ಕ್ಲಿಕ್ ಕ್ಲಿಕ್ – ಮೌಸ್ ಜೊತೆಗೆ ಆಟ ಆಡುತ್ತಾ ಕಂಪ್ಯೂಟರಿನ ಪರದೆಯ ಮೇಲೆ ಚಿತ್ರವಿಚಿತ್ರಗಳನ್ನು ಸೃಷ್ಟಿಸುವುದು ಇತ್ಯಾದಿ ಸಾಮಾನ್ಯನಿಗೂ ಅತಿಸಾಮಾನ್ಯ ಅನಿಸತೊಡಗಿದೆ. ಎಲ್ಲರಿಗೂ ತಾವು ಕೈನಲ್ಲಿಡಿದಿರುವ ಒಂದು ಸಣ್ಣ ಫೋನ್ ಕೂಡ ಕಂಪ್ಯೂಟರ್ ಎಂಬುದರ ಅರಿವು ಇಲ್ಲದಿಲ್ಲ. ಕಂಪ್ಯೂಟರ್ ಎಂಬ ಈ ಯಂತ್ರ ಹುಟ್ಟಿದ್ದು, ಬೆಳೆದು ಬಂದ ದಾರಿ, ಅದು ಕೆಲಸ ಮಾಡುವ ಧಾಟಿ, ಬೆಳೆದು ಬಂದ ಹಾದಿ ಹೇಗೆ? ಯಾರು? ಮುಂದೆ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ನಮಗೆ ನಾವು ಕೇಳುತ್ತಾ ಹೋದರೆ ರೋಚಕ ಅನ್ವೇಷಣೆಗಳ/ಆವಿಷ್ಕಾರಗಳ ಕಥಾಬಂಡಾರ ನಮ್ಮ ಮುಂದೆ ಸರಿಯುತ್ತಾ ಹೋಗುತ್ತದೆ.

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಹುಟ್ಟಿ ಬಂದ ಹಾದಿ ಕೂಡ ಅಷ್ಟೇ ರೋಚಕ. ರಿಚರ್ಡ್ ಸಾಲ್‌ಮನ್ ಎಂಬಾಂತ ತನ್ನ ಕಂಪ್ಯೂಟರ್‌ಗೆ ಎಂದು ಬರೆದುಕೊಂಡ ತಂತ್ರಾಂಶವನ್ನು ತನ್ನ ಗೆಳೆಯರೊಂದಿಗೆ ಮುಕ್ತವಾಗಿ ಹಂಚಿಕೊಂಡ. ತನ್ನ ಬಿಡುವಿನ ವೇಳೆಯಲ್ಲಿ ಮನೆಯ ಕಂಪ್ಯೂಟರ್‌ನಲ್ಲಿ ಬರೆದ ತನ್ನ ತಂತ್ರಾಂಶ ಇತರ ಗೆಳೆಯರಿಗೆ ಬೇಕಾದೀತು, ಅವರು ಅದನ್ನು ಉಪಯೋಗಿಸಿ ಆತನಿಗೆ ತಮ್ಮ ಅನುಭವವನ್ನು ಹಂಚಿಕೊಂಡಾರು ಎಂಬುದು ಆತನ ಆಶಯ. ಇದನ್ನು ಕಂಡ ಆತನ ಕಂಪೆನಿ ಬೆಲ್ ಲ್ಯಾಬ್ಸ್ ಆತನನ್ನು ಕರೆದು, ನೀನು ಈ ಕಂಪೆನಿಯ ಕೆಲಸಗಾರನಾಗಿದ್ದೀಯೆ, ನೀನು ಬರೆದ ಎಲ್ಲ ತಂತ್ರಾಂಶಗಳು ಕಂಪೆನಿಗೆ ಸೇರಿದವಾಗಿದ್ದು, ಅದನ್ನು ನೀನು ಮನ:ಬಂದಂತೆ ಬೇರೆಯವರೊಡನೆ ಹಂಚಿಕೊಳ್ಳುವ ಹಾಗಿಲ್ಲ ಎಂದಾಗ ಅವನಿಗೆ ಆಶ್ಚರ್ಯ. ತಾನು ಕಂಪೆನಿಯಲ್ಲಿರುವುದರಿಂದ ತನ್ನ ಬಿಡುವಿನ ವೇಳೆಯಲ್ಲಿ ತಾನು ಬರೆದ ತಂತ್ರಾಂಶ ಹೇಗೆ ಕಂಪೆನಿಯದ್ದಾಗುತ್ತದೆ? ತನಗೆ ನಾನು ಬರೆದ ತಂತ್ರಾಂಶದ ಮೇಲೆ ಯಾವುದೇ ಹಕ್ಕು, ಸ್ವಾತಂತ್ರ್ಯ ಇಲ್ಲವೇ? ಏಕಿರಬಾರದು ಎಂದು ಯೋಚಿಸಿ ಕಂಪೆನಿಯಿಂದ ಹೊರನೆಡೆದು ೧೯೮೩ ರಲ್ಲಿ ಮುಕ್ತ ತಂತ್ರಾಂಶದ ಆಂದೋಲನವನ್ನೇ ಪ್ರಾರಂಭಿಸಿದ.

