“ಸಂಚಯ” – ಹೆಸರೇ ಸೂಚಿಸುವಂತೆ ಇದೊಂದು, ಕನ್ನಡ ಭಾಷೆಯ ಕುರಿತಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಗಳನ್ನು ಒಂದೆಡೆ ತರುವ ಪ್ರಯತ್ನ. ಭಾರತ ದೇಶದಲ್ಲಿ, ಹಿಂದಿ, ತಮಿಳು, ಬಂಗಾಳಿ ಹೀಗೆ ಬಹಳಷ್ಟು ಅಧಿಕೃತ ಭಾಷೆಗಳನ್ನು, ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಳಸಲು ಯೋಗ್ಯವಾಗುವಂತೆ, ಹತ್ತು ಹಲವು ಬಗೆಯ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಹಾಗೂ ಸರ್ಕಾರದ ಕಾರ್ಯಗಳಿಗೂ ಹೊಂದುವಂತೆ ರೂಪುಗೊಂಡಿವೆ, ಅಭಿವೃದ್ಧಿಯ ಪಥದಲ್ಲಿಯೂ ಸಾಗುತ್ತಿವೆ. ಅವುಗಳಂತೆಯೇ ಅಧಿಕೃತ ಭಾಷೆಯಾದ ಕನ್ನಡದಲ್ಲಿ ನಡೆಯುತ್ತಿರುವ, ನಡೆಸಬಹುದಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ಅಭಿವೃದ್ಧಿಗಾರರಿಗೆ ಒಂದು ಮುಕ್ತ ವೇದಿಕೆಯನ್ನು ಒದಗಿಸುವುದು ‘ಸಂಚಯ’ದ ಆಶಯ.

ಯಾವುದೇ ಒಂದು ಭಾಷೆಯ ಸುತ್ತಲಿನ ತಂತ್ರಾಂಶ ಅಥವಾ ತಂತ್ರಜ್ಞಾನ ಅಭಿವೃದ್ದಿಯು ಆ ಭಾಷೆಯ ಅಭಿವೃದ್ದಿಯೇ ಆಗಿರುತ್ತದೆ. ಈ ಕೆಲಸ ಜನಸಾಮಾನ್ಯನಿಂದ ಇಡಿದು ತಂತ್ರಜ್ಞಾನ ನಿಪುಣರೂ, ಉದ್ಯಮಿಗಳು, ಸರ್ಕಾರ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು ಎಲ್ಲರ ಒಗ್ಗಟ್ಟನ್ನು ಬಯಸುತ್ತದೆ. ಕನ್ನಡಿಗರು ಈ ಕಾರ್ಯದಲ್ಲಿ ಒಟ್ಟಾಗುತ್ತಾರೆ ಎಂಬ ನಂಬಿಕೆಯೊಂದಿಗೆ.

ಮುಕ್ತ ತಂತ್ರಾಂಶ

ಮುಕ್ತ ತಂತ್ರಾಂಶಗಳಿಗೆ, ಓಪನ್ ಸೋರ್ಸ್ ಸಾಫ್ಟ್ವೇರ್ ಎಂದು ಇಂಗ್ಲೀಷ್ ಭಾಷೆಯಲ್ಲಿ ಕರೆಯುತ್ತಾರೆ. ಸಂಚಯದಲ್ಲಿ ಸದಸ್ಯರಾಗುವ ಮುನ್ನ, ಮುಕ್ತ ತಂತ್ರಾಂಶಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದಿರುವುದು ಅವಶ್ಯಕವೆನಿಸುತ್ತದೆ. ಇದಕ್ಕಾಗಿಯೇ, ‘ಮುಕ್ತ ತಂತ್ರಾಂಶ‘ ಎಂಬ ಪುಟವನ್ನು ಓದಬೇಕೆಂದು ತಿಳಿಸುತ್ತೇವೆ. ಅದರಲ್ಲಿ ಅತಿ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದು ಸಂಗತಿಯೆಂದರೆ, ‘ಮುಕ್ತ’ ವೆನ್ನುವುದು ಇಲ್ಲಿ ಉಚಿತ, ಬಿಟ್ಟಿ (free) ಎಂದಲ್ಲ. ಬದಲಿಗೆ, ಸ್ವಾತಂತ್ರ್ಯ ಎಂದರ್ಥ. ತಂತ್ರಾಂಶದ ಮೂಲವಸ್ತುವನ್ನು (source code) ಬೇರೆಯವರು ಉಪಯೋಗಿಸಲು, ಬದಲಿಸಲು ಕೊಡುವ ಸ್ವಾತಂತ್ರ್ಯ ಎಂದಾಗಿರುತ್ತದೆ.

ಸಂಚಯದ ನಿಯಮಾವಳಿಗಳು ಯಾವುವು?

