ಅರಿವಿನ ಅಲೆಗಳು ೨೦೧೨ ರ ಲೇಖನಗಳ ಮಾಲೆಯನ್ನು ಶ್ರೀ ಪ್ರಶಾಂತ್ ರವರ ಈ ಲೇಖನದಿಂದ ಪ್ರಾರಂಭಿಸುತ್ತಿದ್ದೇವೆ. ಕನ್ನಡದಲ್ಲಿ ಲೇಖನಗಳನ್ನು, ಸಾಮಾನ್ಯನೂ ಕೂಡ ಸಾಮಾನ್ಯನ ಭಾಷೆಯಲ್ಲೇ ಬರೆಯಬಹುದು. ಜೊತೆಗೆ ತನ್ನ ಜ್ಞಾನದ ಅರಿವನ್ನು ಇತರರೊಡನೆ ಸುಲಭವಾಗಿ ಬರವಣಿಗೆಯ ಮೂಲಕವೂ ಹಂಚಿಕೊಳ್ಳಬಹುದು ಎಂಬುದನ್ನು ನೀವೇ ಓದಿ ನೋಡಿ, ನೀವೂ ಬರೆಯಿರಿ, ಇತರರೊಡನೆ ಹಂಚಿಕೊಳ್ಳಿ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ ಅರಿವಿನ ಅಲೆಗಳ ‘ಹಕ್ಕುಗಳು ಮತ್ತು ಹಂಚಿಕೆ’ಯ ವಿಷಯವನ್ನು ಜೊತೆ ಸೇರಿಸಲು ಮರೆಯಬೇಡಿ.  ನಿಮ್ಮ – ಅರಿವಿನ ಅಲೆಗಳು ತಂಡ, ಸಂಚಯದ ಪರವಾಗಿ.

ಈ ಬರಹವನ್ನು ಪ್ರಾರಂಭಿಸುವ ಮುನ್ನ ಒಂದು ವಿಷಯವನ್ನು ನಾನು ನಿಮ್ಮಲ್ಲಿ ಅರಿಕೆ ಮಾಡಿಕೊಳ್ಳಲು ಇಚ್ಛಿಸುತ್ತೇನೆ – ಮೂಲತಃ ನಾನು ತಂತ್ರಜ್ಞನಲ್ಲ; ತಂತ್ರಜ್ಞಾನದ ಬಗೆಗೆ ಲೇಖನವೊಂದನ್ನು ರಚಿಸುವಂತಹ ತಂತ್ರ-ಜ್ಞಾನ ನನ್ನಲ್ಲಿಲ್ಲ; ಹೀಗಿದ್ದರೂ, ‘ಅರಿವಿನ ಅಲೆಗಳು 2012’ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹದಾಸೆಯಿಂದ, ಮುಕ್ತ ತಂತ್ರಾಂಶಗಳ ಸ್ವತಂತ್ರ ಲೋಕದಲ್ಲಿ ಅನ್ಯಗ್ರಹ ಜೀವಿಯಾದ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ, ಆದರಿಸಿ, ಬೆಂಬಲಿಸಿ ಕಲಿಸಿ, ಪರಿಣಿತನನ್ನಲ್ಲದಿದ್ದರೂ ಮುಕ್ತ ತಂತ್ರಾಂಶಗಳ ಒಬ್ಬ ಸಾಮಾನ್ಯ ಬಳಕೆದಾರನನ್ನಾಗಿ ಮಾಡಿದ ತಂತ್ರಾಂಶವೊಂದರೊಂದಿಗಿನ ನನ್ನ ಒಡನಾಟದ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನಕ್ಕೆ ಒಡ್ಡಿಕೊಂಡಿದ್ದೇನೆ; ವಿಷಯದ ಗ್ರಹಿಕೆ, ವ್ಯಾಖ್ಯಾನ ಹಾಗೂ ಮಂಡನೆಯಲ್ಲಿ ಆಗಿರಬಹುದಾದ ಲೋಪದೋಷಗಳನ್ನು ಗಂಭೀರವಾಗಿ ಪರಿಗಣಿಸಬಾರದಾಗಿ ಕೋರಿಕೆ.