ಕಂಪ್ಯೂಟರ್ ಇತ್ಯಾದಿಗಳನ್ನು ಖರೀದಿಸಿದ ಜನರು, ಅದನ್ನು ನೆಡೆಸಲು ಬೇಕಿರುವ ತಂತ್ರಾಂಶಗಳನ್ನು ತಾವಾಗಿಯೇ ಅಭಿವೃದ್ದಿಪಡಿಸಿ, ಅದನ್ನು ಬೇರೆಯವರೊಡನೆ ಹಂಚಿಕೊಂಡು, ಇತರರೂ ಅಷ್ಟೇ ಸ್ವತಂತ್ರವಾಗಿ ತಮಗೆ ದೊರೆತ ಹಾಗೂ ತಾವೇ ಅಭಿವೃದ್ದಿ ಪಡಿಸಿದ ತಂತ್ರಾಂಶವನ್ನು ಮತ್ತೆ ಇನ್ನಿತರರಿಗೂ ಹಂಚಿಕೊಳ್ಳುವ, ಒಂದು ಡಿಸ್ಕ್‌ ನಿಂದ ಇನ್ನೊಂದಕ್ಕೆ ಅದನ್ನು ಕಾಪಿ ಮಾಡುವ ಇತ್ಯಾದಿ ಸ್ವಾತಂತ್ರ್ಯಗಳನ್ನು ‘ಜನರಲ್ ಪಬ್ಲಿಕ್ ಲೈಸೆನ್ಸ್ GPL’ ಎಂಬ ಪರವಾನಗಿಯೊಂದಿಗೆ ಒದಗಿಸುವುದೇ ‘ಮುಕ್ತ ತಂತ್ರಾಂಶ ಆಂದೋಲನದ’ ಮುಖ್ಯ ಉದ್ದೇಶವಾಗಿತ್ತು. ಇದರ ಒಂದು ಭಾಗವಾಗಿ ಪ್ರಾರಂಭಗೊಂದ ಗ್ನು ಯೋಜನೆ ಕಂಪ್ಯೂಟರ್ ತಂತ್ರಾಂಶಗಳ ಅಭಿವೃದ್ದಿಗೆ ಬೇಕಾದ ಮೂಲ ತಂತ್ರಾಂಶಗಳನ್ನು ಸಮಾನ ಮನಸ್ಕ ಜನರ ಸಹಾಯದಿಂದ ಅಭಿವೃದ್ದಿ ಪಡಿಸುವಲ್ಲಿ ಹೆಜ್ಜೆ ಇಟ್ಟಿತು. ಇದೇ ಜನರ ಗುಂಪು ಮುಂದೆ ದೊಡ್ಡ ಸಮುದಾಯವಾಗಿ ಬೆಳಯತೊಡಗಿತು. ಮುಂದೆ ಲಿನಸ್ ಟೋರ್ವಾಲ್ಡ್ ಇದೇ ತಂತ್ರಾಂಶಗಳನ್ನು ಬಳಸಿ ಬರೆದ ಲಿನಕ್ಸ್ ಕರ್ನೆಲ್ ಮುಕ್ತ ಆಪರೇಟಿಂಗ್ ಸಿಸ್ಟಂ ಒಂದು ಜನ್ಮತಾಳುವಂತೆ ಮಾಡಿತು. ಲಿನಕ್ಸ್ ಟೋರ್ವಾಲ್ಡ್ ಲಿನಕ್ಸ್ ಕರ್ನೆಲ್ ಬರೆದದ್ದೂ ಕೂಡ ಅವನ ಕಾಲೇಜಿನಲ್ಲಿದ್ದ ಕಂಪ್ಯೂಟರ್‌ಗಳನ್ನು ಸುಲಭವಾಗಿ ಒಂದು ಕಡೆ ಕುಳಿತು ನೆಟವರ್ಕ್ ಮೂಲಕ ಸಂಭಾಳಿಸುವುದಕ್ಕೊಸ್ಕರ. ಅಂದರೆ ಒಂದು ಹವ್ಯಾಸವಾಗಿ ರೋಡಿಸಿಕೊಂಡು ಬಂದ ತಂತ್ರಾಂಶ ಅಭಿವೃದ್ದಿ ಕಾರ್ಯ ಹೀಗೆ ಹತ್ತು ಹಲವು ತಂತ್ರಾಂಶಗಳ ಆವಿಷ್ಕಾರಕ್ಕೆ ನಾಂದಿ ಹಾಡಿತು… ಇತಿಹಾಸ ರಚನೆಗೆ ಮೂಲ ಕಾರಣವಾಯಿತು.