ಒಂದು ಕಾರ್ಯಕ್ರಮದ ಸಾಫಲ್ಯತೆಗೆ ಹಲವು ನಿಯಮಗಳನ್ನು ಖಡಾಖಂಡಿತವಾಗಿ ಪಾಲಿಸುವುದು ಅತ್ಯಗತ್ಯವಾಗುತ್ತದೆ. ‘ಸಂಚಯ’ದಲ್ಲಿ ಭಾಗವಹಿಸುವ ಸದಸ್ಯರು ಈ ನಿಟ್ಟಿನಲ್ಲಿ ಪಾಲಿಸಬೇಕಾದ ನಿಯಮಗಳು ಇಂತಿವೆ.

  • ಇದು ಮೂಲತಃ ಕನ್ನಡ ಭಾಷೆಯ ಕುರಿತಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿಗಾರರಿಗಾಗಿ, ಮುಡಿಪಾಗಿಟ್ಟ ವೇದಿಕೆ. ಮಾತ್ಯಾವುದೇ ರೀತಿಯ ಜಾಹಿರಾತುಗಳ ತಾಣವಲ್ಲ.
  • ಇದು ಮುಕ್ತ ತಂತ್ರಾಂಶಗಳ ಅಭಿವೃದ್ಧಿ ತಾಣ. ಒಬ್ಬನು ತಂತ್ರಾಂಶವನ್ನು ರೂಪಿಸಿದರೆ ಸಾಲದು, ಅದು ಭವಿಷ್ಯದ ಅವಶ್ಯಕತೆಗಳಿಗೆ ತಕ್ಕಂತೆಮುಕ್ತವಾಗಿ ಬದಲಿಸಲಿಕ್ಕೆ, ಹಾಗೂ ಮುಕ್ತ ಬಳಕೆಯನ್ನು ಮುಂದುವರಿಸಲಿಕ್ಕೆ ಯೋಗ್ಯವಾಗಿದ್ದರಷ್ಟೆ ಸಾರ್ವಜನಿಕ ಬಳಕೆಗೆ ಯೋಗ್ಯವಾದ ತಂತ್ರಾಂಶವಾಗುತ್ತದೆ ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ.  ಅದೂ ಅಲ್ಲದೆ, ಮುಕ್ತವಲ್ಲದ ತಂತ್ರಾಂಶಗಳ ಬೆಳವಣಿಗೆಗಳು ತಮ್ಮದೇ ಆದ ಸ್ವಂತ ಗುಂಪುಗಳಲ್ಲಿ ನಡೆಯುತ್ತವೆ. ‘ಸಂಚಯ’ ಅಂತಹ ತಂತ್ರಾಂಶಗಳ ಮಾರುಕಟ್ಟೆಯಲ್ಲ.
  • ತಂತ್ರಾಂಶವೆಂದರೆ ಕೇವಲ ಅದರ ಮೂಲವಸ್ತುವೆಂದು (source code) ಇಲ್ಲಿ ಪರಿಗಣಿಸಬಾರದು. ಅದರ ಅಭಿವೃದ್ಧಿಗೆ ಪೂರಕವಾದ ಚಿತ್ರಗಳು, ದೃಶ್ಯಮಾಧ್ಯಮಗಳು, ಹೀಗೆ ಕಲೆಗೆ ಸಂಬಂಧಪಟ್ಟ ವಿಷಯಗಳೂ ಇದರಲ್ಲಿ ಸೇರಲ್ಪಡುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ತಂತ್ರಾಂಶದ ಬೆಳವಣಿಗೆಗೆ ಪೂರಕವಾದ ಕಲೆ, ಇತ್ಯಾದಿ ಪ್ರಕಾರಗಳೂ ಸಂಚಯದ ಅಭಿವೃದ್ಧಿ ಕಾರ್ಯಗಳೆಂದು ಕರೆಯಲ್ಪಡುತ್ತವೆ. ಹೀಗಾಗಿ, ತಂತ್ರಾಂಶದ ಕೆಲಸಕ್ಕೆ ಬೇಕಾದ ಭಾಷೆಯ (programming language) ಅರಿವಿಲ್ಲದಿದ್ದರೂ, ಅದಕ್ಕೆ ಪೂರಕವಾದ ಕಲೆಯುಳ್ಳ ಕಲೆಗಾರರೂ ತಮ್ಮ ಕಲೆಯನ್ನು ಮುಕ್ತ ತಂತ್ರಾಂಶಗಳ ಅಡಿಯಲ್ಲಿ ನೀಡಬಹುದು.
  • ಇತರ ಸಂಘ ಸಂಸ್ಥೆಗಳ ಸದಸ್ಯರು ಸಂಚಯದಲ್ಲಿಯೂ ಸದಸ್ಯರಾಗುವ ಸಾಧ್ಯತೆಗಳಿದ್ದರೂ ಆ ಸಂಸ್ಥೆಗಳಿಗೂ ಸಂಚಯಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಸಂಚಯ ತನ್ನದೇ ಆದ ಮುಕ್ತ ವೇದಿಕೆ.
  • ಇಲ್ಲಿ ನಡೆಯುವ ಚರ್ಚೆಗಳು ಕನ್ನಡ ತಂತ್ರಾಂಶಗಳ ಅಭಿವೃದ್ಧಿಯ ಕುರಿತಾಗಿರಬೇಕೇ ವಿನಹ ಮತ್ಯಾವುದೋ ಅಸಂಬದ್ಧ ರಾಜಕೀಯ ಉದ್ದೇಶಕ್ಕಾಗಿರಬಾರದು. ಇಲ್ಲಿ ಯಾವುದೇ ಸದಸ್ಯರನ್ನೂ, ಸಮಾಜವನ್ನೂ, ಅಥವಾ ಮತ್ಯಾವ ಹೊರಗಿನ ವ್ಯಕ್ತಿಯನ್ನು ದೂಷಿಸುವ ಚರ್ಚೆಯನ್ನು ನಡೆಸುವಂತಿಲ್ಲ. ಗಲಭೆಗಳನ್ನುಂಟು ಮಾಡಬಹುದಾದ, ಅಸಂಬದ್ಧವಾದ ಚರ್ಚೆಗಳ ಬಗ್ಗೆ ಸದಸ್ಯರಿಗೆ ಎಚ್ಚರಿಸುವ ಹಾಗೂ ವಿಪರೀತ ಪರಿಸ್ಥಿತಿಗಳಲ್ಲಿ ಅವನ್ನು ತೆಗೆದು ಹಾಕುವ ಅಧಿಕಾರವು ಸಂಚಯದ ವ್ಯವಸ್ಥಾಪಕರ ಗುಂಪಿಗೆ ಇರುತ್ತದೆ.
  • ಇದು ಮುಕ್ತ ತಂತ್ರಾಂಶಗಳ ತಾಣವಾದುದರಿಂದ, ಇಲ್ಲಿ ಭಾಗವಹಿಸುವ ಸದಸ್ಯರು ಕನ್ನಡ ಭಾಷೆಯ ಬಳಕೆಗೆ, ಬೆಳವಣಿಗೆಗೆ ಯೋಗ್ಯವಾದ ಯಾವುದೇ ಮುಕ್ತ ತಂತ್ರಾಂಶವನ್ನು ಪ್ರಾರಂಭಿಸಬಹುದು. ಆದರೆ, ಅಶ್ಲೀಲತೆ, ನಿಂದನೆ, ಇತ್ಯಾದಿ ಅಸಭ್ಯ ವಿಷಯಗಳ ಕುರಿತಾದಾದ ಯಾವುದೇ ಬೆಳವಣಿಗೆಗಳಿಗೆ ಅವಕಾಶವಿರುವುದಿಲ್ಲ, ಅವು ನಿಷಿದ್ಧ ಕೂಡ.