ಕಳೆದ ಐದು ವರ್ಷಗಳ ಹಿಂದೆ, ಅನೇಕ ಕಾರಣಗಳಿಂದಾಗಿ ನಾನು Microsoft Windows ಬಳಕೆಯಿಂದ ನಿರ್ಗಮಿಸಿ, Linux ಎಂಬ ಮುಕ್ತ ಪ್ರಪಂಚದೆಡೆಗೆ ಹೆಜ್ಜೆಯಿಡುವ ನಿರ್ಧಾರ ಮಾಡಲು ಹಲವು ತಿಂಗಳುಗಳೇ ಬೇಕಾದವು! ಬಹುಶಃ, Linux ಬಳಕೆ ಮಾಡಬೇಕಾದರೆ ವ್ಯಾಪಕವಾಗಿ DOS Prompt ಸಂಕೇತಗಳನ್ನು ಬಳಸುವ ಅರಿವು ಬೇಕಾಗಬಹುದೆಂಬ ಸುಪ್ತ ಅಳುಕು ಇದಕ್ಕೆ ಕಾರಣವಿರಬಹುದೇನೋ? ಸಹಜವಾಗಿಯೇ Ubuntu ಮೂಲಕ Linux ಲೋಕಕ್ಕೆ ಪ್ರವೇಶ ಪಡೆದುಕೊಂಡ ನಂತರ, ನಿರಂತರವಾದ ಅವಿರತ ಹುಡುಕಾಟದಿಂದ ದೊರೆತ ಪುಟ್ಟದೊಂದು Linux Distro ನನ್ನಲ್ಲಿ ಆಸಕ್ತಿ ಮೂಡಿಸಿತ್ತು! ಮೊದಲ ಬಳಕೆಯಲ್ಲಿಯೇ ಆ ಪುಟ್ಟ ತಂತ್ರಾಂಶದ ದೈತ್ಯ ಉಪಯುಕ್ತತೆಯು ನನ್ನನ್ನು ಬೆರಗುಗೊಳಿಸದೇ ಇರಲಿಲ್ಲ; ಆ ತಂತ್ರಾಂಶವೇ Puppy Linux.

Puppy Linux – ಹೆಸರು ಕೇಳುತ್ತಿದ್ದಂತೆಯೇ ಹಲವರ ಮುಖದಲ್ಲಿ ಮುಗುಳ್ನಗೆ ಮೂಡುವುದು ಸಹಜ. ಬಳಕೆಗೆ ಮೊದಲೇ ಇದು ನನ್ನೊಳಗೊಂದು ಚಿರಪರಿಚಿತ ಅನುಭವವನ್ನು ಉಂಟುಮಾಡಿದ್ದಕ್ಕೆ ಕಾರಣಗಳೂ ಇವೆ; ಮೊದಲನೆಯದಾಗಿ, ವೃತ್ತಿಯಲ್ಲಿ ಪಶುವೈದ್ಯನಾದ ನನಗೆ ‘puppy’ ಗಳೊಂದಿಗೆ ಸಹಜ-ಸಲಿಗೆಯ ಬಿಡದ ನಂಟು; ಎರಡನೆಯದಾಗಿ, ಚಿಕ್ಕಂದಿನಿಂದ ಆಡಿಕೊಂಡು ಒಟ್ಟಿಗೆ ಬೆಳೆದ ನನ್ನ ಸೋದರಿಯೊಬ್ಬರ ಅಚ್ಚುಮೆಚ್ಚಿನ ಹೆಸರು ‘puppy’. ಇಂತಹುದೇ ಭಾವುಕ ಕಾರಣದಿಂದಾಗಿ ಇದರ ಆವಿಷ್ಕಾರಕ Barry Kauler ತಮ್ಮ ಪ್ರೀತಿಯ ಪುಟ್ಟ ನಾಯಿಮರಿ Mascot ಸವಿನೆನಪಿಗಾಗಿ ಈ ತಂತ್ರಾಂಶಕ್ಕೆ Puppy Linux ಎಂದು ನಾಮಕರಣ ಮಾಡಿ, ಅಭಿವೃದ್ಧಿ ಪಡಿಸುತ್ತಾ ಇಂದಿಗೂ ಸಹ Mascot ಅನ್ನು Puppy Linux ನಲ್ಲಿ ಅಮರವಾಗಿಸಿದ್ದಾರೆ.