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಾವು ಖರೀದಿಸಿದ ಕಂಪ್ಯೂಟರ್ ಇತ್ಯಾದಿ ಹಾರ್ಡ್ವೇರ್‌ಗಳನ್ನು ನೆಡೆಸಲು ಬಳಸುವ ತಂತ್ರಾಂಶಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರ ಜೊತೆಗೆ, ಬಳಕೆದಾರನಿಗೆ ಆಯ್ಕೆ, ಅಭಿವೃದ್ದಿ, ಹಂಚಿಕೆ ಹೀಗೆ ಅನೇಕ ಸ್ವಾತಂತ್ರ್ಯಗಳನ್ನು ಅವನಿಗೆ ನೀಡುತ್ತವೆ. ಖಾಸಗಿ ಕಂಪೆನಿಯೊಂದರ ತಂತ್ರಾಂಶದ ಜೊತೆ ತನ್ನಂತಾನೇ ಬಂದಿತನಾವುದುದನ್ನು ತಪ್ಪಿಸುತ್ತದೆ. ಇದು ಖಾಸಗಿ ಕಂಪೆನಿ ಮುಚ್ಚುವುದರಿಂದ, ಅಥವಾ ತಂತ್ರಾಂಶ ಅಭಿವೃದ್ದಿಹೊಂದಿದಂತೆಲ್ಲಾ, ಮತ್ತೆ ಹೊಸ ತಂತ್ರಾಂಶ ಕೊಳ್ಳುವ ನಷ್ಟದಿಂದ ಬಳಕೆದಾರರನ್ನು ಸಂರಕ್ಷಿಸುತ್ತದೆ. ಇತ್ತೀಚಿನ ಗ್ನು/ಲಿನಕ್ಸ್ ತಂತ್ರಾಂಶ ಕೂಡ ಹಳೆಯ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ ಅನ್ನು ಸುಲಭವಾಗಿ ಕಾರ್ಯಾಚರಣೆಗೆ ಒಳಪಡಿಸಬಲ್ಲದು. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾದ ಭಾರತಕ್ಕೆ ತನ್ನ ಸರ್ಕಾರೀ ಸೇವೆಗೆ ಬಳಸಿಕೊಳ್ಳುತ್ತಿರುವ ಕಂಪ್ಯೂಟರುಗಳ ನಿರ್ವಹಣೆಯನು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಲ್ಲಿ ಮಾಡಿದ್ದೇ ಆದಲ್ಲಿ, ಕೋಟಿಗಟ್ಟಲೆ ಹಣ ಹೊರ ದೇಶಗಳ ಖಾಸಗಿ ಕಂಪೆನಿಗಳ ಕಿಸೆ ತುಂಬುವುದು ತಪ್ಪುತ್ತದೆ. ನಮ್ಮ ಟ್ಯಾಕ್ಸ್ ಹಣ ದೇಶದ ಅಭಿವೃದ್ದಿಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ರಷ್ಯಾ, ಚೀನಾ ಇತರೆ ದೇಶಗಳು ತಮ್ಮದೇ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳನ್ನು ದೇಶದ ಕಂಪ್ಯೂಟರೀಕರಣದಲ್ಲಿ ಬಳಸಿಕೊಂಡು ಮೊದಲ ಹೆಜ್ಜೆ ಇಟ್ಟಿವೆ. ನಮ್ಮಲ್ಲಿನ್ನೂ ಆ ಕಾರ್ಯ ಕುಂಠಿತವೇಗದಲ್ಲಿ ನೆಡೆದಿದೆ.

