರ್‌ ಹಾಗೂ ತಂತ್ರಜ್ಞಾನದ ಬಗ್ಗೆ ಲೇಖನ ಬರೆಯುವುದು ನನ್ನ ಹವ್ಯಾಸ. ಹುಣ್ಣಿಮೆಗೋ, ಅಮವಾಸ್ಯೆಗೋ ಒಮ್ಮೆ ಬ್ಲಾಗ್ ಬರೆಯುತ್ತೇನೆ. ಲಿನಕ್ಸ್ ಹಾಗೂ ಮುಕ್ತ ತಂತ್ರಾಶವನ್ನು ಬೆಂಬಲಿಸುತ್ತೇನೆ.