ತನ್ನ ಅಧಿಕೃತ ಜಾಲತಾಣ www.puppylinux.org ನಲ್ಲಿ ಹೇಳಿರುವಂತೆ, Puppy ಹಿಂದಿರುವ ಮೂಲಮಂತ್ರಗಳು – ಮುಕ್ತ, ಸರಾಗ ಹಾಗೂ ವೇಗ. ಮೂಲತಃ, Microsoft Windows ನ ಯಾವುದೇ ಆವೃತ್ತಿಯ ಅನುಸ್ಥಾಪನೆಗೂ ಬೆಂಬಲಿಸದ ನನ್ನಲ್ಲಿದ್ದ ಅತ್ಯಂತ ಹಳೆಯ ಗಣಕಯಂತ್ರಕ್ಕೆ ಮರುಜೀವ ನೀಡುವ ಸಲುವಾಗಿ ಅಗತ್ಯವಿದ್ದ ಮುಕ್ತ ತಂತ್ರಾಂಶದ ನನ್ನ ಅವಶ್ಯಕತೆಗಳೂ ಸಹ ಮೇಲಿನವುಗಳೇ ಆಗಿದ್ದುದು ಶ್ರೇಯಸ್ಕರವಾಗಿ ಪರಿಣಮಿಸಿತು. ಒಂದೂವರೆ ದಶಕದಷ್ಟು ಹಳೆಯದಾದ ನನ್ನ ಗಣಕಯಂತ್ರವೊಂದು ಇಂದಿಗೂ ಸಹ ಯಾವುದೇ ಅಡ್ಡಿ-ಆತಂಕಗಳಿಲ್ಲದೆ, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದಕ್ಕೆ Puppy Linux ನ ಜಾದುವೇ ಕಾರಣವೆಂದರೆ ತಪ್ಪಾಗಲಾರದು.

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ನಾಣ್ನುಡಿಯಂತೆ, Puppy ಚಿಕ್ಕದಾದರೂ ಅದು ಹೊಂದಿರುವ ಉಪಯುಕ್ತ ತಂತ್ರಾಂಶ ಸಾಧನಗಳು ಪ್ರಸ್ತುತ ಚಾಲ್ತಿಯಲ್ಲಿರುವ ಇತರೆ ಯಾವುದೇ Linux Distro ಗಳಿಗೆ ಸರಿಸಮನಾಗಿರುವಂತಹವು. Wordprocessor, Spreadsheet, Internet Browser, Games, Image Editors, Network Manager, Firewall, Multimedia ಮುಂತಾದ ಅನೇಕ ಸೌಲಭ್ಯಗಳು ಲಭ್ಯವಿದ್ದು, ಇವುಗಳೆಲ್ಲವುಗಳೂ ಅತ್ಯಂತ ಹಗುರಾದವು (lightweight) ಎನ್ನುವುದೂ ವಿಶೇಷ. ಪೂರ್ವನಿಯೋಜಿತ ತಂತ್ರಾಂಶಗಳು ಲಭ್ಯವಿಲ್ಲದಿದ್ದರೆ, ಅವುಗಳನ್ನು ಸ್ವತಃ ನಾವುಗಳೇ ಯಾವುದೇ ಶ್ರಮವಿಲ್ಲದೇ ಸುಲಭವಾಗಿ dotpet installer ತಯಾರಿಸುವ ಮೂಲಕ ಅಭಿವೃದ್ಧಿಪಡಿಸಿಕೊಳ್ಳಬಹುದು. ಇದಕ್ಕೆ ಅನುವಾಗುವಂತೆ GUI ಒಂದನ್ನು Puppy ಹೊಂದಿದೆ.

ಯಾವುದೇ ಗಣಕಯಂತ್ರದಲ್ಲಿ ಪೂರ್ವಭಾವಿಯಾಗಿ ಅನುಸ್ಥಾಪನೆಗೊಳ್ಳದೇ, ಕೇವಲ Live CD ಅಥವಾ USB ಸಾಧನದ ಮೂಲಕ ಸಂಪೂರ್ಣ ಕಾರ್ಯಪ್ರವೃತ್ತವಾಗಬಲ್ಲ ಸಾಮರ್ಥ್ಯ ಮಾತ್ರವಲ್ಲದೇ, ಅತ್ಯಂತ ಹಳೆಯ ಹಾಗೂ ನವನವೀನ hardware components ಗಳಿಗೆ ಹೊಂದಾಣಿಕೆಯಾಗುವಂತಹ updated drivers ಗಳನ್ನೂ ಒಳಗೊಂಡಿರುವುದು Puppy ಯ ಇನ್ನೋದು ಪ್ರಮುಖ ಲಕ್ಷಣ. ಈ ಉಪಯುಕ್ತತೆಯು Microsoft Wondows ಹೊಂದಿದ್ದು, ಅಜ್ಞಾತ ಕಾರಣಗಳಿಂದ ಸ್ಥಗಿತಗೊಂಡಿರಬಹುದಾದ ಬಹಳಷ್ಟು ಗಣಕಯಂತ್ರಗಳನ್ನು ದುರಸ್ತಿಪಡಿಸುವಲ್ಲಿಯೂ ಸಹ ಸಹಕಾರಿಯಾಗುತ್ತದೆ. ಅಲ್ಲದೇ, ಸ್ತಬ್ಧಗೊಂಡ ಗಣಕಗಳಿಂದ ಉಪಯುಕ್ತ ಮಾಹಿತಿಯ ಪುನಶ್ಚೇತನ (Data Recovery) ಕೂಡ Puppy ಮೂಲಕ ಸುಲಭ ಸಾಧ್ಯ.