ಯಾವುದೇ ಒಂದು ತಂತ್ರಾಂಶಕ್ಕೆ ಒಗ್ಗಿಕೊಳ್ಳುವುದು ನಾವದನ್ನು ಉಪಯೋಗಿಸುವುದರ ಮೇಲೆ ಅವಲಂಬಿತವಾಗಿದೆ. ನಮ್ಮ ಪಕ್ಕದಲ್ಲಿ ಅದನ್ನು ಅರಿತವರು ದೊರೆತರೆ ಯಾವುದನ್ನೂ ಕಲಿಯುವುದು ನಮಗೆ ಸುಲಭಸಾಧ್ಯ. ಜೊತೆಗೆ ಶಾಲಾಕಾಲೇಜುಗಳಲ್ಲಿ ಭೋದನೆಗೆ ಅಳವಡಿಸಿಕೊಂಡಲ್ಲಿ, ಮುಂದೆ ಯಾವುದೇ ಕೆಲಸಕ್ಕೆ ಬೇಕಾದ ನುರಿತ ಕೆಲಸಗಾರರು ಲಭ್ಯರಿರುತ್ತಾರೆ.

ಶಾಲಾಕಾಲೇಜುಗಳ ಹೊರನಿಂತು ನೋಡಿದರೂ ಇಂದಿನ ಯುವ ಪೀಳಿಗೆಗೆ ಪ್ರಾಯೋಗಿಕವಾಗಿ ಹೊಸತನ್ನು ಕಲಿಯುವ, ಹೊಸತನ್ನು ಅಭಿವೃದ್ದಿ ಪಡಿಸುವ ವಿಪುಲ ಅವಕಾಶಗಳಿವೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬೆಳವಣಿಗೆಗಳನ್ನು ಗಮನಿಸಿದಾಗ ನಮ್ಮ ಸಮಾಜಕ್ಕೆ ಬೇಕಾದ ತಂತ್ರಾಂಶ ಇತ್ಯಾದಿಗಳನ್ನು ಅಭಿವೃದ್ದಿಪಡಿಸಲು ನಮ್ಮ ಯುವಕ ಯುವತಿಯರು ಮುಂದಾಗಿ, ಈಗಾಗಲೇ ಲಭ್ಯವಿರುವ ಮಾಹಿತಿಗಳನ್ನು ಇಂಟರ್ನೆಟ್ ಮೂಲಕ ಪಡೆದು, ಮುಕ್ತ ತಂತ್ರಾಂಶ ಸಮುದಾಯಗಳತ್ತ ಮುಖಮಾಡಿ ಸಮಾನಮನಸ್ಕರ ಜೊತೆಗೂಡಿ ಕೆಲಸ ಮಾಡಬಹುದಾಗಿದೆ. ಇದರಿಂದ ಸ್ವಾವಲಂಬನೆ ದೊರೆಯುವುದಲ್ಲದೇ, ನಮ್ಮದೇ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಿಕೊಂಡು ಸಮಾಜವನ್ನೂ ಬಲಪಡಿಸಿದ ಹೆಮ್ಮೆ ನಮ್ಮದಾಗುತ್ತದೆ. ಗೂಗಲ್ ಕಂಪೆನಿ ಪ್ರತಿವರ್ಷ ‘ಗೂಗಲ್ ಸಮ್ಮರ್ ಆಫ್ ಕೋಡ್’ ಎಂಬ ಯೋಜನೆಯ ಮೂಲಕ ತಾಂತ್ರಿಕ ಪರಿಣಿತಿ ಹೊಂದಿದ, ಹೊಂದಿಲಿಚ್ಚಿಸುವ ಅನೇಕರಿಗೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಮೇಲೆ ಕೆಲಸಮಾಡಲು ಅವಕಾಶ ಮಾಡಿಕೊಡುತ್ತದೆ. ಮುಖ್ಯವಾಗಿ ವಿಧ್ಯಾರ್ಥಿಗಳನ್ನು ಉದ್ದೇಶವಾಗಿಟ್ಟಿಕೊಂಡಿರುವ ಇಂತಹ ಯೋಜನಯ ಬಗ್ಗೆ ಕಾಲೇಜು ವಿಧ್ಯಾರ್ಥಿಗಳು ತಿಳಿಯುವುದು ಒಳಿತು.