 

ಸಂಚಯದ ಬಳಕೆಗೆ ಕುರಿತಂತೆ, ಸಾಮಾನ್ಯವಾಗಿ ಇರಬಹುದಾದ ಪ್ರಶ್ನೆಗಳನ್ನು, ಅವುಗಳಿಗೆ ಸೂಕ್ತ ಉತ್ತರಗಳನ್ನು ‘ಸಾಮಾನ್ಯ ಪ್ರಶ್ನೋತ್ತರ‘ ಪುಟದಲ್ಲಿ ನೀಡಲಾಗಿದೆ.

ಕನ್ನಡ ಸಂಚಯ

ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ

ಕನ್ನಡ ಭಾಷೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವುದು ನಮ್ಮ ತಂಡದ ಉದ್ದೇಶವಾಗಿದೆ. ಭಾಷಾ ಸಂಶೋಧಕರಿಗೆ ಸಂಶೋಧನಾ ವೇದಿಕೆಯೊಂದನ್ನು ನಿರ್ಮಿಸುವುದು ನಮ್ಮ ಗುರಿ. ಅಂತರ್ಜಾಲದ ಮೂಲಕ ವೆಬ್ ಹಾಗೂ ಮೊಬೈಲ್ ತಂತ್ರಾಂಶಗಳ ಸಹಾಯದಿಂದ ಮುಕ್ತವಾಗಿ ಸಂಶೋಧಕರಿಗೆ, ಸಂಶೋಧನಾ ಸಲಕರಣೆಗಳನ್ನು ಅಭಿವೃದ್ದಿಪಡಿಸುವಲ್ಲಿ ನಮ್ಮ ತಂಡ ತೊಡಗಿಕೊಂಡಿದೆ. ನಮ್ಮ ಆಸಕ್ತಿ ವಾಣಿಜ್ಯ ಅಥವಾ ಲಾಭದ ಉದ್ದೇಶವನ್ನು ಹೊಂದಿರದೆ ಶಾಸ್ತ್ರೀಯ ಕನ್ನಡ ಸಾಹಿತ್ಯದ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸುವುದೇ ಆಗಿದೆ.