ಒಂದು ಮುಕ್ತ ತಂತ್ರಾಂಶದ ಮೂಲ ಆಧಾರ ಅದರ ಬಳಕೆದಾರರ ಸಮೂಹ; Puppy ಯ ವಿಷಯದಲ್ಲಿಯೂ ಸಹ ಇದು ವಾಸ್ತವ ಹಾಗೂ ಸತ್ಯ. Puppy ಬಳಕೆದಾರರ ಸಮೂಹವು ಅತ್ಯಂತ ಕ್ರಿಯಾಶೀಲವಾಗಿದ್ದು, ಹೊಸಬರಿಗೆ ಹಾಗೂ ತೊಂದರೆಗೊಳಗಾದವರಿಗೆ ತ್ವರಿತ ಗತಿಯಲ್ಲಿ ಸಹಾಯವನ್ನು ಒದಗಿಸುತ್ತಿದೆ. ಇದರೊಟ್ಟಿಗೆ, ಅಭಿವೃದ್ಧಿ ತಂಡ (development team), ದಾಸ್ತಾವೇಜು ತಂಡ (documentation team), ಜಾಲತಾಣ ನಿರ್ವಹಣಾ ತಂಡ (web maintenance team), ಅನುವಾದ ತಂಡ (translation team), ಬಳಕೆದಾರರ ಕೊಡುಗೆ (users contribution) ಹಾಗೂ ಕ್ರಿಯಾತ್ಮಕ ಒಡೆಯ Barry Kauler ಇವರೆಲ್ಲರುಗಳ ಸತತ ಪರಿಶ್ರಮದಿಂದ ನಮ್ಮ ಯಾವುದೇ ಬೇಡಿಕೆಗಳಿಗೆ ಅನುಗುಣವಾಗಿ ಹಲವಾರು ವಿಶೇಷ ವೈಶಿಷ್ಟ್ಯಗಳನ್ನೊಳಗೊಂಡು, ChoicePup, TeenPup, FlexxxPup, BioPup, ChemPup, ChurchPup, MediaPup, MiPup, MacPup ಮುಂತಾದ ವೈವಿಧ್ಯಮಯ ಆವೃತ್ತಿಯ Puplet ಗಳಲ್ಲಿ ಲಭ್ಯವಿರುವ Puppy ಯು ಕ್ರಮೇಣ ಒಂದು ಬಲಿಷ್ಠ ಹಾಗೂ ಭರವಸೆಯ ಮುಕ್ತ ತಂತ್ರಾಂಶವಾಗಿ ಹೊರಹೊಮ್ಮಿದೆ.

ಚಿತ್ರ ಕೃಪೆ:- http://bkhome.org/bkauler/

 

ಪ್ರಶಾಂತ್ ಜಚಿ ಇವರು ವೃತ್ತಿಯಲ್ಲಿ ಪಶುವೈದ್ಯರಾದರೂ, ತಂತ್ರಜ್ಞಾನದ ಬಗೆಗಿನ ಆಸಕ್ತಿಯು ಕ್ರಮೇಣ ಪ್ರವೃತ್ತಿಯಾಗಿ ಪರಿವರ್ತನೆಗೊಂಡಿದೆ. ಹುಟ್ಟಿ ಬೆಳೆದದ್ದು ಬೆಂಗಳೂರು. ವೃತ್ತಿ-ಪ್ರವೃತ್ತಿಯ ಹೊರೆತಾಗಿ ಕರ್ನಾಟಕ ಹಾಗೂ ಕನ್ನಡದ ಬಗೆಗೆ ಅಪಾರವಾದ ಗೌರವ ಮತ್ತು ಅಭಿಮಾನ ಹೊಂದಿದ್ದಾರೆ.