ಮುಕ್ತ ತಂತ್ರಾಂಶಗಳು ಕೆಲವೊಮ್ಮೆ ಹವ್ಯಾಸಕ್ಕೆಂದು ಬರೆದರೂ, ನಂತರ ಮಿಲಿಯನ್‌ಗಟ್ಟಲೆ ಹಣವನ್ನು ದುಡಿಯುವ ಸಂಸ್ಥೆಗಳನ್ನು ಹುಟ್ಟುಹಾಕುವಲ್ಲಿ ನೆರವಾದವು. ಅನೇಕರಿಗೆ ಉದ್ಯೋಗಾವಕಾಶಗಳನ್ನೂ ಕಲ್ಪಿಸಿಕೊಟ್ಟವು.

ಜೊತೆಗೆ ‘Free Culture’ ಅಥವಾ ‘ಮುಕ್ತ ಪರಂಪರೆ’ಯನ್ನು ಪಸರಿಸಿದ ಈ ಆಂದೋಲನ ಇಂದು ಮತ್ತು ನಾಳೆಗೆ ಬೇಕಿರುವ ಜ್ಞಾನ ಬಂಡಾರವನ್ನು ನಮ್ಮ ಮುಂದೆ ಇಟ್ಟಿದೆ. Free Culture ಬಗ್ಗೆ ಹೆಚ್ಚು ತಿಳಿಯಲು ಲಾರೆನ್ಸ್ ಲೆಸ್ಸಿಗ್ ಬರೆದ ಈ ಪುಸ್ತಕ ಓದಿ. ಇದು ಮುಕ್ತವಾಗಿ ನಿಮಗೆ ಲಭ್ಯವಿದೆ.

ಸರ್ಕಾರಿ ಕಾರ್ಯತಂತ್ರವನ್ನು ನೆಡೆಸಲು, ಸಾಮಾಜಿಕ ಚಟುವಟಿಕೆಗಳನ್ನು ನೆಡೆಸುವ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಪತ್ರಿಕೋದ್ಯಮ, ಖಾಸಗಿ ಹಾಗೂ ಸರ್ಕಾರೀ ಸಂಘಸಂಸ್ಥೆಗಳು, ಸಾರ್ವಜನಿಕರು ಇಂದು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಮೊರೆ ಹೋಗಿ ದೈನಂದಿನ ಕೆಲಸ ಕಾರ್ಯಗಳಿಗೆ ಬೇಕಿರುವ ತಂತ್ರಾಂಶಗಳನ್ನು ಪಡೆಯಬಹುದು. ಲಭ್ಯವಿಲ್ಲದಲ್ಲಿ ಸಮುದಾಯವನ್ನು ಸಂಪರ್ಕಿಸಲು ಪ್ರಯತ್ನಿಸಿದಲ್ಲಿ ಉತ್ತರ ಸಿಗುವುದು ಖಾತ್ರಿ. ಇದಕ್ಕೆ ಉದಾಹರಣೆಗಳನೇಕ ನಮ್ಮ ಮುಂದಿವೆ.
ಕರ್ನಾಟಕದಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅರಿವನ್ನು ಹೆಚ್ಚಿಸುವ, ಬಳಕೆ, ಅನುಸ್ಥಾಪನೆ, ಇತ್ಯಾದಿಗಳ ಬಗ್ಗೆ ಅರಿವನ್ನು ಹಂಚಿಕೊಳ್ಳುವ ಕೆಲಸ ಹೆಚ್ಚಬೇಕಿದೆ. ಸರಕಾರದ ಮಟ್ಟದಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅವಲಂಬನೆಯ ಬಗ್ಗೆ ಕಾರ್ಯೋನ್ಮುಕವಾಗಬೇಕಿದೆ. ಕನ್ನಡ ಟೈಪಿಸುವುದು, ಓದುವುದು ಮಾತ್ರವಲ್ಲದೇ ಇತರೆ ತಂತ್ರಾಂಶಗಳನ್ನು ತನ್ನ ಸರ್ಕಾರೀ ಕೆಲಸಗಳಿಗೆ ತಾನೇ ಅಭಿವೃದ್ದಿ ಪಡಿಸಿಕೊಳ್ಳುತ್ತಾ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಸರ್ಕಾರೀ ಶಾಲೆ ಇತ್ಯಾದಿಗಳಲ್ಲಿ ಮುಕ್ತ ತಂತ್ರಾಂಶವನ್ನು ವಿತರಿಸುವುದಲ್ಲದೇ, ಅದನ್ನು ಬಳಸಲು ಬೇಕಿರುವ ಕುಶಲತೆ, ಮಾತೃಭಾಷೆಯಲ್ಲಿ ಅದಕ್ಕೆ ಬೇಕಿರುವ ಆಕರ ಪಠ್ಯ, ಇತ್ಯಾದಿಗಳನ್ನು ಮೊದಲು ಶಿಕ್ಷಕರಿಗೆ ಕರಗತ ಗೊಳಿಸಿ, ಅವರನ್ನು ಸಭಲರನ್ನಾಗಿಸಿ ನಂತರ ಮಕ್ಕಳಿಗೂ ಅದರ ಅರಿವು ಮೂಡುವಂತೆ ಮಾಡಬೇಕಿದೆ. ಕಾಲೇಜು ಪಠ್ಯದಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಭೋದನೆಯ ಜೊತೆ ಅದನ್ನು ಪ್ರಾಯೋಗಿಕ ಕಲಿಕೆಯಲ್ಲಿ ಬಳಸಿಕೊಳ್ಳುತ್ತಾ ವಿಧ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಗಳನ್ನು ತಮ್ಮ ವಿಧ್ಯಾರ್ಥಿ ಜೀವನದಲ್ಲಿಯೇ ಹೇಗೆ ಪ್ರಾರಂಭಿಸಬಹುದು ಎಂಬುದನ್ನು ಒತ್ತಿ ಹೇಳಬೇಕಿದೆ. ಇದು ಅತ್ಯಂತ ಕಠಿಣ ಕೆಲಸವಾಗಿದ್ದು, ಯುವ ಜನಾಂಗ ಇದರಲ್ಲಿ ತಮ್ಮ ಕೊಡುಗೆಯನ್ನು ನೀಡಬಹುದು.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅಭಿವೃದ್ದಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಎಂದರೆ ಕನ್ನಡದಲ್ಲಿ ಎಲ್ಲ ತಂತ್ರಾಂಶಗಳು ಇರಬೇಕು ಎಂಬುದು ಮಾತ್ರವಲ್ಲ. ಕನ್ನಡಿಗರಿಗೆ ಬೇಕಿರುವ ಎಲ್ಲ ತರಹದ ತಂತ್ರಾಂಶಗಳು, ಅಂದರೆ ದೈನಂದಿನ ಚಟುವಟಿಕೆ, ಕಲಿಕೆ, ಅಭಿವೃದ್ದಿ, ಅನ್ವೇಷಣೆ, ಆವಿಷ್ಕಾರ ಇತ್ಯಾದಿಗಳಿಗೆ ಬೇಕಾದ ಸವಲತ್ತುಗಳನ್ನು ಕನ್ನಡಿಗರು ಸುಲಭದಲ್ಲಿ ಗ್ರಹಿಸಿ, ತಾವಾಗೇ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಿ ಸ್ವಾವಲಂಭಿಗಳಾಗುವತ್ತ ಮುನ್ನೆಡೆಯುವುದು. ಕಂಪ್ಯೂಟರ್, ಮೊಬೈಲ್ ಇಷ್ಟೇ ಅಲ್ಲದೆ ಶಾಲೆ, ಕಾಲೇಜು, ಅಂಗಡಿ, ಆಸ್ವತ್ರೆ, ಬ್ಯಾಂಕ್ ಹೀಗೆ ಹತ್ತು ಹಲವಾರು ಸ್ಥಳಗಳಲ್ಲಿ ದುಡಿಯುವ, ಕಲಿಯುವ ಕನ್ನಡಿಗನಿಗೆ ಕನ್ನಡ ತಂತ್ರಾಂಶಗಳ ಕೊರತೆ ಇರಬಾರದು, ಇದ್ದರೂ ಅದು ಹೊರೆಯಾಗದಂತೆ ಮುಕ್ತವಾಗಿ, ಸ್ವತಂತ್ರವಾಗಿ ದೊರೆಯುವಂತಾಗಬೇಕು.

ನಮಗೆ ತಿಳಿದ ಹಾಗು ತಿಳಿಯದ ವಿಷಯಗಳ ಬಗ್ಗೆ ವಿಚಾರವಿನಿಮಯ ಮಾಡುವ – ಹರಟೆ ಕಟ್ಟೆಯನ್ನು ಕಲಿಕೆಯ ಕಟ್ಟೆಯನ್ನಾಗಿಸುವ ಸಂಸ್ಕೃತಿ (ನಮ್ಮ ಹಿರಿಯ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಕಟ್ಟಲು ಈ ಕೆಲಸ ಮಾಡುತ್ತಿದ್ದುದನ್ನು ಕೇಳಿದ್ದೇನೆ)ಯನ್ನು ನಾವು ಬೆಳೆಸಬೇಕಿದೆ. ಇದರ ಮುಖೇನ ಹೊಸ ಜನಾಂಗಕ್ಕೆ ವೈಜ್ಞಾನಿಕ, ತಾಂತ್ರಿಕ ಕುಶಲತೆಯನ್ನು ಕೊಂಡೊಯ್ಯಲು ಸಾಧ್ಯ. ಮುಕ್ತ ತಂತ್ರಾಂಶದ ಸಮುದಾಯದ ಬೆಳವಣಿಗೆಗೆ ಇಂತಹ ವೇದಿಕೆಗಳು ಮುಖ್ಯ, ಕೊನೆಗೆ ಇದರ ಫಲವನ್ನು ಅನುಭವಿಸುವವರೂ ನಾವೇ ಅಲ್ಲವೇ?

ಓಂಶಿವಪ್ರಕಾಶ್ ಎಚ್.ಎಲ್ ಹವ್ಯಾಸ, ಕೆಲಸ ಎರಡೂ ನನ್ನ ನೆಚ್ಚಿನ ತಂತ್ರಜ್ಞಾನವೇ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಳಕೆ, ಭೋದನೆ, ಅಳವಡಿಕೆ, ಅಭಿವೃದ್ದಿ ಖುಷಿ ಕೊಡುವ ಕೆಲಸಗಳು. ಮೂಲತ: ಬೆಂಗಳೂರಿನವನೇ ಆದ ನಾನು ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದು, ನನ್ನ ಅರಿವಿನ ಒಂದಷ್ಟು ಭಾಗವನ್ನು ಕನ್ನಡಿಗರೊಂದಿಗೆ ಲಿನಕ್ಸಾಯಣದ ಮೂಲಕ ಹಂಚಿಕೊಳ್ಳುತ್ತೇನೆ. ಕನ್ನಡದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ದಿಗೆ ಮತ್ತು ಅವುಗಳ ಬಗೆಗಿನ ಬರಹದೆಡೆಗೆ ವಿಷೇಶ ಆಸಕ್ತಿ. ವಿರಾಮದ ವೇಳೆ ಕ್ಯಾಮೆರಾ, ಸೈಕಲ್, ಪ್ರವಾಸ, ಜೊತೆಗೆ ಒಂದಿಷ್ಟು ಸಾಲುಗಳನ್ನು ಹೆಣೆಯುವುದು ಇತ್ಯಾದಿ.. ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತೇನೆಂಬ ನಂಬಿಕೆಯಿಲ್ಲ, ಆದರೂ ಒಂದಿಷ್ಟು ಮಂದಿಗಾದರೂ ಒಳ್ಳೆಯ ಮಾಹಿತಿ ಒದಗಿಸಬಲ್ಲೆ ಎಂಬ ನಂಬಿಕೆಯಿದೆ.